ರಾಜ್ಯದಲ್ಲಿ ಪುಸ್ತಕ ಕ್ಷೇತ್ರದಲ್ಲಿ ನೀತಿಯೊಂದನ್ನು ರೂಪಿಸುವ ಸಲುವಾಗಿ ಸರ್ಕಾರವು ರಾಜ್ಯ ಪತ್ರದಲ್ಲಿ ಈಗಾಗಲೇ ಕರಡು ನೀತಿಯನ್ನು ಪ್ರಕಟಿಸಿದ್ದು, ಕರಡು ಪುಸ್ತಕ ನೀತಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ರಾಜ್ಯ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಲಾಗಿರುವ ಪುಸ್ತಕ ನೀತಿಯ ಕರಡು ವಿವರ ಈ ಕೆಳಗಿನಂತಿದೆ.
ಪುಸ್ತಕ ರಚನೆ : ಪುಸ್ತಕ ರಚನೆಗೆ ಸೂಕ್ತ ಸೌಲಭ್ಯ, ಪುಸ್ತಕದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದಂತೆ ಕಾರ್ಯಾಗಾರ, ಕುಮ್ಮಟಗಳನ್ನು ಏರ್ಪಡಿಸುವುದು, ಲೇಖಕ-ಪ್ರಕಾಶಕರ ನಡುವೆ ತಪ್ಪದೆ ಲಿಖಿತ ಒಪ್ಪಂದ ಮಾಡಿಕೊಳ್ಳುವುದು ಪ್ರಕಾಶಕರು-ಲೇಖಕರಿಗೆ ಕರಾರು ಮಾಡಿಕೊಂಡಂತೆ ನಿರ್ಧಿಷ್ಟ ಸಂಭಾವನೆ ಹಾಗೂ ಗೌರವ ಪ್ರತಿ ನೀಡಬೇಕು, ಪುಸ್ತಕ ಪ್ರಾಧಿಕಾರ ಅಕಾಡೆಮಿಗಳು, ಪ್ರಸಾರಾಂಗಗಳು ಲೇಖಕರ ಕೃತಿಗಳನ್ನು ಪ್ರಕಟಿಸಿದಾಗ ಕೃತಿಸ್ವಾಮ್ಯ ಆಯಾ ಲೇಖಕರದ್ದಾಗಿರಬೇಕು. ಆ ಆವೃತ್ತಿ ಮಾತ್ರ ಪ್ರಕಾಶಕರಿಗೆ ಸೀಮಿತವಾಗಿರಬೇಕು. ಮರುಮುದ್ರಣ ಮಾಡುವ ಸಂದರ್ಭದಲ್ಲಿ ಲೇಖಕರ ಲಿಖಿತ ಅನುಮತಿ ಪಡೆದೇ ಮುದ್ರಿಸಬೇಕು. ಹಾಗೆ ಲೇಖಕರೆ ಮರುಮುದ್ರಿಸುವ ಸಂದರ್ಭದಲ್ಲಿ ಪ್ರಕಾಶಕ ಸಂಸ್ಥೆಗೆ ಮೊದಲೇ ಲಿಖಿತವಾಗಿ ತಿಳಿಸಬೇಕು, ಅನುವಾದಕ್ಕೆ ಮರುಮುದ್ರಣಗಳಿಗೆ ಚಿತ್ರೀಕರಣಕ್ಕೆ ಇನ್ನಿತರ ಯಾವುದೇ ಮಾಧ್ಯಮ/ಬಗೆಯ ಬಳಕೆಗೆ ಲೇಖಕರಿಗೆ ಮಾತ್ರ ಹಕ್ಕುಸ್ವಾಮ್ಯವಿರಬೇಕು, ಸರ್ಕಾರಿ ಸ್ವಾಯತ್ತ ಸಂಸ್ಥೆಗಳು ಪ್ರಕಾಶಕರಾಗಿದ್ದಾಗ ಸಂಪಾದನೆ, ಅನುವಾದ, ಸಂಗ್ರಹ ಇತ್ಯಾದಿ ಕೃತಿಗಳಿಗೆ ಸಂಬಂಧಿಸಿದಂತೆ ಆಯಾ ಸಂಸ್ಥೆಗಳು ಏಕರೂಪದಲ್ಲಿ ಸೂಕ್ತ ಗೌರವಧನವನ್ನು ನಿಗದಿಪಡಿಸಬೇಕು, ಕಾಲಕಾಲಕ್ಕೆ ಗ್ರಂಥಸ್ವಾಮ್ಯ ಕಾನೂನಿಗೆ ಅನುಸಾರವಾಗಿ ಮಾಡಲಾದ ನಿಯಮಗಳು ಮತ್ತು ಬೌದ್ಧಿಕ ಸ್ವತ್ತು ಪರಿಭಾಷೆಗೆ ಸಂಬಂಧಿಸಿದಂತೆ ನಿಯಮಗಳು ಅನ್ವಯವಾಗಬೇಕು, ಲೇಖಕರು ತಮ್ಮ ಹಸ್ತಪ್ರತಿಯನ್ನು ನೋಂದಾಯಿಸಿ, ನೋಂದಾವಣೆ ಸಂಖ್ಯೆಯನ್ನು ಮುದ್ರಿತ ಪುಸ್ತಕದಲ್ಲಿ ನಮೂದಿಸಬೇಕು.
ಪುಸ್ತಕದ ಪ್ರಕಟಣೆ : ಪುನರ್‌ಮುದ್ರಣದ ಕೃತಿಗಳಿಗೆ ಮುದ್ರಣ ವರ್ಷವನ್ನು ಕಡ್ಡಾಯವಾಗಿ ನಮೂದಿಸುವುದರ ಜೊತೆಗೆ ಮೊದಲ ಮುದ್ರಣ ವರ್ಷವನ್ನು ಹಾಗೂ ಎಷ್ಟನೇ ಆವೃತ್ತಿ ಎಂಬುದನ್ನ ತಪ್ಪದೇ ನಮೂದಿಸಬೇಕು, ಮರುಮುದ್ರಣದಲ್ಲಿ ಪುಸ್ತಕದ ಶೀರ್ಷಿಕೆಯನ್ನು ಬದಲಾಯಿಸಿದ್ದರೆ ಪೂರ್ವದ ಹೆಸರನ್ನು ಪೂರ್ಣ ಶೀರ್ಷಿಕೆಯ ಮೊದಲ ಪುಟದಲ್ಲಿ ಸೂಚಿಸಬೇಕು, ಪರಿಷ್ಕೃತ ಮುದ್ರಣವಾಗಿದ್ದಲ್ಲಿ ಮೊದಲ ಮುದ್ರಣದ ಶೀರ್ಷಿಕೆಯ ಹೆಸರನ್ನು ತಾಂತ್ರಿಕ ಪುಟದಲ್ಲಿ ಸೂಚಿಸಿ ಮೊದಲ ಮುದ್ರಣದ ವರ್ಷವನ್ನು ನಮೂದಿಸಿರಬೇಕು, ಮುದ್ರಿತ ಪ್ರತಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು, ಕೃತಿಸ್ವಾಮ್ಯವನ್ನು ಸ್ಪಷ್ಟವಾಗಿ ನಮೂದಿಸಿರಬೇಕು, ಗ್ರಂಥಸ್ವಾಮ್ಯ ಪುಟದಲ್ಲಿ ಕಾಗದದ ಗುಣಮಟ್ಟ ಹಾಗೂ ಪುಸ್ತಕದ ಆಕಾರವನ್ನು ಖಚಿತವಾಗಿ ನೀಡಬೇಕು. ಉದಾ: ಎನ್.ಎಸ್.ಮ್ಯಾಪ್‌ಲಿಥೊ ೮೦ ಜಿ.ಎಸ್.ಎಂ. ಡೆಮಿ ೧/೮ ಇತ್ಯಾದಿ, ಎಲ್ಲಾ ವೃತ್ತಿನಿರತ ಪ್ರಕಾಶಕರು ಐ.ಎಸ್.ಬಿ.ಎನ್.ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಂಡು ಪ್ರತಿಯೊಂದು ಪುಸ್ತಕಕ್ಕೆ ಐ.ಎಸ್.ಬಿ.ಎನ್. ಸಂಖ್ಯೆ ನೀಡಬೇಕು.
ಪುಸ್ತಕ ಮಾರಾಟ : ರಾಜ್ಯಾದ್ಯಂತ ಕನ್ನಡ ಪುಸ್ತಕ ಮಾರಾಟ ಮೇಳಗಳನ್ನು ಏರ್ಪಡಿಸಬೇಕು, ರಾಜ್ಯಾದ್ಯಂತ ಸುಸಜ್ಜಿತವಾದ ಆಕರ್ಷಕ ಕನ್ನಡ ಪುಸ್ತಕ ಮಳಿಗೆಗಳನ್ನು ಸ್ಥಾಪಿಸಬೇಕು, ಲೇಖಕರಲ್ಲಿ ಆತ್ಮವಿಶ್ವಾಸ ಮೂಡಿಸಲು ಲೇಖಕ-ಪ್ರಕಾಶಕರಿಗೆ ಪ್ರತ್ಯೇಕವಾದ ಪುಸ್ತಕ/ಹಸ್ತಪ್ರತಿ ಮೇಳವನ್ನು ಏರ್ಪಡಿಸಬೇಕು, ಸರ್ಕಾರ, ಮಹಾನಗರ ಪಾಲಿಕೆಗಳು, ನಗರಪಾಲಿಕೆಗಳು, ಸಾರಿಗೆ ನಿಗಮಗಳು ಮೊದಲಾದ ಸರ್ಕಾರಿ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನಿರ್ಮಿಸುವ ವಾಣಿಜ್ಯ ಸಂಕೀರ್ಣ ಹಾಗೂ ಬಸ್ ನಿಲ್ದಾಣಗಳಲ್ಲಿ ಕನ್ನಡ ಪುಸ್ತಕ ಮಳಿಗೆಗಳನ್ನು ಸ್ಥಾಪಿಸಲು ರಿಯಾಯತಿ ದರದಲ್ಲಿ ಸ್ಥಳಾವಕಾಶ ಒದಗಿಸಬೇಕು.
ನೋಂದಣಿ : ಕನ್ನಡದಲ್ಲಿ ಪ್ರಕಟವಾಗುವ ಪ್ರತಿಯೊಂದು ಪುಸ್ತಕವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು.
ಖರೀದಿ : ರಾಜ್ಯದಲ್ಲಿ ಪ್ರಕಟವಾಗುವ ಪ್ರತಿಯೊಂದು ಪುಸ್ತಕದ ಕನಿಷ್ಠ ಐನೂರು ಪ್ರತಿಗಳನ್ನು ಸರ್ಕಾರವು ಖರೀದಿಸಬೇಕು, ರಾಜ್ಯದಲ್ಲಿ ಪ್ರಕಟವಾಗುವ ಕನ್ನಡ ಪುಸ್ತಕಗಳನ್ನು ಖರೀದಿಸಲು ಒಟ್ಟಾರೆ ೫೦.೦೦ ಕೋಟಿಗಳ ಅನುದಾನವನ್ನು ಪ್ರತಿವರ್ಷ ಆಯವ್ಯಯದಲ್ಲಿ ಒದಗಿಸಬೇಕು, ರಾಜ್ಯದಲ್ಲಿ ಕನ್ನಡ ಪುಸ್ತಕಗಳ ಪ್ರಕಟಣೆಗಾಗಿ ಸರ್ಕಾರವು ಒಟ್ಟಾರೆ ರೂ.೧೦.೦೦ ಕೋಟಿ ರೂಪಾಯಿಗಳ ನೆರವನ್ನು ಆಯವ್ಯಯದಲ್ಲಿ ಮೀಸಲಿಡುವುದು, ಕನ್ನಡ ಪುಸ್ತಕಗಳ ವಿತರಣೆಗಾಗಿಯೇ ಒಂದು ವಿಶೇಷ ವ್ಯವಸ್ಥೆಯನ್ನು ಮಾಡುವುದು, ರಾಜ್ಯದ ಖಾಸಗೀ ಬೃಹತ್ ವ್ಯಾಪಾರ ಮಳಿಗೆಗಳನ್ನು ಕನ್ನಡ ಪುಸ್ತಕಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡುವುದು.
ಪುಸ್ತಕೋದ್ಯಾನ : ಕನ್ನಡ ಪುಸ್ತಕ ರಚನೆ, ಪ್ರಕಟಣೆ, ಮುದ್ರಣ, ವಿತರಣೆ, ಮಾರಾಟ ಹೀಗೆ ಪುಸ್ತಕ ಕ್ಷೇತ್ರದ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಹಾಗೂ ಎಲ್ಲಾ ಪುಸ್ತಕ ವೃತ್ತಿಗಳಲ್ಲಿ ತರಬೇತಿ ನೀಡಲು ಒಂದು ಪುಸ್ತಕ ಸಂಗ್ರಹಾಲಯವನ್ನು ಒಳಗೊಂಡಂತೆ ರಾಜ್ಯದಲ್ಲಿ ಪುಸ್ತಕೋದ್ಯಾನವನ್ನು ಸ್ಥಾಪಿಸುವುದು.
ರಾಜ್ಯ ಪುಸ್ತಕ ನೀತಿಯ ಬಗೆಗಿನ ಮೇಲ್ಕಂಡ ಕರಡು ನೀತಿಯ ಬಗ್ಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು, ಪ್ರಕಾಶಕರು, ಮುದ್ರಣಕಾರರೂ ಹಾಗೂ ಇತರೆ ವ್ಯಕ್ತಿಗಳಿಂದ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಸಂಬಂಧಪಟ್ಟವರು ಜು.೧೫ ರೊಳಗಾಗಿ ಸರ್ಕಾರದ ಕಾರ್ಯದರ್ಶಿಗಳು ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ವಿಕಾಸ ಸೌಧ, ಬೆಂಗಳೂರು, ಆಯುಕ್ತರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನ, ಜೆ.ಸಿ.ರಸ್ತೆ ಬೆಂಗಳೂರು, ಆಡಳಿತಾಧಿಕಾರಿಗಳು ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು, ಇವರಿಗೆ ಸಲ್ಲಿಸಬಹುದಾಗಿದೆ.
0 comments:
Post a Comment