ಕೊಪ್ಪಳಕ್ಕೆ ಇಂಜಿನಿಯರಿಂಗ್ ಕಾಲೇಜು ಮಂಜೂರಾತಿಗೆ ಸಂಬಂಧಿಸಿದಂತೆ ನೂತನ ಬಜೆಟ್‌ನಲ್ಲಿ ಸೇರ್ಪಡೆಗೊಳಿಸಲು ಪರಿಗಣಿಸಲಾಗುವುದು ಎಂದು ತಮ್ಮ ನೇತೃತ್ವದ ನಿಯೋಗಕ್ಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಭರವಸೆ ನೀಡಿದ್ದಾರೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
ಕೊಪ್ಪಳಕ್ಕೆ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುವಂತೆ ಕೋರಿ ಶಾಸಕ ಸಂಗಣ್ಣ ಕರಡಿ ಅವರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ರಾಜ್ಯ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಶಾಸಕರುಗಳಾದ ಅಮರೇಗೌಡ ಬಯ್ಯಾಪುರ, ಹಾಲಪ್ಪ ಆಚಾರ್, ಅಮರನಾಥ ಪಾಟೀಲ್, ಲಕ್ಷ್ಮಣ ಸವದಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ ಸೇರಿದಂತೆ ಹಲವು ಗಣ್ಯರು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಬೇಡಿಕೆಯನ್ನು ಸಲ್ಲಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ಕಿರ್ಲೋಸ್ಕರ್, ಕಲ್ಯಾಣಿ, ಎಂಎಸ್‌ಪಿಎಲ್, ಎಕ್ಸಿಂಡಿಯಾ ಸೇರಿದಂತೆ ಸುಮಾರು ೩೦ಕ್ಕೂ ಹೆಚ್ಚು ಬೃಹತ್ ಕೈಗಾರಿಕೆಗಳಿವೆ. ಅಲ್ಲದೆ ಜಿಲ್ಲೆಯಲ್ಲಿ ೨೦ ಪ.ಪೂ. ಕಾಲೇಜು, ೮ ಪಾಲಿಟೆಕ್ನಿಕ್ ಕಾಲೇಜುಗಳಿದ್ದು, ಉನ್ನತ ವ್ಯಾಸಂಗಕ್ಕೆ ಜಿಲ್ಲೆಯ ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳಿಗೆ ವಲಸೆ ಹೋಗುವ ಪರಿಸ್ಥಿತಿ ಇದೆ. ಕೊಪ್ಪಳ ಜಿಲ್ಲೆ ಮೊದಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕೊಪ್ಪಳಕ್ಕೆ ನೂತನವಾಗಿ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಬೇಕು. ಇದರಿಂದಾಗಿ ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಲಭ್ಯವಾಗಿ, ಜಿಲ್ಲೆ ಅಭಿವೃದ್ಧಿಗೆ ಪೂರಕವಾಗಲಿದೆ. ಈಗಾಗಲೆ ಕೊಪ್ಪಳದಲ್ಲಿ ಇಂಜಿನಿಯರಿಂಗ್ ಕಾಲೇಜಿಗೆ ಸ್ಥಳಾವಕಾಶ ಲಭ್ಯವಿರುವುದರಿಂದ, ಸ್ಥಳದ ಅಭಾವದ ಚಿಂತೆಯಿಲ್ಲ. ಆದ್ದರಿಂದ ಕೊಪ್ಪಳಕ್ಕೆ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಬೇಕು ಎಂದು ನಿಯೋಗ ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಸದ್ಯದಲ್ಲೇ ಮಂಡಿಸಲಿರುವ ನೂತನ ಬಜೆಟ್‌ನಲ್ಲಿ ಈ ಕುರಿತು ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.

0 comments:
Post a Comment