PLEASE LOGIN TO KANNADANET.COM FOR REGULAR NEWS-UPDATES

ನವದೆಹಲಿ, ಡಿ.6: ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ 20 ವರ್ಷವಾಗಿರುವಂತೆಯೇ, ಲೋಕಸಭೆಯಲ್ಲಿ ಈ ವಿಷಯವಾಗಿ ಸದಸ್ಯರು ಗದ್ದಲವೆಬ್ಬಿಸಿ, ಸದನದ ಮುಂದೂಡಿಕೆಗೆ ಕಾರಣರಾದ ಘಟನೆ ಇಂದು ನಡೆದಿದೆ. 2 ವರ್ಷಗಳ ಹಿಂದೆ ನಡೆದ ಪ್ರಕರಣದ ತನಿಖೆ ನಡೆಸಿರುವ ಲೆಬರ್ಹಾನ್ ಆಯೋಗದ ವರದಿಯ ಅನುಸಾರ ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದಾಗ ಗದ್ದಲ ಏರ್ಪಟ್ಟಿತು.

ಸದನ ಆರಂಭವಾಗುತ್ತಿದ್ದಂತೆಯೇ ಬಿಎಸ್ಪಿಯ ಶಫೀಕ್ ಉರ್ರಹ್ಮಾನ್ ಬರ್ಖ್ ಸದನದೊಳಗೆ ಕರಿಬಾವುಟ ಬೀಸುತ್ತಾ ಬಾಬರಿ ಮಸೀದಿ ಧ್ವಂಸದ ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಧ್ವನಿಯೆತ್ತಿದರು.

ಇದರಿಂದ ಆಕ್ರೋಶಿತರಾದ ಸ್ಪೀಕರ್ ಮೀರಾ ಕುಮಾರ್, ನೀವು ಕಪ್ಪು ಬಾವುಟ ಹಿಡಿದು ಇಡೀ ಸದನಕ್ಕೇ ಅವಮಾನ ಮಾಡುತ್ತಿದ್ದೀರಿ ಎಂದರಲ್ಲದೆ, ಬಾವುಟ ಕೆಳಗಿಳಿಸುವಂತೆ ಬರ್ಕ್ ಸೂಚಿಸಿದರು.

ತಕ್ಷಣವೇ ಎಂಐಎಂನ ಅಸಾದುದ್ದೀನ್, ಓವೈಸಿ ಬರ್ಖ್‌ಗೆ ಜತೆಗೂಡಿದರು ಮತ್ತು ಸದನದ ಪೀಠದತ್ತ ಧಾವಿಸಿ ಅಯೋಧ್ಯೆಯ ಮಸೀದಿ ಧ್ವಂಸಗೈದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಬಿಜೆಪಿ ಸದಸ್ಯರು ಕೂಡ ಗದ್ದಲ ಮಾಡುತ್ತಾ, ಸದನದಲ್ಲಿ ಕಪ್ಪುಬಾವುಟ ಪ್ರದರ್ಶಿಸಿದ ಬರ್ಖ್‌ರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು. ಇದರಿಂದ ಗದ್ದಲ ನಿಲ್ಲದಿದ್ದಾಗ ಸದನವನ್ನು ಮುಂದೂಡಲಾಯಿತು.

Advertisement

0 comments:

Post a Comment

 
Top