PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜು. : ಪ್ರಸಕ್ತ ಸಾಲಿನ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ  ೬೭. ೯೪ ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಕೊಪ್ಪಳ ಜಿಲ್ಲಾ ಪಂಚಾಯತ್ ಅನುಮೋದನೆ ನೀಡಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಹೇಳಿದ್ದಾರೆ.
  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಕುರಿತು ಏರ್ಪಡಿಸಲಾಗಿದ್ದ ಜಿ.ಪಂ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಇಂದು ಅವರು ಮಾತನಾಡುತ್ತಿದ್ದರು.
  ಪ್ರಸಕ್ತ ಸಾಲಿನ ರೂ. ೬೭೯೪. ೧೨ ಲಕ್ಷ ರೂ.ಗಳ ಕ್ರಿಯಾ ಯೋಜನೆಯಲ್ಲಿ ಕೇಂದ್ರ ಪಾಲು ೮೫೨. ೪೪ ಲಕ್ಷ ರೂ. ಗಳಾಗಿದ್ದರೆ, ರಾಜ್ಯದ ಪಾಲಿನ ಮೊತ್ತ ೫೯೪೧. ೬೮ ಲಕ್ಷ ರೂ.ಗಳು.   ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದು ಒಟ್ಟು ೩೪೧೬. ೨೨ ಲಕ್ಷ ರೂ.ಗಳನ್ನು ಕಾಯ್ದಿರಿಸಿದೆ.  ಈ ಪೈಕಿ ಕೇಂದ್ರದ ಪಾಲು ೧೦ ಲಕ್ಷ ಹಾಗೂ ರಾಜ್ಯದ್ದು ೩೪೦೬. ೨೨ ಲಕ್ಷ ರೂ.ಗಳು.  ಕಳೆದ ೨೦೧೧-೧೨ ನೇ ಸಾಲಿನಲ್ಲಿ ೫೫. ೮೪ ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಗಿತ್ತು.  ಇದರಿಂದಾಗಿ ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ಸುಮಾರು  ೧೨. ೧೦ ಕೋಟಿ ರೂ.ಗಳ ಹೆಚ್ಚುವರಿ ಅನುದಾನ ನಿಗದಿಪಡಿಸಿದಂತಾಗಿದೆ.
  ಪ್ರಸಕ್ತ ವರ್ಷದ ಕ್ರಿಯಾ ಯೋಜನೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನಿಗದಿಪಡಿಸಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ೭೧೧ ಲಕ್ಷ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ- ೪೦೩. ೩೦ ಲಕ್ಷ, ಸಮಾಜ ಕಲ್ಯಾಣ- ೪೧೦. ೫೦ ಲಕ್ಷ, ಮಹಿಳಾ ಮತ್ತು ಮಕ್ಕಳ ಕಲ್ಯಾಣ- ೩೧೭. ೮೬ ಲಕ್ಷ, ರಸ್ತೆ ಮತ್ತು ಸೇತುವೆಗಳ ನಿರ್ಮಾಣ- ೧೭೭. ೪೪ ಲಕ್ಷ, ಕೃಷಿ ಇಲಾಖೆ- ೧೭೧. ೩೮ ಲಕ್ಷ, ವೈದ್ಯಕೀಯ ಮತ್ತು ಜನಾರೋಗ್ಯ ಸೇವೆಗಳು- ೫೨೬ ಲಕ್ಷ, ಅಲ್ಪಸಂಖ್ಯಾತರ ಕಲ್ಯಾಣ- ೭೩. ೭೮ ಲಕ್ಷ, ಅರಣ್ಯ ಇಲಾಖೆ- ೧೧೪ ಲಕ್ಷ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್- ೭೫ ಲಕ್ಷ, ಪಶು ಸಂಗೋಪನೆ- ೫೫ ಲಕ್ಷ, ತೋಟಗಾರಿಕೆ ಇಲಾಖೆ- ೮೯ ಲಕ್ಷ, ಮೀನುಗಾರಿಕೆಗೆ- ೧೪. ೫೦ ಲಕ್ಷ, ಯುವಜನ ಸೇವಾ ಮತ್ತು ಕ್ರೀಡೆಗೆ- ೩೪. ೫೦ ಲಕ್ಷ, ಗ್ರಾಮೀಣ ಇಂಧನ ಕಾರ್ಯಕ್ರಮಕ್ಕೆ- ೪೦ ಲಕ್ಷ, ಕೈಗಾರಿಕೆ- ೧೨. ೨೫ ಲಕ್ಷ, ವಯಸ್ಕರ ಶಿಕ್ಷಣ- ೧೦ ಲಕ್ಷ, ಆಯುಷ್- ೧೫ ಲಕ್ಷ, ಸಹಕಾರ- ೯. ೬೮ ಲಕ್ಷ, ಪಂಚಾಯತ್ ಸಂಸ್ಥೆಗಳಿಗೆ ಅನುದಾನ- ೫೭ ಲಕ್ಷ, ರೇಷ್ಮೆ- ೮. ೫೦ ಲಕ್ಷ, ವಿಜ್ಞಾನ ಮತ್ತು ತಂತ್ರಜ್ಞಾನ- ೫ ಲಕ್ಷ, ಅಂಗವಿಕಲರ ಕಲ್ಯಾಣ- ೨೦. ೯೬ ಲಕ್ಷ ರೂ. ಅಲ್ಲದೆ ವಿವಿಧ ಇಲಾಖೆಗಳಿಗೆ ಅಗತ್ಯ ಅನುದಾನವನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಹೇಳಿದರು.
  ಜಿ.ಪಂ. ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್ ಅವರು ಮಾತನಾಡಿ, ಪ್ರಸಕ್ತ ಸಾಲಿಗಾಗಿ ಕೊಪ್ಪಳ ಜಿಲ್ಲೆಗೆ ಯೋಜನಾ ಕಾರ್ಯಕ್ರಮಗಳ ಅನುದಾನವನ್ನು ಜಿಲ್ಲಾ ಪಂಚಾಯತಿಗೆ ೬೭೯೪. ೧೨ ಲಕ್ಷ, ತಾಲೂಕಾ ಪಂಚಾಯತಿಗೆ ೪೯೫೫. ೧೧ ಲಕ್ಷ ಹಾಗೂ ಗ್ರಾಮ ಪಂಚಾಯತಿಗೆ ೨೮೪೦. ೯೧ ಲಕ್ಷ ಸೇರಿದಂತೆ ಒಟ್ಟು ೧೪೨೩೦. ೪೪ ಲಕ್ಷ ರೂ.ಗಳನ್ನು ಸರ್ಕಾರದಿಂದ ನಿಗದಿಪಡಿಸಲಾಗಿದೆ.  ಸರ್ಕಾರದ ಮಾರ್ಗಸೂಚಿ ಅನ್ವಯ ಜಿ.ಪಂ. ಕಾರ್ಯಕ್ರಮಗಳಿಗೆ ಇಲಾಖಾವಾರು ಕ್ರಿಯಾ ಯೋಜನೆ ತಯಾರಿಸಲಾಗಿದೆ. ಜಿ.ಪಂ. ಕಾರ್ಯಕ್ರಮಗಳಿಗೆ ಒದಗಿಸಿದ ಅನುದಾನದಲ್ಲಿ ಸಾಲ, ಸಹಾಯಧನ ರೂಪದಲ್ಲಿ ಫಲಾನುಭವಿಗಳಿಗೆ, ಸಂಬಳ, ಕಚೇರಿ ವೆಚ್ಚಕ್ಕಾಗಿ- ೬೬೯ ಲಕ್ಷ, ಸಾದಿಲ್ವಾರು ವೆಚ್ಚಕ್ಕೆ ರೂ. ೫೧೧೨. ೨೪ ಲಕ್ಷ, ಅಭಿವೃದ್ಧಿ ಕಾಮಗಾರಿಗಳಿಗಾಗಿ ೬೯೦. ೦೫ ಲಕ್ಷ  ರೂ.ಗಳ ಕ್ರಿಯಾ ಯೋಜನೆ ಈ ವರ್ಷಕ್ಕೆ ನಿಗದಿಪಡಿಸಲಾಗಿದೆ ಎಂದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಡಾ. ಸೀತಾ ಹಲಗೇರಿ,  ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ರಾಜಾರಾಂ, ಉಪಕಾರ್ಯದರ್ಶಿ ಅನ್ನದಾನಯ್ಯ ಸೇರಿದಂತೆ ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕಾ ಪಂಚಾಯತ್ ಅಧ್ಯಕ್ಷರು,  ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top