PLEASE LOGIN TO KANNADANET.COM FOR REGULAR NEWS-UPDATES

 - ಮುಸಾಫಿರ್

‘ವನ್ಸ್ ಅಪಾನ್ ಎ ಟೈಮ್ ಮುಂಬೈ ದೋಬಾರ’ ಅದ್ದೂರಿ ಸಂಭಾಷಣೆಗಳ ವೈಭವ ಗಳಲ್ಲಿ ಕಟ್ಟಿದ ಚಿತ್ರ. ಸ್ಟಂಟ್, ಕಥೆ, ಛಾಯಾಗ್ರಹಣ ಇವೆಲ್ಲವೂ ಅನಂತರದ ಸ್ಥಾನವನ್ನು ಪಡೆಯುತ್ತದೆ. ಇಲ್ಲಿ ಪ್ರೀತಿಯಿರಲಿ, ದ್ವೇಷವಿರಲಿ ಎಲ್ಲವನ್ನೂ ಸಂಭಾಷಣೆಗಳ ಮೂಲಕವೇ ಕಟ್ಟಿಕೊಡಲಾಗಿದೆ. ಆದುದರಿಂದ ಎಲ್ಲವೂ ಇದ್ದು, ಏನೂ ಇಲ್ಲ ದಂತಹ ಪರಿಸ್ಥಿತಿ ಈ ಚಿತ್ರದ್ದು. ಪ್ರೀತಿಯಿರಲಿ, ದ್ವೇಷವಿರಲಿ ಯಾವುದೂ ಮನವನ್ನು ಕಲಕುವಂತಿಲ್ಲ. ಎಲ್ಲವೂ ಮೇಲಿಂದ ಮೇಲೆ ಸಂಭಾಷಣೆಗಳ ರೂಪದಲ್ಲಿ ಹಾರಿ ಹೋಗುತ್ತದೆ.ಚಿತ್ರ ‘ವನ್ಸ್ ಅಪಾನ್ ಎ ಟೈಮ್’ನ ಭಾಗ ಎರಡು ಎಂದು ಊಹಿಸಿ ಹೋದವರಿಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಹಾಗೆ ನೋಡಿದರೆ ಇದು ಮುಂಬೈಯ ಭೂಗತ ಇತಿಹಾಸವನ್ನು ಕಟ್ಟಿ ಕೊಡುವ ಚಿತ್ರ ಅಲ್ಲವೇ ಅಲ್ಲ.
ದಾವೂದ್ ಇಬ್ರಾಹೀಂನನ್ನು ಹೋಲುವ ಒಂದು ಪಾತ್ರ (ಅಕ್ಷಯ್ ಕುಮಾರ್) ಪ್ರೀತಿಯಲ್ಲಿ ಸಿಲುಕಿಕೊಳ್ಳುವ ಕತೆಯೇ ಈ ‘ದೋಬಾರ’. ಆದುದರಿಂದ ಇಲ್ಲಿ, ಭೂಗತ ಪಾತ್ರಗಳೆಲ್ಲವೂ ಒಂದು ನೆಪ ಮಾತ್ರವಾಗಿದೆ. ಭೂಗತ ದೊರೆ ಶುಐಬ್‌ನ ವ್ಯಕ್ತಿತ್ವವನ್ನು ಕಟ್ಟಿ ಕೊಡುವುದಕ್ಕೋಸ್ಕರ ಅವು ಕಾಣಿಸಿಕೊಳ್ಳುತ್ತವೆ. ಚಿತ್ರದ ಇನ್ನೊಂದು ಪಾತ್ರ ಅಸ್ಲಂ(ಇಮ್ರಾನ್ ಖಾನ್). ಜೋಪಡಾ ಪಟ್ಟಿಯಿಂದ ಈತನನ್ನು ಮೇಲೆತ್ತಿ, ಬದುಕು ನೀಡಿದವ ಶುಐಬ್.
ಆದುದರಿಂದ ಶುಐಬ್‌ಗೆ ಅಸ್ಲಂ ಪ್ರಾಣ ನೀಡುವುದಕ್ಕೂ ಸಿದ್ಧನಾಗಿರುವ ನಿಷ್ಟ. ಶುಐಬ್‌ನನ್ನು ಕೊಲ್ಲಲು ಸಂಚು ರೂಪಿಸಿದ ಶತ್ರುಗಳನ್ನು ಹುಡುಕಿಕೊಂಡು ಮತ್ತೆ ಮುಂಬೈಗೆ ಆಗಮಿಸುವ ಶುಐಬ್‌ನನ್ನು ಅಸ್ಲಂ ಕೂಡಿಕೊಳ್ಳುವುದರಿಂದ ಕಥೆ ತೆರೆದುಕೊಳ್ಳುತ್ತದೆ. ಆದರೆ ನಿಜವಾದ ಕತೆ, ಭೂಗತ ಜಗತ್ತಿನದ್ದಲ್ಲ. ಭೂಗತ ದೊರೆ ಪ್ರೀತಿಯಲ್ಲಿ ಸಿಲುಕಿಕೊಳ್ಳುವುದು, ತನ್ನ ಹಣ, ದೌಲತ್ತು, ಪಿಸ್ತೂಲ್‌ಗಳ ಮೂಲಕ ಆ ಪ್ರೀತಿಯನ್ನು ತನ್ನದಾಗಿಸಿಕೊಳ್ಳಲು ಹವಣಿಸುವುದು ಮುಖ್ಯ ಕತೆ.
ಈತನ ಪ್ರೀತಿಗೆ ಪ್ರತಿಸ್ಪರ್ಧಿ ಇನ್ನಾರೂ ಅಲ್ಲ, ಅವನ ಆಪ್ತ ಅಸ್ಲಂ. ಜಾಸ್ಮಿನ್(ಸೋನಾಕ್ಷಿ ಸಿನ್ಹಾ)ನನ್ನು ಮೊದಲ ನೋಟದಲ್ಲೇ ಶೊಯೆಬ್ ಪ್ರೀತಿಸುತ್ತಾನೆ. ಇತ್ತ ಜಾಸ್ಮಿನ್ ತನ್ನ ಮೊದಲ ನೋಟದಲ್ಲೇ ಅಸ್ಲಂನನ್ನು ಇಷ್ಟ ಪಡುತ್ತಾಳೆ. ಈ ಕಣ್ಣಾಮುಚ್ಚಾಲೆಯ ಕ್ಲೈಮಾಕ್ಸ್ ಚಿತ್ರದ ಮುಖ್ಯ ವಸ್ತು. ಆದರೆ ಪೂರ್ವಾರ್ಧದಲ್ಲಿ ಶುಐಬ್‌ನ ಭೂಗತ ಸ್ಟಂಟ್‌ಗಳು ಮಿಂಚುತ್ತವೆ. ಮಧ್ಯಾಂತರದ ಬಳಿಕ, ಶುಐಬ್‌ನೊಳಗೆ ಮಜ್ನೂ ಜಾಗರೂಕತನಾಗುತ್ತಾನೆ.ಅಕ್ಷಯ್‌ನ ಮಾತುಗಾರಿಕೆ, ಸ್ಟಂಟ್‌ಗಳ ಮುಂದೆ ಇಮ್ರಾನ್ ತುಸು ಮಂಕಾದವನಂತೆ ಕಾಣುತ್ತಾನೆ.
ಜಾಸ್ಮಿನ್ ಆಗಿ ಸೋನಾಕ್ಷಿ ಚಿತ್ರದುದ್ದಕ್ಕೂ ತನ್ನ ಪರಿಮಳ ಬೀರುತ್ತಾಳೆ.  ರಜತ್ ಅರೋರಾ ಅವರ ಸಂಭಾಷಣೆ ಚಿತ್ರದ ಹೆಗ್ಗಳಿಕೆ ಮತ್ತು ಅಸ್ತಿವಾರ. ಚಿತ್ರವನ್ನು ಅದ್ದೂರಿಯಾಗಿ ಮಾಡಲಾಗಿದೆ. ಛಾಯಾಗ್ರಹಣವೂ ಚೆನ್ನಾಗಿದೆ. ಸಂಗೀತವೂ ಚಿತ್ರಕ್ಕೆ ಪೂರಕವಾಗಿದೆ. ಆದರೆ ಚಿತ್ರ ಹಿಂದಿನ ವನ್ಸ್ ಅಪಾನ್ ಎ ಟೈಮ್‌ನ ನಿರೀಕ್ಷೆಯಿಟ್ಟು ಬಂದವರಿಗೆ ನಿರಾಸೆ ತರುತ್ತದೆ. ಮುಂಬೈ, ಆಳ, ಅಗಲಗಳನ್ನು ಕಲಕುವ ಆ ಚಿತ್ರದ ತೀವ್ರತೆ, ಇದರಲ್ಲಿಲ್ಲ.
ಇಲ್ಲಿನ ಕೇಂದ್ರ ಜಾಸ್ಮಿನ್. ಅವಳಿಗಾಗಿ ತೊಯ್ದಾಡುವ ಶುಐಬ್ ಮತ್ತು ಅಸ್ಲಂ ಎನ್ನುವ ಎರಡು ಪಾತ್ರಗಳನ್ನು ಮುಂದಿಟ್ಟು ಚಿತ್ರವನ್ನು ಸಿದ್ಧಪಡಿಸಿದ್ದಾರೆ ಲೂಥ್ರಿಯ. ಹಿಂದಿನ ಚಿತ್ರಕ್ಕೆ ಹೋಲಿಸಿದರೆ, ಇಲ್ಲಿ ಕತೆಗಾರನಿಗೂ, ನಿರ್ದೇಶಕನಿಗೂ ಹೆಚ್ಚು ಶ್ರಮವಿಲ್ಲ. ಸಂಭಾಷಣೆಯನ್ನು ಬರೆದವನು ಸಾಕಷ್ಟು ಬೆವರು ಸುರಿಸಿದಂತಿದೆ.ಪ್ರೀತಿಯೂ ಇಲ್ಲಿ ಜೀವಂತವಾಗಿದೆ ಅನ್ನಿಸುವುದಿಲ್ಲ.
ಡೈಲಾಗ್‌ಗಳು ಪ್ರೀತಿಯ ಮೇಲೆ ಸವಾರಿ ಮಾಡುತ್ತದೆ. ಸೋನಾಕ್ಷಿಯ ಚೆಲುವಿಗೆ ಪ್ರೀತಿಯನ್ನು ಬಸಿದು ನೀಡಲು ಸಾಧ್ಯವಾಗಿಲ್ಲ. ಇಮ್ರಾನ್-ಅಕ್ಷಯ್ ಪ್ರೀತಿಯಲ್ಲೂ ತೀವ್ರತೆಯನ್ನು ತುಂಬಲು ನಿರ್ದೇಶಕನಿಗೆ ಸಾಧ್ಯವಾಗಿಲ್ಲ. ಆದುದರಿಂದ ಚಿತ್ರ, ಅತ್ತ ಭೂಗತ ಜನರ ಕತೆಯೂ ಆಗದೆ, ಪ್ರೇಮ ಚಿತ್ರವೂ ಆಗದೆ ಕ್ಷಕರನ್ನು ನಿರಾಸೆಗೊಳಿಸುತ್ತದೆ. ಒಟ್ಟಿನಲ್ಲಿ ನೋಡಲೇ ಬೇಕಾದ ಚಿತ್ರ ಇದಲ್ಲ. ಟೈಂಪಾಸ್‌ಗಾಗಿ ಚಿತ್ರ ನೋಡುವವರು ಒಮ್ಮೆ ಚಿತ್ರ ಮಂದಿರ ಇಣುಕಿ ಬರಬಹುದು. 

Advertisement

0 comments:

Post a Comment

 
Top