PLEASE LOGIN TO KANNADANET.COM FOR REGULAR NEWS-UPDATES

 ಉದ್ಯೋಗಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಆಸಕ್ತಿ ತೋರುತ್ತಿದ್ದು, ತೋಟಗಾರಿಕೆಯಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಅಭಿಪ್ರಾಯಪಟ್ಟರು. ಉತ್ತೇಜಿಸಲು ವಿಶೇಷ ಯೋಜನೆ ಹಮ್ಮಿಕೊಂಡಿರುವುದು, 
  ಜಿಲ್ಲಾ ಪಂಚಾಯತಿ ವತಿಯಿಂದ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ತಾಲೂಕಿನ ಕಲ್‌ತಾವರಗೇರಾ ಗ್ರಾಮದಲ್ಲಿ ರೈತರಿಗೆ ತೋಟಗಾರಿಕೆ ಸಸಿಗಳ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಉದ್ಯೋಗಖಾತ್ರಿ ಯೋಜನೆಯಡಿ ಸಣ್ಣ ಮತ್ತು ಸಣ್ಣ ರೈತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು ತೋಟಗಾರಿಕೆ ಬೆಳೆ ಬೆಳೆಯಲು ಆಸಕ್ತಿ ತೋರುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ.  ಪದೇ ಪದೇ ಬರಗಾಲಕ್ಕೆ ತುತ್ತಾಗುವ ಕೊಪ್ಪಳ ಜಿಲ್ಲೆಯ ರೈತರಿಗೆ ಈ ಯೋಜನೆ ಒಂದು ವರದಾನವಾಗಿದ್ದು, ತೋಟಗಾರಿಕೆ ಬೆಳೆಯನ್ನು ತಮ್ಮ ಹೊಲಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ರೈತರು ನಿಯಮಿತವಾಗಿ ಆದಾಯ ಗಳಿಸಿ, ತಮ್ಮ ಆರ್ಥಿಕ್ ಮಟ್ಟವನ್ನು ಸುಧಾರಿಸಿಕೊಳ್ಳಬಹುದಾಗಿದೆ.  ಅಲ್ಲದೆ ಈ ಯೋಜನೆಯಿಂದ ಜಿಲ್ಲೆ ಸುಂದರ ವನಗಳ ಜಿಲ್ಲೆಯಾಗಿ ಮಾರ್ಪಾಡಾಗಲಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಈ ಯೋಜನೆಯಡಿ ತೋಟಗಾರಿಕೆ ಅಭಿವೃದ್ಧಿಗೆ ರೈತರು ಆಸಕ್ತಿ ತೋರಿದ್ದಾರೆ.  ಈಗಾಗಲೆ ಜಿಲ್ಲೆಯಲ್ಲಿ ಸುಮಾರು ೧೭೫೦೦ ಕ್ಕೂ ಹೆಚ್ಚು ರೈತರು ಈ ಯೋಜನೆಯಡಿ ತಮ್ಮ ಹೊಲಗಳನ್ನು ತೋಟಗಾರಿಕೆಗೆ ಪರಿವರ್ತಿಸಲು ಮುಂದಾಗಿದ್ದು, ಇದರಿಂದ ಒಟ್ಟು ೨೭೦೦೦ ಎಕರೆಯಷ್ಟು ಜಮೀನಿನಲ್ಲಿ ಮುಂದಿನ ದಿನಗಳಲ್ಲಿ ತೋಟಗಾರಿಕೆ ಬೆಳೆಗಳು ಕಾಣಲಿವೆ.  ಇದಕ್ಕಾಗಿ ಒಟ್ಟು ೩೨ ಲಕ್ಷ ತೋಟಗಾರಿಕೆ ಬೆಳೆಗಳ ಸಸಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.  ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರು ಗಿಡಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕಾಗಿದ್ದು, ಇದಕ್ಕಾಗಿ ಎರಡು ವರ್ಷಗಳ ನಿರ್ವಹಣೆಗೆ ಉದ್ಯೋಗಖಾತ್ರಿ ಯೋಜನೆಯಡಿ ಸೌಲಭ್ಯ ದೊರೆಯಲಿದೆ.  ಉದ್ಯೋಗಖಾತ್ರಿ ಯೋಜನೆಯಲ್ಲಿ ಈ ಹಿಂದೆ ಹಲವು ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ಯೋಜನೆಯನ್ನು ಹಣದ ದುರ್ಬಳಕೆಗಾಗಿ ದುರುಪಯೋಗ ಪಡಿಸಿಕೊಂಡ ಬಗ್ಗೆ ವರದಿಯಾಗಿದೆ.  ಜನರ ಅಗತ್ಯತೆಗೆ ಅನುಗುಣವಾಗಿ ಸರ್ಕಾರದ ಯೋಜನೆಗಳು ಅನುಷ್ಠಾನಗೊಳ್ಳಬೇಕಾಗಿದ್ದು, ಆದರೆ ಈ ಯೋಜನೆಯಡಿ ಯಾವುದೇ ದುರುಪಯೋಗ ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.  ಒಟ್ಟಾರೆ ಮಳೆಗಾಲ ಮುಗಿಯುವುದರೊಳಗಾಗಿ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
  ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಬಡಜನರು ಸ್ವಾಭಿಮಾನದಿಂದ ಬದುಕು ಸಾಗಿಸಲು ಅನ್ನಭಾಗ್ಯ ಯೋಜನೆ, ವಿವಿಧ ನಿಗಮಗಳಲ್ಲಿನ ಫಲಾನುಭವಿಗಳ ಸಾಲಮನ್ನಾ ಮಾಡುವುದು ಸೇರಿದಂತೆ ಚುನಾವಣೆ



ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಯೋಜನೆಗಳನ್ನು ನಮ್ಮ ಸರ್ಕಾರ ಒಂದೊಂದಾಗಿ ಈಡೇರಿಸುತ್ತಿದೆ.  ರೈತರಿಗೆ ಸೋಲಾರ್ ಪಂಪ್‌ಸೆಟ್ ವಿತರಿಸಲು ಚಿಂತನೆ ನಡೆಸಲಾಗಿದ್ದು, ಶೀಘ್ರದಲ್ಲಿ ಈ ಕುರಿತು ತೀರ್ಮಾನವಾಗಲಿದೆ.  ತೋಟಗಾರಿಕೆಯಿಂದ ರೈತರು ಉತ್ತಮ ಆದಾಯ ಗಳಿಸಬಹುದಾಗಿದ್ದು, ಇದಕ್ಕೆ ತೋಟಗಾರಿಕೆ ಇಲಾಖೆ ರೈತರಿಗೆ ಅಗತ್ಯ ಮಾಹಿತಿ ಹಾಗೂ ತರಬೇತಿಯನ್ನು ನೀಡುವಂತಾಗಬೇಕು ಎಂದರು.
  ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ ಅವರು ಮಾತನಾಡಿ, ರಾಷ್ಟ್ರೀಯ ಕೃಷಿ ಮಿಷನ್ ಯೋಜನೆಯಡಿ ರೈತರಿಗೆ ಶೇ. ೮೦ ರಷ್ಟು ಸಬ್ಸಿಡಿ ದೊರೆಯುವ ಅವಕಾಶವಿದ್ದು, ಉಳಿದ ಶೇ. ೨೦ ರಷ್ಟನ್ನು ಉದ್ಯೋಗಖಾತ್ರಿ ಯೋಜನೆಯಡಿ ಸೌಲಭ್ಯ ಪಡೆದರೆ, ರೈತರು ಉಚಿತವಾಗಿ ತೋಟಗಾರಿಕೆ ಅಭಿವೃದ್ಧಿಪಡಿಸಿಕೊಂಡಂತೆ ಆಗುತ್ತದೆ.  ಅಲ್ಲದೆ ಎರಡು ವರ್ಷ ತೋಟಗಾರಿಕೆ ಬೆಳೆಗಳ ನಿರ್ವಹಣೆಗೆ ಉದ್ಯೋಗಖಾತ್ರಿ ಯೋಜನೆಯಡಿ ಮಾನವ ದಿನಗಳ ಆಧಾರದ ಮೇಲೆ ಕೂಲಿ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ.  ಯೋಜನೆಯಡಿ ಜಿಲ್ಲೆಯ ರೈತರಿಗೆ ತೋಟಗಾರಿಕೆ ಗಿಡಗಳ ಕೊರತೆ ಕಂಡುಬಂದಲ್ಲಿ, ಬೇರೆ, ಬೇರೆ ಜಿಲ್ಲೆಗಳಿಂದ ಉತ್ತಮ ತಳಿಗಳ ಗಿಡಗಳನ್ನು ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ, ಜಿ.ಪಂ. ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಸದಸ್ಯೆ ಕಸ್ತೂರಮ್ಮ ಪಾಟೀಲ್, ತಾ.ಪಂ. ಸದಸ್ಯ ಕೆಂಚಪ್ಪ ಹಿರೇಮನಿ, ಗಣ್ಯರಾದ ನಾಗಪ್ಪ ಸಾಲೊಣಿ, ಅಮರವ್ವ, ಮಂಗಳಮ್ಮ, ಫಕೀರಯ್ಯ ಹಿರೇಮಠ, ತಾ.ಪಂ., ತೋಟಗಾರಿಕೆ ಇಲಾಖೆಯ ವಿವಿಧ ಅಧಿಕಾರಿಗಳು ಇನ್ನಿತರ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿ.ಪಂ. ಅಧ್ಯಕ್ಷರು ಸೇರಿದಂತೆ ಎಲ್ಲ ಗಣ್ಯರು ಫಲಾನುಭವಿಗಳ ಹೊಲದಲ್ಲಿ ತೋಟಗಾರಿಕೆ ಗಿಡಗಳನ್ನು ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು.  ಅಲ್ಲದೆ ಯೋಜನೆಯಡಿ ಸೌಲಭ್ಯ ಪಡೆದಿರುವ ಫಲಾನುಭವಿಗಳಿಗೆ ತೋಟಗಾರಿಕೆ ಸಸಿಗಳನ್ನು ವಿತರಣೆ ಮಾಡಲಾಯಿತು.

Advertisement

0 comments:

Post a Comment

 
Top