ಕೊಪ್ಪಳ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿ ಹಾಗೂ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಕೊಪ್ಪಳ ಜಿಲ್ಲೆಯ ವಿವಿಧ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೈಗೊಳ್ಳಲಾಗುತ್ತಿರುವ ಒಳಚರಂಡಿ ಹಾಗೂ ಸುಧಾರಿತ ಕುಡಿಯುವ ನೀರು ಸರಬರಾಜು ಯೋಜನೆಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ನಗರದ ವಿವಿಧ ವಾರ್ಡುಗಳಲ್ಲಿ ನಗರೋತ್ಥಾನ ಕಾಮಗಾರಿಗಳ ಭೂಮಿಪೂಜೆಗಾಗಿ ಸೋಮವಾರ ಖುದ್ದಾಗಿ ಸಂಚರಿಸಿದ್ದು, ಅಪೂರ್ಣ ಒಳಚರಂಡಿ ಕಾಮಗಾರಿಗಳಿಂದಾಗಿ ನಗರದ ರಸ್ತೆಗಳು ಹಾಳಾಗಿವೆ. ನಗರದಲ್ಲಿ ಧೂಳಿನಲ್ಲಿ ಮಿಂದೆದ್ದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಇಷ್ಟೆಲ್ಲ ನಡೆಯುತ್ತಿದ್ದರೂ, ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳೇ ಹೊಣೆಗಾರರಾಗಿದ್ದಾರೆ. ಕೊಪ್ಪಳ ನಗರದಲ್ಲಿ ೩೨ ಕೋಟಿ ರೂ. ವೆಚ್ಚದ ಒಳಚರಂಡಿ ಕಾಮಗಾರಿ ಪ್ರಾರಂಭಗೊಂಡು ೦೨ ವರ್ಷವಾದರೂ ಪೂರ್ಣಗೊಂಡಿಲ್ಲ. ನಗರದಲ್ಲಿ ೧೦೮ ಕಿ.ಮೀ. ನಷ್ಟು ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕಿದ್ದು, ಇದುವರೆಗೂ ಕೇವಲ ೩೩ ಕಿ.ಮೀ. ಮಾತ್ರ ಪೂರ್ಣಗೊಂಡಿದೆ. ನಗರದ ರಸ್ತೆಗಳಲ್ಲಿ ಗುಂಡಿಯನ್ನು ತೋಡಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಯಾವುದೇ ಅನಾಹುತ ಸಂಭವಿಸಿದಲ್ಲಿ ಯಾರು ಹೊಣೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಸಾಮರ್ಥ್ಯ ಇಲ್ಲದಿದ್ದ ಮೇಲೆ, ನೀವು ಕಾಮಗಾರಿಯ ಗುತ್ತಿಗೆ ತೆಗೆದುಕೊಂಡಿದ್ದಾದರೂ ಏಕೆ. ನಿಮ್ಮ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ, ನಿಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲು ಹಿಂದೇಟು ಹಾಕುವುದಿಲ್ಲ ಎಂದು ಸಚಿವರು, ಕಾಮಗಾರಿಯ ಗುತ್ತಿಗೆಯನ್ನು ಪಡೆದಿರುವ ಅಹಮದಾಬಾದ್ ಮೂಲದ ಗುತ್ತಿಗೆದಾರ ಸಂಜಯ್ ಪಾಠಕ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಾಳೆಯಿಂದಲೇ ಸಮರೋಪಾದಿಯಲ್ಲಿ ಕಾಮಗಾರಿ ಪ್ರಾರಂಭಿಸಬೇಕು. ಜನವರಿ ಅಂತ್ಯದೊಳಗೆ ಶೇ. ೬೦ ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸದೇ ಇದ್ದಲ್ಲಿ, ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು ತಮ್ಮ ಸಂಸ್ಥೆಗೆ ನೀಡುವ ಅಂತಿಮ ಎಚ್ಚರಿಕೆಯಾಗಿದೆ ಎಂದು ಕಠಿಣ ಮಾತುಗಳಲ್ಲಿ ಸೂಚನೆ ನೀಡಿದರು.
ಕೊಪ್ಪಳ ನಗರದಲ್ಲಿ ಸುಧಾರಿತ ಕುಡಿಯುವ ನೀರು ಸರಬರಾಜು ಯೋಜನೆಗೆ ಮಂಜೂರಾತಿ ದೊರೆತಿದ್ದು, ಇದುವರೆಗೂ ಟೆಂಡರ್ ಕರೆಯದೇ ಇರುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಚಿವರು, ಡಿ. ೧೦ ರ ಒಳಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿ ಕೈಗೊಳ್ಳದಿದ್ದಲ್ಲಿ ಅಮಾನತುಗೊಳಿಸುವ ಎಚ್ಚರಿಕೆ ನೀಡಿದರು. ಜಿಲ್ಲೆಯ ಎಲ್ಲ ನಗರ, ಪಟ್ಟಣ ಪ್ರದೇಶಗಳ ಒಳಚರಂಡಿ, ಕುಡಿಯುವ ನೀರು ಮತ್ತು ನಗರೋತ್ಥಾನ ಯೋಜನೆಗೆ ಸಂಬಂಧಿಸಿದಂತೆ ನ. ೨೧ ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಸಭೆಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು, ಗುತ್ತಿಗೆದಾರರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಸೂಚನೆ ನೀಡಿದರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಕೊಪ್ಪಳ ನಗರದಲ್ಲಿ ಅಪೂರ್ಣ ಒಳಚರಂಡಿ ಕಾಮಗಾರಿ, ರಸ್ತೆ ಕಾಮಗಾರಿಗಳು ಹಾಗೂ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳು ತ್ವರಿತಗತಿಯಲ್ಲಿ ಆಗದೇ ಇರುವುದರಿಂದ, ಜನತೆಯ ಪ್ರಶ್ನೆಗಳಿಗೆ ಉತ್ತರಿಸಲು ತೊಂದರೆಯಾಗುತ್ತಿದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ತಪ್ಪಿನಿಂದಾಗಿ ಜನಪ್ರತಿನಿಧಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್, ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್, ಕೊಪ್ಪಳ ನಗರಸಭೆ ಪ್ರಭಾರಿ ಪೌರಾಯುಕ್ತ ಮಂಜುನಾಥ್, ಗಂಗಾವತಿ ನಗರಸಭೆ ಪೌರಾಯುಕ್ತ ನಿಂಗಣ್ಣ ಕುಮ್ಮಣ್ಣವರ್, ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ಪಾಟೀಲ್, ಕೊಪ್ಪಳ ನಗರ ಒಳಚರಂಡಿ ಕಾಮಗಾರಿ ಗುತ್ತಿಗೆದಾರ ಸಂಜಯ್ ಪಾಠಕ್, ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
0 comments:
Post a Comment