PLEASE LOGIN TO KANNADANET.COM FOR REGULAR NEWS-UPDATES

  ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ’ಬಿದಾಯಿ’ ಯೋಜನೆಯಡಿ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಹೆಣ್ಣುಮಕ್ಕಳಿಗೆ, ವಿಚ್ಛೇದಿತ ಮಹಿಳೆ ಮತ್ತು ವಿಧವೆಯರಿಗೆ ವೈಯಕ್ತಿಕ ಹಾಗೂ ಸಾಮೂಹಿಕ ಮದುವೆ ಕಾರ್ಯಗಳಿಗೆ ಸಹಾಯಧನ ಮಂಜೂರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
  ಹಿಂದುಳಿದ ಅಲ್ಪಸಂಖ್ಯಾತರ ಮುಸ್ಲಿಂ ಹೆಣ್ಣು ಮಕ್ಕಳಿಗೆ, ವಿಚ್ಛೇದಿತ ಮಹಿಳೆ ಅಥವಾ ವಿಧವೆಯರಿಗೆ ವಯಕ್ತಿಕ ಹಾಗೂ ಸಾಮೂಹಿಕ ಮದುವೆ ಕಾರ್ಯಗಳಿಗೆ ಸಹಾಯಧನ ನೀಡುವ ಯೋಜನೆಯನ್ನು ಇದೀಗ ಹಿಂದುಳಿದ ಅಲ್ಪಸಂಖ್ಯಾತರ ಮುಸ್ಲಿಂ ವರ್ಗದವರೂ ಸೇರಿದಂತೆ ಕ್ರೈಸ್ತ, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದ ಹೆಣ್ಣು ಮಕ್ಕಳಿಗೆ ವಿಚ್ಛೇದಿತ ಮಹಿಳೆ ಮತ್ತು ವಿಧವೆಯರ ಮದುವೆಗೆ ಸಹಾಯಧನ ನೀಡಲು ಯೋಜನೆಯನ್ನು ವಿಸ್ತರಿಸಿ, ಇದಕ್ಕೆ ’ಬಿದಾಯಿ’ ಯೋಜನೆ ಎಂಬುದಾಗಿ ಹೆಸರಿಸಿ ಕಳೆದ ನ. ೧೩ ರಂದು ಸರ್ಕಾರ ಆದೇಶ ಹೊರಡಿಸಿದೆ.
ಈ ಯೋಜನೆಯಡಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ೧. ೫ ಲಕ್ಷ ರೂ.ಗಳ ಒಳಗಿರಬೇಕು.  ವಧುವಿಗೆ ಮದುವೆ ದಿನಾಂಕಕ್ಕೆ ಕನಿಷ್ಟ ೧೮ ಹಾಗೂ ವರನಿಗೆ ೨೧ ವರ್ಷ ವಯಸ್ಸು ಆಗಿರಬೇಕು.  ವರನಿಗೆ ಜೀವಂತ ಹೆಂಡತಿ ಇದ್ದಲ್ಲಿ ಈ ಯೋಜನೆಯ ಸೌಲಭ್ಯ ಅನ್ವಯಿಸುವುದಿಲ್ಲ.  ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆ ಲಭ್ಯವಿದೆ.  ಮದುವೆ ನಿಶ್ಚಯವಾಗಿರುವ ಬಗ್ಗೆ ಲಗ್ನಪತ್ರಿಕೆ ಮತ್ತು ಇತರೆ ದಾಖಲಾತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ, ಅರ್ಹ ಫಲಾನುಭವಿಯ ಮದುವೆಯ ದಿನಾಂಕದಂದು, ೫೦೦೦೦ ರೂ.ಗಳ ನಗದು ಸಹಾಯಧನವನ್ನು ವಧುವಿನ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಪಾವತಿಸಲಾಗುವುದು.  ಈ ಯೋಜನೆಗಾಗಿ ಅರ್ಜಿ ಹಾಗೂ ಅಗತ್ಯ ದಾಖಲಾತಿಗಳನ್ನು ಮದುವೆ ನಡೆಯುವ ದಿನಾಂಕದಿಂದ ಕನಿಷ್ಟ ಒಂದು ತಿಂಗಳು ಮುಂಚಿತವಾಗಿ ಸಲ್ಲಿಸಬೇಕು.    ಮದುವೆಯಾದ ನಂತರ ವಧು-ವರನ ಭಾವಚಿತ್ರ, ಧಾರ್ಮಿಕ ಸಂಸ್ಥೆ ನೀಡಿರುವ ಮದುವೆ ಪ್ರಮಾಣ ಪತ್ರ ಅಥವಾ ಉಪ ನೋಂದಣಾಧಿಕಾರಿಗಳು ನೀಡಿರುವ ಮದುವೆ ನೋಂದಣಿ ಪತ್ರ ಪಡೆದು ಸಲ್ಲಿಸಬೇಕು. ಈ ಎಲ್ಲಾ ಷರತ್ತಿನಲ್ಲಿರುವ ದಾಖಲಾತಿಗಳನ್ನು ಮದುವೆಯ ತರುವಾಯ ನೀಡಲಾಗುವುದೆಂದು ಪೂರ್ವಭಾವಿಯಾಗಿ ಘೋಷಣಾ ಪ್ರಮಾಣ ಪತ್ರವನ್ನು ನೀಡಬೇಕು. ಈ ಯೋಜನೆಯು ವೈಯಕ್ತಿಕ ಅಥವಾ ಸಾಮೂಹಿಕವಾಗಿ ನೆರವೇರಿಸಲಾಗುವ ವಿವಾಹಗಳಿಗೂ ಅನ್ವಯಿಸುತ್ತದೆ.  ವಿಧವೆ ತಾಯಿಯ ಕುಟುಂಬ. ವಿಕಲಚೇತನ ಕುಟುಂಬ. ವಿಧವೆ ಮತ್ತು ವಿಚ್ಛೇದಿತ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.  ಜಿಲ್ಲೆಗೆ ನಿಗದಿಪಡಿಸುವ ಗುರಿ ಹಾಗೂ ಆದ್ಯತೆಗೆ ಅನುಗುಣವಾಗಿ ಸಹಾಯಧನ ಮಂಜೂರಾತಿ ನೀಡಲಾಗುವುದು.  ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಬಿಸಿಎಂ ಅಧಿಕಾರಿಗಳಿಗೆ ಹಾಗೂ ಆಯಾ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳಿಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಬಿಸಿಎಂ ಅಧಿಕಾರಿಗಳ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ  ತಿಳಿಸಿದ್ದಾರೆ.

Advertisement

0 comments:

Post a Comment

 
Top