ಹೈಕೋರ್ಟ್ ಸಮ್ಮತಿ
ಬೆಂಗಳೂರು, ನ.: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಆಚರಿಸಲಾಗುತ್ತಿದ್ದ ಮಡೆಸ್ನಾನ ಪದ್ಧತಿಗೆ ಕೊನೆಗೂ ಹೈಕೋರ್ಟ್ ತೆರೆ ಎಳೆದಿದೆ.ಎಂಜಲೆಲೆ ಮೇಲೆ ಉರುಳುವ ಮಡೆಸ್ನಾನ ಪದ್ಧತಿಯನ್ನು ನಿಷೇಧಿಸುವಂತೆ ಕೋರಿ ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡು ಮುಖ್ಯ ನ್ಯಾಯಮೂರ್ತಿ ವಿ.ಜೆ.ಸೇನ್ ಹಾಗೂ ನ್ಯಾ.ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಮಡೆಸ್ನಾನದ ಬದಲು, ಎಡೆಸ್ನಾನಕ್ಕೆ ಅವಕಾಶ ನೀಡಿ ಆದೇಶಿಸಿದೆ. ದೇವರ ಮುಂದೆ ಇಡುತ್ತಿದ್ದ ಪ್ರಸಾದವನ್ನು ಸ್ವೀಕರಿಸಿದ ಬಳಿಕ ಎಂಜಲೆಲೆಯ ಮೇಲೆ ಭಕ್ತಾದಿಗಳು ಉರುಳುತ್ತಿದ್ದ ಪದ್ಧತಿ(ಮಡೆಸ್ನಾನ)ಗೆ ಪರ್ಯಾಯವಾಗಿ, ದೇವರಿಗೆ ನೈವೇದ್ಯ ಮಾಡಿದ ಪ್ರಸಾದವನ್ನು ಬಾಳೆ ಎಲೆಮೇಲಿಟ್ಟು ಉರುಳುವ ಪದ್ಧತಿ(ಎಡೆ ಸ್ನಾನ)ಯನ್ನು ಅನುಸರಿಸುವುದಾಗಿ ಸರಕಾರ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ವಿಭಾಗೀಯ ಪೀಠವು ಈ ಆದೇಶ ನೀಡಿದೆ. ಅಲ್ಲದೆ, ಉರುಳು ಸೇವೆಯಲ್ಲಿ ಯಾವುದೆ ನಿರ್ದಿಷ್ಟ ಜಾತಿ, ಪಂಕ್ತಿಗೆ ಸೀಮಿತಗೊಳಿಸದೆ, ಭಕ್ತಾದಿಗಳಿಗೆ ಅನುಕೂಲವಾಗುವಂತೆ ಪದ್ಧತಿಯನ್ನು ಅನುಸರಿಸಿಕೊಂಡು ಹೋಗುವಂತೆ ನ್ಯಾಯ ಪೀಠವು ತನ್ನ ಆದೇಶದಲ್ಲಿ ತಿಳಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿತು.
0 comments:
Post a Comment