ಪ್ಲಾಟುಗಳ ಲಕ್ಕಿ ಬೆನಿಫಿಟ್ ಸ್ಕೀಮ್‌ನಲ್ಲಿ ಕೊಪ್ಪಳದ ಬಿ.ಎನ್. ಕವಲೂರು ನಗರದಲ್ಲಿ ಪಡೆದ ನಿವೇಶನವನ್ನು ನೊಂದಣಿ ಮಾಡಿಕೊಟ್ಟು, ಸೇವಾ ನ್ಯೂನತೆಗಾಗಿ ೧೦೦೦೦ ರೂ.ಗಳ ಪರಿಹಾರವನ್ನು ಪಾವತಿಸುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ತೀರ್ಪು ನೀಡಿದೆ.
ಮುನಿರಾಬಾದಿನ ಅನ್ನಪೂರ್ಣ ಗಂಡ ಶಿವಪ್ಪ ಗಡಿಹಳ್ಳಿ ಅವರು ಕೊಪ್ಪಳ ನಗರ ವ್ಯಾಪ್ತಿಯ ಸರ್ವೆ ನಂ. ೨೫೧ಎ ಮತ್ತು ೨೫೧ಬಿ ಜಾಗದಲ್ಲಿ ಚಂದ್ರಶೇಖರ ಭರಮಪ್ಪ ಕವಲೂರು ಇವರು 'ಬಿ.ಎನ್. ಕವಲೂರು ನಗರ' ಎಂಬ ಹೆಸರಿನಡಿ ೩೦*೪೦ ಅಳತೆಯ ನಿವೇಶನ ಮಾರಾಟಕ್ಕಾಗಿ ಪ್ರಾರಂಭಿಸಿದ 'ಪ್ಲಾಟುಗಳ ಲಕ್ಕಿ ಬೆನಿಫಿಟ್ ಸ್ಕೀಮ್' ಅಡಿ ಸದಸ್ಯತ್ವ ಪಡೆದು, ನಿಯಮಾನುಸಾರ ನಿಗದಿಪಡಿಸಿದ ಮೊತ್ತ ರೂ. ೧೨೦೦೦೦ ಗಳನ್ನು ನಿಗದಿತ ಕಾಲಾವಧಿಯೊಳಗೆ ಪಾವತಿಸಿದ್ದರೂ ಸಹ ಚಂದ್ರಶೇಖರ ಕವಲೂರು ಅವರು ನಿವೇಶನ ಸಂಖ್ಯೆ ೨೩ ಅನ್ನು ನೋಂದಣಿ ಮಾಡಿಕೊಡದೆ ಮುಂದೂಡುತ್ತಾ ಬಂದಿದ್ದು, ಈಗ ನಿವೇಶನಕ್ಕೆ ಇನ್ನೂ ಹೆಚ್ಚಿಗೆ ೨ ಲಕ್ಷ ರೂ.ಗಳನ್ನು ನೀಡಿದರೆ ನೋಂದಣಿ ಮಾಡಿಕೊಡುವುದಾಗಿ ಹೇಳಿದ್ದು, ಇದನ್ನು ಸೇವಾ ನ್ಯೂನತೆ ಎಂದು ಪರಿಗಣಿಸಿ, ನಿವೇಶನ ನೋಂದಣಿ ಮಾಡಿಕೊಡಲು ಆದೇಶಿಸಬೇಕೆಂದು ಅನ್ನಪೂರ್ಣ ಅವರು ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.
ಪ್ರಕರಣ ಕುರಿತು ವೇದಿಕೆ ಮುಖಾಂತರ ಚಂದ್ರಶೇಖರ ಕವಲೂರು ಅವರಿಗೆ ನೋಟೀಸ್ ಜಾರಿಯಾದ ನಂತರ, ಇವರ ವಕೀಲರು ವೇದಿಕೆಗೆ ಹಾಜರಾದೂ, ತಮ್ಮ ಲಿಖಿತ ವಾದ ಸಲ್ಲಿಸಿಲ್ಲ ಹಾಗೂ ಫಿರ್ಯಾದಿದಾರರ ಆರೋಪವನ್ನು ಸಹ ಅಲ್ಲಗಳೆದಿಲ್ಲ. ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಹಾಗೂ ಸದಸ್ಯೆ ವೇದಾ ಜೋಷಿ ಅವರು, ಲಕ್ಕಿ ಬೆನಿಫಿಟ್ ಸ್ಕೀಂ ನಿಯಮಗಳನ್ವಯ ಅನ್ನಪೂರ್ಣ ಅವರು ನಿವೇಶನ ನೋಂದಣಿಗಾಗಿ ನಿಗದಿಪಡಿಸಿದ ಮೊತ್ತ ರೂ. ೧. ೨೦ ಲಕ್ಷ ಗಳನ್ನು ನಿಗದಿತ ಕಾಲಾವಧಿಯೊಳಗೆ ಪಾವತಿಸಿದ್ದಾರೆ. ಆದರೂ ನಿವೇಶನ ನೊಂದಣಿಯನ್ನು ಮುಂದೂಡುತ್ತಾ ಬಂದಿರುವುದಲ್ಲದೆ, ಹೆಚ್ಚುವರಿಯಾಗಿ ೨ ಲಕ್ಷ ರೂ.ಗಳನ್ನು ಪಾವತಿಸುವಂತೆ ಕೇಳಿರುವುದು ಸೇವಾ ನ್ಯೂನತೆಯಾಗಿದೆ. ಆದ್ದರಿಂದ ಫೀರ್ಯಾದುದಾರರಿಂದ ಶುಲ್ಕ ಭರಿಸಿ ನೋಂದಣಿ ಮಾಡಿಕೊಡುವಂತೆ ಹಾಗೂ ಸೇವಾ ನ್ಯೂನತೆಗೆ ಪರಿಹಾರವಾಗಿ ೧೦೦೦೦ ರೂ., ಪ್ರಕರಣದ ಖರ್ಚು ರೂ. ೨೦೦೦ ಗಳನ್ನು ೯೦ ದಿನಗಳ ಒಳಗಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.
0 comments:
Post a Comment