ಗ್ರಾಮೀಣ ಜನರ ಪ್ರೋತ್ಸಾಹದಿಂದಾಗಿ ನಾಟಕ ಕಲೆ ಇನ್ನೂ ಜೀವಂತವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ 'ಗ್ರಾಮೀಣ ನಾಟಕೋತ್ಸವ' ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಟಿ.ವಿ. ಮಾಧ್ಯಮಗಳ ಹೊಡೆತಕ್ಕೆ ಸಿಲುಕಿ ನಲುಗಿರುವ ನಾಟಕ ಕಲೆ ಇಂದಿಗೂ ಜೀವಂತವಾಗಿದೆ ಎಂದರೆ, ಇದಕ್ಕೆ ಗ್ರಾಮೀಣ ಪ್ರದೇಶದ ಜನರ ಪ್ರೋತ್ಸಾಹ ಹಾಗೂ ಆಸಕ್ತಿಯೇ ಕಾರಣವಾಗಿದೆ. ಈ ದಿಸೆಯಲ್ಲಿ ನಾಟಕ ಕಲೆಯನ್ನು ಉಳಿಸಿ, ಬೆಳೆಸಲು, ಕನ್ನಡ ಮತ್ತು ಸಂಸ್ಕೃತಿ, ಗ್ರಾಮೀಣ ನಾಟಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ನಾಟಕ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಹೇಳಿದರು.
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಮೇಶ್ ವೈದ್ಯ ಸಮಾರಂಭದ ಅಧ್ಯಕ್ಷೆ ವಹಿಸಿದ್ದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಕಾರ್ಯಕ್ರಮ ಕುರಿತು ಮಾತನಾಡಿದರು. ಕಲಾವಿದ ಅಶ್ವಥ್ ದೇಸಾಯಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಸೌಭಾಗ್ಯ ಸ್ವಾಗತಿಸಿದರು, ಸಿ.ವಿ. ಜಡಿಯವರ್ ಅವರು ಕಾರ್ಯಕ್ರಮ ನಿರೂಪಿಸಿ
ವಂದಿಸಿದರು. 'ಗ್ರಾಮೀಣ ನಾಟಕೋತ್ಸವ' ಅಂಗವಾಗಿ ಕೊಪ್ಪಳ ತಾಲೂಕಾ ರಂಗ ಕಲಾವಿದರ ಸಂಘದವರಿಂದ ವಿಜಯನಗರದ ವೀರನಾಯಕ (ಎಚ್ಚಮನಾಯಕ) ಐತಿಹಾಸಿಕ ನಾಟಕ ಪ್ರದರ್ಶನಗೊಂಡಿತು. ಏ. ೧೬ ರಂದು ಸಂಜೆ ೬-೩೦ ಗಂಟೆಗೆ ಇದೇ ವೇದಿಕೆಯಲ್ಲಿ ಬಳ್ಳಾರಿಯ ಮಯೂರ ಕಲಾ ಸಂಘದಿಂದ 'ಅನುಬಂಧವೋ? ಅಣುಬಂಧವೋ? ಹಾಗೂ ಗದಗ ಜಿಲ್ಲೆ ಮುಂಡರಗಿಯ ಹವ್ಯಾಸಿ ಕಲಾವೃಂದ ದವರಿಂದ 'ರಕ್ತರಾತ್ರಿ' ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.
0 comments:
Post a Comment