PLEASE LOGIN TO KANNADANET.COM FOR REGULAR NEWS-UPDATES

 ವಾಜಪೇಯಿ ವಸತಿ ಯೋಜನೆಯಡಿ ಕೊಪ್ಪಳಕ್ಕೆ ೪೦೦೦ ಮನೆ ಪ್ರಾಯೋಗಿಕ ಯೋಜನೆಗೆ ಸರ್ಕಾರ ಅಸ್ತು
ಕೊಪ್ಪಳ : ವಾಜಪೇಯಿ ನಗರ ವಸತಿ ಯೋಜನೆಯಡಿ ಜಿ+೧ ಮಾದರಿಯಲ್ಲಿ  ಗುಂಪು ಮನೆಗಳನ್ನು ನಿರ್ಮಿಸಲು ಇಡೀ ರಾಜ್ಯದಲ್ಲಿಯೇ ಇದನ್ನು ಪ್ರಾಯೋಗಿಕ ಯೋಜನೆಯೆಂದು ಪರಿಗಣಿಸಿ ಕೊಪ್ಪಳ ನಗರದಲ್ಲಿ ೪೦೦೦ ಗುಂಪು ಮನೆಗಳನ್ನು ನಿರ್ಮಿಸಲು ಸರ್ಕಾರ ಮಂಜೂರಾತಿ ನೀಡಿ ಆದೇಶ ಹೊರಡಿಸಿರುವುದಕ್ಕೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಏನಿದು ಯೋಜನೆ? : ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮವು ವಾಜಪೇಯಿ ನಗರ ವಸತಿ ಯೋಜನೆಯಡಿ ೧. ೮೦ ಲಕ್ಷ ರೂ. ಘಟಕ ವೆಚ್ಚದಂತೆ ೩೦೦ ಚ.ಅ. ವಿಸ್ತೀರ್ಣದಲ್ಲಿ ಜಿ+೧ ಮಾದರಿಯಲ್ಲಿ (ನೆಲಮಹಡಿ ಹಾಗೂ ಮೊದಲನೆ ಅಂತಸ್ತಿನ) ಮನೆಗಳನ್ನು ನಿರ್ಮಿಸಲು ೨೦೧೧-೧೨ ರಲ್ಲಿ ೭೩. ೦೧ ಎಕರೆ ಹಾಘೂ ೨೦೧೨-೧೩ ರಲ್ಲಿ ೪೧. ೭೩ ಎಕರೆ ಸೇರಿದಂತೆ ಈಗಾಗಲೆ ೧೧೪. ೭೩ ಎಕರೆ ಜಮೀನನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.  ಕೊಪ್ಪಳ ನಗರವು ಡಾ. ನಂಜುಂಡಪ್ಪ ವರದಿಯಲ್ಲಿ ಪ್ರಸ್ತಾಪಿಸಿರುವಂತೆ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಒಂದಾಗಿದ್ದು, ಈ ನಗರಸಭೆ ವ್ಯಾಪ್ತಿಯಲ್ಲಿನ ಬಡಜನರು ಆರ್ಥಿಕವಾಗಿ ತುಂಬಾ ಹಿಂದುಳಿದವರಿದ್ದಾರೆ.  ವಾಜಪೇಯಿ ನಗರ ವಸತಿ ಯೋಜನೆಯಡಿ ೭೫೦೦೦ ರೂ. ಸಹಾಯಧನವನ್ನು ಮಾತ್ರ ನೀಡಲು ಅವಕಾಶವಿದೆ.  ಆದರೆ ಹಿಂದುಳಿದ ಪ್ರದೇಶವಾಗಿರುವ ಕೊಪ್ಪಳದಲ್ಲಿ ೧. ೮೦ ಲಕ್ಷ ರೂ. ವೆಚ್ಚದಲ್ಲಿ ಜಿ+೧ ಮಾದರಿಯ ಮನೆಗಳಿಗೆ ಇದೊಂದು ವಿಶೇಷ ಪ್ರಾಯೋಗಿಕ ಪ್ರಕರಣವೆಂದು ಪರಿಗಣಿಸಿ ಸಹಾಯಧನವನ್ನು ೭೫೦೦೦ ಗಳಿಂದ ೧ ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.   ಬ್ಯಾಂಕುಗಳಿಂದ ರೂ. ೫೦೦೦೦ ಸಾಲ ಹಾಗೂ ಉಳಿದ ೩೦೦೦೦ ರೂ. ಗಳನ್ನು ವಂತಿಗೆ ರೂಪದಲ್ಲಿ ಫಲಾನುಭವಿ ಪಾವತಿಸಬೇಕಾಗುತ್ತದೆ.  ಮೊದಲನೆ ಅಂತಸ್ತಿನಲ್ಲಿ ನಿರ್ಮಿಸಲಾಗುವ ಮನೆಗಳಿಗೆ ಪ್ರತ್ಯೇಕವಾಗಿ ನಿವೇಶನಕ್ಕಾಗಿ ಮಾಡುವ ವೆಚ್ಚ ಸರ್ಕಾರಕ್ಕೆ ಉಳಿತಾಯವಾಗುವುದರಿಂದ, ಅದೇ ವೆಚ್ಚವನ್ನು ಕಟ್ಟಡಕ್ಕಾಗಿ ವಿನಿಯೋಗಿಸಲು ಸಹಾಯಧನವನ್ನು ೭೫೦೦೦ ರೂ.ಗಳಿಂದ ೧ ಲಕ್ಷಕ್ಕೆ ಹೆಚ್ಚಿಸಲಾಗಿದೆ.  ಕೊಪ್ಪಳ ನಗರದಲ್ಲಿ ಒಟ್ಟು ೪೦೦೦ ಗುಂಪು ಮನೆಗಳ ಬಡಾವಣೆಗೆ ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದು, ಜಮೀನಿನಲ್ಲಿ ಶೇ. ೭೫ ರಷ್ಟು ನಿವೇಶನಗಳನ್ನು ಮನೆ ನಿರ್ಮಾಣಕ್ಕೆ ಮೀಸಲಿಟ್ಟು, ಉಳಿದ ಶೇ. ೨೫ ರಷ್ಟು ನಿವೇಶನಗಳನ್ನು ಅಂದರೆ ಎಲ್ಲಾ ಮೂಲೆ ನಿವೇಶನಗಳು, ವಾಣಿಜ್ಯ ಮಹತ್ವವುಳ್ಳ ನಿವೇಶನಗಳು, ಮುಖ್ಯ ರಸ್ತೆ ಬದಿಯಲ್ಲಿರುವ ನಿವೇಶನಗಳನ್ನು ಕಾಯ್ದಿರಿಸಿ ಬಹಿರಂಗ ಹರಾಜಿನಲ್ಲಿ ಮಾರಾಟ ಮಾಡಬಹುದಾಗಿದ್ದು, ಇದರಿಂದ ಬಂದ ಹಣದಿಂದ ಬಡಾವಣೆಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸೌಕರ್ಯ ಇನ್ನಿತರೆ ಮೂಲಭೂತ ಸೌಕರ್ಯ ಒದಗಿಸಲು ಕಡ್ಡಾಯವಾಗಿ ವಿನಿಯೋಗಿಸಲು ಯೋಜಿಸಲಾಗಿದೆ.
     ಕೊಪ್ಪಳ ನಗರದಲ್ಲಿ ವಸತಿ ರಹಿತ ಬಡ ಕುಟುಂಬಗಳಿಗೆ ಸೂರು ಒದಗಿಸುವಂತಹ ಈ ಮಹತ್ವದ ಪ್ರಾಯೋಗಿಕ ಯೋಜನೆಗೆ ಸರ್ಕಾರ ಮಂಜೂರಾತಿ ನೀಡುವುದರ ಮೂಲಕ, ಹೆಚ್ಚಿನ ಮನೆಗಳನ್ನು ಮಂಜೂರು ಮಾಡುವಂತೆ ಸಲ್ಲಿಸಿದ್ದ ಮನವಿಗೆ ಸರ್ಕಾರದ ಸ್ಪಂದನೆ ದೊರೆತಂತಾಗಿದೆ.  ಅಲ್ಲದೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಲು ಪ್ರೋತ್ಸಾಹ ದೊರೆತಂತಾಗಿದೆ.  ಮನವಿಗೆ ಸ್ಪಂದಿಸಿದ ರಾಜ್ಯದ ಮುಖ್ಯಮಂತ್ರಿಗಳಿಗೆ, ವಸತಿ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಎಲ್ಲ ಉನ್ನತ ಮಟ್ಟದ ಅಧಿಕಾರಿಗಳಿಗೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.




Advertisement

0 comments:

Post a Comment

 
Top