ಬೋಗಸ್ ಪಡಿತರ ಕಾರ್ಡ್‌ಗಳನ್ನು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯವರೇ ಸ್ವಯಂ ಪ್ರೇರಣೆಯಿಂದ ಸೆರೆಂಡರ್ ಮಾಡಲು ಡಿ. ೩೧ ರ ಗಡುವು ನೀಡಲಾಗಿದ್ದು, ನಂತರವೂ ಬೋಗಸ್ ಕಾರ್ಡ್ ಪತ್ತೆಯಾದಲ್ಲಿ, ಅಂತಹ ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್ ರದ್ದುಪಡಿಸಲಾಗುವುದು ಅಲ್ಲದೆ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಪಡಿತರ ವ್ಯವಸ್ಥೆ ಮೂಲಕ ಕಡು ಬಡವರಿಗೆ ಆಹಾರ ಧಾನ್ಯ, ಸಿಮೆಎಣ್ಣೆ ಸೇರಿದಂತೆ ಇತರೆ ಸಾಮಗ್ರಿಗಳನ್ನು ವಿತರಿಸುವ ವ್ಯವಸ್ಥೆ ಇದ್ದು, ಇದಕ್ಕಾಗಿ ಸರ್ಕಾರ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡುತ್ತಿದೆ. ಆದರೆ ಪಡಿತರ ವ್ಯವಸ್ಥೆಯಲ್ಲಿನ ಲೋಪಗಳಿಂದಾಗಿ ಸೋರಿಕೆಯಾಗುತ್ತಿದ್ದು, ಪಡಿತರ ಸಾಮಗ್ರಿಗಳು ಅಕ್ರಮ ಸಾಗಾಣಿಕೆಯಾಗುತ್ತಿರುವುದು ಕಂಡುಬಂದಿದೆ. ಇದನ್ನು ನಿಯಂತ್ರಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ರಾಜ್ಯದ ನ್ಯಾಯಬೆಲೆ ಅಂಗಡಿಗಳಿಗೆ ಹಂಚಿಕೆ ಮಾಡಲಾಗಿರುವ ಪಡಿತರ ಚೀಟಿಗಳ ಪೈಕಿ ಶೇ. ೩೦ ರಷ್ಟು ಪಡಿತರ ಚೀಟಿಗಳು ಬೋಗಸ್ ಇದ್ದು, ಅಂತಹವುಗಳನ್ನು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯವರೇ ಸ್ವಯಂ ಪ್ರೇರಣೆಯಿಂದ ಸೆರೆಂಡರ್ ಮಾಡಲು ಡಿ. ೩೧ ರ ಅಂತಿಮ ಗಡುವು ನಿಗದಿಪಡಿಸಲಾಗಿದೆ. ಅದೇ ರೀತಿ ಜಿಲ್ಲಾಧಿಕಾರಿಗಳು, ತಹಸಿಲ್ದಾರರು, ಆಹಾರ ನಿರೀಕ್ಷಕರು ಸಹ ನಿಯಮಿತವಾಗಿ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಕಾರ್ಯ ಚಾಲನೆಯಲ್ಲಿ ಇರಬೇಕು. ಡಿ. ೩೧ ರ ನಂತರವೂ ಒಂದು ವೇಳೆ ಬೋಗಸ್ ಕಾರ್ಡ್ ಪತ್ತೆಯಾದಲ್ಲಿ, ಅಂತಹ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ರದ್ದುಪಡಿಸಲಾಗುವುದು ಅಲ್ಲದೆ, ಅಂತಹ ನ್ಯಾಯಬೆಲೆ ಅಂಗಡಿಯವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಅದೇ ರೀತಿ ಸಂಬಂಧಪಟ್ಟ ಆಹಾರ ನಿರೀಕ್ಷಕರು ಹಾಗೂ ಆಹಾರ ಶಿರಸ್ತೆದಾರರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.
ನೂತನ ವ್ಯವಸ್ಥೆಗೆ ಕ್ರಮ : ರಾಜ್ಯದ ನ್ಯಾಯಬೆಲೆ ಅಂಗಡಿಗಳು ಪಡಿತರದಾರರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲು ನೂತನ ವ್ಯವಸ್ಥೆ ಜಾರಿಗೆ ತರಲು ಯೋಜಿಸಲಾಗಿದ್ದು, ಅದರಂತೆ ಎಲ್ಲ ನ್ಯಾಯಬೆಲೆ ಅಂಗಡಿಯವರು ಹಿಂದಿನ ತಿಂಗಳ ಅಂತ್ಯದೊಳಗಾಗಿ ಆಹಾರ ಸಾಮಗ್ರಿಗಳನ್ನು ಗೋಡೌನ್‌ಗಳಿಂದ ಎತ್ತುವಳಿ ಮಾಡಿಕೊಂಡು ನ್ಯಾಯಬೆಲೆ ಅಂಗಡಿಗಳಲ್ಲಿ ಸಿದ್ಧವಿಟ್ಟುಕೊಳ್ಳಬೇಕು. ಆಯಾ ತಿಂಗಳಲ್ಲಿ ೦೧ ರಿಂದ ೧೦ ನೇ ತಾರೀಖಿನವರೆಗೂ ನ್ಯಾಯಬೆಲೆ ಅಂಗಡಿಯನ್ನು ತೆರೆದು, ಪಡಿತರದಾರರಿಗೆ ಸಮರ್ಪಕವಾಗಿ ಆಹಾರಧಾನ್ಯ ವಿತರಣೆ ಆಗುವಂತೆ ಮಾಡಲು ಯೋಜಿಸಲಾಗಿದೆ. ಶೀಘ್ರದಲ್ಲಿಯೇ ಈ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗುವುದು ಎಂದರು.
ಅಂಗಡಿಗಳ ಕ್ಯಾರ್ಯ ವ್ಯಾಪ್ತಿ ನಿಗದಿ : ರಾಜ್ಯದಲ್ಲಿ ಇದುವರೆಗೂ ನ್ಯಾಯಬೆಲೆ ಅಂಗಡಿಗಳಿಗೆ ಕಾರ್ಯ ವ್ಯಾಪ್ತಿ ನಿಗದಿಪಡಿಸುವ ವ್ಯವಸ್ಥೆ ಜಾರಿಯಾಗಿಲ್ಲ. ಕೆಲವು ಅಂಗಡಿಗಳಿಗೆ ಹೆಚ್ಚಿನ ಸಂಖ್ಯೆ, ಕೆಲವು ಅಂಗಡಿಗಳಿಗೆ ಕಡಿಮೆ ಸಂಖ್ಯೆಯಲ್ಲಿ ಪಡಿತರ ಚೀಟಿ ಹಂಚಿಕೆಯಾಗಿದೆ. ಕಾರ್ಯ ವ್ಯಾಪ್ತಿ ನಿಗದಿ ಆಗದೇ ಇರುವುದರಿಂದ, ಪಡಿತರ ಚೀಟಿದಾರರು ಪಡಿತರ ಪಡೆಯಲು ಸುಮಾರು ೫ ರಿಂದ ೧೦ ಕಿ.ಮಿ. ನಷ್ಟು ದೂರದ ನ್ಯಾಯಬೆಲೆ ಅಂಗಡಿಗೆ ತೆರಳಬೇಕಾಗುವ ಪರಿಸ್ಥಿತಿ ಇದೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಈ ಸಮಸ್ಯೆ ಬಹಳಷ್ಟಿದೆ. ಈ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ, ನ್ಯಾಯ ಬೆಲೆ ಅಂಗಡಿಗಳಿಗೆ ತಮ್ಮ ಕಾರ್ಯವ್ಯಾಪ್ತಿ ನಿಗದಿಪಡಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು.
ಪಡಿತರ ಚೀಟಿ ವಿತರಣೆ ತ್ವರಿತಗೊಳಿಸಿ : ಕೊಪ್ಪಳ ಜಿಲ್ಲೆಯಲ್ಲಿ ೧೩೮೯೯೨೦ ಜನಸಂಖ್ಯೆ ಇದ್ದರೆ, ಇದರಲ್ಲಿ ೨೬೪೫೯೫ ಕುಟುಂಬಗಳಿವೆ. ಆದರೆ ಇದುವರೆಗೂ ೩೭೫೬೨ ಅಂತ್ಯೋದಯ, ೧೯೭೩೬೩- ಬಿಪಿಎಲ್ ಹಾಗೂ ೩೨೭೮೫- ಎಪಿಎಲ್ ಸೇರಿದಂತೆ ಒಟ್ಟು ೨೬೭೭೧೦ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಅಂದರೆ ಕುಟುಂಬಗಳ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪಡಿತರ ಚೀಟಿಗಳು ವಿತರಣೆಯಾಗಿವೆ. ಇನ್ನೂ ೬೬೬೯೮ ಜನ ಹೊಸದಾಗಿ ಪಡಿತರ ಚೀಟಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಕೇವಲ ೫೭೬೮ ಅರ್ಜಿಗಳನ್ನು ಮಾತ್ರ ಪರಿಶೀಲನೆ ಮಾಡಲಾಗಿದೆ. ೩೯೦೦ ಪಡಿತರ ಚೀಟಿಗಳನ್ನು ಮುದ್ರಿಸಿ, ವಿತರಣೆಗೆ ನೀಡಲಾಗಿದೆ. ಇದು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಬೋಗಸ್ ಪಡಿತರ ಚೀಟಿಗಳಿವೆ ಎನ್ನುವುದು ಇದರಿಂದ ತಿಳಿದುಬರುತ್ತಿದ್ದು, ಬೋಗಸ್ ಕಾರ್ಡ್‌ಗಳನ್ನು ಪತ್ತೆ ಹಚ್ಚುವ ಕಾರ್ಯ ಜಿಲ್ಲೆಯಲ್ಲಿ ತ್ವರಿತವಾಗಿ ನಡೆಯಬೇಕಿದೆ. ಪರಿಶೀಲನೆಯ ನೆಪದಲ್ಲಿ ಅರ್ಹರಿಗೆ ಪಡಿತರ ಚೀಟಿ ವಿತರಿಸುವ ಕಾರ್ಯ ವಿಳಂಬವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಆನ್‌ಲೈನ್ ನಲ್ಲಿ ಹೊಸದಾಗಿ ಸಲ್ಲಿಸಿರುವ ಅರ್ಜಿಗಳ ಪರಿಶೀಲನೆ ಕಾರ್ಯ ತ್ವರಿತವಾಗಿ ನಡೆದು, ಶೀಘ್ರ ಅವರಿಗೆ ಪಡಿತರ ಚೀಟಿ ವಿತರಣೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಹಾರ ಇಲಾಖೆ ಉಪನಿರ್ದೇಶಕ ಜಯಪ್ಪ ಅವರಿಗೆ ಸಚಿವರು ಸೂಚನೆ ನೀಡಿದರು.
ಭತ್ತ ಖರೀದಿ ಕೇಂದ್ರ ಪ್ರಾರಂಭಿಸಿ : ಜಿಲ್ಲೆಯಲ್ಲಿ ಇದೀಗ ಭತ್ತದ ಕಟಾವು ನಡೆಯತ್ತಿರುವುದರಿಂದ, ಬೆಲೆ ಕುಸಿತದಿಂದ ರೈತರು ತೊಂದರೆಗೆ ಒಳಗಾಗದ ರೀತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ, ಜಿಲ್ಲೆಯ ಗಂಗಾವತಿ ಮತ್ತು ಕಾರಟಗಿಯಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಕೇಂದ್ರಗಳನ್ನು ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವ ದಿನೇಶ್ ಗುಂಡೂರಾವ್ ಅವರು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು ಮಾತನಾಡಿ, ಜಿಲ್ಲೆಯ ಎಲ್ಲ ತಹಸಿಲ್ದಾರರು, ಆಹಾರ ನಿರೀಕ್ಷಕರು ಪ್ರತಿ ತಿಂಗಳು ಕನಿಷ್ಟ ೫-೬ ನ್ಯಾಯಬೆಲೆ ಅಂಗಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಜಿಲ್ಲೆಯಲ್ಲಿ ಬೋಗಸ್ ಪಡಿತರ ಚೀಟಿಗಳನ್ನು ಪತ್ತೆ ಹೆಚ್ಚುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಇದರಿಂದಾಗಿ ಅರ್ಹರಿಗೆ ಪಡಿತರ ಸಾಮಗ್ರಿ ಸಮರ್ಪಕವಾಗಿ ದೊರೆಯುವಲ್ಲಿ ತೀವ್ರ ತೊಂದರೆ ಉಂಟಾಗಿದೆ. ಅನ್ನಭಾಗ್ಯ ಯೋಜನೆಯ ಅಕ್ಕಿ ಸೇರಿದಂತೆ, ಅಕ್ರಮವಾಗಿ ಪಡಿತರಧಾನ್ಯವನ್ನು ಬೇರೆಯವರಿಗೆ ಸಗಟಾಗಿ ಮಾರಾಟ ಮಾಡುವಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಯಾರದೇ ಪ್ರಭಾವ ಅಥವಾ ಒತ್ತಡಕ್ಕೆ ಒಳಗಾಗುವ ಅಗತ್ಯವಿಲ್ಲ. ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳ ಕ್ರಮಕ್ಕೆ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಸಂಸದ ಶಿವರಾಮಗೌಡ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಧಾನ ಕಾರ್ಯದರ್ಶಿ ಲತಾ ಕೃಷ್ಣರಾವ್, ಆಹಾರ ಇಲಾಖೆ ಆಯುಕ್ತ ಹರ್ಷಗುಪ್ತಾ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಕ ಫ್ರಾನ್ಸಿಸ್ ಮೇರಿ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಜನಾರ್ಧನ ಹುಲಿಗಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ, ಆಹಾರ ಇಲಾಖೆ ಉಪನಿರ್ದೇಶಕ ಜಯಪ್ಪ ಭಾಗವಹಿಸಿದ್ದರು.
ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಸಹಾಯಕ ಆಯುಕ್ತ ಮಂಜುನಾಥ್, ಜಿ.ಪಂ. ಸದಸ್ಯರುಗಳಾದ ವಿನಯಕುಮಾರ್ ಮೇಲಿನಮನಿ, ರಮೇಶ್ ಹಿಟ್ನಾಳ್, ಸೇರಿದಂತೆ ತಾಲೂಕು ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಸಭೆ, ಪುರಸಭೆ ಮುಖ್ಯಾಧಿಕಾರಿಗಳು, ಆಹಾರ ನಿರೀಕ್ಷಕರು ಉಪಸ್ಥಿತರಿದ್ದರು.
ಆಹಾರ ಇಲಾಖೆ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸಚಿವ ದಿನೇಶ್ ಗುಂಡೂರಾವ್ ಅವರು ನಗರದಲ್ಲಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾ ರೈಸ್ ಮಿಲ್ಲರ‍್ಸ್ ಅಸೋಸಿಯೇಷನ್ ಅವರೊಂದಿಗೆ ಲೆವಿ ಅಕ್ಕಿ ನೀಡುವ ಕುರಿತು ಚರ್ಚೆ ನಡೆಸಿದರು.
0 comments:
Post a Comment