PLEASE LOGIN TO KANNADANET.COM FOR REGULAR NEWS-UPDATES






ರೈತರ ಆತ್ಮಹತ್ಯೆಗಳು, ಬರಗಾಲ ಮೇವುಕೊರತೆಯಿಂದ ದನಕರುಗಳು ಕಾಸಾಯಿಖಾನೆಯತ್ತ ಮುಖ ಮಾಡುತ್ತಿರುವ ಸಮಸ್ಯೆ, ಉದ್ಯೋಗ ಖಾತ್ರಿಯಲ್ಲಿಯ ಗೋಲಮಾಲ್, ಬರಗಾಲದಿಂದ ಇಂದು ಹಳ್ಳಿಗಳು ಖಾಲಿ ಖಾಲಿ ಎನ್ನುವ ವರದಿಗಳು. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ದಲಿತರ ಶೋಚನಿಯ ಪರಿಸ್ಥಿತಿ, ಶಿಕ್ಷಣದ ಅಂಧಕಾರ ಇನ್ನೂ ಹಲವಾರು ಕಾರಣಗಳನ್ನು ಹೇಳಬಹುದು. ಆದರೆ ಅಭಿವೃದ್ಧಿ ಎಂದರೇನು ಎಂಬುದು ನಮಗೆಲ್ಲ ಅರ್ಥವಾದ ಸಂಗತಿಯಾದರೂ ಒಂದಿಷ್ಟು ಅದನ್ನು ತಿಳಿದುಕೊಳ್ಳಲೇಬೇಕು.

ಅಭಿವೃದ್ಧಿಯ ಪರಿಕಲ್ಪನೆ

ಅಭಿವೃದ್ಧಿ ಎಂಬ ಪರಿಕಲ್ಪನೆ ಎರಡನೇ ಮಹಾಯುದ್ಧದ ನಂತರ ಹುಟ್ಟಿಕೊಂಡಿತು. ಮೂಲತಃ ಒಬ್ಬ
ವ್ಯಕ್ತಿಯ, ಕುಟುಂಬದ, ಸಮುದಾಯದ, ರಾಜ್ಯದ, ಸಮಗ್ರ ಅಭಿವೃದ್ಧಿಗೆ ದೇಶದ ಪ್ರಗತಿ ಎಂದು
ಪರಿಗಣಿಸಲಾಗಿದೆ. ಈ ಅರ್ಥದಲ್ಲಿ ಸರ್ವತೋಮುಖ ಅಭಿವೃದ್ಧಿ ಕುರಿತು ವಿಶೇಷವಾದ ಲೇಖನಗಳನ್ನು ಪತ್ರಿಕೆಗಳು ಆಗಾಗ ಓದುಗರ ಗಮನಕ್ಕೆ ತಂದದ್ದು ಉಂಟು. ದೇಶದ ತಲಾ ಆದಾಯ ಹೆಚ್ಚುವುದರಿಂದ ಪ್ರಗತಿ ಸಾಧ್ಯವಾಗುತ್ತದೆ.


ಆರ್ಥಿಕ ಪ್ರಗತಿಯ ಜೊತೆಗೆ ಸಾಮಾಜಿಕ ಬದಲಾವಣೆ ತರುವುದರಿಂದ ಬದುಕಿನ ಗತಿ ಉನ್ನತವಾಗಲು ಸಾಧ್ಯವಿದೆ. ಶಿಕ್ಷಣ, ಉದ್ಯೋಗ, ಕೃಷಿ, ಆರೋಗ್ಯ, ಆಹಾರ, ಕುಡಿಯುವ ನೀರು, ಪರಿಸರ, ನೈರ್ಮಲ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಇನ್ನಿತರ ಅಭಿವೃದ್ಧಿ ಹಾಗೂ ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಆದಲ್ಲಿ ಅಭಿವೃದ್ಧಿ ಎಂಬ ಪದಕ್ಕೆ ನಿಜವಾದ ಅರ್ಥ ಕಲ್ಪಿಸಲಾಗುತ್ತದೆ. ಜೀವನದಲ್ಲಿ ಪರಸ್ಪರ ಹೊಂದಿಕೆಯ ಬೆಳವಣಿಗೆ ಕಾಣುವುದೇ ಅಭಿವೃದ್ಧಿ. ಸಾಮಾನ್ಯ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದು, ಆರ್ಥಿಕಮಟ್ಟ ಏರಿಸುವುದು, ಧಾರಣಶಕ್ತಿ ಹೆಚ್ಚಿಸುವುದು ಅಭಿವೃದ್ಧಿಯ ಮಾರ್ಗಗಳು. ಆರ್ಥಿಕವಾಗಿ ಹಿಂದುಳಿದ ಜನರ ಏಳಿಗೆ ಜೊತೆಗೆ ಪರಂಪರಾಗತವಾಗಿ ಬಳುವಳಿಯಾಗಿ ಬಂದಿರುವ ಸಂಸ್ಕೃತಿ, ಕಲೆ, ಸಾಹಿತ್ಯ ಸ್ಮಾರಕಗಳು ಇತ್ಯಾದಿ ಉಳಿಸಿಕೊಂಡು ರಕ್ಷಿಸುವುದು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಬಡತನ ಹೋಗಲಾಡಿಸುವುದು. ಕೊಳಚೆ ಪ್ರದೇಶಗಳಲ್ಲಿ ಅಂತರ್ ವ್ಯವಸ್ಥೆ ಒದಗಿಸುವುದು. ಆಹಾರ, ಕುಡಿಯುವ ನೀರು ಪೂರೈಕೆ, ವಸತಿ ಸೌಕರ್ಯ, ಶಿಕ್ಷಣಸೌಲಭ್ಯ ಇತ್ಯಾದಿಗಳನ್ನು ಒದಗಿಸುವುದು ಅಭಿವೃದ್ಧಿಯ ಮೂಲ ಮಂತ್ರವಾಗಿದೆಯಾದರೂ, ಈ ರೀತಿ ಪೂರ್ಣ ಪ್ರಮಾಣದ ಸ್ಥಿತಿಯನ್ನು ಪ್ರಜಾಪ್ರಭುತ್ವ ಪ್ರಪಂಚದ ಯಾವ ಭಾಗದಲ್ಲಿಯೂ ಜಾರಿಯಲ್ಲಿಲ್ಲವೋ ಅದೇ ರೀತಿ ಪರಿಪೂರ್ಣ ಪ್ರಮಾಣದ ಅಭಿವೃದ್ಧಿಗೊಂಡ ಪ್ರದೇಶ ಎಲ್ಲಿಯೂ ಇಲ್ಲ ಎನ್ನಬಹುದು ಹಾಗೂ ಇದನ್ನು ಅಭಿವೃದ್ಧಿಯ ಮಿತಿ ಎಂದೂ ಕರೆಯಬಹುದು. ದೇಶ ಗ್ರಾಮೀಣ ಅಭಿವೃದ್ಧಿಯ ಫಲವನ್ನು ಯಥೇಚ್ಛವಾಗಿ ಉಣ್ಣುತ್ತಾ ಸುಖವಾಗಿದ್ದರೂ, ಗ್ರಾಮೀಣ ಜನ ಅಭಿವೃದ್ಧಿ ವಂಚಿತರಾಗಿದ್ದಾರೆ. ಒಳ್ಳೆಯದು ಆಗುವುದೇ ಅಭಿವೃದ್ಧಿ ಎಂದು ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ. ಬಡತನ, ಹಸಿವೆ, ನಿರುದ್ಯೋಗ, ಪರಾವಲಂಬನೆಗಳ ನಿವಾರಣೆ, ಆರೋಗ್ಯ ಶಿಕ್ಷಣ ಸವಲತ್ತುಗಳ ಸುಧಾರಣೆ, ಸಮಾನತೆ, ಸಮಾಜಿಕ ನ್ಯಾಯ ಇವುಗಳನ್ನು ತರುವುದೇ ಅಭಿವೃದ್ಧಿ ತಾತ್ಪರ್ಯದಲ್ಲಿ ಪ್ರತಿಯೊಬ್ಬರ ಭೌತಿಕ, ಮಾನಸಿಕ, ಸಾಂಸ್ಕೃತಿಕ ಅಭ್ಯುದಯವೇ ಅಭಿವೃದ್ಧಿ ಎನ್ನುತ್ತಾರೆ.




ಅಭಿವೃದ್ಧಿ ಎಂದರೇನು?

ಚೀನಿ ಭಾಷೆಯಲ್ಲಿ ಒಂದು ಗಾದೆ ಇದೆ. ಹಸಿದವನಿಗೆ ಮೀನನ್ನು ಕೊಡಬೇಡ ; ಬದಲಿಗೆ ಮೀನು
ಹಿಡಿಯುವುದನ್ನು ಕಲಿಸಿಕೊಡು ಎಂದ. ಇಂದು ಮೂರೋತ್ತು ಊಟ ಮಾಡಲು ಬಡವರಿಗೆ ಕೈತುಂಬ
ಕೆಲಸಬೇಕಾಗಿದೆ. ಸರಕಾರ ಅಂಥ ಯೋಜನೆಗಳಿಗೆ ಮಹತ್ವ ನೀಡದೆ, ಬರೀ ತಾತ್ಕಲಿಕ ಯೋಜನೆಗಳನ್ನು
ರೂಪಿಸುತ್ತಿರುವುದು ದುರುಂತ. ಅಭಿವೃದ್ಧಿ ಎಂದರೆ ಬಹುಸಂಖ್ಯಾತ ಜನರು ತಮ್ಮ ಪ್ರಗತಿಯ ಚಿಂತನೆ, ಯೋಜನೆ ಕಾರ್ಯಚರಣೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳಲು ಸಾಧ್ಯವಾಗುವಂತಹ ಮತ್ತು ಸಾಧಿಸಿದ ಅಭಿವೃದ್ಧಿಯು ಸುಸ್ಥಿರವಾಗಲು ಸಹಾಯಕವಾಗುವಂಥ ಪರಿಸರದ ನಿರ್ಮಾಣ. ಕೆ.ಸಿಂಗ್ ಅವರು ಅಭಿವೃದ್ಧಿ ಸಂವಹನವನ್ನು ಬಹಳ ಸರಳವಾಗಿ ಹೇಳಿದ್ದರೆ ಸರಕಾರ ಹಾಗೂ ಜನತೆಯನ್ನು ಪರಸ್ಪರ ಹತ್ತಿರ ತರುವ ವ್ಯಾಪಕ ಶೈಕ್ಷಣಿಕ ಪ್ರಕ್ರಿಯೆ ಎಂದು ಪರಿಭಾಷಿಸಿದರು. ಅಭಿವೃದ್ಧಿ ಸಂವಹನ ಎಂದರೆ, ಒಂದು ದೇಶದ ಜನತೆಯಲ್ಲಿ ಹೆಚ್ಚಿನ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆಯನ್ನು ತರುವ ಮತ್ತು ಮಾನವ ಸಂಪನ್ಮೂಲದ ಪರಿಪೂರ್ಣವಾದ ಬಳಕೆಯ ಮೂಲಕ ದೇಶವನ್ನು ಬಡತನದ ಗತಿಯಿಂದ ಸಶಕ್ತ ಆರ್ಥಿಕ ಪ್ರಗತಿಯ ಸ್ಥಿತಿಯ ಕಡೆಗೆ ಶೀಘ್ರಗತಿಯಲ್ಲಿ ಪರಿವರ್ತಿಸುವುದಕ್ಕಾಗಿ ಬಳಸುವ ಮಾನವ ಸಂವಹನ ಒಂದು ಕಲೆ ಮತ್ತು ವಿಜ್ಞಾನ. ಅಭಿವೃದ್ಧಿ ಸಂವಹನ ಎಂದರೆ ಸಮುದಾಯದ ಜನರ ಅಭ್ಯುದಯದ ಅಂತಃಪ್ರೇರಕ ಶಕ್ತಿ ಮತ್ತು ಮುನ್ನಡೆಗೆ ದಾರಿ ತೋರಿಸುವ ಮಾರ್ಗದರ್ಶಕ

ಅಭಿವೃದ್ಧಿ ಪತ್ರಿಕೋದ್ಯಮದ ನಿಜವಾದ ಅರ್ಥ :

ಪ್ರಚಲಿತ ವಿದ್ಯಾಮಾನಗಳ ವಿಚಾರವಾಗಿ ಪ್ರತಿ ಗ್ರಾಮಕ್ಕೂ ಮಾಹಿತಿ ಮುಟ್ಟಿಸುವ ಮಹತ್ತರ ಕಾರ್ಯ
ಪತ್ರಿಕೆಗಳು ಮಾಡಬಲ್ಲವು. ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವ ಪತ್ರಿಕೆಗಳು ಎಷ್ಟಿವೆ? ಅದೇ
ಸಂದರ್ಭದಲ್ಲಿ ಸ್ವಾರ್ಥ ಸಾಧನೆ ಧನದಾಸೆಯಿಂದ ಕೆಲಸ ಮಾಡುವ ಪತ್ರಿಕೆಗಳು ಇವೆ ಎಂಬುದನ್ನು ನಾವು
ಮರೆಯಬಾರದು. ಈ ಕಾರಣಕ್ಕಾಗಿ ರಾಷ್ಟ್ರೀಯ ಸಂವಹನ ನೀತಿ ರೂಪಿಸುವುದು ಅಗತ್ಯವಾಗಿದೆ. ಮನುಷ್ಯ
ಮೂಲಭೂತ ಹಕ್ಕು ಮತ್ತು ಸಂರಕ್ಷಣೆ ಮುಖ್ಯವಾಗುವುದೇ ಅಭಿವೃದ್ಧಿ ಧಾರಣಶಕ್ತಿ, ಸಾಮಾಜಿಕ ಬದಲಾವಣೆಯ ಪ್ರಜ್ಞೆ ಗ್ರಾಮಾಂತರ ಪ್ರದೇಶದ ಜನರಲ್ಲಿ ಮೂಡುವುದರಿಂದ ಸಮಗ್ರ ಭಾರತದ ಪ್ರಗತಿಗೆ ಮಾರ್ಗ ಸುಲಭವಾಗುತ್ತದೆ. ಅವರ ಮಟ್ಟಕ್ಕೆ ಜ್ಞಾನ ಪ್ರಸಾರಣದ ಮಾರ್ಗ ಕಂಡು ಹಿಡಿಯಬೇಕು. ೨೦೧೫ರ ವೇಳೆಗೆ ಭಾರತ ದೇಶದ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ ರಂಗದ ಟೋಟಲ್ ಏನ್ಯುವಲ್ ಟರ್ನ್‌ಓವರ್ ೧.೨೫ ಲಕ್ಷ ಕೋಟಿ ರೂ. ದಾಟಲಿದೆ ಎಂದು ಉದ್ಯಮದ ಅಂದಾಜಿದೆ. ಇದರಲ್ಲಿ ಟೆಲಿವಿಶನ್‌ನದು ೬೩,೦೦೦ ಕೋಟಿಯಿದ್ದರೆ, ಸಿನಿಮಾ ರಂಗದ್ದು ೧೩,೫೦೦ ಕೋಟಿಯೂ ಸೇರುತ್ತದೆ. ಅಂದಾಜಿನಲ್ಲಿ ಹೇಳುವುದಾದರೆ ಪ್ರಿಂಟ್ ಜರ್ನಲಿಸಂ ಪಾಲು ೩೫,೦೦೦ ಕೋಟಿ ಮೀರಬಹುದೇನೋ. ಉಳಿದ ಮಾಧ್ಯಮ ಉದ್ದಿಮೆಗಳಿಗಿಂತಲೂ ಸೂಪರ್ ಬಿಸಿನೆಸ್ ಮಾಧ್ಯಮ ರಂಗದ ಸಾಧನೆಯಾಗಿದೆ. ಜೊತೆಗೆ ದೊಡ್ಡ ಮಟ್ಟಿನಲ್ಲಿ ಉದ್ಯೋಗಾವಕಾಶಗಳೂ ಸೃಷ್ಟಿಯಾಗಿವೆ. ಜಗತ್ತಿನಲ್ಲೆ ಅತೀ ದೊಡ್ಡ ಮೀಡಿಯಾ ಇನ್‌ವೆಸ್ಟ್‌ಮೆಂಟ್ ಡೆಸ್ಟಿನೇಶನ್ ಈಸ್ ಇಂಡಿಯಾ-ಇನ್ನೆಲ್ಲದರಲ್ಲೂ ಮುಂಚೂಣಿಯಲ್ಲಿರುವ ಚೀನಾ ದೇಶ ಮೀಡಿಯಾ ಬೆಳವಣಿಗೆಗೆ ಹಸನಾದ ನೆಲವಲ್ಲ. ಏಕೆಂದರೆ ಅಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಗೌರವಿಸುವ ಮುಕ್ತ ಪ್ರಜಾಪ್ರಭುತ್ವವಿಲ್ಲ. ಈ ಹಿನ್ನೆಲೆಯಲ್ಲಿಯೇ ಭಾರತದ ನ್ಯೂಸ್ ಅಂಡ್ ಕರೆಂಟ್ ಇವೆಂಟ್ಸ್ ಮೀಡಿಯಾದಲ್ಲಿ ಎಂಟರ್‌ಟೈನ್‌ಮೆಂಟ್ ಮಾಧ್ಯಮದಲ್ಲಾಗಿರುವಂತೆ ೭೬% ಇಲ್ಲವೇ ೪೯% ವಿದೇಶೀ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಬೇಕೆಂಬ ಒತ್ತಡವಿದೆ. ಸರಕಾರ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಿದೆ. ಈ ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೋದ್ಯಮ ಸೇವಾ ಮನೋಭಾವದಿಂದಲೇ ಬೆಳೆಯಿತು. ಸ್ವತಂತ್ರ ಭಾರತದಲ್ಲಿ ಪತ್ರಿಕೋದ್ಯಮದಲ್ಲಿ ಉತ್ತಮ ಸಂಬಳ, ಸಾರಿಗೆಗಾಗಿ ಪತ್ರಕರ್ತ ಸಂಘಟನೆಗಳು ಹೋರಾಟ ನಡೆಸುತ್ತಲೆ ಬಂದವು. ಹಕ್ಕನ್ನು ಒತ್ತಾಯಿಸಿ ಕೇಳಬೇಕಾಗಿತ್ತು. ಸರಕಾರದ ವೇತನ ಮಂಡಳಿಗಳಿಲ್ಲವಾಗಿದ್ದರೆ ಪತ್ರಕರ್ತರ ಜೀವನ ನರಕ ಸದೃಶ್ಯವಾಗಿಯೇ ಇರುತ್ತಿತ್ತು. ಆದರೆ, ಜಗದಲೀಕರಣವಾದ ಮೇಲೆ, ಕಾಂಟ್ರಾಕ್ಟ್ ಸಿಸ್ಟಮ್ ಬಂತು. ಇದರಿಂದ ಪತ್ರಕರ್ತರ ಸಂಬಳಾನುಕೂಲಗಳು ಹೆಚ್ಚಾದುವಾದರೂ, ಅವರ ಸ್ವತಂತ್ರ ವೃತ್ತಿಮನೋಭಾವಕ್ಕೆ ಚ್ಯುತಿ ಬಂತೆಂಬ ಟೀಕೆಗಳೂ ಬಂದಿವೆ.

ಪತ್ರಕರ್ತರು ಯಾರದೇ ನಿಯಂತ್ರಣದಲ್ಲಿರಬಾರದು, ಸ್ವತಂತ್ರವಾಗಿ ಯೋಚನೆ, ಚಿಂತನೆ ಹೊಂದಿರುವವರಾಗಿ ಬೆಳೆಯಬೇಕೆಂಬ ನಿರೀಕ್ಷೆ ಯಾವುದೇ ಪ್ರಜಾಪ್ರಭುತ್ವ ಸಮುದಾಯದಲ್ಲಿರಲೇಬೇಕು. ಪ್ರಜಾಪ್ರಭುತ್ವದ ಇತರ ಅಂಗಗಳಿಗೆ ಅಂಟಿ ಕೊಂಡಿರುವಂತಹ-ಅಧಿಕಾರ ದುರುಪಯೋಗ, ಉಪಯುಕ್ತ ಮಾರ್ಗ ಮತ್ತು ಪ್ರಜಾಪ್ರಭುತ್ವದಲ್ಲಿ ನಿರ್ವಹಿಸಬೇಕಾದ ಹೊಣೆಗಾರಿಕೆಗಳನ್ನೆಲ್ಲ ಗಾಳಿಗೆ ತೂರಿ ಸ್ವಂತ ಹಾಗೂ ಸ್ಥಾಪಿತ ಹಿತಾಸಕ್ತಿಗಳನ್ನೆಲ್ಲ ಪ್ರವರ್ಧಿಸುತ್ತವೆ ಎಂಬುದೇ ಮಾದರಿಯ ಆಪಾದನೆಗಳು-ಆಧಾರ ಸಮೇತ ಪತ್ರಿಕೋದ್ಯಮದ ಮತ್ತು ಪತ್ರಕರ್ತರುಗಳ ಮೇಲೂ ಬರುತ್ತಿರುವ ಈ ಪರ್ವಕಾಲದಲ್ಲಿ, ಜನಾಭಿಪ್ರಾಯವೆಂಬುದು ಒತ್ತಡ ತಂದರೆ, ಹಾದಿಮೀರಿ ಬದುಕಹೋಗುವ ಪತ್ರಿಕೆಗಳಿಗೆ ಉಳಿಗಾಲವಿಲ್ಲವೆಂಬ ಸಂದೇಶವೂ ಈ ಮಾತಿನೊಳಡಗಿದೆ. ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷರು ಪದೇ ಪದೇ ಈ ಬಗ್ಗೆ ಎಚ್ಚರಿಕೆಗಳನ್ನು ಕೊಡುತ್ತಲೇ ಇದ್ದಾರೆ. ಪತ್ರಿಕೋದ್ಯಮಿಗಳ ಭಾಷೆಯ ಬಗ್ಗೆಯೂ ಸಮಾಜದಲ್ಲಿ ಹಾಗೂ ಪತ್ರಕರ್ತರುಗಳಲ್ಲಿಯೂ ಗಾಬರಿ ಮೂಡುತ್ತಿದೆ. ರಾಜಕೀಯ ಪಕ್ಷಗಳು, ಚುನಾವಣೆ ಸ್ಪರ್ಧಿಗಳು ಮತ್ತಿತರರು ಹೇಗೆ ಈ ಕ್ಷೇತ್ರವನ್ನೂ ಕರಪ್ಶನ್‌ನಿಂದ ಮಲೀನ ಗೊಳಿಸುತ್ತಿದ್ದಾರೆಂಬುದು ಕಳವಳಕ್ಕೆ ಕಾರಣವಾಗಿದೆ. ಪತ್ರಿಕೋದ್ಯಮದ ಸ್ವಾತಂತ್ರ್ಯ ಮತ್ತು ಮುಕ್ತ ರೂಪ ಹೇಗೆ ವ್ಯವಹಾರಸ್ಥರ ಪ್ರಭಾವೀ ಸಂಕೋಲೆಗೊಳಗಾಗುತ್ತಿದೆ ಎಂಬುದು ತೀವ್ರ ಆತಂಕದ ವಿಚಾರವಾಗಿದೆ. ನಾನ್ನೂರು ವರ್ಷಗಳ ಚರಿತ್ರೆಯುಳ್ಳ
ಜಾಗತಿಕ ಪತ್ರಿಕೋದ್ಯಮದಲ್ಲಿ ಸಂತೆ ಮಾರುಕಟ್ಟೆಯ ಮಾತುಕತೆಯಿಂದ ಬಾಯ್ದೆರೆಯಾಗಿ ತೊಡಗಿಕೊಂಡು
ಅಂತರ್‌ಜಾಲದವರೆಗೆ ಮುಂದುವರಿದ ಜರ್ನಲಿಸಂನಲ್ಲಿ ಮಾಧ್ಯಮ ಸಂಸ್ಥೆಗಳ ಒಡೆತನ ಬಯಸಿ ಬಂದವರೆಲ್ಲಾ ಬಹುತೇಕ ಈ ಉದ್ಯಮದ ಮೇಲೆ ಪ್ರೀತಿ ವಿಶ್ವಾಸಗಳನ್ನಿಟ್ಟುಕೊಂಡವರು ಎಂದು ಖಡಾಖಂಡಿತವಾಗಿ ಹೇಳಬಹುದು. ಜಗದಗಲೀಕರಣದೊಂದಿಗೆ ಬಂದ ಆಸೆ-ಜರ್ನಲಿಸಂನ್ನು ದುರ್ಲಾಭಕ್ಕಾಗಿಯೂ ಬಳಸಬಹುದು ಎಂಬುದು. ಅಲ್ಲಿಂದ ಕನವರ್ಜೆನ್ಸಿ ಥಿಯರಿಯಂತೆ ಇತರೆಲ್ಲ ವ್ಯವಹಾರದೊಂದಿಗೆ ಮಾಧ್ಯಮ ಸಂಸ್ಥೆಯೂ ಸೇರಿಕೊಂಡು ಬೆಳೆಸುವ ಪ್ರವೃತ್ತಿ ಶುರುವಿಟ್ಟಿತು. ಮುಖ್ಯವಾಗಿ ಮನರಂಜನಾ ಸಂಸ್ಥೆಗಳು ಮತ್ತು ಹೇಗಾದರೂ ದುಡ್ಡು ಕೊಡಿಸಬೇಕೆಂಬ ಹುನ್ನಾರದ ಸಂಸ್ಥೆಗಳೂ, ವ್ಯಕ್ತಿಗಳೂ ಮಾಧ್ಯಮದ ಮೇಲೆ ಹದ್ದಿನಕಣ್ಣಿಟ್ಟು ಬೇಟೆಯಾಡತೊಡಗಿದರು. ಅಲ್ಲಿಂದ, ಶತಮಾನಗಳಿಂದ ಬೆಳೆದು ಬಂದಿದ್ದ ಸತ್ಯಪಕ್ಷಪಾತಿಯಾದ, ಜನಪರವಾದ ಪತ್ರಿಕೋದ್ಯವನ್ನು "ಜನರಿಗೋಸ್ಕರ" ಎಂಬ ಹೆಸರಿನಲ್ಲಿ ಪತ್ರಿಕೋದ್ಯಮದ ಮೇಲೆ ಲವಲೇಶವೂ ಪ್ರೀತಿ ಇಲ್ಲದವರು ಹಿಡಿತಕ್ಕೆ ತೆಗೆದುಕೊಳ್ಳ ತೊಡಗಿದರು. ಅದುವೇ ಪತ್ರಿಕೋದ್ಯಮಕ್ಕೆ ತಗಲಿದ ಶಾಪ. ಕಾರ್ಯಾಂಗದ ಮತ್ತು ಶಾಸಕಾಂಗದ ತುತ್ತ ತುದಿಯಲ್ಲಿನ ಗಣತಂತ್ರದ ಆಡಳಿತ ವ್ಯವಸ್ಥೆಯಲ್ಲೇ ಜನರಿಗೆ ಅಪನಂಬಿಕೆ, ಅಂಜಿಕೆ ಹುಟ್ಟಿದೆ. ಪ್ರಜಾಪ್ರಭುತ್ವದ ಮೂರನೆಯ ಸ್ಥಂಭವೂ ಮೊದಲೆರೆಡು ಸ್ಥಂಭಗಳು ಅಲುಗಾಡಿದಂತೆಯೇ ಅಲುಗ ತೊಡಗಿದೆ. ನಾಲ್ಕನೆಯ ಸ್ಥಂಭ ಪತ್ರಿಕೋದ್ಯಮಕ್ಕೆ ರಾಜ್ಯಾಂಗದ ಮನ್ನಣೆಯಿಲ್ಲ. ಮತ್ತು ಇತರ ಸ್ಥಂಭಗಳಂತೆ ಜನ ನಿರ್ಧರಿಸಿದ ಸಂಸ್ಥೆಗಳು ಮತ್ತು ಸಾರ್ವಜನಿಕೆ ಬೊಕ್ಕಸದಿಂದ ಖರ್ಚು ಮಾಡಿ ಇದನ್ನು ನಿಭಾಯಿಸುತ್ತಿಲ್ಲ. ಸಂಸತ್ತಿನ ಒಪ್ಪಿಗೆಯಿಂದ ದೊರೆಯುವ ಸಾರ್ವಜನಿಕ ಹಣದ ಚಲಾವಿನಿಂದ ನಡೆಯುವ ಪ್ರಸಾರಭಾರತಿ ಸ್ವಯಂ ಆಡಳಿತ ಸಂಸ್ಥೆಯಾದ ದೂರದರ್ಶನ-ಆಕಾಶವಾಣಿಗಳದು ಬೇರೆಯೇ ಸ್ಥಾನವಿದೆ. ಆದರೆ, ಒಟ್ಟಾರೆಯಾಗಿ ಪತ್ರಿಕಾಂಗಕ್ಕೆ ಮುಕ್ತ ಸಂವಹನ ಮತ್ತು ಸಮುದಾಯಗಳು ತಮ್ಮನ್ನು ತಾವು ಸ್ವತಂತ್ರವಾಗಿ ಆಳ್ವಿಕೆ ನಡೆಸಲು ಬೇಕಾದಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಗಣತಂತ್ರವೆಂಬುದು ಯಾವನೇ ಒಬ್ಬ ವ್ಯಕ್ತಿಯ, ಒಂದು ಸಂಸ್ಥೆಯ, ಯಾರೋ ದೇವಮಾನವನ ಅಥವಾ ರಾಜಕೀಯ ಪಕ್ಷದ ಕೊಡುಗೆಯೇನಲ್ಲ. ಎಲ್ಲೆಲ್ಲಿ ಮುಕ್ತಸಂವಹನವಿತ್ತೋ ಅಂತಹ ಸಮಾಜಗಳಲ್ಲಿ ಪ್ರಜಾಪ್ರಭುತ್ವ ಮನೋಭಾವದ ಬೇರುಗಳು ಹುಟ್ಟಿಕೊಂಡವು. ಎಲ್ಲೆಲ್ಲಿ ಜನರಲ್ಲಿ ಸ್ವಯಂ ಆಡಳಿತದ ಹಂಬಲ ಮೂಡಿಕೊಂಡವೋ ಅಲ್ಲೆಲ್ಲ ಮುಕ್ತಸಂವಹನಕ್ಕೆ ಹಾದಿಗಳಾದವು. ಸಮುದಾಯಗಳು ಇವೆರಡೂ ಹಂಬಲಗಳನ್ನು ಈಡೇರಿಸಿಕೊಳ್ಳಲು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಿತಪ್ಪುಗಳೆರಡನ್ನೂ ಮಾಡುತ್ತಾ ನಿರೂಪಿಸಿಕೊಳ್ಳುತ್ತಾ ಬಂದವು. ಅಂದರೆ, ಸಮಾಜವೇ ತನ್ನ ಅಗತ್ಯ, ಅಡಚಣೆಗಳನ್ನು ಕಂಡುಕೊಂಡು ಮೊದಮೊದಲು ಸಮಾಲೋಚನೆಗಳಿಂದ (ಕನ್ಸಲ್ಟೇಶನ್ಸ್) ಮುಕ್ತವಾಗದಿದ್ದಾಗ, ಹೊಂದಾಣಿಕೆ (ಕಾಂಪ್ರೊಮೈಸ್) ಅಥವಾ (ಕನ್‌ಫ್ರಂಟೇಶನ್ಸ್)ಗಳಿಂದ ವ್ಯವಸ್ಥೆಯನ್ನು ಪರಿಶಿಲಿಸಿ ಕೊಂಡು ಬಂದವು. ಇವತ್ತಿಗೂ ಡೆಮೊಕ್ರಸಿಯೆಂಬುದರ ಅಂತಿಮ-ಪರ್ಫೆಕ್ಟ್ ಸ್ವರೂಪ ಮೂಡಿಲ್ಲ. ಅದರಲ್ಲಿ ಕೊರತೆಗಳಿದ್ದೇ ಇವೆ. ಆದರೆ, ಅದಕ್ಕೊಂದು ಸಮರ್ಥ, ಉತ್ತಮಪತ್ರಿಕಾಮಂಡಳಿಯ ಹವಾನಿಯಂತ್ರಿತ ಕಚೇರಿಯೊಳಗೆ ಕೂತಿರುವ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರಂತೆ ''ಐಶ್ಚರ್ಯ ರೈ ಅವರಿಗೆ ಮಗು ಹುಟ್ಟಿದ್ದನ್ನು ದೊಡ್ಡ ಸುದ್ದಿಮಾಡುವ ಮಾಧ್ಯಮಗಳಿಗೆ ಕೊರತೆಯಿಂದ ಸಾಯುತ್ತಿರುವ ಮಕ್ಕಳು ಸುದ್ದಿಯೇ ಅಲ್ಲ'' ಎಂದು ಚುಚ್ಚುವುದು ಸುಲಭ. ಆದರೆ ವಾಸ್ತವ ಬೇರೆಯಾಗಿದೆ. ಐಶ್ಚರ್ಯ ರೈ ಕನಿಷ್ಟ- ಒಂದು ಡಜನ್ ಉತ್ಪನ್ನಗಳಿಗೆ ಮಾಡೆಲ್. ಆಕೆಯ ಸುದ್ದಿ ಪ್ರಕಟಿಸಿದರೆ ಜಾಹೀರಾತು ಬರುತ್ತದೆ. ಆದರೆ ಬಡಮಕ್ಕಳ ಬಗ್ಗೆ ಬರೆದರೆ ಏನು ಸಿಗುತ್ತದೆ? ಸಮಾಜದಲ್ಲಿ ಇನ್ನೂ ಉಳಿದುಕೊಂಡಿರುವ ಒಂದು ಸಹೃದಯಿಗಳು ಅಯ್ಯೋ ಪಾಪ ಎಂದು ಅನುಕಂಪ ವ್ಯಕ್ತಪಡಿಸಬಹುದು ಅಷ್ಟೆ. ಮಾಧ್ಯಮಗಳು ಇಂತಹ ಅಸಹಾಯಕ ಸ್ಥಿತಿಗೆ ಮಾಧ್ಯಮ ಕ್ಷೇತ್ರವನ್ನು ತಳ್ಳಿದ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಬಗ್ಗೆ ನ್ಯಾ.ಖಟ್ಜು ಯೋಚನೆ ಮಾಡಿದರೆ ಅವರು ಬಯಸುವಂತೆ
ಪತ್ರಿಕೆಗಳು, ಟಿವಿ ಚಾನೆಲ್‌ಗಳು ವರದಿಮಾಡಲು ಸಾಧ್ಯವಾಗಬಹುದು.
ಎರಡನೆಯದಾಗಿ ಪತ್ರಕರ್ತನ ಮುಂದಿರುವ ಓದುಗರು ಮತ್ತು ವೀಕ್ಷಕರು ಪರ್ಯಾಯ ವ್ಯವಸ್ಥೆಯನ್ನು ನಾವು ಕಂಡುಕೊಳ್ಳುವವರೆಗೆ ನಮಗೆ ರಾಜದೀಪ್ ಸರ್ದೇಸಾಯ್ 'ಒಂದು ದೃಷ್ಟಿಯಲ್ಲಿ ಪತ್ರಕರ್ತರ ಪಾಲಿಗೆ ಇದು ಸುಗ್ಗಿಯ ಕಾಲ, ಇನ್ನೊಂದು ಅರ್ಥದಲ್ಲಿ ಇದು ಸಂಕಷ್ಟದ ಕಾಲ' ಎಂದಿದ್ದಾರೆ. ವಿದೇಶಿ ಪತ್ರಿಕೆಗಳು ಬರುತ್ತವ ಎನ್ನುವಾಗ ಭಾರತ ಪತ್ರಿಕೋದ್ಯಮ ಎರಡಾಗಿ ಒಡೆದುಹೋಗಿತ್ತು. ಆಗ ಎಲ್ಲರಿಗೂ ಕಂಡಿದ್ದು ಪ್ಯಾಕೇಜ್, ಆಳ ಜೋಬಿನ ತುಂಬಾ ದಪ್ಪ ನೋಟಿನ ಕಂತೆ ವಾಹ್!ಜೊತೆಗೆ ಪತ್ರಿಕೆಗಳು
ಮಲ್ಟಿಪ್ಲೈ ಆದ್ದರಿಂದ ಆಯ್ಕೆಯ ಅವಕಾಶ ಹೆಚ್ಚುತ್ತದೆ ಎನ್ನುವ ಪಾಸಿಟಿವ್ ನೋಟ. ಇದು ಸುಗ್ಗಿಯ ಚಿತ್ರಣ ಅಷ್ಟೆಯಲ್ಲ್ಲ. ಚಾಲೆಂಜ್ ದೃಷ್ಟಿಯಿಂದಲೂ ಇದು ಸುಗ್ಗಿಯ ಕಾಲ. ಒಂದು ಡೆಡ್‌ಲೈನ್ ಇದ್ದ ಕಾಲ ಹೋಗಿ ಪ್ರತೀ ಕ್ಷಣವೂ ಡೆಡ್‌ಲೈನ್ ಎನ್ನುವ ಸವಾಲು ಎದುರಿಗಿದೆ. ಹುಡುಕುತ್ತಾ ಹೋದರೆ ಕಾಲಿಗೆ ತೊಡರಿಕೊಳ್ಳುವ ಸುದ್ದಿಗಳಿವೆ ಆದರೆ ನಾಲಗೆ ಇಲ್ಲದವರ, ಆಡದ ಮಾತುಗಳನ್ನು ಕೇಳಿಸಿಕೊಳ್ಳುವ ತವಕವನ್ನು ಈ ವೇಗದ ಸುಗ್ಗಿಯ ಕಾಲ ಇಲ್ಲವಾಗಿಸಿಬಿಟ್ಟಿವೆ. ಇದು ಸುಗ್ಗಿಯ ನಡುವಿನ ಸಂಬಂಧ. 'ಸಮುದ್ರ ರಾಜನ ಗೆಳೆತನ, ಆದರೆ ಉಪ್ಪಿಗೆ ಬಡತನ' ಎಂಬಂತೆ.
ಇದು ಪತ್ರಿಕಾ ಪ್ರಸಾರದಿಂದ ಸಾಧ್ಯ. ಆದರೆ ಶಿಕ್ಷಣದ ಮಟ್ಟ ಎತ್ತರಿಸಬೇಕಾಗುತ್ತದೆ. ಅಭ್ಯುದಯ ಪತ್ರಿಕೋದ್ಯಮ ಪುಸ್ತಕದಲ್ಲಿ ಈಶ್ವರ ದೈತೋಟ ಅವರು ಅಭಿವೃದ್ಧಿ ಪತ್ರಿಕೋದ್ಯಮದ ಬಗ್ಗೆ ಹೀಗೆ ಹೇಳುತ್ತಾರೆ. "ಒಂದು ಸಮಸ್ಯೆಯನ್ನು ಎತ್ತಿಕೊಂಡು ಆ ಬಗ್ಗೆ ತಿಳಿ ಹೇಳಿ ಓದುಗರನ್ನು ಚಿಂತನೆಗೆ ಹಚ್ಚುವುದು, ಅಭಿಪ್ರಾಯ ಸಂಗ್ರಹಿಸುವುದು ಹಾಗೂ ಸಮಸ್ಯೆ ನಿವಾರಣೆ ಸಾಧ್ಯತೆ ಇರುವ ಎಲ್ಲ ಮಾರ್ಗಗಳನ್ನು ವಿಶ್ಲೇಷಿಸಿ ಯೋಗ್ಯ ಪರಿಹಾರ ಕಂಡು ಹಿಡಿಯುವಲ್ಲಿ ಅಭಿವೃದ್ಧಿ ಪತ್ರಿಕೋದ್ಯಮ ಕೆಲಸ ಮಾಡಬಲ್ಲದು". ಅಧಿಕಾರದಲ್ಲಿರುವವರ ಅವ್ಯವಹಾರ, ಅಧಿಕಾರ ದುರುಪಯೋಗ ಬೆಳಕಿಗೆ ತರುವ ಮೂಲಕ ಸಾರ್ವಜನಿಕ ಕ್ಷೇತ್ರದಲ್ಲಿ ಆಗುವ ತಪ್ಪುಗಳು ಲಂಚಕೋರುತನ ನಿಲ್ಲಿಸುವಲ್ಲಿ ಹಾಗೂ ಅಭಿವೃದ್ಧಿ ಕಾರ್ಯದಲ್ಲಿ ಬಾಧೆ ತರುವ ತಿಕ್ಕಾಟ, ಬಡಿದಾಟ ಮುಂತಾದ ಅಡೆ-ತಡೆಗಳ ವಿಚಾರವಾಗಿಯೂ ಸಾರ್ವಜನಿಕ ಅಭಿಪ್ರಾಯ ಮೂಡಿಸುವುದು ಪತ್ರಿಕೆಗಳ ಕರ್ತವ್ಯ. ಚರ್ಚೆ, ಸಂವಾದ ವಿಚಾರ ಸಂಕಿರಣಗಳ ಮೂಲಕ ನೀತಿ ನಿರೂಪಣೆಗಳು ಬಯಲಿಗೆ ಬರುವಂತೆ ಮಾಡಬೇಕು. ನ್ಯಾಯ ಸಮ್ಮತವಾದ ಹಾಗೂ ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ಅವಕಾಶ ಕಲ್ಪಿಸುವ ವಾತಾವರಣ ನಿರ್ಮಾಣ ಮಾಡುವುದು ಗ್ರಾಮೀಣ ಅಭಿವೃದ್ಧಿ ಪತ್ರಿಕೋದ್ಯಮದ ಗುರಿಯಾಗಿದೆ. ನಾಗರಿಕ ಸಮಾಜದ ಬದಲಾವಣೆಗೆ ಹಾಗೂ ಅಭಿವೃದ್ಧಿಗೆ ಪತ್ರಿಕೋದ್ಯಮ ಬಹಳ ಮುಖ್ಯವಾಗಿದೆ. ಸಹನೆಗೆ, ಸಕಾರಾತ್ಮಕ ಚಿಂತನೆಗೆ ಮತ್ತು ಜವಾಬ್ದಾರಿತನಕ್ಕೆ ಪತ್ರಿಕೋದ್ಯಮ ಹೆಚ್ಚು ಒತ್ತು ಕೊಡುತ್ತದೆ. ಆದರೆ ಅಭಿವೃದ್ಧಿ ಎಂಬ ಪದದ ನಿಜವಾದ ಅರ್ಥ ನೀಡುವಲ್ಲಿ ಅದು ಅಸಮರ್ಥವಾಗಿದೆ ಎನ್ನಬಹುದು. ಇದಕ್ಕೆ ಕಾರಣವಿಲ್ಲದೇ ಇಲ್ಲ. ಗ್ರಾಮೀಣ ಬಡವರಲ್ಲಿ ದಲಿತರಲ್ಲಿ ಉಪೇಕ್ಷಿತ ವರ್ಗದವರಲ್ಲಿ ಸಾಕ್ಷರತೆಯ ಪ್ರಮಾಣ ಕಡಿಮೆ. ಸಮೂಹ ಸಂಪರ್ಕ ಮಾಧ್ಯಮಗಳೂ, ಅವರಿಗೆ ಅಲಭ್ಯ ಇರುವ ಭೂಮಿ ಕಡಿಮೆ ಬಂಡವಾಳ ಇಲ್ಲ. ಕೈಗಾರಿಕಾ ಅಭಿವೃದ್ಧಿಯ ಫಲವಾಗಿ ಗುಡಿ ಕೈಗಾರಿಕೆಗಳೂ ಅವಸಾನಗೊಂಡಿವೆ. ರೈತರು ಅದರಲ್ಲೂ ಮುಖ್ಯವಾಗಿ ಬಹುಸಂಖ್ಯೆ ಸಣ್ಣ ಮತ್ತು ಅತಿ ಸಣ್ಣ ರೈತರು ಮಹಿಳೆಯರು, ದಲಿತರು, ಮತ್ತು ಸಾಮಾಜಿಕ ತುಳಿತಕ್ಕೆ ಒಳಗಾದ ಇನ್ನಿತರ ಜನವರ್ಗ ಇತ್ಯಾದಿ ಜನರೇ ಗ್ರಾಮೀಣ ಅಭಿವೃದ್ಧಿ ಯೋಜನೆಯ ಕೇಂದ್ರ ಬಿಂದುವಿನಲ್ಲಿ ಇರುವುದು. ಯಾವುದೇ ಮಾಧ್ಯಮಕ್ಕಾಗಿ ಒಂದು ಅಭಿವೃದ್ಧಿ ಸಂಗತಿಯ ಕುರಿತು ಆಧಾರಭೂತ ಮಾಹಿತಿಯನ್ನು ಸಂಗ್ರಹಿಸುವುದು ಬಹಳ ಮುಖ್ಯ. ಅಭಿವೃದ್ಧಿ ಸಂಗತಿಯು ಸರಕಾರಿ ಇಲಾಖೆ ಸರಕಾರೇತರ ಸಂಸ್ಥೆ ಇಲ್ಲವೇ ಸಮುದಾಯಿಕ ಅಥವಾ ವೈಯಕ್ತಿಕ ನೆಲೆಯಲ್ಲಿ ನಡೆದಿರಬಹುದು. ಅದಕ್ಕೆ ತಕ್ಕಂತೆ ಸರಕಾರಿ ಅಧಿಕಾರಿಗಳು, ಸರಕಾರೇತರ ಸಂಸ್ಥೆಗಳ ನಿರ್ವಾಹಕರು, ಕ್ಷೇತ್ರಕಾರ್ಯಕರ್ತರು, ಅಭಿವೃದ್ಧಿ ಕಾರ್ಯದಲ್ಲಿ ಸಹಭಾಗಿಗಳಾಗಿದ್ದ ಜನಸಮಾನ್ಯರು, ಫಲಾನುಭವಿಗಳು ಹೀಗೆ ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಬೇಕು. ಅಭಿವೃದ್ಧಿ ಸಂಗತಿಗೆ ನೇರವಾಗಿ ಸಂಬಂಧಿಸಿದ ವ್ಯಕ್ತಿಗಳು ಆ ಸಂಗತಿಯ ಆಗು-ಹೋಗುಗಳಲ್ಲಿ ಒಳಗೊಂಡಿರುತ್ತಾರೆ. ಅವರಿಂದ ಸಿಗುವ ಮಾಹಿತಿ ವ್ಯಕ್ತಿ ನಿಷ್ಠೆಯಿಂದ ಇರಲು ಸಾಧ್ಯ.

      ಮಂಗಳೂರಿನಲ್ಲಿ ವಿಮಾನ ದುರಂತ, ಸ್ಟೇ ಹೊಂ ದಾಳಿ, ಇತ್ತೀಚಿನ ದೆಹಲಿಯಲ್ಲಿ ನಡೆದ ಸಮೂಹಿಕ
ಅತ್ಯಾಚಾರ ಪ್ರಕರಣಗಳು ನೆನಪಿರಬಹುದು. ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳು ಇವುಗಳನ್ನೆ ವಾರಗಟ್ಟಲೇ
ಎಳೆದಾಡಿದವು. ಆದರೇ ದಿನನಿತ್ಯ ರೈತರ ಆತ್ಮಹತ್ಯೆ, ಕಳ್ಳ ಭಟ್ಟಿ ಸೇವಿಸಿ ಅಸುನೀಗುತ್ತಿರುವುದು, ಬರ, ಇನ್ನಿತರ ಸಮಾಜಿಕ ಕಳಕಳಿಯ ವಿಷಯಗಳನ್ನು ಪ್ರಕಟಿಸದೇ ಇರುವುದು ದುರಂತದ ಸಂಗತಿ. ಇವು ಪ್ರಕಟವಾದರೂ ಎರಡು ದಿನಗಳ ನಂತರ ಅದು ಎರಡೋ ಅಥವಾ ಒಂದು ಕಾಲಂ ಸುದ್ದಿಗಳಾಗಿ. ಏಕೆಂದರೆ ಕ್ರೈಂ ಹಾಗೂ ಆಕ್ಸಿಡೆಂಟ್ ಸುದ್ದಿಗಳು ಟಿಆರ್‌ಪಿ ಮತ್ತು ಪ್ರಸಾರ ಹೆಚ್ಚಿಸುತ್ತವೆ. ಆಧುನಿಕ ತಂತ್ರಜ್ಞಾನ ಇಂದು ಮಾಧ್ಯಮಗಳಿಗೆ 'ವೇಗ'ವನ್ನು ತಂದು ಕೊಟ್ಟಿದೆ. ಸುದ್ದಿ ಸ್ಪೋಟದ ಈ ಕಾಲದಲ್ಲಿ ಜನರಿಗೆ ಸುದ್ದಿ ಕೊಡುವ ಧಾವಂತದಲ್ಲಿ ಎಂಥಹ ಸುದ್ದಿಕೊಡುತ್ತಿದ್ದೇವ ಎಂಬ 'ಸಾಧನೆ' ಮರೆತು ಹೋಗುತ್ತಿವೆ. ಯಾರು ಮೊದಲು ಸುದ್ದಿ ಕೊಡುತ್ತಾರೆ ಎಂಬುದು ಮುಖ್ಯವಾಗುತ್ತದೆಯೇ ಹೊರತು ಎಂತಹ ಸುದ್ದಿ ಕೊಡುತ್ತಿದ್ದೇವೆ? ಅದು ಸತ್ಯವೇ?, ನಿಖರವೇ? ಎಂಬ ಸಂಗತಿಗಳು ತೆರೆಯ ಹಿಂದೆ ಸರಿಯುತ್ತಿವೆ. ಸುದ್ದಿಗೆ ಮೊದಲೇ ಬೇಡಿಕೆ ಕಡಿಮೆ. ಹೆಚ್ಚೆಂದರೆ ಅದು ಒಂದು ದಿನದ್ದು ಮಾತ್ರ.. ಆದರೆ ೨೪ ಗಂಟೆಗಳ ಸುದ್ದಿವಾಹಿನಿಗಳು ಬಂದ ಮೇಲೆ ಇದರ ಆಯುಷ್ಯ ಇನ್ನೂ ಕಡಿಮೆ. ಈಗ ಅದು ಬರೀ ಕ್ಷಣದ್ದು ಮಾತ್ರ. ೨೪ಗಂಟೆ ಸುದ್ದಿ ಪ್ರಸಾರ ಬಂದ ಮೇಲೆ ಕ್ಷಣ ಕ್ಷಣಕ್ಕೂ ಏನಾದರೂ ' ಬ್ರೇಕಿಂಗ್ ನ್ಯೂಸ್ ' ಕೊಡಲೇಬೇಕು. ಆ ಟಿ.ವಿ. ಕೊಡುವುದಕ್ಕಿಂತ ಈ ಟಿ.ವಿ. ಸುದ್ದಿಯನ್ನು ಬ್ರೇಕ್ ಮಾಡಬೇಕು. ಅದು ಒಳ್ಳೆಯದೇ ಆಗಿರಲಿ ಕೆಟ್ಟದ್ದೇ ಆಗಿರಲಿ ತಾನು ಮೊದಲೇ ಅದನ್ನು  'ಬ್ರೇಕ್' ಮಾಡಿದೆ ಎಂಬ ಪೈಪೋಟಿಯಲ್ಲಿ ಸುದ್ದಿಗೆ ಇರಬೇಕಾದ ಸತ್ಯ ನಿಷ್ಠೆ ಹಾಗೂ ಘನತೆಗಳೆರಡೂ ಮಣ್ಣುಪಾಲಾಗುತ್ತಿದೆ. ಆದ್ದರಿಂದ ಇಂದು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿಲ್ಲ. ಹಸಿವಿನಿಂದ ಸಾಯುತ್ತಿರುವ ಜನರ ಬಗ್ಗೆ ಮಾದ್ಯಮಗಳಲ್ಲಿ ವರದಿಯಾಗುವುದಿಲ್ಲ. ಆದರೂ ಅದೊಂದು ರಂಜಕವಾಗಿ ಪರಿಗಣಿಸಲಾಗುತ್ತದೆ. ರೈತರು ರಸಗೊಬ್ಬರಕ್ಕಾಗಿ ಪರದಾಡಿದರೆ ಅದು ಮಾಧ್ಯಮಗಳಿಗೆ ಲೈವ್ ಸುದ್ದಿ ಕಾರ್ಯಕ್ರಮವಾಗುತ್ತದೆ. ಇದು ಅಭಿವೃದ್ಧಿ ವರದಿಗಾರಿಕೆನಾ? ಕೃಷಿ ಕ್ಷೇತ್ರ ಹಾಗೂ ಕಾರ್ಮಿಕರ ರಂಗ ಈ ಎರಡು ಬೀಟ್‌ಗಳಿಗೆ ಒಂದು ಮಾಧ್ಯಮಗಳಲ್ಲಿ ಪ್ರತಿನಿಧಿಗಳಿಲ್ಲ ಎಂದರೆ, ಈ ದೇಶದ ಶೇ ೭೦ ರಷ್ಟು ಭಾಗ ಜನ ನನಗೆ ಪ್ರಸ್ತುತವಲ್ಲ. ಅವರೊಂದಿಗೆ ಮಾತಾಡಲು ಸುದ್ದಿವಿಲ್ಲ ಎಂದತೆಯೇ ಎನ್ನುತ್ತಾರೆ ಪಿ.ಸಾಯಿನಾಥ. ಐ.ಆರ್.ಎಸ್ ಪ್ರಕಾರ ದೇಶದಲ್ಲಿ ೨.೧೩ ಲಕ್ಷ ಓದುಗರು ಇದ್ದಾರೆ ಎಂಬುದು ತಿಳಿಸಲಾಗಿದೆ. ಈ ಓದುಗರನ್ನು ಸೆಳೆಯುತ್ತಿರುವುದು ನಿಜವಾದ ಪತ್ರಕರ್ತರು. ಅವರ ನಿಷ್ಟೆಯುಳ್ಳ ಬರವಣಿಗೆಗೆಳು ಇನ್ನು ಯಾವುದೋ ಒಂದು ಮೂಲೆಯಲ್ಲಿ ಮಾಧ್ಯಮದಲ್ಲಿ ನಂಬಿಕೆ ಉಳಿದಿರುವುದನ್ನು ಎತ್ತಿತೋರಿಸುತ್ತದೆ. ನಿಜ! ಆದರೆ ಅವುಗಳಲ್ಲಿ ಅಭಿವೃದ್ಧಿಪರ ವರದಿಗಳೇಷ್ಟಿವೇ ಎಂಬುದು ಪ್ರಶ್ನೆ? ಇದು ಪತ್ರಿಕೆಗಳ ಸ್ವರೂಪವಾದರೆ ದೃಶ್ಯಮಾಧ್ಯಮಗಳ ಮುರ್ಖತನವೇ ಬೇರೆ, ಜಿ.ಆರ್.ಪಿ ಹಾಗೂ ಟಿ.ಆರ್.ಪಿಗಳು ಚಾನಲ್‌ಗಳನ್ನು ಪೈಪೋಟಿಗೆ ಇಳಿಸಿವೆ. ಅಲ್ಲದೇ ಭಾರತದಲ್ಲಿ ಕೇವಲ ೮೦೦೦ ಸ್ಯಾಂಪಲ್ ಸೈಜ್ (ಪೀಪಲ್ ಮೀಟರ್)ಗಳನ್ನು ಅಳವಡಿಸಲಾಗಿದೆ. ಇದರಿಂದ ದೇಶದ ೧೨೦ ಕೋಟಿ ಜನರಲ್ಲಿ ನೋಡುಗರ ವರದಿಯನ್ನು ನೀಡಲಾಗುತ್ತದೆ. ಇದರಿಂದ ಚಾನಲ್‌ಗಳು ತಮ್ಮ ನೀತಿ ಸಂಹಿತಿಯನ್ನು ಅಡಿವಿಟ್ಟಿದ್ದಾರೆ. ಉದ್ಯಮಿಗಳ ರಾಜಕಾರಣಿಗಳ ಪ್ರವೇಶದಿಂದ ಇಂದು ಟಿವಿ ಮಾಧ್ಯಮಗಳು ಹದಗೆಟ್ಟ ರಸ್ತೆಗಳಂತೆ ಪರಿವರ್ತನೆಯಾಗಿವೆ. ಉದಾ:- ಪಕ್ಷಬೇಡ, ಟವಿ ವರದಿಗಾರನ ಹೆಸರೂ ಬೇಡ ಅದು ಕಾಲ್ನಡಿಗೆ. ಪಕ್ಷದ ಒಬ್ಬ ಜೋಕರ್ ರಾಜಕಾರಣಿಯನ್ನು ಸಂದರ್ಶನ ಮಾಡುವಾಗ ಆ ವರದಿಗಾರನ ಹೆಗಲ ಮೇಲೆ ಕೈ ಹಾಕಿ ಹಾಸ್ಯ ಮಾತುಗಳನ್ನು ಆಡುತ್ತಾ ನಡೆಯುತ್ತಿದ್ದ. ಆದರೆ ವರದಿಗಾರನಲ್ಲಿ ಗಂಭೀರ್‍ಯ ಮಾಯಾವಾಗಿ ಜೋಕರ್‌ನ ಜತೆ ಇನ್ನೊಂದು ಜೋಕರ್ ಸೇರಿ ಸರ್ಕಸ್ ಶೋ ನಡೆಸಿಕೊಡುವಂತೆ ಕಾಣುತ್ತಿತ್ತು. ಇಂತಹ ಹಲವಾರು ವರದಿಗಾರರ ಹುಚ್ಚಾಟಗಳನ್ನು ಕಾಣಬಹುದು. ನಿಜವಾದ ಪತ್ರಕರ್ತರು ಅವರ ಸ್ನೇಹಿತರಾಗಿರಬೇಕು ನಿಜ ಆದರೆ ಪರವಾಗಿ ಕೆಲಸಮಾಡುವದು ಯಾವ ಮಾಧ್ಯಮದ ವೃತ್ತಿಧರ್ಮ?. ಇದನ್ನು ಮಾಧ್ಯಮದವರೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಇಂದು ಮಾಧ್ಯಮ ಉದ್ಯಮವಾಗುತ್ತಿರುವುದರಿಂದ ಅಭಿವೃದ್ಧಿ ವರದಿಗಳು ಕಡಿಮೆಯಾಗುತ್ತಿವೆ ಎಂಬುದರಲ್ಲಿ ಸಂದೇಹವೇ ಇಲ್ಲ. ಇತ್ತಿಚೀನ ಮೂರು ತಿಂಗಳು ಪತ್ರಿಕೆಗಳನ್ನು ಓದಿದಾಗ ಹಾಗೂ ಕನ್ನಡ ಸುದ್ದಿವಾಹಿನಿಗಳನ್ನು ಹಾಗೂ ಕೆಲ ಇತರ ಭಾಷೆಯ ವಾಹಿನಿಗಳನ್ನು ವಿಕ್ಷೀಸಿದಾಗ.


ರಾಜಕೀಯ ವರದಿಗಳು:- ೬೨%
ಕ್ರೈಂ:-೪೮%
ಮನರಂಜನೆ ನ್ಯೂಸ್:-೫೩%
ಕ್ರೀಡೆ:- ೪೧%
ಸಿನೆಮಾ:- ೩೩%
ಅಭಿವೃದ್ಧಿ:- ೧೦%
ಇತರೆ:-೨೨%
ಜಾಹೀರಾತು:- ಮಿತಿಯಿಲ್ಲ ಮನಬಂದತೆ.

ಇಲ್ಲಿ ಅಭಿವೃದ್ಧಿ ವರದಿಗಳನ್ನು ಗಮನಿಸಿದಾಗ ಕೇವಲ ೧೦% ಮಾತ್ರ ನೀಡಲಾಗಿದೆ. ಜಾಹೀರಾತಿಗೆ
ನೀಡುತ್ತಿರುವ ಪ್ರಾಮುಖ್ಯತೆಯನ್ನು ಇಲ್ಲಿ ಗಮನಿಸಿದಾಗ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಪಂಚದ ದೊಡ್ಡಣ್ಣ
ಅಮೇರಿಕಾ ಅಧ್ಯಕ್ಷೀಯ ಚುನಾವಣೆ (೬/೧೧/೨೦೧೨) ಗೆ ಖರ್ಚು ಮಾಡಿದ ಜಾಹೀರಾತು ವಿವರ ಅಮೇರಿಕಾದ
ಉಭಯ ರಾಜ್ಯಗಳ ಟಿ.ವಿ ಮಾಧ್ಯಮಗಳಿಗೆ ಕಡಿಮೆ ಎಂದರೂ ೯.೩ ಕೋಟಿ ಡಾಲರ್ ಮೌಲ್ಯದ ಜಾಹೀರಾತು ಹರಿದು ಬಂದಿದೆ. (ಒಬಾಮ ಮತ್ತು ರೋಮ್ನಿ) ೧೧ ರಾಜ್ಯಗಳಲ್ಲಿ ಸುಮಾರು ೧೧ ಗಂಟೆ ಟಿ.ವಿ ಸಮಯವನ್ನು ಖರೀದಿಸಿದ್ದರು ಎಂಬ ಸುದ್ದಿಯನ್ನು ಖಾಸಗಿ ಚಾನಲ್‌ವೊಂದು ವರದಿ ಮಾಡಿತ್ತು. ರೋಮ್ನಿ ೬.೪ ಕೋಟಿ ಡಾಲರ್ ಜಾಹೀರಾತು ನೀಡಿದರೆ, ಒಬಾಮ ೩.೧ ಕೋಟಿ ಡಾಲರ್ ಮೌಲ್ಯದ ಜಾಹೀರಾತು ಸಮಯವನ್ನು ಖರೀದಿಸಿರುವುದನ್ನು ಮಾಧ್ಯಮಗಳೇ ಹೊರಹಾಕಿದ್ದವು. ಕಾರಣ ಪತ್ರಿಕೆಗಳು ಮಸಾಲೆ ನ್ಯೂಸ್‌ಗಳಿಗೆ ಹೆಚ್ಚಿನ ಅದ್ಯತೆಯನ್ನು ನೀಡುತ್ತಿರುವುದು ಕಂಡು ಬರುತ್ತದೆ. ಇಲ್ಲಿ ಇಂದು ಗ್ರಾಫ್‌ನ್ನು ಗಮನಿಸಿದಾಗ ಇದರ ನಿಜವಾದ ಅರ್ಥವನ್ನು ತಿಳಿಯಬಹದುದು. ಒಂದು ಚಾನಲ್‌ಗಳ ಟಿ.ಆರ್.ಪಿ ಚಾರ್ಟ್ ಇನ್ನೊಂದು ರೈತರ ಆತ್ಮಹತ್ಯೆ ಚಾರ್ಟ್ ಇದು ಇಂದಿನ ನಮ್ಮ ಮಾಧ್ಯಮಗಳ ಸ್ಥಿತಿಗತಿ. ಇದನ್ನು ಪ್ರತಿಯೊಬ್ಬ ಮಾಧ್ಯಮ ಪ್ರತಿನಿಧಿ ಅರಿತುಕೊಳ್ಳಬೇಕಾಗಿದೆ. ಐ.ಎಫ್.ಜೆ ಪ್ರಕಾರ ೧೫೦೦ ಪತ್ರಕರ್ತರು ವಿವಿಧ ಹಲ್ಲೆ ದಾಳಿಗೆ ಬಲಿಯಾಗುತ್ತಿರುವ ವರದಿಯನ್ನು ಹೊರಹಾಕಿದೆ. ಇದು ಮೌಲ್ಯಧಾರಿತ ಪತ್ರಿಕೋದ್ಯಮದ ಒಂದು ಬಲಿದಾನವೇ ಸರಿ. ಆದರೆ ಪ್ರಸಕ್ತ ದಿನಮಾನಗಳಲ್ಲಿ ಮಾಧ್ಯಮ ಹಾಗೂ ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಪತ್ರಕರ್ತರ ಉಪಟಳವನ್ನು ಕಂಡರೆ ಇವರು ಪತ್ರಕರ್ತರಾ? ಎಂಬ ಅನುಮಾನದ ಪ್ರಶ್ನೆ ಮೂಡುತ್ತಿದೆ. ಪಾಕಿಸ್ತಾನ ಪತ್ರಕರ್ತ ಸಲೀಂ ಶಹಜಾದ್ ಮತ್ತು ಮುಂಬೈನ ಹಿರಿಯ ಪತ್ರಕರ್ತ ಜ್ಯೋತಿರ್ಮಯ್ ಡೇ ಅವರನ್ನು ಹಾಡು ಹಗಲೇ ಗುಂಡಿಕ್ಕಿ ಹತ್ಯೆ ಮಾಡಿರುವುದು ಇತ್ತೀಚಿನ ನಿದರ್ಶನಗಳು. ಇನ್ನೂ ಅಮೇರಿಕಾದಲ್ಲಿ ಸುದ್ದಿಮೂಲ ರಕ್ಷಣೆಯಲ್ಲಿ ಪತ್ರಿಕೋದ್ಯಮಿ ಜುಡಿತ್ ಮಿಲ್ಲರ್ ಎಂಬಾಕೆಯನ್ನು ಜೈಲಿಗೆ ತಳ್ಳಲಾಗಿತ್ತು. ಇನ್ನೂ ತಾಜಾ ಉದಾಹರಣೆ ಎಂದರೆ ಮಂಗಳೂರು ಹೋಂ ಸ್ಟೇ ದಾಳಿಯನ್ನು ಚಿತ್ರಿಕರಿಸಿದ ಪತ್ರಕರ್ತ ನವೀನ ಸೂರಂಜಿಯನ್ನು ಬಂಧಿಸಿ ಜೈಲಿಗಟ್ಟಲಾಯಿತು. ಈ ವರದಿಯನ್ನು ಹೇಳುವುದಕ್ಕೆ ಒಂದು ಬಲವಾದ ಕಾರಣವಿದೆ. ಇಂದು ಜಾಗತೀಕರಣದ ಪ್ರಭಾವಕ್ಕೆ ಮಾಧ್ಯಮ ಒಳಗಾಗಿದೆ ಎಂದರೆ ಊಹಿಸಿಕೊಳ್ಳಲು ಅಸಾಧ್ಯಮಯವಾದ ದಾರಿಯನ್ನು ಮೀರಿದೆ. ಅದಕ್ಕೆ ಸರಳ ಉದಾಹರಣೆಗಳೆಂದರೆ ಟಿ.ಆರ್.ಪಿ ಮತ್ತು ಅಡ್ವಟೋರಿಯಲ್ ಹಾಗೂ ಕಾಸಿಗಾಗಿ ಸುದ್ದಿ. ಇದರ ಹಾವಳಿಯಲ್ಲಿಯೂ ಕೆಲವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಅಭಿವೃದ್ಧಿಯ ಚಿಂತನೆಯನ್ನು ನಡೆಸಿದ್ದಾರೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಪರಿಸ್ಥಿತಿಗಳನ್ನು ಗಂಭೀರವಾಗಿ ಸರಕಾರಕ್ಕೆ ಮುಟ್ಟಿಸುವಂತೆ ತಿಳಿಸುತ್ತಿದ್ದಾರೆ.

ಗ್ರಾಮೀಣಾಭಿವೃದ್ಧಿಗೆ ಮಾಧ್ಯಮ ಅರ್ಪಿಸಿದ ಸಹಾಯ ಏನು?

ಗ್ರಾಮೀಣ ಜನತೆಯ ಅಳಲನ್ನು ಎತ್ತಿತೋರಿಸುವಲ್ಲಿ ಎಲ್ಲಿ ಎಡವಿದೆ? ಎಂಬ ಅಂಶಗಳನ್ನು ಮುಖ್ಯವಾಗಿ ಕೇಂದ್ರೀಕರಿಸಲೇಬೇಕು. ಮುಖ್ಯವಾಗಿ ಮಾಧ್ಯಮ ಗ್ರಾಮೀಣಾಭಿವೃದ್ಧಿಯ ವಿಷಯವನ್ನು ಕೇಂದ್ರೀಕರಿಸಿರುವ ಕುರಿತಾಗಿ ಭಾರತದಾದ್ಯಂತ ಲಕ್ಷಾಂತರ ಕಿ.ಮಿ ಪ್ರವಾಸಗೈದು ಹಳ್ಳಿಗರ ಅಳಲನ್ನು ಮಾಧ್ಯಮ ಸಾಮರಸ್ಯದೊಂದಿಗೆ ಎತ್ತಿ ತೋರಿಸಿದ ಖ್ಯಾತ ಬರಹಗಾರ `ದಿ ಹಿಂದು` ಪತ್ರಿಕೆಯ ಗ್ರಾಮೀಣ ವರದಿ ವಿಭಾಗದ ಸಂಪಾದಕ ಪಿ.ಸಾಯಿನಾಥ ಹೇಳುವ ಕೆಲ ಮಾತುಗಳನ್ನು ಇಲ್ಲಿ ಸ್ಮರಿಸಲೇ ಬೇಕು. ಪಿ.ಸಾಯಿನಾಥ್‌ರ ಕಾರ್ಯ ವೈಖರಿ ಅವರು ಬೆಳೆದು ಬಂದ ರೀತಿ ಅದ್ವಿತಿಯವಾದುದು ಮತ್ತು ದೇಶಕ್ಕಾಗಿ ದುಡಿಯುವ ವರ್ಗದ ಮೇಲೆ ಅದರಲ್ಲೂ ರೈತ ಸಮುದಾಯದ ಮೇಲೆ ಅವರಿಟ್ಟಿರುವ ಅಪಾರ ಶ್ರದ್ಧೆ ಮೆಚ್ಚುವಂತದ್ದು. ತಮ್ಮ ಬರಹಗಳ ಮೂಲಕ ರೈತ ಸಮುದಾಯದ ನೈಜ ಸಮಸ್ಯೆಗಳು ಮತ್ತು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಅಂಶಗಳನ್ನು ಪತ್ರಿಕೆಗಳಿಗೆ ಬರೆಯುತ್ತಲೇ ಅವರು ಬೆಳೆದರು. ಆಳುವ ಸರ್ಕಾರಗಳ ಬೇಜವಾಬ್ದಾರಿತನವನ್ನು ಬಯಲಿಗೆಳೆಯುತ್ತಾ ಜವಾಬ್ದಾರಿಗಳ ಬಗ್ಗೆ ಎಚ್ಚರಿಸಿಕೊಂಡು ಭಾರತದ ಪತ್ರಿಕೋದ್ಯಮದಲ್ಲೇ ಒಂದು ವಿಭಿನ್ನ ದೃಷ್ಠಿಕೋನವನ್ನು ಕೊಡುವ ಮೂಲಕ ಪತ್ರಕರ್ತರನ್ನು ಗ್ರಾಮೀಣ ಬಡ ಜನರ ಬಳಿಗೆ ಸೆಳೆದಂತವರು. ಅವರು ಕೇಂದ್ರೀಕರಿಸುವ ಹಲವಾರು ಅಂಶಗಳು ಪತ್ರಿಕೋದ್ಯಮದಿಂದ ಗ್ರಾಮಗಳಿಗೆ ದೇಶದ ಹಳ್ಳಿಯ ಜನತೆಗೆ ಏನು ಪ್ರಯೋಜನವಾಗಿದೆ ಎಂಬ ಮಾತನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸುತ್ತಾ ಸಾಗುತ್ತವೆ. ಪತ್ರಿಕೋದ್ಯಮ ಭಾಗಕ್ಕೆ ಆಗಮಿಸುತ್ತಿರುವ ಇಂದಿನ ಯುವ ಮನಸ್ಸುಗಳ, ಹಳ್ಳಿಗಳ ಬಗೆಗಿನ ತಾತ್ಸಾರ ಭಾವನೆಯನ್ನು ಸಾಯಿನಾಥ ತುಂಬಾ ನೋವಿನ ಮನಸ್ಥಿತಿಯಿಂದ ಹೇಳುತ್ತಾರೆ. ಎಲ್ಲರೂ ಬೆಂಗಳೂರು, ಮುಂಬೈ, ದೆಹಲಿಯಂತಹ ಪ್ರದೇಶದಲ್ಲಿಯೇ ಇದ್ದುಕೊಂಡು ಕಾರ್ಯ ಸಾಧಿಸಬಯಸುತ್ತಾರೆ. ಸಿಗುವ ಸುದ್ದಿಗೆ ಔಚಿತ್ಯ ತೋರಿಸಬೇಕೆನ್ನುವವರೇ ಹೊರತಾಗಿ ಸುದ್ದಿಮಾಧ್ಯಮದಿಂದ ಏನಾನ್ನಾದರೂ ಸಹಾಯ ಅಂಶವನ್ನ ಹೊರತೆಗೆಯಬೇಕೆಂಬುದನ್ನೇ ಮರೆತು ಬಿಡುತ್ತಿದ್ದಾರೆ. ಹಳ್ಳಿಗಳು ಅವರ ವಿಚಾರದಲ್ಲಿ ಸುದ್ದಿಯ ಅಂಶಗಳೇ ಅಲ್ಲ ಎಂಬುದು ಮಾತ್ರ ಖೇದಕರ ಅಂಶ ಎನ್ನುತ್ತಾರೆ. ಇನ್ನು ಮುಂದುವರೆದು ಮಾಧ್ಯಮ ಸಮಯೋಜತತೆಯ ಬಗ್ಗೆ ಒಂದು ತುಂಬಾ ಸಾಮಿಪ್ಯವಾದ ಮಾತನ್ನಾಡುತ್ತಾರೆ. ಕೃಷಿ ಕ್ಷೇತ್ರ ಹಾಗೂ ಕಾರ್ಮಿಕ ರಂಗ ಈ ಎರಡು ಬೀಟ್‌ಗಳಿಗೆ ಒಂದು ಪತ್ರಿಕೆಯಲ್ಲಿ ಪ್ರತಿನಿಧಿಗಳಿಲ್ಲ ಎಂದರೆ 'ಈ ದೇಶದಲ್ಲಿ ಶೇ ೭೦ ರಷ್ಟು ಭಾಗ ಜನ ನನಗೆ ಪ್ರಸ್ತುತವಲ್ಲ, ಅವರೊಂದಿಗೆ ಮಾತಾಡಲು ನನಗೆ ಇಷ್ಟವಿಲ್ಲ ಎಂಬಂತೆಯೇ' ಈ ಮಾತು ಗ್ರಾಮೀಣಾಭಿವೃದ್ಧಿಯಲ್ಲಿ ಪತ್ರಿಕೋದ್ಯಮ ಪಾತ್ರದ ಸ್ವಾರಸ್ಯವನ್ನು ತುಂಬಾ ನೈಜವಾಗಿ ಎತ್ತಿ ತೋರಿಸುತ್ತದೆ. ಪಿ.ಸಾಯಿನಾಥರವರು ಯಾವಾಗಲು ಉದಾಹರಣೆಗೆ ವಿವರಿಸುವಂತೆ ಮಹರಾಷ್ಟ್ರದ ರಾಜಧಾನಿ ಬಾಂಬೆಯಲ್ಲಿ ಕಾಟನ್ ಬಟ್ಟೆ ಕುರಿತು ಲ್ಯಾಕ್ಮಿ ಕಂಪನಿಯಿಂದ ಲ್ಯಾಕಮೆ ಶೋ ಆಯೋಜಿಸಿದಾಗ ಅದನ್ನು ವರದಿ ಮಾಡಲೆಂದು ದೇಶ ವಿದೇಶಗಳಿಂದ ೨೦೦ ಕ್ಕೂ ಹೆಚ್ಚು ಪತ್ರಕರ್ತರು, ಛಾಯಾಚಿತ್ರಗಾರರು ನಾ ಮುಂದು ತಾ ಮುಂದು ಎಂದು ಮುಗಿ ಬೀಳುತಿದ್ದರಂತೆ. ಆದರೆ ಅದೇ ರಾಜ್ಯದ ಲ್ಯಾಕಮೆ ಶೋ ನಡೆಯುವ ಸ್ಥಳದಿಂದ ೩೦೦ ಕಿ. ಮಿ. ದೂರದಲ್ಲಿರುವ 'ವಿದರ್ಭಾ' ಎಂಬ ಹಳ್ಳಿಯಲ್ಲಿ ಕೇವಲ 
ಜನ ಪತ್ರಕರ್ತರಿದ್ದರಂತೆ.
ಈ ಮಾತಿನ ತಾತ್ಪರ್ಯ ಪತ್ರಿಕೋದ್ಯಮದಲ್ಲಿ ಕೇವಲ ಸುದ್ದಿಯೊಂದನ್ನು ಮನೋರಂಜನಾ ಮಾಧ್ಯಮವಾಗಿಯೇ ಹೆಚ್ಚಾಗಿ ಬಳೆಸಿಕೊಳ್ಳಲಾಗುತ್ತಿದೆಯೇ ಹೊರತು ಅದರಿಂದಾಗುವ ಸಹಾಯಕ ಸಾಮರ್ಥ್ಯವೇನು? ಯಾವ ಹಂತದ ಬದಲಾವಣೆ ಸಾಧ್ಯ? ಯಾರಿಗೆ ಇದು ಪ್ರಯೋಜನ? ಎಲ್ಲಿಯ ಸುದ್ದಿ ನೀಡಲೆಂದು ನಾವು ಹುಟ್ಟಿಕೊಂಡದ್ದು? ಅದರ ಬದಲು ಯಾವ ಸುದ್ದಿಯನ್ನು ನೀಡುತಿದ್ದೇವೆ ಎಂಬುದನ್ನು ಮಾಧ್ಯಮ ಮರೆತಂತೆ ಭಾಸವಾಗುತ್ತದೆ. ಮಾಧ್ಯಮ ಪ್ರತಿಯೊಂದು ಹಂತದಲ್ಲು ಈ ರೀತಿಯ ಉತ್ಪ್ರೇಕ್ಷತೆಯನ್ನೇ ಹೆಚ್ಚಾಗಿ ತೋರಿಸುತ್ತಾ ಹೋಗುತ್ತಿರುವುದನ್ನು ನಾವು ಕಾಣಬಹುದು. ಅದನ್ನು ಹೊರತುಪಡಿಸಿ ಗ್ರಾಮಾಭಿವೃದ್ಧಿಗೆ ಗಮನ ನೀಡಿದೆಯಾದರೂ ತನ್ನ ಸುದ್ದಿ ಭಾಗದ ಬಹುಭಾಗವನ್ನಲ್ಲ, ಕೇವಲ ಕೆಲ ಭಾಗ ಮಾತ್ರ. ಸಂದರ್ಶನ ಒಂದರಲ್ಲಿ ಪಿ.ಸಾಯಿನಾಥ ವರ್ತಮಾನದ ಕೃಷಿಯ ಬಿಕ್ಕಟ್ಟಿನ ಕುರಿತು ಹೀಗೆ ಹೇಳುತ್ತಾರೆ. ಕೃಷಿ ಬಿಕ್ಕಟ್ಟು ಎಂದಾಕ್ಷಣ ರೈತರ ಆತ್ಮ ಹತ್ಯೆಗಳನ್ನೇ ಬಿಕ್ಕಟ್ಟು ಎಂದು ಬಿಂಬಿಸುವ ಒಂದು ಪರಿಹಾರ ಬೆಳೆದಿದೆ. ಆದರೆ ಆತ್ಮಹತ್ಯೆಗಳೇ ಬಿಕ್ಕಟ್ಟಲ್ಲ. ಬದಲಿಗೆ ಅವು ತೀವ್ರವಾದ ಕೃಷಿ ಬಿಕ್ಕಟ್ಟಿನ ಸಿಂಪ್ಟಮ್ಸ್ ಮಾತ್ರ. ಆತ್ಮಹತ್ಯೆ ಎಂಬುದು ಒಂದು ರೋಗ ಸೂಚಕ ಲಕ್ಷಣವೇ ಹೊರತು ಅದೇ ರೋಗವಲ್ಲ. ತೀವ್ರವಾದ ಆರ್ಥಿಕ, ಸಾಮಾಜಿಕ ಒತ್ತಡಗಳಿಗೆ ಸಿಲುಕಿದ ಅಮಾಯಕ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾಗೆಂದು ಆತ್ಮಹತ್ಯೆ ಮಾಡಿಕೊಳ್ಳದೆ ಇರುವ ರೈತರು ಆರಾಮವಾಗಿ ಇದ್ದಾರೆಂದು ಅರ್ಥವಲ್ಲ. ಈ ಕೃಷಿ ಬಿಕ್ಕಟ್ಟು ಸರ್ವವ್ಯಾಪಿ, ಅದನ್ನ ಎಲ್ಲೆಡೆ ಬಿಂಬಿಸುವಲ್ಲಿ ಮಾಧ್ಯಮದ ಪಾತ್ರ ತುಂಬಾ ಮುಖ್ಯ ಎನ್ನುತ್ತಾರೆ. ರೈತನ ಆತ್ಮಹತ್ಯೆಯೇ ಕೃಷಿ ಬಿಕ್ಕಟ್ಟಿಗೆ ಕಾರಣ ಎಂದು ಮಾಧ್ಯಮಗಳು ಬಿಂಬಿಸುತ್ತಿರುವುದು ಮಾತ್ರ ಖೇದಕರ ಸಂಗತಿ. ಏಕೆಂದರೆ ಕೃಷಿಯ ಬಿಕ್ಕಟ್ಟುಗಳೇನು? ನಿಜವಾಗಿ ರೈತನು ಅನುಭವಿಸುತ್ತಿರುವ ಸಂಕಷ್ಟಗಳ್ಯಾವವು ಎಂಬುದರ ಬಗ್ಗೆ ಒಳ ನೋಟದ ವರದಿಗಳನ್ನು ಮಾಧ್ಯಮಗಳು ನೀಡಲೇ ಬೇಕಾಗುತ್ತದೆ, ಅಂದಾಗ ಮಾತ್ರ ಗ್ರಾಮಗಳ ಹೃದಯ ಎಂಬಂತಿರುವ ಕೃಷಿಯ ಆಗು ಹೋಗುವಿನ ಸ್ಥಿತಿ ಎಲ್ಲರಿಗೂ ಅರ್ಥವಾಗುತ್ತದೆಂಬುದು ಅರಿವಿಗೆ ಬಂದಂತಾಗುತ್ತದೆ. ಗ್ರಾಮೀಣ ಚಟುವಟಿಕೆಗಳಲ್ಲಿ ಕಾರ್ಪೊರೇಟ್ ಕಂಪನಿಗಳ ನಿಯಂತ್ರಣ ಹೇಗಿದೆ ಎಂಬುದನ್ನ ಉತ್ತರಿಸುವ ಅವರು, ಇಲ್ಲಿಗೆ ಸುಮಾರು ೨೫ ವರ್ಷಗಳ ಹಿಂದೆ ಬಿತ್ತನೆ ಬೀಜದ ಉತ್ಪಾದನೆ ಸಂಪೂರ್ಣವಾಗಿ ರೈತರ ಕೈಯಲಿತ್ತು. ಅವರು ಮರು ಉತ್ಪಾದನೆಯ ಶಕ್ತಿ ಸಾಮರ್ಥ್ಯಗಳುಳ್ಳ ಬೀಜಗಳನ್ನು ಬೆಳೆದುಕೊಳ್ಳುತಿದ್ದರು ಅವರನ್ನು ಪರಸ್ಪರ ರೈತರು ವಿನಿಮಯ ಮಾಡಿಕೊಳ್ಳುತ್ತಿದ್ದರೂ ಕೂಡ. ಆದರೆ ಪ್ರಸ್ಥುತ ಹಂತದಲ್ಲಿ ಕೆಲ ಲೂಟಿಕೋರ ಕಾರ್ಪೊರೇಟ್ ಕಂಪೆನಿಗಳು ಅದರ ಮರು ಉತ್ಪಾದನೆ ಶಕ್ತಿ ಕುಂದಿಸಿದ ಬೀಜಗಳನ್ನು ತಮ್ಮ ಮಾರಾಟದ ಸಲುವಾಗಿ ಇಲ್ಲದಂತಾಗಿಸಿವೆ. ಪೂರ್ತಿಯಾಗಿ ರೈತರನ್ನು ತಮ್ಮ ಸೆರೆಯಾಳಾಗಿಸುವಂತೆ ಮಾಡುತ್ತಿವೆ. ಗೊಬ್ಬರ, ಬೀಜದ ಸರಬರಾಜು ಆಗದಿರುವುದು ಎಲ್ಲರ ಕಣ್ಣಿಗೂ ಎದ್ದು ಕಾಣುತ್ತಿದೆ ಹೊರತಾಗಿ ಅದರ ಒಳಮರ್ಮವನ್ನರಿತು ಜನರತ್ತ ಎತ್ತಿ ತೋರಿಸುವಲ್ಲಿಯೂ ಮಾಧ್ಯಮಗಳು ವಿಫಲವಾಗಿವೆ ಎನ್ನುತ್ತಾರೆ. ಸರಕಾರದ ಕಾರ್ಯಗಳೂ ಹೇಗೆ ವಿಫಲವಾಗುತ್ತವೆ ಎಂದು ವಿವರಣೆ ನೀಡುವ ಅವರು ಒಂದು ಉದಾಹರಣೆ ನೀಡುತ್ತಾರೆ. ೧೯೭೮ ರ ಸುತ್ತ ಮುತ್ತ ನೌಪಾದಾ (ಓರಿಸ್ಸಾ)ದ ಒಂದು ಗ್ರಾಮದಲ್ಲಿ ಒಮ್ಮೆಲೆ ಹೆಚ್ಚು ಕರುಗಳನ್ನು ಹೆರುವ, ಹೆಚ್ಚು ಹಾಲನ್ನು ನೀಡುವ ಹಸುವನ್ನ ನೀಡಲಾಗಿತ್ತು. `ಪವಾಡದ ಹಸು' ಜೆರ್ಸಿ ವೀರ್ಯದಿಂದ ಜನ್ಮ ತಳೆಯುವಂತೆ ಮಾಡಲಾಗಿರುವಂತವು. ಆ ಹಳ್ಳಿಯಲ್ಲಿ ಒಟ್ಟು ೩೭ ಜನರಿಗೆ ಈ ಬಂಪರ್ ಹಸುವನ್ನು ಕೊಡಲಾಗಿತ್ತು. ಹೊಲದಲ್ಲಿ ಮೇವು ಬೆಳೆದಿದ್ದಕ್ಕೆ ಸರ್ಕಾರದಿಂದ ಕನಿಷ್ಟ ಕೂಲಿಯನ್ನೂ ಕೊಡಲಾಗುತ್ತಿತ್ತು. ಈ ಯೋಜನೆಗಳು ೫ ಏಜೆನ್ಸಿಗಳಿಗೆ ನೀಡಲಾಗಿತ್ತು. ಸ್ಥಳಿಯ ಹೋರಿಗಳು ಅವುಗಳನ್ನು ಮುಟ್ಟಬಾರದೆಂದು ಅವುಗಳ ಗಂಡಸುತನವನ್ನೂ ನಾಶ ಮಾಡಲಾಗಿತ್ತು...! ಎರಡು ಕೋಟಿಯೂ ಸಹ ಖರ್ಚಾಗಿ ಹೋಗಿತ್ತು. ಆದರೆ ಅಲ್ಲಿ ಜನಿಸಿದ್ದು ಎಂಟೇ ಎಂಟು ಕರುಗಳು ಮಾತ್ರ...! ಇದು ಎರಡು ವರ್ಷದ ಕಥೆಯಾದರೆ ಹತ್ತು ವರ್ಷ ಆದ ನಂತರ ಅಲ್ಲಿ ಒಂದೇ ಒಂದು ಹೋರಿಯೂ ಇರಲಿಲ್ಲ. ಹಾಲನ್ನು ಮಾರುತಿದ್ದವರು ಹಾಲನ್ನು ಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿದ್ದರು. ಅಂದರೆ ಈ ಎಲ್ಲ ಸಂದರ್ಭೋಚಿತ ಕಾರ್ಯಗಳನ್ನು ಮಾಧ್ಯಮ ಮರೆತೇ ಬಿಟ್ಟಿದೆ ಎಂತಲ್ಲ. ಆದರೆ ಇಂತಹ ಜನರ ಮನ ತಟ್ಟಿ ಸರಿಯಾದ ಕ್ರಮ ಅರಿಯುವಂತೆ ಮಾಡುವಲ್ಲಿ ಹಾದಿ ತಪ್ಪಿಸುತ್ತಿದೆ. ವಿಚಿತ್ರ ಎಂದರೆ ನಾವು (ಮಾಧ್ಯಮದವರು) ಜನರ ಅಹವಾಲುಗಳನ್ನು ನಮ್ಮನ್ನಾಳುವ ರಾಜಕಾರಣಿಗಳಿಗೆ ತೋರಿಸಬೇಕಿತ್ತು...! ಆದರೆ ನಮ್ಮನ್ನಾಳುವವರ ಹುಚ್ಚು ಪೇಚಲಾಟಗಳನ್ನು ಜನರಿಗೆ ತೋರಿಸುತ್ತಿದ್ದೇವೆ? ಎಂಬ ಅವರ ಮಾತು ನಿಜಕ್ಕೂ ಸತ್ಯವಾದುದೇ. ಯಾವುದೋ ಒಂದು ಕೊಲೆ, ಚಿಕ್ಕ ರಾಜಕೀಯ ಬದಲಾವಣಿ ಕಂಡು ಬಂದಲ್ಲಿ ಅದು ಪತ್ರಿಕೆಯ ಮುಖಪುಟದಲ್ಲಿ ದೊಡ್ಡ ಅಕ್ಷರದಲ್ಲಿ ಮುದ್ರಣಗೊಂಡಿರುತ್ತದೆ. ಆದರೆ ಅದೇ ಒಬ್ಬ ರೈತ ಕೃಷಿಯಲ್ಲಿ ಮಾಡಿದ ಸಾಧನೆ ಅಥವಾ ಸಾಲದ ಹೊರೆಯಿಂದ ಮಾಡಿಕೊಂಡ ಆತ್ಮಹತ್ಯೆ ಯಾವುದೋ ಮೂಲೆಯಲ್ಲಿ
ಪ್ರಕಟಗೊಂಡಿರುತ್ತದೆ. ಹಾಗಾದರೆ ಗ್ರಾಮೀಣ ಮಟ್ಟದ ಸುದ್ದಿಗೆ ಮಾಧ್ಯಮ ಬೆಲೆ ಕೊಡುತ್ತಿದೆಯಾ? ಎಂಬ ಮಾತು ಮಧ್ಯ ತೇಲಾಡುತ್ತದೆ.
ಜಿ.ಎನ್ ಮೋಹನ್‌ರವರು, ಪಿ. ಸಾಯಿನಾಥ ಕುರಿತಾಗಿ ಒಂದು ಮಾತನ್ನಾಡುತ್ತಾರೆ. ಸಾಯಿನಾಥ್ ಪ್ರಶ್ನೆ ಕೇಳಿಕೊಳ್ಳೋದನ್ನ ಕಲಿಸಿಕೊಡ್ತಾರೆ. ಪ್ರಶ್ನೆ ಕೇಳಿಕೊಳ್ಳದೆ, ಕೇಳದೆ ಬ್ರೇಕಿಂಗ್ ನ್ಯೂಸ್ ಸಿಗಲ್ಲ ಅನ್ನೋದನ್ನ ಕಲಿಸಿದ್ದಾರೆ.. ಎಂದು ನಿಜಕ್ಕೂ ಸಾಯಿನಾಥರ ಪತ್ರಿಕೋದ್ಯಮದ ಗ್ರಾಮೀಣ ಭಾಗದ ಮೇಲಿನ ಲಕ್ಷ್ಯ ಹಾಗೂ ತಾತ್ಪರ್ಯತೆ ನಿಜಕ್ಕೂ ಒಪ್ಪುವಂತದ್ದು. ವಿಶ್ವೇಶರ್ ಭಟ್ ಒಂದು ಅಂಕಣದಲ್ಲಿ ಹೇಳುವಂತೆ. ಅವರು ವಿಜಯ ಕರ್ನಾಟಕದಲ್ಲಿದ್ದಾಗ ಟೈಮ್ಸ್ ಆಫ್ ಇಂಡಿಯಾದ ಕನ್ನಡದ ಆವೃತ್ತಿ ಸ್ಥಗಿತಗೊಳಿಸಲಾಯಿತಂತೆ. ಆಗ ಆ ಪತ್ರಿಕೆಯಲ್ಲಿದ್ದ ಕೆಲವರಿಗೆ ವಿಕಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿ `ನಾವು ಎಲ್ಲಿಗೆ ಹೇಳುತ್ತೇವೆಯೋ ಅಲ್ಲಿಗೆ ಹೋಗಬೇಕೆಂದು ಒಪ್ಪಿದರೆ ಮಾತ್ರ ಸೇರಿಸಿಕೊಳ್ಳುತ್ತೇವೆ' ಎಂದು ಷರತ್ತುಗಳನ್ನು ಹಾಕಿದಾಗ, ತಕ್ಷಣ ಕೆಲವರು ನಮಗೆ ಕೆಲಸ ಇಲ್ಲದಿದ್ದರೂ ಪರವಾಗಿಲ್ಲ ಆದರೆ ಬೆಂಗಳೂರನ್ನು ಬಿಟ್ಟು ಹಳ್ಳಿಗಳತ್ತ ಮಾತ್ರ ಸಾಗುವುದಿಲ್ಲ ಎಂದು ಮುಖಕ್ಕೆ ಹೊಡೆದವರಂತೆ ಹೇಳಿದರಂತೆ. ಅಂದರೆ ಅವರಿಗಿರುವ ಬೆಂಗಳೂರಿನ ಪ್ರೀತಿಯ ನಡುವೆ ಹಳ್ಳಿಗಳಲ್ಲಿ ಏನಿದೆ ಎಂಬ ಮಾತು ಅವರನ್ನು ಕೊರೆಯತ್ತದೆ. ಅದರ ಬಗ್ಗೆ ಅವರಿಗಿರುವ ತಾತ್ಸಾರ ಭಾವ ಅವರನ್ನು ಗ್ರಾಮಗಳಿಂದ ಇನ್ನಷ್ಟು ದೂರ ಮಾಡುತ್ತಾ ಸಾಗುತ್ತದೆಂದರೆ ತಪ್ಪಿಲ್ಲ. ಕ್ರಿಯಾಶೀಲ ಪತ್ರಿಕೋಮದ್ಯಮ ಮಿತ್ರರಿಗೆ ಮಾತ್ರ ಗ್ರಾಮೀಣ ಜನರ ಅಂತರ್ಯ ಶಕ್ತಿಯನ್ನರಿತು ಅದರ ಬಗ್ಗೆ ಸರ್ವರೆಡೆ ಉದಾಸೀನತೆ ತೋರಿಸುವ ಶಕ್ತಿ ಇದೆ ಎಂಬುದು ಕೂಡ ಕಟು ಸತ್ಯದ ಮಾತು. ಆದರೆ ಆ ಕ್ರಿಯಾಶೀಲತೆ ಮಾತ್ರ ಇಂದು ಹಲವಾರು ಪತ್ರಕರ್ತರಲ್ಲಿ ಕಡಿಮೆಯಾಗುತ್ತಿದೆ. ಸುದ್ದಿ ಇಲ್ಲದೆ ಗಾಸಿಪ್‌ಗಳನ್ನು ಮತ್ತದೇ ರಾಜಕೀಯ ತಿರುಳುಗಳನ್ನು, ಯಾರದೋ ವ್ಯಕ್ತಿಯ ಸಮಸ್ಯೆ ಕೆದಕುವುದನ್ನು, ಯಾರಿಗೂ ಯೋಗ್ಯವಿರದ ಸುದ್ದಿಯನ್ನು ದೊಡ್ಡ ಅಕ್ಷರದಲ್ಲಿ ತೋರಿಸುವುದನ್ನು ರೂಡಿಸಿಕೊಂಡ ಪೀತ ಪತ್ರಿಕೋದ್ಯಮ ಹುಟ್ಟು ಹಾಕುವ ಕ್ರಿಯಾಶೀಲತೆ ಅವರಲ್ಲಿಂದು ಹೆಚ್ಚಾಗುತ್ತಿದೆ. ಇಲ್ಲ ಸಲ್ಲದ ಸುದ್ದಿಗಳನ್ನು ಹುಡುಕಿ ತಳಬುಡ ಮೇಲು ಮಾಡಿ ವಿವರಿಸುವ ತಾಕತ್ತು, ಯೋಗ್ಯ ಮಾಹಿತಿಯನ್ನು ಹುಡುಕುವುದು ಬೇಡ. ಇದ್ದ ಜನಪರ ರೈತ ಪರ ಕಾಳಜಿ ಇರುವ ಮಾಹಿತಿಗಳನ್ನು ಅವರು ತೋರಿಸಬೇಕಿದೆ. ದೊಡ್ಡವರಿಗೆ ಜನರ ಸುದ್ದಿ ಮುಟ್ಟಿಸಿ ಸುಧಾರಿಸಬೇಕಿತ್ತು. ಆದರೆ ದೊಡ್ಡವರ ಸುದ್ದಿಗಳನ್ನು ಜನಸಾಮಾನ್ಯರಿಗೆ ತುಂಬಾ ಮುಖ್ಯವೆಂಬಂತೆ ತೋರಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ ಎನ್ನಬಹುದು.

ಗ್ರಾಮೀಣಾಭಿವೃದ್ಧಿಗೆ ಸಹಾಯ :

ಮಾಧ್ಯಮ ಪೂರ್ತಿಯಾಗಿ ಸ್ವಾಸ್ಥ್ಯೆತೆಯನ್ನು ಬಿಟ್ಟು ನಿಂತಿಲ್ಲ. ಗ್ರಾಮೀಣ ಜನತೆಯ ಅಹವಾಲುಗಳನ್ನು ಗಮನಿಸದೇ ಉಳಿದಿಲ್ಲ. ಅವರ ಕಾರ್ಯಕ್ಷೇತ್ರವನ್ನು ಕೆಲ ಒಂದು ಹಂತದಲ್ಲಿ ತುಂಬು ಹೃದಯದಿಂದ ಎತ್ತಿ ತೋರಿಸಿದೆ. ವಿವರಾಣಾತ್ಮಕ ವಿವರಣೆಯಿಂದ ರೈತ ಪರ ಹೋರಾಟಗಳಿಗೆ ಪ್ರೋತ್ಸಾಹಿಸುತ್ತಲೇ ಸಾಗಿದೆ. ಎಂತಹ ಸಂದರ್ಭದಲ್ಲಿ ರೈತರ, ಶೋಷಿತ ಸಮಾಜಗಳ ಪರವಾಗಿ, ಸ್ಫೂರ್ತಿಯಾಗಿ, ಬೆನ್ನೆಲುಬಾಗಿ ನಿಲ್ಲುತ್ತಿರುವುದು ಮಾಧ್ಯಮಗಳೇ. ಯಾವುದೇ ಹಂತದಲ್ಲಿಯೂ ತನ್ನ ತನವನ್ನು ಬಿಟ್ಟು ಕೊಡದ ಮಾಧ್ಯಮ ಜನಪರ ಕಾರ್ಯಗಳನ್ನೂ ತೋರುತ್ತಲೇ ಸಾಗುತ್ತಿದೆ. ಸರಕಾರವು ಹಲವಾರು ಯೋಜನೆಗಳನ್ನು ರಸ್ತೆ ನಿರ್ಮಾಣಕ್ಕಾಗಿ, ಕುಡಿವ ನೀರಿಗಾಗಿ, ಶೌಚಾಲಯ ನಿರ್ಮಾಣಕ್ಕಾಗಿ ರೂಪಿಸಿದಾಗ ಅವುಗಳನ್ನು ಜನರ ಮುಂದೆ ಪರಿಚಯಿಸಿ ಅದರ ಬಗ್ಗೆ ಸರಿಯಾದ ಮಾಹಿತಿ ನೀಡಲು ಮಾಧ್ಯಮಬೇಕು. ಅದರಲ್ಲೂ ಜನಪದ ಕಲಾ ತಂಡಗಳನ್ನು ರೂಪಿಸಿ ನಾಟಕ ಹಾಡುಗಳ ಮುಖಾಂತರ ಅದನ್ನೊಂದು ಮಾಧ್ಯಮವಾಗಿ ಬಳಸಿಕೊಂಡು ಗ್ರಾಮೀಣಾಭಿವೃದ್ಧಿಯಲ್ಲಿ ಸಹಕಾರ ತೆಗೆದುಕೊಂಡೇ ಕಾರ್ಯ ನಿರ್ವಹಿಸಲಾಗುತ್ತದೆ. ಬಡವನಿಂದ ಹಿಡಿದು ಎಂತಹ ಒಬ್ಬ ಉಳ್ಳ ವ್ಯಕ್ತಿಯನ್ನೂ ತುಂಬಾ ಸೂಕ್ಷ ಸಂವೇದನೆಯಿಂದ ಮುಟ್ಟಬಲ್ಲುದಾದುದು ಮಾಧ್ಯಮವೇ. ಈ ನಿಟ್ಟಿನಲ್ಲಿ ಅದು ಕಾರ್ಯ ನಿರ್ವಹಿಸುತ್ತಲೇ ಬರುತ್ತಿದೆ. ಸ್ವಚ್ಛ ಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, ಪೌಷ್ಠಿಕ ಆಹಾರದ ಸೇವನೆಯ ಸಲಹೆ ಹೀಗೆ ಹಲವಾರು ಮುಖ್ಯ ಕಾರ್ಯಕ್ರಮಗಳು ಜನರ ಬಳಿಗೆ ಗ್ರಾಮೀಣಮಟ್ಟಕ್ಕೂ ಅತ್ಯಂತ ಸುಲಭವಾಗಿ ತಲುಪುತ್ತಿರುವುದು ಮಾಧ್ಯಮದ ಮುಖಾಂತರವೇ. ಹಳ್ಳಿ ಹಳ್ಳಿಗೂ ಹೋಗಿ ವಿಶೇಷ ವರದಿಗಳನ್ನ ತಂದು ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿ ಗ್ರಾಮೀಣ ಮಟ್ಟದ ಸಮಸ್ಯೆಗಳನ್ನ ಸರಕಾರಕ್ಕೆ, ಸಮಾಜಕ್ಕೆ ತೋರ್‍ಪಡಿಸುತ್ತಿರುವುದು ಮಾಧ್ಯಮವೇ. ಆಕಾಶವಾಣಿಯ ರೈತರಿಗಾಗಿ ಮಾಹಿತಿಗಳಿಂದ ರೈತರು ತಮ್ಮ ಬೆಳೆಗಳಲ್ಲಿ ಸುದಾಹರಣೆ ಕೈಗೊಂಡಿದ್ದಾರೆ. ಅನ್ನದಾತ, ರೈತ ಮಿತ್ರ ಹೀಗೆ ಹಲವಾರು ಕಾರ್ಯಕ್ರಮಗಳ ಮುಖಾಂತರ ರೈತಪರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ ಕೃಷಿಯಲ್ಲಾದ ಹೊಸ ಹೊಸ ಅವಿಷ್ಕರಗಳನ್ನ, ಬದಲಾವಣೆಗಳನ್ನ ತೋರ್‍ಪಡಿಸುವತ್ತ ಕಾರ್ಯನಿರ್ವಹಿಸಿವೆ. ಪತ್ರಿಕಾ ಬಳಗವೂ ವಾರಕ್ಕೊಂದು ಪುರವಣಿಗಳನ್ನು ಕೃಷಿಗಾಗಿಯೇ ಮೀಸಲಿಟ್ಟಿವೆ. ನಿಯತಕಾಲಿಕೆಗಳೂ ಸಹ ಕೃಷಿ ಪರ ಲೇಖನಗಳಿಗೆ ಹೆಚ್ಚು ಬೇಡಿಕೆ ನೀಡುತ್ತವೆ. ಅಲ್ಲಿ ಅವರ ಅಳಲನ್ನು, ಅವರ ಹೊಸ ಹೊಸ ಬೆಳೆಗಳ ಸುಧಾರಣೆಯನ್ನು ವಿಶೇಷ ಬೆಳೆಗಳನ್ನು ಬೆಳೆದು ಸಾಧನೆ ಮಾಡಿದವರ ಚಿತ್ರಣವನ್ನು ಮುದ್ರಣ ಮಾಡುತ್ತಾರೆ. ರೈತ ಪರ ಕಾಳಜಿ ಇರುವ ಹಲವಾರು ಮಾಧ್ಯಮಗಳು, ಅವರಿಗೆ ಹೋರಾಟದಲ್ಲಿ, ಅವರಿಗೆ
ಯಾವುದಾದರೂ ಅನ್ಯಾಯವಾದಲ್ಲಿ ಅವರ ಪರವಾಗಿ ನಿಂತು ಪ್ರೋತ್ಸಾಹಿಸುತ್ತವೆ. ಕಾವೇರಿ ನದಿ ವಿವಾದದಲ್ಲಿ, ಗಡಿ ವಿವಾದದಲ್ಲಿ ತನ್ನ ಸಂಪಾದಕೀಯ ಲೇಖನಗಳಲ್ಲಿ, ಮುಖಪುಟದಲ್ಲಿ, ವಿಶೇಷ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಬಿಂಬಿಸಿ ಜನರನ್ನು ಎಚ್ಚರಿಸುತ್ತಾ ಸಾಗುತ್ತವೆ. ಪೋಸ್ಕೊದಂತಹ ಕಂಪನಿಗಳು ಕಾರ್ಖಾನೆಗಾಗಿ ಭೂಮಿ ಕಿತ್ತುಕೊಳ್ಳಲು ಬಂದಾಗ ರೈತರನ್ನು ಗ್ರಾಮೀಣ ಜನರನ್ನು ಎಚ್ಚರಿಸಿದೆ. ಅದರ ವಿರುದ್ಧ ನಡೆದ ಹಲವಾರು ಪ್ರತಿಭಟನೆಯನ್ನು ಪ್ರೋತ್ಸಾಹಿಸಿದೆ. ಗ್ರಾಮೀಣಾಭಿವೃದ್ಧಿಯಲ್ಲಿಯ ಜನರೂ ಮಾಧ್ಯಮವನ್ನು ತುಂಬಾ ವ್ಯವಸ್ಥಿತ ರೀತಿಯಲ್ಲಿಯೇ ಬಳಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಖಬರ್ ಲಹರಿಯಾ ಎಂಬ ಪತ್ರಿಕೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಒಬ್ಬ ಗ್ರಾಮೀಣ ಮಹಿಳೆಯಿಂದ ನಡೆಸಲ್ಪಡುತ್ತಿದೆ. ಇನ್ನೊಂದು ವಿಶೇಷವೆಂದರೆ ಈ ಪತ್ರಿಕಗೆ 'ಯುನೆಸ್ಕೋದ' ೨೦೦೯ ರ 'ಲಿಟರಸಿ' ಪ್ರಶಸ್ತಿಯೂ ಲಭಿಸಿದೆ ಎಂದರೆ ನಿಜಕ್ಕೂ ಹೆಮ್ಮೆ ಪಡುವಂತ ವಿಚಾರವೇ. ಮಾಧ್ಯಮೊಂದು ಗ್ರಾಮೀಣ ವಿಭಾಗದಲ್ಲಿ ಈ ತೆರೆನಾದ ಬದಲಾವಣೆ ತಂದಿದೆ ಎಂದರೆ, ಅದರ ಶಕ್ತಿ ಎಷ್ಟರ ಮಟ್ಟಿಗೆ ಇದೆ ಎಂಬುದು ಗಮನಿಸಬೇಕಾದ ಸಂಗತಿ. ಸುಮ್ಮನೆ ಸ್ಥಾಪಿತವಾಗಿರದ ಈ ಪತ್ರಿಕೆ ೨೦,೦೦೦ ಓದುಗರನ್ನ ಹೊಂದಿದೆ. ಈ ಪತ್ರಿಕೆಯನ್ನು ನಡೆಸುತ್ತಿರುವುದು ಒಬ್ಬ ಕೆಳಸ್ಥರದ ಹೆಣ್ಣು ಮಗಳು. ೨೦,೦೦೦ ಜನ ಓದುವಂತ ಒಂದು ಪತ್ರಿಕೆಯನ್ನು ಆಕೆ ಹಳ್ಳಿಯೊಂದರಲ್ಲಿ ಪ್ರಾರಂಭಿಸಿದ್ದಾಳೆಂದರೆ ನಿಜಕ್ಕೂ ಮೆಚ್ಚುವಂತಹ ಸಂಗತಿ. ಹೀಗೆ ಮಾಧ್ಯಮ ತನ್ನದೇ ಆದ ಕೊಡುಗೆಗಳನ್ನ ಗ್ರಾಮೀಣಾಭಿವೃದ್ಧಿಗೆ, ಜನಪರ ಕಾಳಜಿಯ ಮನೋಸ್ಥಿತಿಯನ್ನು ಹೊಂದಿ ಪ್ರಸ್ತುತ ಪಡಿಸುತ್ತಲೇ ಬಂದಿದೆ ಹಾಗೂ ಇಂದಿಗೂ ಹಾಗೆಯೇ ಸಾಗುತ್ತಿದೆ. ಆದರೆ ಬಹುಭಾಗದ ಜಾಗವನ್ನು ಅದು ಹಳ್ಳಿಗಳ, ಹಳ್ಳಿಗರ ಮನೋಸ್ಥಿತಿಯನ್ನು ಅರಿತು ವರದಿ ನೀಡುವ ಮನೋಸ್ಥಿಯನ್ನು ಬೆಳೆಸಿಕೊಳ್ಳಬೇಕಾಗಿದೆ.

ವಿಳಾಸ : 
ಸಂಪತ್ ಕುಮಾರ್ ಆಕಳವಾಡಿ 
ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
ಪತ್ರಿಕೋದ್ಯಮ ವಿಭಾಗ 
ಕೊಪ್ಪಳ- ೫೮೩೨೩೧ 
ಇ-ಮೇಲ್ k.sampathakalawadi@gmail.com

Advertisement

1 comments:

  1. ಸಂಪತ್ ಕುಮಾರ್ ಆಕಳವಾಡಿ ur Number Send me Sir.

    ReplyDelete

 
Top