PLEASE LOGIN TO KANNADANET.COM FOR REGULAR NEWS-UPDATES

 ಉದ್ಯೋಗವನ್ನರಸಿ ಕೂಲಿಕಾರರು ಗುಳೇ ಹೋಗುವುದನ್ನು ತಡೆಗಟ್ಟಿ, ಅವರಿಗೆ ಉದ್ಯೋಗಖಾತ್ರಿ ಯೋಜನೆಯಡಿ ಸ್ಥಳೀಯವಾಗಿ ಉದ್ಯೋಗ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
  ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಬರಪರಿಹಾರ ಕಾಮಗಾರಿಗಳ ಬಗ್ಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ರಾಜ್ಯದ ಎಲ್ಲ ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆಯಿಂದ ಕೂಲಿಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಗುಳೇ ಹೋಗುತ್ತಿರುವ ಬಗ್ಗೆ ಮಾಧ್ಯಮಗಳಿಂದ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಂದ ತಿಳಿದುಬಂದಿದ್ದು, ಇದು ಉದ್ಯೋಗಖಾತ್ರಿ ಯೋಜನೆ ಸಮರ್ಪಕ ರೀತಿಯಲ್ಲಿ ಅನುಷ್ಠಾನವಾಗದೇ ಇರುವುದಕ್ಕೆ ನಿದರ್ಶನವಾಗಿದೆ.  ಕರಾವಳಿ ಜಿಲ್ಲೆಗಳಲ್ಲಿ ಕೂಲಿಕಾರ್ಮಿಕರು ಖಾತ್ರಿ ಯೋಜನೆಯಡಿ ಕೆಲಸಕ್ಕೆ ಬರುವುದು ಕಡಿಮೆ, ಆದರೆ ಬರಪೀಡಿತ ಕೊಪ್ಪಳ ಜಿಲ್ಲೆಯಲ್ಲಿ ಉದ್ಯೋಗ ಕೇಳಿಕೊಂಡು ಬರುವ ಕೂಲಿಕಾರರ ಸಂಖ್ಯೆ ಹೆಚ್ಚಿದೆ.  ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು, ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು, ಉದ್ಯೋಗಖಾತ್ರಿ ಯೋಜನೆಯಲ್ಲಿ ನೀಡುವ ಕೂಲಿಗಿಂತ ಹೆಚ್ಚಿನ ಕೂಲಿಯನ್ನು ಬಯಸಿ ಗುಳೇ ಹೋಗುವವರನ್ನು ತಡೆಯಲು ಸಾಧ್ಯವಿಲ್ಲ.  ಆದರೆ ಕನಿಷ್ಟ ಕೂಲಿಗಾಗಿಯೇ ಗುಳೇ ಹೋಗುವವರನ್ನು ಮನವೊಲಿಸಿ, ಉದ್ಯೋಗಖಾತ್ರಿ ಯೋಜನೆಯಡಿ ಸ್ಥಳೀಯವಾಗಿಯೇ ಉದ್ಯೋಗ ನೀಡಲು ಅಧಿಕಾರಿಗಳು ಪ್ರಥಮ ಆದ್ಯತೆ ನೀಡಬೇಕು.  ಉದ್ಯೋಗಖಾತ್ರಿ ಯೋಜನೆಯಡಿ ಉದ್ಯೋಗ ಸೃಜನೆ ಕಾಮಗಾರಿಗಳನ್ನು ಹಲವಾರು ಕಾರ್ಯಗಳಿಗೆ ಕೈಗೊಳ್ಳಬಹುದಾಗಿದ್ದು, ಕೆಲಸ ಮಾಡಲು ಮುಂದಾಗುವ ಕೂಲಿಕಾರರಿಗೆ ತಕ್ಷಣ ಕೆಲಸ ನೀಡಬೇಕು.  ಕೆಲಸ ಮಾಡಿದ ೦೭ ದಿನಗಳ ಒಳಗಾಗಿ ಕೂಲಿ ಹಣ ಪಾವತಿಸಬೇಕು.  ಈಗಾಗಲೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೆರೆಗಳ ಹೂಳೆತ್ತುವುದು, ಚೆಕ್ ಡ್ಯಾಂ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ಪ್ರಾರಂಭಿಸಿದ್ದು, ಇದೀ ರೀತಿ ಜಿಲ್ಲೆಯ ಎಲ್ಲ ೧೩೪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸೂಚನೆ ನೀಡಿದರು.
ಅಗತ್ಯವಿರುವೆಡೆ ಮಾತ್ರ ಗೋಶಾಲೆ : ಜಿಲ್ಲೆಯಲ್ಲಿ ಈಗಾಗಲೆ ೨೧ ಕಡೆಗಳಲ್ಲಿ ಗೋಶಾಲೆಗಳನ್ನು ಪ್ರಾರಂಭಿಸಿದ್ದು, ಇನ್ನೂ ೫ ಗ್ರಾಮಗಳಲ್ಲಿ ಗೋಶಾಲೆ ಪ್ರಾರಂಭಿಸಲಾಗುತ್ತಿದೆ.  ಗೋಶಾಲೆಗಳಲ್ಲಿ ಸುಮಾರು ೨೮ ಸಾವಿರಕ್ಕೂ ಹೆಚ್ಚು ಜಾನುವಾರುಗಳು ಇವೆ.  ಇರಕಲ್ಲಗಡದಲ್ಲಿನ ಗೋಶಾಲೆಯಲ್ಲಿನ ವ್ಯವಸ್ಥೆ ತೃಪ್ತಿಕರವಾಗಿದೆ.  ಯಾವುದೇ ಒತ್ತಡಕ್ಕೆ ಅಥವಾ ಪ್ರಭಾವಕ್ಕೆ ಒಳಗಾಗಿ ಅಗತ್ಯ ಇಲ್ಲದೆಡೆ ಗೋಶಾಲೆ ತೆರೆದರೆ, ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅಗತ್ಯವಿರುವೆಡೆ ಮಾತ್ರ ಗೋಶಾಲೆ ತೆರೆಯಬೇಕು, ಅಲ್ಲದೆ ಗೋಶಾಲೆಗಳಿಗೆ ಸಮರ್ಪಕ ಮೇವು ಪೂರೈಕೆ ಮಾಡಬೇಕು.  ಇದಕ್ಕೆ ಹೆಚ್ಚುವರಿ ಅನುದಾನದ ಅಗತ್ಯವಿದ್ದಲ್ಲಿ ಕೂಡಲೆ ಪ್ರಸ್ತಾವನೆ ಸಲ್ಲಿಸಿದ ಪಕ್ಷದಲ್ಲಿ ಸರ್ಕಾರ ಆದ್ಯತೆ ಮೇರೆಗೆ ಮಂಜೂರಾತಿ ನೀಡಲಿದೆ.  
ರಾಜೀವ್‌ಗಾಂಧಿ ಸಬ್‌ಮಿಷನ್‌ಗೆ ವಿಶೇಷ ಸಭೆ : ಕೊಪ್ಪಳ ಜಿಲ್ಲೆಯ ನೂರಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ರಾಜೀವ್‌ಗಾಂಧಿ ಸಬ್‌ಮಿಷನ್ ಬಹುಗ್ರಾಮ ಯೋಜನೆಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಇತರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ ಸರಿಯಾಗಿ ಅನುಷ್ಠಾನಗೊಂಡಿಲ್ಲ.  ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ಅವಶ್ಯಕ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ.  ಜಿಲ್ಲೆಯ ಒಟ್ಟು ೧೪ ಯೋಜನೆಗಳ ಅನುಷ್ಠಾನಕ್ಕೆ ಇರುವ ತೊಂದರೆಗಳನ್ನು ನಿವಾರಿಸಲು ಅಧಿವೇಶನ ಮುಗಿದ ಕೂಡಲೆ ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು.  ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರನ್ನು ಅನರ್ಹಗೊಳಿಸಿ, ಅಂಥಹವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದರು.
ಕುಡಿಯುವ ನೀರು : ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿದ ನಂತರ, ಗ್ರಾಮೀಣ ಭಾಗದಲ್ಲಿನ ಕುಡಿಯುವ ನೀರು ತೊಂದರೆ ನಿವಾರಿಸಲು ಈಗಾಗಲೆ ಒಟ್ಟು ೪೪೯ ಹೊಸ ಕೊಳವೆಬಾವಿಗಳನ್ನು ಕೊರೆಯಿಸಲಾಗಿದ್ದು, ಇದರಲ್ಲಿ ೪೨೨ ಕೊಳವೆಬಾವಿಗಳು ಸಫಲಗೊಂಡಿವೆ.  ಕುಡಿಯುವ ನೀರು ಸರಬರಾಜು ಘಟಕಗಳಿಗೆ ಠೇವಣಿಯನ್ನು ಪಾವತಿಸದೇ ಇದ್ದರೂ, ಬರ ಪೀಡಿತ ಜಿಲ್ಲೆಗಳಲ್ಲಿ ಪ್ರಥಮ ಆದ್ಯತೆ ಮೇರೆಗೆ ಅಂತಹ ಘಟಕಗಳಿಗೆ ಮೊದಲು ವಿದ್ಯುತ್ ಸಂಪರ್ಕ ಒದಗಿಸಬೇಕು.  ವೃಥಾ ಕಾಲಹರಣ ಮಾಡದೆ ಅಧಿಕಾರಿಗಳು ಸಮರೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು.  ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಕೊಪ್ಪಳ ಜಿಲ್ಲೆಯನ್ನು ಅಭಿವೃದ್ಧಿಪಡಿಸಿ, ಇಂತಹ ಹಣೆಪಟ್ಟಿಯನ್ನು ತೊಡೆದುಹಾಕಲು ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ಜಿಲ್ಲೆಯಲ್ಲಿ ೧೧೦ ಮಿ.ಮೀ. ನಷ್ಟು ಅಂದರೆ ಶೇ. ೫೦ ಕ್ಕಿಂತ ಹೆಚ್ಚು ಮಳೆಯ ಕೊರತೆಯಾಗಿದ್ದು, ಇದರಿಂದ ನೀರಾವರಿ ಪ್ರದೇಶವೂ ಸೇರಿದಂತೆ ಕೇವಲ ಶೇ. ೩೫ ರಷ್ಟು ಮಾತ್ರ ಬಿತ್ತನೆಯಾಗಿದೆ, ಸದ್ಯ ಕಳೆದ ನಾಲ್ಕೈದು ದಿನದಿಂದ ಮಾತ್ರ ಅಲ್ಪ-ಸ್ವಲ್ಪ ಮಳೆಯಾಗುತ್ತಿದೆ.  ಜಿಲ್ಲೆಯ ೧೩೪ ಗ್ರಾಮ ಪಂಚಾಯತಿಗಳ ಪೈಕಿ ೮೦ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಒಟ್ಟು ೧೦೯ ವಿವಿಧ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ.  ಜಿಲ್ಲೆಯ ಎಲ್ಲ ೧೩೪ ಗ್ರಾಮ ಪಂಚಾಯತಿಗಳಲ್ಲೂ ಶೀಘ್ರದಲ್ಲೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಶೀಘ್ರ ಕೂಲಿ ಹಣ ಪಾವತಿಗೂ ಕ್ರಮ ಕೈಗೊಳ್ಳಲಾಗುವುದು.  ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳದಲ್ಲಿ ಅನೇಕ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಕೊಪ್ಪಳ ನಗರದಲ್ಲಿ ಪ್ರಮುಖವಾಗಿ ಒಂದು ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು, ಸರ್ಕಾರಿ ನೌಕರರಿಗೆ ಬೇಕಾಗಿರುವ ಸುಮಾರು ೩೦೦ ವಸತಿಗೃಹಗಳ ನಿರ್ಮಾಣವಾಗಬೇಕು, ಕೊಪ್ಪಳ ನಗರಕ್ಕೆ ರಿಂಗ್ ರೋಡ್ ನಿರ್ಮಾಣವಾಗಬೇಕು, ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯಲ್ಲಿ ಸುಮಾರು ೧೦೦ ಕೊಠಡಿಗಳ ಯಾತ್ರಿ ನಿವಾಸ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
  ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸಂಸದ ಶಿವರಾಮಗೌಡ, ಶಾಸಕರುಗಳಾದ ಸಂಗಣ್ಣ ಕರಡಿ, ಅಮರೇಗೌಡ ಬಯ್ಯಾಪುರ, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಶಿವರಾಜ್ ತಂಗಡಗಿ, ಅಮರನಾಥ ಪಾಟೀಲ್, ಮುಖ್ಯಮಂತ್ರಿಗಳ ಪ್ರಧಾನಕಾರ್ಯದರ್ಶಿ ಲಕ್ಷ್ಮೀನಾರಾಯಣ, ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗಬಾಟ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಜಿ.ಪಂ. ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಸೇರಿದಂತೆ ಹಲವಾರು ಗಣ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.













Advertisement

0 comments:

Post a Comment

 
Top