ಮುಖ್ಯಮಂತ್ರಿ ಪಟ್ಟದಿಂದ ಡಿ.ವಿ. ಸದಾನಂದ ಗೌಡರನ್ನು ಕೆಳಗಿಳಿಸಿದುದರಿಂದ ಆಕ್ರೋಶಗೊಂಡಿರುವ ಒಕ್ಕಲಿಗ ಸಮುದಾಯ ರಾಜ್ಯ ಬಿಜೆಪಿಯ ವಿರುದ್ಧ ತಿರುಗಿ ಬಿದ್ದಿದೆ. ಭ್ರಷ್ಟಾಚಾರ ರಹಿತ, ಜನ ಮೆಚ್ಚುವ ಆಡಳಿತ ನೀಡಿದ ಮುಖ್ಯಮಂತ್ರಿ ಸದಾನಂದ ಗೌಡರನ್ನು ಜಾತಿ ಕಾರಣಕ್ಕಾಗಿ ಅಧಿಕಾರದಿಂದ ಕೆಳಗಿಳಿಸುವ ಬಿಜೆಪಿ ಹೈಕಮಾಂಡ್‌ನ ನಿರ್ಧಾರಕ್ಕೆ ಒಕ್ಕಲಿಗರ ಸಂಘದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸದಾನಂದ ಗೌಡರ ಪದಚ್ಯುತಿ ಒಕ್ಕಲಿಗ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದು, ಬಿಜೆಪಿಯ ಒಕ್ಕಲಿಗ ಶಾಸಕರು ರಾಜೀನಾಮೆ ನೀಡುವಂತೆ ಒಕ್ಕಲಿಗರ ಜನಜಾಗೃತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ಒಕ್ಕಲಿಗ ಸಮುದಾಯದ ಸದಾನಂದ ಗೌಡರನ್ನು ಪದಚ್ಯುತಿಗೊಳಿಸಿ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್‌ಗೆ ಮುಖ್ಯಮಂತ್ರಿ ಗಾದಿ ನೀಡಿರುವುದನ್ನು ಖಂಡಿಸಿದ್ದು, ಅವರ ಪ್ರಮಾಣ ವಚನದ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿ, ಬೆಂಗಳೂರು ಬಂದ್ ನಡೆಸಲು ಒಕ್ಕಲಿಗ ಸಂಘ ಮುಂದಾಗಿದೆ.
ಸೋಮವಾರ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿಯವರ ನೇತೃತ್ವದಲ್ಲಿ ನಗರದ ವಿಶ್ವೇಶ್ವರಪುರಂನಿಂದ ಪುರಭವನದ ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ನಂಜಾವಧೂತ ಸ್ವಾಮೀಜಿ, ಪ್ರಾಮಾಣಿಕ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರನ್ನು ಪದಚ್ಯುತಿಗೊಳಿಸುವುದಿಲ್ಲ ಎಂದು ಪ್ರಮಾಣ ಮಾಡಿದ್ದ ಬಿಜೆಪಿ ಹೈಕಮಾಂಡ್ ಮಾತಿಗೆ ತಪ್ಪಿದೆ. ಒಕ್ಕಲಿಗ ಸಮಾಜಕ್ಕೆ ನೀಡಿದ್ದ ಮಾತನ್ನು ಮುರಿದಿರುವ ಬಿಜೆಪಿ ಹೈಕಮಾಂಡ್, ನಿಜವಾದ ವಚನಭ್ರಷ್ಟ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಾಯತ ರಾಜಕೀಯ ನಾಯಕರು ಒಕ್ಕಲಿಗರನ್ನು ತುಳಿಯಲು ನೋಡುತ್ತಿದ್ದಾರೆ. ಆದರೆ ಒಕ್ಕಲಿಗರು ಯಾರಿಗೂ ಅನ್ಯಾಯ ಮಾಡಿದವರಲ್ಲ, ಯಾರನ್ನೂ ತಿಳಿದವರಲ್ಲ. ಒಕ್ಕಲಿಗರ ಮೇಲಿನ ದಬ್ಬಾಳಿಕೆ ಹೀಗೇ ಮುಂದುವರಿದರೆ ಒಕ್ಕಲಿಗರೂ ಸಹ ಲಿಂಗಾಯತ ಸಮುದಾಯಕ್ಕೆ ಅಷ್ಟೇ ಪ್ರಮಾಣದ ಹೊಡೆತ ನೀಡಲಿದ್ದಾರೆ.ಬಿ.ಎಸ್.ಯಡಿಯೂರಪ್ಪನವರನ್ನು ನಾವೆಲ್ಲಾ ಮೂರು ವರ್ಷ ಸಹಿಸಿಕೊಂಡಿದ್ದೇವೆ. ಅವರನ್ನು ನಾವು ಏನನ್ನೂ ಪ್ರಶ್ನಿಸುವುದಿಲ್ಲ. ಆದರೆ ನಾವು ಒಕ್ಕಲಿಗ ಸಮುದಾಯವನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವುದನ್ನು ಪ್ರಶ್ನಿಸುತ್ತಿದ್ದೇವೆ.
ಸಮುದಾಯದ ಅಧಿಕಾರಿಗಳನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದು, ಒಕ್ಕಲಿಗರನ್ನು ಕೆಣಕುವ ಪ್ರಯತ್ನ ಮಾಡಬೇಡಿ. ಒಕ್ಕಲಿಗರ ಆತ್ಮಗೌರವಕ್ಕೆ ಚ್ಯುತಿ ತಂದವರನ್ನು ಕಳೆ ಎತ್ತಿದಂತೆ ಎತ್ತಿ ಬಿಸಾಡುತ್ತೇವೆ ಎಂದು ನಂಜಾವಧೂತ ಸ್ವಾಮೀಜಿ ಎಚ್ಚರಿಕೆ ನೀಡಿದರು.ಇದೇ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಒಂದೇ ಜಾತಿಯಿಂದ ರಾಜ್ಯ ರಾಜಕಾರಣ ಅಸಾಧ್ಯ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ವಿರುದ್ಧದ ಹೋರಾಟವೇ ಹೊರತು, ಯಾವುದೇ ಜನಾಂಗ ಹಾಗೂ ವ್ಯಕ್ತಿಯ ವಿರುದ್ಧದ ಹೋರಾಟ ಅಲ್ಲ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಶಾಂತಿನಾಥ ಸ್ವಾಮೀಜಿ, ಸಿದ್ದರಾಮ ಚೈತನ್ಯ ಸ್ವಾಮೀಜಿ, ಒಕ್ಕಲಿಗರ ಒಕ್ಕೂಟ, ಒಕ್ಕಲಿಗರ ಸಂಘದ ಪದಾಧಿಕಾರಿಗಳೂ ಸೇರಿದಂತೆ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಪುರಭವನದಿಂದ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಗೆ ಹೊರಟ ಪ್ರತಿಭಟನಾಕಾರರು, ಮುಖ್ಯಮಂತ್ರಿ ಸ್ಥಾನ ತ್ಯಜಿಸದಂತೆ ಡಿ.ವಿ.ಸದಾನಂದಗೌಡರನ್ನು ಆಗ್ರಹಿಸಿದರು.
0 comments:
Post a Comment