PLEASE LOGIN TO KANNADANET.COM FOR REGULAR NEWS-UPDATES

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಹಿಂಸಾ ತತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಅವರ ತತ್ವಾದರ್ಶಗಳನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಬದುಕು ರೂಪಿಸಿಕೊಳ್ಳಬಹುದೆಂದು ರಾಯಚೂರು ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಕೆ. ಶರಣಪ್ಪ ಅವರು ಹೇಳಿದರು.
ಅವರು ಇಂದು ಕಲ್ಮಲ್ ಗ್ರಾಮದಲ್ಲಿ ವಾರ್ತಾ ಇಲಾಖೆ, ರಾಯಚೂರು, ಸರಕಾರಿ ಪ್ರೌಢಶಾಲೆ ಹಾಗೂ ಪ್ರಥಮಿಕ ಶಾಲೆ, ಕಲ್ಮಲ್, ಸಹಜೀವನ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ  ಸಹಯೋಗದಲ್ಲಿ "ಗಾಂಧೀಜಿ ಮತ್ತು ಅಹಿಂಸೆ" ಕುರಿತು ಆಯೋಜಿಸಿದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಪರಸ್ಪರ ಪ್ರೀತಿ-ವಿಶ್ವಾಸದಿಂದ ಶಾಂತಿ ನೆಮ್ಮದಿ ನೆಲೆಗೊಳ್ಳಲಿದ್ದು, ಉತ್ತಮ ಮತ್ತು ಉದಾತ್ತ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಕೆಟ್ಟ ವಿಚಾರಗಳನ್ನು ಬಿಟ್ಟು ಜೀವನದಲ್ಲಿ ಮಾಡಿದ ತಪ್ಪು ಹಾಗೂ ಇತರರ ಕೆಡುಕುಗಳ ಬಗ್ಗೆ ಪಶ್ಚಾತ್ತಾಪ ಪಟ್ಟು ಅವು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದರು.
 ಅತಿಥಿ ಉಪನ್ಯಾಸಕರಾದ ಸರಕಾರಿ ಪ್ರೌಢ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಲಕ್ಷ್ಮಪ್ಪ. ಹೆಚ್ ಅವರು ಸತ್ಯ ಮತ್ತು ಅಹಿಂಸಾ ತತ್ವದಿಂದ ಧರ್ಮಯುದ್ಧ ಮಾಡಿದಕ್ಕಾಗಿಯೇ ಗಾಂಧೀಜಿಯವರು ಮಹಾತ್ಮರೆನಿಸಿಕೊಂಡಿದ್ದಾರೆ. ಇಂದಿನ ಕ್ಲಿಷ್ಟ ಪರಿಸ್ಥಿತಿಯಲ್ಲಿ ಬುದ್ಧ, ಬಸವಾದಿ ಶರಣರ, ಸಂತರ ಮತ್ತಿತರ ಮಹಾನುಭಾವಿಗಳ ತತ್ವಾದರ್ಶಗಳು ಪ್ರತಿಯೊಬ್ಬರಿಗೂ ಅವಶ್ಯಕವಾಗಿವೆ. ಸ್ವರ್ಗ ಮತ್ತು ನರಕಗಳು ನಮ್ಮಲ್ಲಿಯೇ ಇವೆ ಎಂದು ಹೇಳಿದರು. ದಯೆ, ಧರ್ಮ, ಪ್ರೀತಿ- ಪ್ರೇಮ, ವಿಶ್ವಾಸಗಳಿಂದ   ನಮ್ಮ ಮನಸ್ಸನ್ನು ಪರಿವರ್ತಿಸಿಕೊಳ್ಳಬೇಕು.    ಸತ್ಯದ ಬಲದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಇದಕ್ಕೆ ಧ್ಯಾನ ಮತ್ತು ಮನಸ್ಸಿನ ಏಕಾಗ್ರತೆ ಅತ್ಯವಶ್ಯಕ ಎಂದರು. 
ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಡಾ||ಈರಣ್ಣ ಕೋಸಗಿ ಅವರು ಅಧ್ಯಕ್ಷತೆ ವಹಿಸಿ ಮಹಾತ್ಮಾ ಗಾಂಧೀಜಿಯವರ ನ್ಯಾಯ-ನೀತಿ, ಸತ್ಯ-ಧರ್ಮ ಎಲ್ಲರಿಗೂ ಆದರ್ಶಪ್ರಾಯವಾಗಿವೆ ಎಂದರು.
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಹುಲಿಗೆಪ್ಪ, ಗ್ರಾಮದ ಮುಂಖಡ ಸಿದ್ಧನಗೌಡ, ಶಾಲೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಟಿ.ಕನುಮಪ್ಪ  ಸ್ವಾಗತಿಸಿದರು.  ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ವಿಜಯಲಕ್ಷ್ಮಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 



Advertisement

0 comments:

Post a Comment

 
Top