PLEASE LOGIN TO KANNADANET.COM FOR REGULAR NEWS-UPDATES

ವಸತಿ ಯೋಜನೆಗಳನ್ನು ತ್ವರಿತಗೊಳಿಸಲು ಜಿ.ಪಂ. ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ಸೂಚನೆ
 ಬಡಜನರಿಗೆ ಸೂರು ಕಲ್ಪಿಸಲು ಸರ್ಕಾರ ಜಾರಿಗೊಳಿಸಿರುವ ವಿವಿಧ ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸಿ, ವಿತರಿಸುವ ಕಾರ್ಯವನ್ನು ತ್ವರಿತಗೊಳಿಸುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೊಪ್ಪಳ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ ಎಂಬುದನ್ನು ನಂಜುಂಡಪ್ಪ ವರದಿಯಲ್ಲಿ ವಿವರಿಸಲಾಗಿದೆ.  ಆದ್ದರಿಂದ ಕೊಪ್ಪಳ ಜಿಲ್ಲೆಗೆ ಆಶ್ರಯ ವಸತಿ, ಇಂದಿರಾ ಆವಾಸ್, ಬಸವ ವಸತಿ ಸೇರಿದಂತೆ ಹಲವಾರು ಯೋಜನೆಗಳಡಿ ೪೩೩೫೮ ಮನೆಗಳನ್ನು ಸರ್ಕಾರ ಮಂಜೂರು ಮಾಡಿದೆ.  ಆದರೆ ಇದುವರೆಗೂ ಕೇವಲ ೨೯೨೭೩ ಮನೆಗಳನ್ನು ನಿರ್ಮಿಸಲಾಗಿದೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಯೋಜನೆಗಳಡಿ ಸಂಪೂರ್ಣ ಮನೆಗಳನ್ನು ನಿರ್ಮಿಸಿ, ಇನ್ನೂ ವಿತರಿಸಲು ಸಾಧ್ಯವಾಗಿಲ್ಲ.  ಇನ್ನೂ ೧೪೦೮೫ ಮನೆಗಳನ್ನು ನಿರ್ಮಿಸುವ ಕಾರ್ಯ ಬಾಕಿ ಉಳಿದಿದೆ.  ಬಸವ ವಸತಿ ಆವಾಸ್ (೧೦-೧೧) ಯೋಜನೆಯಡಿ ಜಿಲ್ಲೆಗೆ ೧೩೨೦೭ ಮನೆಗಳು ಮಂಜೂರಾಗಿದ್ದು ಇದುವರೆಗೆ ಕೇವಲ ೯೬೫೨ ಮನೆಗಳನ್ನು ನಿರ್ಮಿಸಲಾಗಿದೆ.  ಆಶ್ರಯ ವಸತಿ ಯೋಜನೆಯಡಿ (೦೮-೦೯) ಜಿಲ್ಲೆಗೆ ೪೮೪೩ ಮನೆಗಳ ಪೈಕಿ ೪೫೦೫, ಇಂದಿರಾ ಆವಾಸ್ (೦೯-೧೦) ಯೋಜನೆಯಡಿ ೮೯೩೪ ಮನೆಗಳ ಪೈಕಿ ೮೨೭೦, ಅಂಬೇಡ್ಕರ್ ವಸತಿ ಯೋಜನೆಯಡಿ (೦೯-೧೦) ೪೧೪ ಮನೆಗಳ ಪೈಕಿ ೩೫೭, ಅಂಬೇಡ್ಕರ್ ವಸತಿ (೧೦-೧೧) ಯೋಜನೆಯಡಿ ೫೩೯ ಮನೆಗಳ ಪೈಕಿ ೫೦೮, ಇಂದಿರಾ ಆವಾಸ್ (೧೧-೧೨) ಯೋಜನೆಯಡಿ ೮೪೫೩ ಮನೆಗಳ ಪೈಕಿ ೫೪೨೭ ಹಾಗೂ ಇಂದಿರಾ ಆವಾಸ್ (೧೨-೧೩) ಯೋಜನೆಯಡಿ ೬೯೬೮ ಮನೆಗಳ ಪೈಕಿ ೫೫೪ ಮನೆಗಳನ್ನು ನಿರ್ಮಿಸಲಾಗಿದೆ.  ವಸತಿ ಯೋಜನೆಗಳಲ್ಲಿನ ಅಕ್ರಮ ತಡೆಗಟ್ಟಲು, ಇದೀಗ ಪ್ರತಿ ಮನೆಗೂ ಜಿಪಿಎಸ್ ನಲ್ಲಿ ಮಾಹಿತಿ ಅಳವಡಿಸಬೇಕೆನ್ನುವ ಆದೇಶ ಜಾರಿಯಾಗಿದೆ.  ಆದ್ದರಿಂದ ವಸತಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಿ, ಬಡಜನರಿಗೆ ಸೂರು ಕಲ್ಪಿಸುವ ಯೋಜನೆಯನ್ನು ಸಾಕಾರಗೊಳಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದರು.
ಡೆಂಗ್ಯು ಇಲ್ಲೇ ಪತ್ತೆ ಮಾಡಿ : ಕೊಪ್ಪಳ ಜಿಲ್ಲೆಯಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚುತ್ತಿರುವ ವರದಿಗಳು ಬರುತ್ತಿದ್ದು, ಬಹಳಷ್ಟು ರೋಗಿಗಳು ಚಿಕಿತ್ಸೆಗಾಗಿ ಹುಬ್ಬಳ್ಳಿ ಅಥವಾ ಧಾರವಾಡಕ್ಕೆ ತೆರಳುತ್ತಿರುವುದು ಕಂಡುಬರುತ್ತಿದೆ.  ಆದರೆ ಡೆಂಗ್ಯು ಪತ್ತೆ ಕಾರ್ಯದ ವಿಳಂಬದಿಂದಾಗಿ ರೋಗಿಗಳು ಸಾಯುವ ಸಂಭವ ಹೆಚ್ಚಾಗಿದೆ.  ಡೆಂಗ್ಯು ರೋಗ ಪತ್ತೆಗೆ ಅಗತ್ಯವಿರುವ ಉಪಕರಣಗಳು, ಪ್ರಯೋಗಾಲಯ, ಸಿಬ್ಬಂದಿ ಮುಂತಾದ ಅಗತ್ಯಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ, ಅಗತ್ಯ ಅನುದಾನವನ್ನು ಒದಗಿಸಲು ಜಿಲ್ಲಾ ಪಂಚಾಯತಿ ಸಿದ್ಧವಿದೆ.  ಕೂಡಲೆ ಈ ಕುರಿತ ವಿಸ್ತೃತ ವರದಿಯುಳ್ಳ ಪ್ರಸ್ತಾವನೆಯನ್ನು ತಯಾರಿಸಿ ಸಲ್ಲಿಸುವಂತೆ ಸೂಚಿಸಿದರು.  ಡೆಂಗ್ಯು ರೋಗ ನಿಯಂತ್ರಣಕ್ಕೆ ಪೂರಕವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ನೈರ್ಮಲ್ಯವನ್ನು ಕಾಪಾಡಬೇಕಿದ್ದು, ಗ್ರಾಮಗಳಲ್ಲಿನ ನೈರ್ಮಲ್ಯವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಹೊಣೆ ಆಯಾ ಗ್ರಾಮ ಪಂಚಾಯತಿಗಳ ಮೇಲಿದೆ.  ಗ್ರಾಮ ಪಂಚಾಯತಿಗಳಲ್ಲಿ ಕರವಸೂಲಾತಿ ಕುಂಠಿತಗೊಂಡಿರುವ ಕಾರಣ, ಇದಕ್ಕಾಗಿ ಅನುದಾನದ ಕೊರತೆ ಇದೆ.  ಗ್ರಾಮ ಪಂಚಾಯತಿಗಳು ಗ್ರಾಮ ನೈರ್ಮಲ್ಯಕ್ಕಾಗಿ ಅಗತ್ಯ ಅನುದಾನವನ್ನು ಕಾಯ್ದಿರಿಸಬೇಕು, ಆದಾಗ್ಯೂ ಅನುದಾನದ ಕೊರತೆ ಕಂಡುಬಂದಲ್ಲಿ ಜಿಲ್ಲಾ ಪಂಚಾಯತಿಯಿಂದ ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು.  ಒಟ್ಟಾರೆ ಡೆಂಗ್ಯು ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಮಾತನಾಡಿ, ವಸತಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸದೇ ಹೋದಲ್ಲಿ, ಸೂರು ಕಲ್ಪಿಸಿಕೊಳ್ಳಬೇಕೆನ್ನುವ ಬಡಜನರ ಕನಸು ಕನಸಾಗಿಯೇ ಉಳಿಯಲಿದೆ.  ಬಡವರ ಸಂಕಷ್ಟಕ್ಕೆ ಸ್ಪಂದಿಸಬೇಕಾದ್ದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದರು.  ಪಶುಸಂಗೋಪನಾ ಇಲಾಖೆಯಲ್ಲಿ ಔಷಧಿಯ ಕೊರತೆ ಇದೆ ಎಂದು ಬಹಳಷ್ಟು ದೂರುಗಳು ಕೇಳಿಬರುತ್ತಿದ್ದು, ಈಗಾಗಲೆ ಪಶುಸಂಗೋಪನಾ ಇಲಾಖೆಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿದೆ.  ಔಷಧಿ ಖರೀದಿ ಕುರಿತು ಕೂಡಲೆ ಪ್ರಸ್ತಾವನೆ ಸಲ್ಲಿಸಿದಲ್ಲಿ, ಅದಕ್ಕೆ ಅನುಮೋದನೆ ನೀಡಲಾಗುವುದು ಎಂದರು.
     ಜಂಟಿಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ೧೮೮೫೦೦ ಹೆಕ್ಟೇರ್ ಬಿತ್ತನೆ ಗುರಿ ಇದ್ದು ಇದುವರೆಗೆ ೧೬೪೬೮೭ ಹೆಕ್ಟೇರ್ ಬಿತ್ತನೆಯಾಗಿದೆ.  ಇದರಿಂದಾಗಿ ಶೇ. ೮೭ ರಷ್ಟು ಬಿತ್ತನೆಯಾದಂತಾಗಿದೆ.  ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರದ ಯಾವುದೇ ಕೊರತೆ ಇಲ್ಲ.  ಸದ್ಯ ಜಿಲ್ಲೆಯಲ್ಲಿ ೪೩೨೮ ಟನ್ ಯೂರಿಯಾ ದಾಸ್ತಾನಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಜಿಲ್ಲೆಗೆ ಆಗಮಿಸಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top