PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಜಿಲ್ಲೆಯಲ್ಲಿ ಶಿಶು ಮರಣದ ಪ್ರಮಾಣ ಹೆಚ್ಚಾಗಿರುವುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿರುವ ಕುರಿತಂತೆ ಸ್ಪಷ್ಠೀಕರಣ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹಾದೇವಸ್ವಾಮಿ ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟಕ್ಕೆ ಹೋಲಿಸಿದಲ್ಲಿ, ಕೊಪ್ಪಳ ಜಿಲ್ಲೆಯಲ್ಲಿನ ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಇದೆ ಎಂದು ತಿಳಿಸಿದ್ದಾರೆ.
  ಕಳೆದ ಜು. ೩೧ ರಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ತಾಯಿ ಮರಣ ಮತ್ತು ಶಿಶು ಮರಣದ ಬಗ್ಗೆ ಅಂಕಿ-ಅಂಶಗಳನ್ನು ನೀಡಲಾಗಿದ್ದು, ೨೦೧೩ ರ ಏಪ್ರಿಲ್ ನಿಂದ ಜೂನ್ ತಿಂಗಳವರೆಗಿನ ಅವಧಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ೦೮ ತಾಯಿಮರಣ ಹಾಗೂ ೧೭೩ ಶಿಶು ಮರಣ ಪ್ರಕರಣಗಳು ವರದಿಯಾಗಿರುವ ಬಗ್ಗೆ ವಿವರಣೆ ನೀಡಲಾಗಿದೆ.  ಈ ಅಂಶಗಳನ್ನೇ ಮಾಧ್ಯಮದಲ್ಲಿ ಹೈಲೈಟ್ ಮಾಡಿ ವರದಿ ಮಾಡಲಾಗಿದ್ದು,  ಆದರೆ ತಾಯಿ ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದಲ್ಲಿ ತಾಯಿ ಮರಣ ಪ್ರಮಾಣವು ೨೦೧೩ ರ ಏಪ್ರಿಲ್ ನಿಂದ ಜೂನ್ ತಿಂಗಳವರೆಗಿನ ಅವಧಿಯಲ್ಲಿ ಪ್ರತಿ ೧ ಲಕ್ಷಕ್ಕೆ ೨೧೨ ಇದ್ದರೆ, ಕರ್ನಾಟಕ ರಾಜ್ಯದಲ್ಲಿ ಇದರ ಪ್ರಮಾಣ ೧೨೫ ಇದೆ.  ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ತಾಯಿ ಮರಣದ ಪ್ರಮಾಣ ಪ್ರತಿ ೧ ಲಕ್ಷಕ್ಕೆ ೧೧೫ ರಷ್ಟು ಇದೆ.   
  ಶಿಶು ಮರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೩ ರ ಏಪ್ರಿಲ್ ನಿಂದ ಜೂನ್ ತಿಂಗಳವರೆಗಿನ ಅವಧಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಶಿಶು ಮರಣದ ಪ್ರಮಾಣವು ಪ್ರತಿ ೧೦೦೦ ಕ್ಕೆ ೪೪ ರಷ್ಟು ಇದ್ದರೆ, ಕರ್ನಾಟಕ ರಾಜ್ಯದಲ್ಲಿ ಇದರ ಪ್ರಮಾಣ ೪೫ ಇದೆ.  ಕೊಪ್ಪಳ ಜಿಲ್ಲೆಯಲ್ಲಿ ಶಿಶು ಮರಣದ ಪ್ರಮಾಣ ಇದೇ ಅವಧಿಯಲ್ಲಿ ಕೇವಲ ೨೪. ೬೩ ರಷ್ಟು ಮಾತ್ರ ಇದೆ.  
  ಆದಾಗ್ಯೂ ಕೊಪ್ಪಳ ಜಿಲ್ಲೆಯಲ್ಲಿ ತಾಯಿ ಮರಣ ಮತ್ತು ಶಿಶು ಮರಣದ ಪ್ರಮಾಣವನ್ನು ಇನ್ನಷ್ಟು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈಗಾಗಲೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಹಲವಾರು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.   
  ೧೦೮ ಆರೋಗ್ಯ ಕವಚ, ಆಂಬುಲೆನ್ಸ್ ವಾಹನದ ಸೇವೆಯನ್ನು ತುರ್ತಾಗಿ ಪಡೆಯುವ ನಿಟ್ಟಿನಲ್ಲಿ ಸ್ಪಂದನೆಯ ಅವಧಿಯನ್ನು ಅತ್ಯಂತ ಕಡಿಮೆಗೊಳಿಸುವ ಮೂಲಕ ತಾಯಿ ಮರಣ ಮತ್ತು ಶಿಶು ಮರಣವನ್ನು ಕಡಿಮೆಗೊಳಿಸುವುದು.  ಸದ್ಯ ಜಿಲ್ಲೆಯಲ್ಲಿ ಪ್ರಸೂತಿ ತಜ್ಞರು ಮತ್ತು ಮಕ್ಕಳ ತಜ್ಞ ವೈದ್ಯರ ಕೊರತೆ ಅತ್ಯಂತ ಹೆಚ್ಚಾಗಿದ್ದು, ಸದ್ಯ ಜಿಲ್ಲೆಯಲ್ಲಿ ಲಭ್ಯವಿರುವ ವೈದ್ಯರ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿ, ಅವರು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿ ಕಾರ್ಯನಿರ್ವಹಿಸಲು ಕಟ್ಟಿನಿಟ್ಟಿನ ಆದೇಶ ಹೊರಡಿಸುವ ಮೂಲಕ, ಅವರಿಂದ ಸಮರ್ಪಕ ಸೇವೆ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.  ಹೆರಿಗೆ ನಂತರ ನವಜಾತ ಶಿಶು ಮತ್ತು ಬಾಣಂತಿಯರ ಭೇಟಿಗಾಗಿ ಜಿಲ್ಲೆಯಲ್ಲಿನ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಇವರ ಸೇವೆಯನ್ನು ಇನ್ನಷ್ಟು ಉತ್ತಮ ಪಡಿಸಲು ಅವರಿಗೆ ಇನ್ನಷ್ಟು ತರಬೇತಿ ಹಾಗೂ ಅರಿವು ನೀಡುವ ಮೂಲಕ ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು.
  ಜನನಿ ಶಿಶು ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ಗರ್ಭಿಣಿ ಸ್ತ್ರೀಯರಿಗೆ, ಬಾಣಂತಿಯರಿಗೆ, ನವಜಾತ ಶಿಶು ಆರೈಕೆಗಾಗಿ ಬಿಡುಗಡೆ ಮಾಡಲಾದ ಅನುದಾನವನ್ನು ಬಳಸಿಕೊಂಡು, ಶಿಶು ಮರಣ ಪ್ರಮಾಣ ಕಡಿಮೆಗಳಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.  ಜಿಲ್ಲೆಯಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂತಹ ಆಸ್ಪತ್ರೆಗಳಲ್ಲಿ ಸೂಕ್ತ ಹೆರಿಗೆ ಮತ್ತು ನವಜಾತ ಶಿಶುಗಳ ಆರೈಕೆಗೆ ತಜ್ಞ ವೈದ್ಯರು ಅಲ್ಲದೆ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞ ವೈದ್ಯರನ್ನು ಕೇಸ್ ಬೇಸಿಸ್ ಮೇಲೆ ಸೇವೆ ಪಡೆದುಕೊಂಡು ತಾಯಿ ಮತ್ತು ಶಿಶು ಮರಣ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು.  ಕೊಪ್ಪಳ ಜಿಲ್ಲೆಯಲ್ಲಿ ತಾಯಿ ಮರಣ ಮತ್ತು ಶಿಶು ಮರಣಕ್ಕೆ ಪ್ರಮುಖ ಕಾರಣವಾಗಿರುವ ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆಗೊಳಿಸುವುದು ಅತ್ಯಂತ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಯುನಿಸೆಫ್, ಜಿಲ್ಲಾ ಮಕ್ಕಳ ರಕ್ಷಣಾ ವೇದಿಕೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಬಾಲ್ಯ ವಿವಾಹದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ತೀವ್ರಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹದೇವಸ್ವಾಮಿ ಅವರು ಸ್ಪಷ್ಠೀಕರಣದಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top