PLEASE LOGIN TO KANNADANET.COM FOR REGULAR NEWS-UPDATES


ಕುರುಬ ಕುರಿಯನ್ನು ಸಾಕುವುದು ಕುರಿಯ ಮೇಲಿನ ಪ್ರೀತಿಯಿಂದಲ್ಲ. ಅದನ್ನು ಸಂತೆಗೆ ಒಯ್ಯುವುದು ಕುರಿಯ ಪ್ರದರ್ಶನಕ್ಕಲ್ಲ. ಕಟುಕನಿಗೆ ಮಾರುವುದಕ್ಕೆ. ಚುನಾವಣಾ ಸಂತೆ ಹತ್ತಿರ ಬರುತ್ತಿದ್ದ ಹಾಗೆಯೇ, ಮಾಜಿ ಸಚಿವ ಝಮೀರ್ ಅಹ್ಮದ್ ಎಂಬ ಜೆಡಿಎಸ್‌ನ ಈ ಕುರಿ ವ್ಯಾಪಾರಿ, ತನ್ನಲ್ಲಿರುವ ಕುರಿಗಳ ಪ್ರದರ್ಶನವನ್ನು ಮಾಡುವುದಕ್ಕೆ ಹೊರಟಿದ್ದಾರೆ ಮತ್ತು ಅದಕ್ಕೆ ‘ರಾಜ್ಯ ಮುಸ್ಲಿಮ್ ಸಮಾವೇಶ’ ಎಂಬ ಸುಂದರ ನಾಮಕರಣವನ್ನೂ ಮಾಡಿದ್ದಾರೆ. ಜುಲೈ 15ರಂದು ಬೆಂಗಳೂರು ಅರಮನೆ ಆವರಣದಲ್ಲಿ ಝಮೀರ್ ಅಹ್ಮದ್ ಹಮ್ಮಿಕೊಂಡ ಮುಸ್ಲಿಮ್ ಸಮಾವೇಶ, ಈ ನಾಡಿನ ಮುಸ್ಲಿಮರನ್ನು ಕುರಿಗಳನ್ನಾಗಿ ಪರಿವರ್ತಿಸುವ ಅವರ ಯೋಜನೆಯ ಒಂದು ಭಾಗವಷ್ಟೇ. ಈ ಕುರಿಗಳನ್ನು ತೋರಿಸಿ, ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವ ಒಂದೇ ಉದ್ದೇಶವನ್ನು ಅವರು ಹೊಂದಿದ್ದಾರೆ. ಒಟ್ಟಿನಲ್ಲಿ ಜೆಡಿಎಸ್ ನಾಯಕರ ಹಬ್ಬದ ಬಿರಿಯಾನಿಗೆ ಮುಸ್ಲಿಮ್ ಸಮುದಾಯದ ಕುರಿಗಳ ತಲೆ ಕಡಿಯುವುದಕ್ಕೆ ಝಮೀರ್ ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ.
ಈ ನಾಡಿನ ಮುಸ್ಲಿಮರ ದುರಂತಗಳಿಗೆ ಒಂದು ವಿಕಟ ರೂಪಕವಾಗಿ ಝಮೀರ್ ನಮ್ಮ ಮುಂದಿದ್ದಾರೆ. ವಿಪರ್ಯಾಸವೆಂದರೆ ಮುಸ್ಲಿಮ್ ಸಮುದಾಯದ ನಾಯಕರಾಗುವ ಅರ್ಹತೆಯುಳ್ಳ ಒಂದೆರಡು ನಾಯಕರನ್ನು ಸ್ವತಃ ಕಾಂಗ್ರೆಸ್ ಪಕ್ಷ ಮುಗಿಸಿ ಹಾಕಿದೆ. ಇದರ ಲಾಭವನ್ನು ಜೆಡಿಎಸ್‌ನ ಮುಖಂಡ ಕುಮಾರಸ್ವಾಮಿಯವರ ಚೇಲಾ ಎಂದೇ ಗುರುತಿಸಲ್ಪಟ್ಟಿರುವ ಝಮೀರ್‌ರಂತಹ ನಾಯಕರು ಪಡೆದುಕೊಂಡಿರುವುದು ನಾಡಿನ ಮುಸ್ಲಿಮರ ದುರದೃಷ್ಟವೇ ಸರಿ.
ಮೈತುಂಬಾ ಕ್ರಿಮಿನಲ್ ಹಿನ್ನೆಲೆಯಿರುವ, ಮೊಕದ್ದಮೆಗಳನ್ನು ಎದುರಿಸುತ್ತಿರುವ ಝಮೀರ್ ಯಾವ ಕಾರಣಕ್ಕೂ ಮುಸ್ಲಿಮರ ಮುಖಂಡರಾಗಲು ಸಾಧ್ಯವಿಲ್ಲ. ನಾಡಿನ ಜನರೂ ಇದನ್ನು ಒಪ್ಪಿಕೊಂಡಿಲ್ಲ. ತನ್ನ ಕ್ಷೇತ್ರದಲ್ಲಿ ಹಣವನ್ನು ಚೆಲ್ಲಿ ಶಾಸಕರಾಗುತ್ತಾ ಬಂದಿದ್ದರೂ, ಅವರೆಂದೂ ಮುಸ್ಲಿಮರ ನಾಯಕನಾಗಿ ಗುರುತಿಸಲ್ಪಟ್ಟಿಲ್ಲ.
ಒಂದಿಷ್ಟು ಮುಸ್ಲಿಮ್ ಗೂಂಡಾಗಳನ್ನು ಸಾಕಿ, ಬೇಕಾದಾಗ ಹಣ ಚೆಲ್ಲುವುದನ್ನೇ ಮುಸ್ಲಿಮರ ಅಭಿವೃದ್ಧಿ ಎಂದು ಭಾವಿಸುವುದಾದರೆ ಖಂಡಿತವಾಗಿಯೂ ಝಮೀರ್‌ನ್ನು ಮುಸ್ಲಿಮ್ ನಾಯಕ ಎಂದು ಕರೆಯ ಬಹುದು. ಆದರೆ ಪರಿಸ್ಥಿತಿ ಹಾಗಿಲ್ಲ. ಇಂದು ಸ್ವತಃ ಜೆಡಿಎಸ್ ಪಕ್ಷವೇ ಝಮೀರ್‌ರನ್ನು ಒಬ್ಬ ಜೋಕರ್ ತರಹ, ಆಸ್ಥಾನ ವಿದೂಷಕನ ತರಹ ಅನ್ನ ನೀರಿಟ್ಟು ಸಾಕುತ್ತಾ ಬರುತ್ತಿದೆ. ಬಕ್ರೀದ್‌ನ ಸಮಯದಲ್ಲಿ ತಲೆಗೆ ಟೊಪ್ಪಿಯೇರಿಸಿ, ಕುಮಾರಸ್ವಾಮಿಯವರ ಪಕ್ಕದಲ್ಲಿ ನಿಂತು ಫೊಟೊ ತೆಗೆಸಿಕೊಳ್ಳುವುದನ್ನೇ ಸಮುದಾಯದ ಅಭಿವೃದ್ಧಿ ಎಂದು ಭಾವಿಸಿದ ಝಮೀರ್, ಸಮಯ ಬಂದಾಗ ಇಡೀ ಸಮುದಾಯವನ್ನೇ ಕೋಮು ಶಕ್ತಿಗಳಿಗೆ ಬಲಿಗೊಟ್ಟವರು.
ಬಿಜೆಪಿಯೊಂದಿಗೆ ಕೈ ಜೋಡಿಸಿದಾಗ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಜೊತೆಯಾಗಿ ಉಂಡು ಉಳಿದ ಬಾಳೆಯೆಲೆಯ ಎಂಜಲನ್ನು ಪರ ಮಾನ್ನವೆಂದು ಮೆದ್ದವರನ್ನು ಮುಸ್ಲಿಮರಾದರೂ ತಮ್ಮ ನಾಯಕನೆಂದು ಹೇಗೆ ಸ್ವೀಕರಿಸಿಯಾರು? ಮುಸ್ಲಿಮರ ಹೆಸರಲ್ಲಿ ಶಾಸಕನಾಗಿ, ಸಚಿವರಾಗಿದ್ದ ಝಮೀರ್ ಮುಸ್ಲಿಮರಿಗೆ ಮಾಡಿರುವುದಾದರೂ ಏನು? ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ದಿಲ್ಲಿಯ ಸಭೆಯಲ್ಲಿ ‘ಮದ್ರಸದಲ್ಲಿ ಉಗ್ರಗಾಮಿ ಚಟುವಟಿಕೆ ನಡೆಯುತ್ತಿದೆ’ ಎಂದು ಹೇಳಿಕೆ ನೀಡಿದ್ದರು. ಆಗ ಪರೋಕ್ಷವಾಗಿ ಆ ಹೇಳಿಕೆಯನ್ನು ಸಮರ್ಥಿಸಿ, ತಮ್ಮ ನಾಯಕನಿಗಾಗಿ ಇಡೀ ಸಮುದಾಯವನ್ನು ಬಲಿಗೊಟ್ಟವರು ಇದೇ ಝಮೀರ್.
ಕರಾವಳಿಯಲ್ಲಿ ಕೋಮು ಗಲಭೆ ನಡೆದಾಗ ಕನಿಷ್ಠ ಭೇಟಿ ನೀಡಿ ಸಮಾಧಾನಿಸುವ ಪ್ರಯತ್ನವನ್ನೂ ಈ ಝಮೀರ್ ಮಾಡಿಲ್ಲ. ಸಚಿವರಾಗಿ ಮುಸ್ಲಿಮರ ಹೆಸರನಲ್ಲಿ ಖಜಾನೆಯನ್ನು ದೋಚಿದುದು ಬಿಟ್ಟರೆ ಉಳಿದಂತೆ ಸಮುದಾಯಕ್ಕಾಗಿ ನಯಾ ಪೈಸೆಯನ್ನು ಬಿಚ್ಚಿದವರಲ್ಲ ಈ ಝಮೀರ್. ಸಂಘಪರಿವಾರದ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಸರಕಾರ ವಜಾಗೊಳಿಸಿದಾಗ, ಪರೋಕ್ಷವಾಗಿ ಇದೇ ಝಮೀರ್ ಪ್ರೋತ್ಸಾಹಿಸಿದ್ದರು. ಇಂತಹ ಝಮೀರ್, ಬಕ್ರೀದ್ ಹಬ್ಬವನ್ನೂ ತನ್ನ ರಾಜಕೀಯಕ್ಕಾಗಿ ಬಳಸಿಕೊಂಡವರು. ಕುಮಾರಸ್ವಾಮಿ ಬಕ್ರೀದ್ ಹಬ್ಬದ ಪ್ರಾರ್ಥನೆಗೆ ಬರಲಿಲ್ಲ ಎಂದು ರಾಜೀನಾಮೆ ನೀಡಿದವರು. ಆದರೆ ಆಳದಲ್ಲಿ ಕುಮಾರಸ್ವಾಮಿಯವರನ್ನು ಅಧಿಕಾರಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದವರು. ಹೆಸರಿಗಷ್ಟೇ ಬಕ್ರೀದ್ ಹಬ್ಬ ನೆಪವಾಗಿತ್ತು. ತನ್ನ ಬ್ಲಾಕ್‌ಮೇಲ್ ಯಶಸ್ವಿಯಾದುದೇ, ಹೋಗಿ ಕುಮಾರಸ್ವಾಮಿಯವರನ್ನು ಆಲಿಂಗಿಸಿ ಕೊಂಡರು.
ರೆಸಾರ್ಟ್‌ಗಳಲ್ಲಿ ಬಣ ರಾಜಕೀಯ ನಡೆಯುತ್ತಿದ್ದಾಗ, ಶಾಸಕರಿಗೆ ಬಿಯರ್, ವಿಸ್ಕಿ ವಿತರಿಸಿ, ಅವರ ಎಂಜಲು ಬಟ್ಟಲನ್ನು ತೊಳೆದು ಕುಮಾರಸ್ವಾಮಿಯವರಿಂದ ಭಲೇ ಎಂದು ಕರೆಸಿಕೊಂಡಿದ್ದ ಝಮೀರ್, ಇದೀಗ ನಾಡಿನ ಇಡೀ ಮುಸ್ಲಿಮ್ ಸಮುದಾಯವನ್ನೇ ಈ ಪರಿಚಾರಕ ಕೆಲಸಕ್ಕೆ ಇಳಿಸಲು ಹೊರಟಿರು ವುದು ವಿಷಾದನೀಯ.ಮುಸ್ಲಿಮ್ ಸಮುದಾಯ ಒಂದಾಗಬೇಕಾಗಿದೆ ನಿಜ.   - ವಾರ್ತಾಭಾರತಿ

Advertisement

0 comments:

Post a Comment

 
Top