PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ.ಸೆ,೦೯: ಯಾವುದೇ ಸಮಾಜವು ಎಲ್ಲಾ ರಂಗದಲ್ಲೂ ಅಭಿವೃದ್ಧಿಯಾಗಬೇಕಾದಲ್ಲಿ ಅದರಲ್ಲಿ ಸಂಘಟನೆ ಅತ್ಯವಶ್ಯಕ. ಈ ಸಂಘಟನೆಯಲ್ಲಿ ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಸಮಾಜವು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ ಎಂದು ಸವಿತಾ ಸಮಾಜದ ವಿಭಾಗೀಯ ಕಾರ್ಯದರ್ಶಿ ಶ್ರೀನಿವಾಸ ನಾಗಲದಿನ್ನಿ ಅಭಿಪ್ರಾಯಪಟ್ಟರು.
ಅವರು ಪಕ್ಕದ ಭಾಗ್ಯನಗರದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸವಿತಾ ಸಮಾಜ ವಿವಿದೋದ್ದೇಶ ಸಹಾಕರಿ ಸಂಘದ ೯ನೇ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಸಮಾಜದಲ್ಲಿ ನಮ್ಮ ಸವಿತಾ ಸಮಾಜವು ಅತ್ಯಂತ ಹಿಂದುಳಿದಿದೆ. ಈ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವ ಕೂಗು ಕೇಳಿಬರುತ್ತಿದೆ. ಆದರೂ ಇದ್ಯಾವುದು ಸಾಧ್ಯವಾಗಿಲ್ಲ. ಸಂಘಟನೆಯಿಂದ ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ನಮಗೆ ಸಿಗಬಹುದಾದ ಸೌಲತ್ತುಗಳು ಸಿಗುತ್ತವೆ ಎಂದರು. 
ಮುಂದುವರೆದು ಮಾತನಾಡಿ, ಸಮಾಜದಲ್ಲಿ ಅತ್ಯಲ್ಪ ಸಂಖ್ಯೆಯಲ್ಲಿರುವ ಸಮಾಜದ ಬಾಂಧವರು ಮೂಲತಃ ವೃತ್ತಿ ಬದುಕಿನ ಮೇಲೆ ಆಧಾರವಾಗಿದ್ದು ಜೀವನ ನಡೆಸುತ್ತಾರೆ. ಇಂತಹದರಲ್ಲಿ ಮಕ್ಕಳಿಗೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ನೀಡುವಲ್ಲಿ ಅಷ್ಟು ಆರ್ಥಿಕವಾಗಿ ಸಬಲರಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸಮಾಜದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದರ ಜೊತೆಗೆ ಮಕ್ಕಳ ಹೆಚ್ಚಿನ ಶಿಕ್ಷಣಕ್ಕೆ ಸರಕಾರಕ್ಕೆ ಒತ್ತಾಯಿಸುವುದು ಅವಶ್ಯಕ. ಸಮಾಜದ ಅಭಿವೃದ್ಧಿ ನಮ್ಮ ಹಿಂದಿನ ಚೇತನರು ಸಾಕಷ್ಟು ಶ್ರಮಿಸಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ನಾವು ಅವರ ಧ್ಯೇಯೋದ್ದೇಶಗಳನ್ನು ಮುಂದುವರೆಸಿಕೊಂಡು ಹೋಗುವುದು. ಇದರಲ್ಲಿ ಯುವಕರು ಹೆಚ್ಚಿನ ಒಲವು ತೋರಿದಾಗ ಮಾತ್ರ ಸಮಾಜವು ಮುಖ್ಯವಾಹಿನಿಗೆ ತರುವಲ್ಲಿ ಸಾಧ್ಯವಾಗಬಲ್ಲದು ಎಂದು ಅವರು ಕರೆ ನೀಡಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಿದ್ದಪ್ಪ ಸೂಗುರು ವಹಿಸಿ ಮಾತನಾಡುತ್ತಾ, ನಿರ್ದೇಶಕ ಮಂಡಳಿ ಸೇರಿದಂತೆ ಯುವಕರನ್ನು ಒಗ್ಗೂಡಿಸಿಕೊಂಡು ಸಮಾಜವನ್ನು ಮತ್ತು ಸಂಘವನ್ನು ಉನ್ನತ ಸ್ಥಾನಕ್ಕೇರಿಸಲು ಶ್ರಮಿಸುವುರು ಎಂದು ಭರವಸೆ ನೀಡಿದರು. ಇದಕ್ಕೂ ಮೊದಲು ಇತ್ತೀಚೆಗೆ ಸವಿತಾ ಸಮಾಜ ವಿವಿದ್ದೋದ್ದೇಶ ಸಹಾಕರಿ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಗವಿಯಪ್ಪ ಇವರ ನಿಧನಕ್ಕೆ ಸಭೆಯಲ್ಲಿ ೨ ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. 
ಕಾರ್ಯಕ್ರಮದಲ್ಲಿ ಗೌರವ ಸಲಹೆಗಾರರಾದ ಚಂದ್ರಶೇಖರ ಹಡಪದ, ಸಂಘದ ಮಾಜಿ ಅಧ್ಯಕ್ಷ ಸಣ್ಣ ಹನುಮಂತಪ್ಪ ಚಿಕ್ಕಮಾದಿನಾಳ, ಉಪಾಧ್ಯಕ್ಷ ಈಶಪ್ಪ ಮಾದಿನಾಳ, ಕಾರ್ಯದರ್ಶಿ ಯಲ್ಲಪ್ಪ ಸೇರಿದಂತೆ ನಿರ್ದೇಶಕ ಮಂಡಳಿಯ ಸದಸ್ಯರಾದ ಕಲ್ಲಪ್ಪ ಹೊನ್ನೊಂಚಿ, ಶ್ರೀನಿವಾಸ ಹೊನ್ನುಂಚಿ, ಶಿವಮೂರ್ತಿ ಚಿಕ್ಕಮಾದಿನಾಳ, ನಾಗರಾಜ ಕಂಪ್ಲಿ, ಶ್ರೀಮತಿ ಭಾರತಮ್ಮ, ಮಾರುತಿ ಸೂಗುರು ಮತ್ತಿತರರು ಉಪಸ್ಥಿತರಿದ್ದರು. ರವಿಸೂಗುರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. 

Advertisement

0 comments:

Post a Comment

 
Top