ಆತ್ಮಹತ್ಯೆಯ ದಾರಿ ಯಾಕೆ ತುಳಿಯುತ್ತಿ?
ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ' ತನ್ನಿಮಿತ್ಯ ಈ ಲೇಖನ
ಮೊನ್ನೆ ಡ್ಯೂಟಿ ಮುಗಿಸಿಕೊಂಡು ಸ್ನೇಹಿತರೊಂದಿಗೆ ಹೆಲ್ತ್ತ್‌ಕ್ಯಾಂಪಿನ ಕಡೆಗೆ ಹೋಗಲು ರೇಲ್ವೆಹಳಿ ಕಡೆಗೆ ಹೊರಟಿದ್ವಿ, ಆ ಸಂದರ್ಭದಲ್ಲಿ ಹಂಪಿ ಎಕ್ಸಪ್ರೆಸ್ ರೇಲ್ವೆ ಹುಬ್ಬಳ್ಳಿಯಿಂದ ಹೊರಟು ಗದಗ ಸ್ಟೇಶನ ಹತ್ತಿರ ಸಮೀಪಿಸುತ್ತಿತ್ತು. ರೇಲ್ವೆ ಬರುತ್ತಿರುವ ಶಬ್ದ ಕೇಳಿ ನಾವು ರೇಲ್ವೆ ಹಳಿಯ ಪಕ್ಕದ ಕಾಲು ದಾರಿಯಲ್ಲಿ ಗೆಳೆಯರೊಂದಿಗೆ ಕುಶಲೋಪರಿ ವಿಚಾರಿಸುತ್ತಾ ನಿಂತು ಕೊಂಡಿದ್ದೆವು.
ಆಗ ಸ್ಪೀಡಾಗಿ ಬರುತ್ತಿರುವ ರೇಲ್ವೆಯನ್ನು ಗಮನಿಸಿಯೂ ಗಮನಿಸದಂತೆ ನಿರ್ಲಿಪ್ತವಾಗಿ ಓರ್ವ ಯುವಕ ರೇಲ್ವೆ ಹಳಿಗಳ ಮಧ್ಯೆ ನಿಂತುಕೊಂಡು ಬಿಟ್ಟಿದ್ದ. ಸಮೀಪದಲ್ಲಿ ನೆರೆದಿರುವ ಪಾದಚಾರಿಗಳು ಕ್ಷಣಾರ್ಧದಲ್ಲಿಯೇ ಯಮಪಾಶನ ಕದಂಬ ಬಾಹುವಿನೊಳಗೆ ಸೇರಬೇಕಿದ್ದ ಆ ಯುವಕನಿಗೆ ಕೊಸರಿಕೊಂಡರು. ಯಮನೂ ದೂರವಿರಬೇಕು. ಅದೃಷ್ಟವಶಾತ್ ಯುವಕ ಬದುಕಿದ, ಮೈ ಕೈಗಳಿಗೆ ಸ್ವಲ್ಪ ತೆರಚಿದ ಗಾಯಗಳಾಗಿದ್ದವು, ನನ್ನ ಗೆಳೆಯರೊಂದಿಗೆ, ಸಾವಿನೊಂದಿಗೆ ಪಾರಾಗಿದ್ದ ಹೊಸ ಗೆಳೆಯನನ್ನು ಪಕ್ಕದ ಚಹಾ ಅಂಗಡಿಗೆ ಕರೆದುಕೊಂಡು ಹೋಗಿ ಚಹಾ ಕುಡಿದು ಮಾತಿಗಿಳಿದೆ.
ಸಾವಧಾನವಾಗಿ ಯುವಕನಿಗೆ ಒಂದೊಂದೆ ಪ್ರಶ್ನೆ ಕೇಳುತ್ತಾ ಸಕಾರಾತ್ಮವಾಗಿ ಅವನಿಗೆ ಸಮಾಧಾನ ಪಡಿಸುತ್ತಿದ್ದೆ. ಚೇತರಿಸಿಕೊಂಡು ಪಾಪ ಪ್ರಜ್ಞೆಯೊಂದಿಗೆ ಖಿನ್ನತೆಗೊಂಡ ಯುವಕ ಆತ್ಮಹತ್ಯೆಗೆ ಯತ್ನಿಸಿದ ಎಂಬುದರ ಹಿನ್ನಲೆ ವಿವರಿಸುತ್ತಾ ಹೋದ.
ದಾವಣಗೆರೆ ಜಿಲ್ಲೆಯ ಅವಿವಾಹಿತ ಸರ್ಕಾರಿ ನೌಕರ ತಾನು ಸೇವೆ ಸಲ್ಲಿಸುವ ಕಛೇರಿಯಲ್ಲಿ ಅವಿವಾಹಿತ ಸಹೋದ್ಯೋಗಿಯ ರೂಪಕ್ಕೆ, ಕ್ರಿಯಾಶೀಲತೆಗೆ, ಸೌಂದರ್ಯಕ್ಕೆ ಮಾರು ಹೋಗಿದ್ದ! ಅವಳನ್ನು ತನ್ನ ಮನದಲ್ಲಿಯೇ ಧ್ಯಾನಿಸುತ್ತಾ, ತನ್ನ ಹೃದಯ ಸಿಂಹಾಸನದಲ್ಲಿ ಆರಾಧಿಸುತ್ತಿದ್ದ!. ಮುಂಗಾರು ಮಳೆಗೆ ಪ್ರೇಮಾಂಕುರದ ಮೊಳಕೆ ಟಿಸಿಲೊಡೆಯ ತೊಡಗಿತ್ತು. ಅಷ್ಟರೊಳಗೆ ಶ್ರಾವಣ ಮಾಸದ ನೂಲ ಹುಣ್ಣಿಮೆಯ ಪವಿತ್ರ ದಿನದಂದು ಅವನ ಕನಸಿನ ಕನ್ಯೆ, ಶ್ರವಣಿ ಅಣ್ಣಾ ಇಂದು ಅಣ್ಣ-ತಂಗಿಯರ ಪವಿತ್ರ ಬಂಧನದ ಸಂಕೇತವಾದ ರಕ್ಷಾ ಬಂಧನ ಹೆಣ್ಣಿನ ಜನ್ಮಕ ಅಣ್ಣ ತಮ್ಮಂದಿರು ಬೇಕು, ಆದರೆ ನಾನೊಬ್ಬ ನತದೃಷ್ಟೆ, ನನಗೆ ಸೋದರರಿಲ್ಲ. ಒಂದೇ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾವೆಲ್ಲರೂ ಒಂದೇ ಕುಟುಂಬದ ಸೋದರಿ-ಸೋದರಿಯರು ಅಲ್ವೇ? ಬಲಗೈ ತಾ ಅಣ್ಣ ನಿನಗೆ ರಾಖಿ ಕಟ್ಟುತ್ತೇನೆಂದು ಶ್ರವಣಿ ಸಚೇತಗೆ ರಾಖಿಕಟ್ಟಿ ಸಿಹಿ ತಿನ್ನಿಸಿದಳು. ಒಲ್ಲದ ಮನಸ್ಸಿನಿಂದ ರಾಖಿ ಕಟ್ಟಿಸಿಕೊಂಡ ಸಚೇತನದು ಒನವೇ ಪ್ರೀತಿಯಾಗಿತ್ತು. ಅದು ಅವನು ತನ್ನ ವಯೋಮಾನದ ಸಹಜ ಆಕರ್ಷಣೆಗೆ ಒಳಗಾಗಿದ್ದ. ಶ್ರವಣಿಯಿಂದ ರಾಖಿ ಕಟ್ಟಿಸಿಕೊಂಡಾಗಿನಿಂದಲೂ ಅವನಲ್ಲಿ ಪಾಪಪ್ರಜ್ಞೆ, ಅಪರಾಧಿಪ್ರಜ್ಞೆ ಕಾಡತೊಡಗಿತು. ಆ ಕಾರಣಕ್ಕಾಗಿ ಇಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದನ್ನು ನಮ್ಮೆದುರಿಗೆ ವಿವರಿಸಿದ.
ನಾವು ನಿತ್ಯ ಪತ್ರಿಕೆ, ಟಿವಿಗಳಲ್ಲಿ ಇಂತಹ ಹಲವಾರು ಆತ್ಮಹತ್ಯೆ ಪ್ರಕರಣಗಳನ್ನು ನೋಡುತ್ತೇವೆ. ತನಗಿರುವ ಕುಡಿತ, ಗುಟ್ಕಾದ ದುಶ್ಚಟ ಬಿಡಲಿಕ್ಕೆ ಪಾಲಕರು ಬುದ್ದಿವಾದ ಹೇಳಿದರೆ, ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಬರದಿದ್ದರೆ, ಅನೈತಿಕ ಸಂಬಂಧ ಬಯಲಿಗೆ ಬರುತ್ತದೆಂಬ ಭಯಕ್ಕಾಗಿ, ಮಾಡಿದ ಸಾಲ ತೀರಿಸಲಾಗದೇ, ತನಗಿರುವ ರೋಗ ವಾಸಿ ಆಗದ ಕಾರಣ ಇನ್ನೂ ಹಲವಾರು ನೆಪಗಳನ್ನು ಮುಂದುಮಾಡಿ ಸಾವಿಗೆ ಸಲಾಂ ಹೇಳುವುದನ್ನು ಕಾಣುತ್ತೇವೆ.
ಮಾನವ ಜನ್ಮ ದೊಡ್ಡದು ಹುಚ್ಚಪ್ಪಗಳಿರಾ ಎಂಬ ದಾಸರ ವಾಣಿ ಕೇಳಿದ ಪ್ರಜ್ಞಾವಂತರೂ ತಮ್ಮ ಸಿಟ್ಟಿನ ಕೈಗೆ ಬುದ್ದಿಕೊಟ್ಟು ಅವಿವೇಕಿಗಳಾಗಿ ಆತ್ಮಹತ್ಯೆಗೆ ಯತ್ನಿಸುತ್ತಿರುವದನ್ನು ಕೇಳಿದ್ದೇವೆ, ನೋಡಿದ್ದೇವೆ.
ಆತ್ಮಹತ್ಯೆ ಎಂಬ ಪದ ಒಂದು ರೀತಿಯಿಂದ ಭಯ, ಆತಂಕ ಹುಟ್ಟಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ ಒಂದು ಮಿಲಿಯನ್ ಜನರು ಆತ್ಮಹತ್ಯೆಯಿಂದ ಸಾವನ್ನಪ್ಪುತ್ತಾರೆ, ಅಂದರೆ ಪ್ರತಿ ೪೦ ಸೆಕೆಂಡಿಗಳಿಗೆ ಒಂದು ಆತ್ಮಹತ್ಯೆಯ ಪ್ರಕರಣ ಜಗತ್ತಿನ ಹಲವಡೆ ನಡೆಯುತ್ತಿದೆ. ಭಾರತದಲ್ಲಿ ೪ ನಿಮಿಷಕೊಮ್ಮೆ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ಭಾರತದಲ್ಲಿ ಆಕಸ್ಮಿಕ ಸಾವುಗಳು ಹಾಗೂ ಆತ್ಮಹತ್ಯೆಗಳ ೨೦೧೧ ವರದಿಯ ಪ್ರಕಾರ ೨೦೧೧ ರಲ್ಲಿ ೧,೩೫,೫೮೫ ಮಂದಿ ಸಾವಿಗೆ ಶರಣಾಗಿದ್ದು, ಅದರ ಹಿಂದಿನ ವರ್ಷಕ್ಕಿಂತ ೦.೭ ಶೇಕಡಾ ಹೆಚ್ಚಾಗಿದೆ. ೨೦೧೦ರಲ್ಲಿ ೧,೩೪,೫೯೯ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದವು. ೨೦೧೧ರಲ್ಲಿ ಪಶ್ಚಿಮ ಬಂಗಾಲದಲ್ಲಿ (೧೬,೪೯೨) ತಮಿಳನಾಡಿನಲ್ಲಿ (೧೫,೯೬೩), ಮಹಾರಾಷ್ಟ್ರದಲ್ಲಿ (೧೫,೯೪೭), ಆಂಧ್ರಪ್ರದೇಶದಲ್ಲಿ (೧೫,೦೭೭), ಕರ್ನಾಟಕದಲ್ಲಿ (೧೨,೬೨೨) ಕ್ರಮವಾದ ಸ್ಥಾನಗಳಿವೆ. ಈ ೫ ರಾಜ್ಯಗಳಲ್ಲಿ ಸಂಭವಿಸಿದ ಆತ್ಮಹತ್ಯೆಯು ದೇಶದಲ್ಲಿ ಸಂಭವಿಸಿದ ಒಟ್ಟು ಆತ್ಮಹತ್ಯೆ ಪ್ರಕರಣಗಳ ಶೇ.೫೬.೨ ರಷ್ಟಿದೆ.
೨೦೦೯ರಲ್ಲಿ ಪಶ್ಚಿಮ ಬಂಗಾಳದಲ್ಲಿ ಗರಿಷ್ಟ ಆತ್ಯಹತ್ಯೆ ಪ್ರಕರಣಗಳ ವರದಿಯಾಗಿದೆ. ೨೦೧೦ರಲ್ಲಿ ಅದು ದ್ವಿತೀಯ ಸ್ಥಾನ ಪಡೆದರೆ ೨೦೧೧ರಲ್ಲಿ ನಂ.೧ ಸ್ಥಾನ ಪಡೆದಿದೆ. ಆತ್ಮಹತ್ಯೆಯಲ್ಲಿ ಪುರುಷ ಮತ್ತು ಮಹಿಳೆಯರ ಅನುಪಾತ ೬೫.೩೫% ರಷ್ಟಿದೆ. ಬಾಲಕ-ಬಾಲಕಿಯರಲ್ಲಿ ೫೨.೪೮% ವಿವಾಹಿತ ಪುರುಷರು ಶೇ. ೭೧% ವಿವಾಹಿತ ಮಹಿಳೆಯರು ಶೇ. ೬೮.೨% ರಷ್ಟಿದೆ.
ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳು ದೇಶದ ಒಟ್ಟು ಆತ್ಮಹತ್ಯೆಯ ಪ್ರಕರಣಗಳಲ್ಲಿ ಶೇ. ೫೦.೨ ರಷ್ಟು ಪಾಲು ಪಡೆದಿದೆ.
ಬೆಂಗಳೂರು (೧೭೧೭), ಚೆನ್ನೈ (೨೪೩೮), ದಿಲ್ಲಿ (೧೩೮೫), ಮುಂಬೈ (೧೧೬೨), ಮಹಾನಗರಗಳಲ್ಲಿ ಸಂಭವಿಸಿದ ಆತ್ಮಹತ್ಯೆಗಳು. ದೇಶದ ೫೩ ಬೃಹತ್ ನಗರಗಳಲ್ಲಿ ವರದಿಯಾದ ಒಟ್ಟು ಆತ್ಮಹತ್ಯೆ ಪ್ರಕರಣಗಳು ಶೇ. ೩೬.೭ ರಷ್ಟಿತ್ತು.
ಪ್ರತಿ ೫ ಆತ್ಮಹತ್ಯೆ ಪ್ರಕರಣದಲ್ಲಿ ಓರ್ವ ಗೃಹಿಣಿಯದ್ದಾಗಿದೆ. ಸಾವಿಗೆ ಶರಣಾಗದವರಲ್ಲಿ ಶೇ. ೩೮ ರಷ್ಟು ಮಂದಿ ಸ್ವ ಉದ್ಯೋಗಿಗಳು, ಶೇ.೭.೭ ನಿರುದ್ಯೋಗಿಗಳು, ಶೇ. ೧.೧ ಸರ್ಕಾರಿ ನೌಕರರು ಸೇರಿದ್ದಾರೆ. ಇದು ಪೋಲಿಸ್ ಇಲಾಖೆಯಲ್ಲಿ ದಾಖಲಾದ ಪ್ರಕರಣಗಳಾದರೆ ಇನ್ನು ದಾಖಲಾಗದೆ ಮುಚ್ಚಿ ಹೊಂದ ಅದೆಷ್ಟೋ ಪ್ರಕರಣಗಳಿಗೆ ವಿಶ್ವವೇ ಬೆಚ್ಚಿ ಬೀಳಬೇಕಾದ ಸಂಗತಿಯಾಗಿದೆ.
೧) 'ಆತ್ಮಹತ್ಯೆ' ಎಂದರೆ ಮಹಿಳೆಯರೆ ಎನ್ನುವ ಕಾಲವಿತ್ತು ಆದರೆ ಈಗ ಪುರುಷರು ಅನ್ಯ ಸ್ಥಾನದಲ್ಲಿದ್ದಾರೆ. ಕೌಟುಂಬಿಕ ಕಲಹ, ಪತ್ನಿಯರು ನೀಡುವ ಕಿರುಕುಳ ತಮ್ಮ ಪರ ಇರುವ ಕಾನೂನನ್ನು ಮಹಿಳೆಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಆರೋಪವಿದೆ. ಆತ್ಮಹತ್ಯೆ ಮಾಡಿಕೊಳ್ಳುವದರಲ್ಲಿ ವಿದ್ಯಾವಂತರೆ ಹೆಚ್ಚಾಗಿದ್ದು ಸಾಪ್ಟವೇರ್ ಇಂಜಿನಿಯರಗಳು, ಬಿ.ಪಿ.ಓ, ಹಾಗೂ ಖಾಸಗಿ ಕಂಪನಿಗಳಲ್ಲಿ ಕೈ ತುಂಬ ಸಂಬಳ ಪಡೆಯುವವರು ಜೀವನದಲ್ಲಿ ನೆಮ್ಮದಿ ಇಲ್ಲದ ಕಾರಣ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ೨೦೧೨ ರಲ್ಲಿ ರಾಜ್ಯದಲ್ಲಿ ೮೫೯೬ ಪುರುಷರು, ೪೧೫೯ ಮಹಿಳೆಯರು, ೨೦೧೩ರ ಫೆಬ್ರುವರಿಯ ಒಳಗೆ ೧೩೯೬ ಪುರುಷರು ೬೫೮ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕ್ರಿ.ಶ ೧೮೯೭ರಲ್ಲಿಯೇ ಡರ್‌ಕೈಮ ಎಂಬ ವಿಜ್ಞಾನಿ ಆತ್ಮಹತ್ಯೆಗೂ ಹಾಗೂ ಸಾಮಾಜಿಕ ಒತ್ತಡಗಳಿಗೂ ತೀವ್ರವಾದ ಸಂಬಂಧಗಳಿವೆ ಎಂದು ಪ್ರತಿಪಾದಿಸಿದ್ದಾನೆ. ಆತ್ಮಹತ್ಯೆಯನ್ನು ೧) ಇಗೋ ಇಸ್ಟೆಕ್ ೨) ಆನೋಮಿಕ್. ೩) ಅಲ್ ಟ್ರೂಯಿಸ್ಟರ್ರ್‍ಅ ಆತ್ಮಹತ್ಯೆಗಳೆಂದು ಮೂರು ವಿಭಾಗಗಳಾಗಿ ವಿಂಗಡಿಸಿದ್ದಾನೆ.
ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯ ಹಾವ-ಭಾವ ಇವೆಲ್ಲದರ ಮಧ್ಯೆ ಥಟ್ಟನೆ ಆತ್ಮಹತ್ಯೆ ನಡೆದಂತೆ ಭಾಸವಾದರೂ, ಪ್ರತಿಯೊಂದು ಆತ್ಮಹತ್ಯೆಯ ಹಿಂದೆ ಹಲವು ದಿನಗಳ, ಹಲವು ತಿಂಗಳುಗಳ ಆತಂತ, ಒತ್ತಡಗಳು ಹಂತ-ಹಂತವಾಗಿ ವ್ಯಕ್ತಿ ಗುರಿಯನ್ನು ತಲುಪುವಂತೆ ಮಾಡುತ್ತಾನೆಂದು ಅಭಿಪ್ರಾಯ ಪಟ್ಟಿದ್ದಾರೆ.
ಆತ್ಮಹತ್ಯೆ ಒಂದು ಸಂಕೀರ್ಣ ಪ್ರಕ್ರಿಯೆ. ಸಾಮಾಜಿಕ, ಕೌಟುಂಬಿಕ, ಭಾವನಾತ್ಮಕ, ದೈಹಿಕ ಒತ್ತಡಗಳೂ, ಸೂಕ್ಷ್ಮ ಮನಸ್ಸಿನ ವ್ಯಕ್ತಿತ್ವ, ಸ್ವಾಭಿಮಾನ, ಆರ್ಥಿಕ ಪರಿಸ್ಥಿತಿ, ವ್ಯಕ್ತಿಯ ವ್ಯಕ್ತಿತ್ವ, ಅಸಮತೋಲನ ಆನಾರೋಗ್ಯ, ವಿಚ್ಛೇದನ, ಅನೈತಿಕ ಸಂಬಂಧ, ವ್ರತ್ತಿ ಸಂಬಂಧಿ ಕಲಹ, ಜಿಗುಪ್ಸೆ, ವೈಯಕ್ತಿಕ ಕಾರಣ ಮುಂತಾದ ಕಾರಣಗಳಿಂದ ಆತ್ಮಹತ್ಯೆಯಲ್ಲಿ ಪರ್ಯಾಯವಸಾನಗೊಳ್ಳಬಹುದು.
೨) ಆತ್ಮಹತ್ಯೆಯನ್ನು ಅಪರಾಧ ವ್ಯಾಪ್ತಿಯಿಂದ ಹೊರಕ್ಕೆ ಇಡುವ ಹೊಸ ಮಾನಸಿಕ ಆರೋಗ್ಯ ಮಸೂದೆ ೨೦೧೩ ಅನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ಅಪರಾಧ ಕಾನೂನಿನ ಇತಿಹಾಸದಲ್ಲಿ ಮೊದಲಬಾರಿಗೆ ಕೇಂದ್ರ ಸರ್ಕಾರ ಇಂಥ ಸುಧಾರಣಾ ಕ್ರಮಕ್ಕೆ ಮುಂದಾಗಿದೆ.
ಆಯ್.ಪಿ.ಸಿ ೩೦೯ ರ ಪ್ರಕಾರ ಆತ್ಮಹತ್ಯೆಗೆ ಯತ್ನ ಕೂಡ ಅಕ್ಷಮ್ಯ ಅಪರಾಧವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಇದರಿಂದ ಆತ್ಮಹತ್ಯೆಗೆ ಯತ್ನಿಸುವ ವ್ಯಕ್ತಿಗಳನ್ನು ಸಂತೈಸುವ ಬದಲು ಅವರ ಮನಸ್ಸು ಮತ್ತಷ್ಟು ಘಾಸಿಗೊಳಿಸಲಾಗುತ್ತಿತ್ತು. ಮಸೂದೆ ಸೆಕ್ಷನ್ ೧೨೪ ರ ಪ್ರಕಾರ ಆತ್ಮಹತ್ಯೆಗೆ ಪ್ರಯತ್ನಿಸಿದವರನ್ನು ಮಾನಸಿಕ ರೋಗಿಗಳೆಂದು ಪರಿಗಣಿಸಲಾಗುತ್ತಿದೆ.
ಅನಸ್ತೇಶಿಯಾ ಕೊಡದೆ ರೋಗಿಗಳಿಗೆ ಎಲೆಕ್ಟ್ರೋ ಥೆರಪಿ ಕೊಡುವಂತಿಲ್ಲ. ಚಿಕಿತ್ಸೆಯ ನೆಪದಲ್ಲಿ ಸಂತಾನ ಹರಣ ಮಾಡುವುದು, ತಲೆ ಬೋಳಿಸುವುದು, ಚೈನ ಹಾಕಿ ಕೈ-ಕಾಲು ಕಟ್ಟಿ ಹಾಕುವುದು ಮಾಡುವಂತಿಲ್ಲ. ಹಾಗೂ ಅಕ್ರiವಾಗಿ ಮಾನಸಿಕ ಆರೋಗ್ಯ ಚಿಕಿತ್ಸಾ ಕೇಂದ್ರ ನಡೆಸುವವರಿಗೆ ರೂ. ೫೦ ಸಾವಿರದಿಂದ ರೂ. ೫ ಲಕ್ಷ ದವರೆಗೆ ದಂಢ ವಿಧಿಸಬಹುದು.
ಎಲ್ಲಾ ಸಂಕಷ್ಟಗಳಿಗೆ ಅಪಾಯಗಳಿಗೆ ಆತ್ಮಹತ್ಯೆಯೊಂದೆ ಪರಿಹಾರವಲ್ಲ, ಮಾನವನಾಗಿ ಹುಟ್ಟಿದ ಮೇಲೆ ತನ್ನ ಪಾಲಿಗೆ ಬಂದ ಎಲ್ಲ ಏರಿಳಿತಗಳನ್ನು, ಸುಖ-ದುಃಖಗಳನ್ನು, ಹತಾಸೆ-ನೋವು, ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕಿದೆ, ಸಜ್ಜನರ ಸಹವಾಸ, ಉತ್ತಮ ಆಲೋಚನೆ, ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ಪುಸ್ತಕಗಳ ಓದಿನ ಗೀಳು ಬೆಳೆಸಿಕೊಳ್ಳುವುದು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವುದು ಅಂದಾಗ ಮಾತ್ರ ದುಶ್ಚಟಗಳ ಬಗ್ಗೆ ದೂರವಿದ್ದು, ಆತ್ಮಹತ್ಯೆಗಳನ್ನು ತಡೆಗಟ್ಟಲು ಸಾಧ್ಯ.
ನೀನು ಬದುಕು ಇತರರನ್ನು ಬದುಕಲು ಬಿಡು ಎಂಬುದನ್ನು ತಿಳಿಯಪಡಿಸಬೇಕಾಗಿದೆ. ಸಮಷ್ಠಿಯ ಹಿತಕ್ಕಾಗಿ ಸಾಮಾಜಿಕ ಆರೋಗ್ಯ, ಸಾಂಸ್ಕೃತಿಕ ಆರೋಗ್ಯ, ಮಾನಸಿಕ ಆರೋಗ್ಯ ಅತ್ಯವಶ್ಯಕವಾಗಿದೆ. ಒಬ್ಬ ವ್ಯಕ್ತಿಯ ಜೀವನ ಸಾಧನೆ ಎಂದರೆ ಆ ವ್ಯಕ್ತಿಯ ಹೃದಯ ಪಕ್ವವಾಗಿರಬೇಕು. ಅಂದಾಗ ಅವನ ಜೀವನ ಸಾರ್ಥಕವಾಗುತ್ತದೆ. ಈ ದೇಹ ಇರುವಾಗಲೇ ಸಾಧಿಸಬೇಕು-ಜೀವ(ನ) ನಶ್ವರವಾದಾಗ ಸಾಧಿಸಲು ಸಾಧ್ಯವಾಗುವುದಿಲ್ಲ. ತಲ್ಲಣಿಸದಿರು ತಾಳು ಮನವೆ ಎಂಬ ದಾಸರ ವಾಣಿಯನ್ನು ಸದಾ ಸ್ಮರಿಸಿಕೊಂಡರೆ, ಆತ್ಮ ಸಾಕ್ಷಿಯಾಗಿ ಅಪರಾಧ ಕೃತ್ಯಗಳು, ಆತ್ಮಹತ್ಯೆ ಪ್ರಕರಣಗಳಿಗೆ ತಿಲಾಂಜಲಿ ಇಡಲು ಸಾಧ್ಯ ! ಈ ನಿಟ್ಟಿನಲ್ಲಿ ಸರ್ಕಾರ, ಮನೋವೈದ್ಯರು ಬುದ್ಧಿಜೀವಿಗಳು, ಸಮಾಜ ಶಾಸ್ತ್ರಜ್ಞರು ಯೋಚಿಸುವುದು ಅವಶ್ಯವಾಗಿದೆ.
-ಎ. ಎಸ್. ಮಕಾನದಾರ
0 comments:
Post a Comment