PLEASE LOGIN TO KANNADANET.COM FOR REGULAR NEWS-UPDATES


- -ಹನುಮಂತ ಹಾಲಿಗೇರಿ

ಸಿದ್ದವ್ವನ ಶಾಲೆಯಲ್ಲಿ ದಿನನಿತ್ಯ ‘ಓಂ ಅಸತೋಮಾ ಸದ್ಗಮಯ’ ಪ್ರಾರ್ಥನೆ ಮಾಡಲಾಗುತ್ತದೆ. ಇದರ ಅರ್ಥವಾಗಲಿ, ಅದೆಲ್ಲಿಂದ ಬಂತೆಂದಾಗಲಿ ಸಿದ್ದವ್ವನಿಗೆ ತಿಳಿಯದು. ಸಿದ್ದವ್ವ ಅಮ್ಮನೊಡನೆ ಕೇಳಿದಾಗ;
ಅಮ್ಮ: ಚಿಕ್ಕಂದಿನಲ್ಲಿ ನಾವೂ ಇದನ್ನು ಓದಿದ್ದೆವು. ಈ ಪ್ರಾರ್ಥನೆ ‘ವೇದ’ದಲ್ಲಿದೆ ಮಗು.
ಸಿದ್ದವ್ವ: ವೇದ ಎಂದರೇನಮ್ಮಾ?
ಅಮ್ಮ: ವೇದ ಎಂದರೆ ‘ತಿಳುವಳಿಕೆ’,‘ಜ್ಞಾನ’. ವೇದಗಳು ನಾಲ್ಕು; ಋಗ್ವೇದ, ಯಜುರ್‌ವೇದ, ಸಾಮವೇದ ಮತ್ತು ಅರ್ಥವೇದ. ಅವುಗಳಲ್ಲಿ ಋಗ್ವೇದವು ಅತಿ ಪುರಾತನವಾದದ್ದು. ವೇದಗಳು ಜಗತ್ತಿನ ಅತಿ ಪ್ರಾಚೀನ ಧಾರ್ಮಿಕ ಸಾಹಿತ್ಯ. ಅವುಗಳನ್ನು ಮಹರ್ಷಿ ವೇದವ್ಯಾಸರು ವಿಂಗಡಿಸಿದರು. ಹಿಂದೂ ಧರ್ಮದ ಪವಿತ್ರ ಗ್ರಂಥಗಳಾದ ವೇದಗಳು ಸಂಸ್ಕೃತ ಭಾಷೆಯಲ್ಲಿವೆ.
***
ಇದು ವೇದಶಾಲೆಯ ಗುರುಕುಲದಲ್ಲಿನ ಮಕ್ಕಳು ಕಲಿಯುತ್ತಿರುವ ಪಾಠವಲ್ಲ. ನಮ್ಮ ಜಾತ್ಯತೀತ ದೇಶದಲ್ಲಿ ಕ್ರೈಸ್ತ-ಮುಸ್ಲಿಂ-ಜೈನ-ಪಾರ್ಶಿ ಮತ್ತು ದಲಿತರ ಮಕ್ಕಳು ಹೋಗುತ್ತಿರುವ ಸರಕಾರಿ ಶಾಲಾ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಅಳವಡಿಸಿರುವ ಪಾಠ.

ಶಾಲೆಯೊಳಗೆ ಪ್ರವೇಶಿಸುವ ಮುನ್ನ ಕುವೆಂಪು ವಿರಚಿತ ನಾಡಗೀತೆಯಲ್ಲಿ ಬರುವ ‘ಸರ್ವ ಜನಾಂಗದ ಶಾಂತಿಯ ತೋಟ’ವೆಂದು ಹೇಳಿ ಜ್ಞಾನದೇಗುಲವನ್ನು ಪ್ರವೇಶಿಸುವ ಮಕ್ಕಳು ಶಾಲೆಯೊಳಗಡೆ ಮಾತ್ರ ‘ವೈದಿಕರ ಶಾಂತಿಯ ತೋಟ’ವೆಂದು ಮಾರ್ಪಡಿಸಿಕೊಳ್ಳಬೇಕಾಗಿದೆ. ‘ಗಿಡವಾಗಿ ಬಗ್ಗದಿರುವುದು ಮರವಾಗಿ ಬಗ್ಗಿತೆ’ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಬಿಜೆಪಿ ಸರಕಾರ ಭವಿಷ್ಯತ್ತಿನ ನಾಗರಿಕರನ್ನು ಎಳೆಯರಿರುವಾಗಲೆ ಮಾನಸಿಕವಾಗಿ ವಶೀಕರಣ ಮಾಡಿಕೊಳ್ಳಲು ಮುಂದಾಗಿರುವುದು 5ನೆ ಮತ್ತು 8ನೆ ಪಠ್ಯಕ್ರಮದ ಕೇಸರೀಕರಣದಿಂದ ದೃಢಪಡುತ್ತದೆ.
ಮುಸ್ಲಿಂ ಅರಸರ ಕಡೆಗಣನೆ: ಐದು ಮತ್ತು 8ನೆ ತರಗತಿಯ ಪಠ್ಯಪುಸ್ತಕಗಳಲ್ಲಿ ಹಿಂದೂ ಅರಸರನ್ನು ಹೊರತುಪಡಿಸಿ ಎಲ್ಲಿಯೂ ಮುಸ್ಲಿಂ ಅರಸರ ಆಳ್ವಿಕೆಯ ಬಗ್ಗೆ, ಅವರ ಕೊಡುಗೆಯ ಬಗ್ಗೆ ಕಲೆ, ವಾಸ್ತು ಶಿಲ್ಪಕ್ಕೆ ನೀಡಿದ ಪ್ರೋತ್ಸಾಹದ ಬಗ್ಗೆ ಮಾಹಿತಿ ಸಿಗುವುದಿಲ್ಲ. ಆದರೆ, 5ನೆ ತರಗತಿಯ ಸಮಾಜ ವಿಜ್ಞಾನದ ಪುಟ 6ರಲ್ಲಿ ಚೆನ್ನಮ್ಮ ಮತ್ತು ಹೈದರ್ ಅಲಿ ನಡುವಿನ ಯುದ್ಧದ ಬಗ್ಗೆ ಪ್ರಸ್ತಾಪ ಮಾಡುತ್ತಾ, ಶತುೃ ಹೈದರಾಲಿಗೆ ಗೆಲುವಾಯಿತು ಎಂದು ಬರೆಯುವ ಮೂಲಕ ಮುಸ್ಲಿಂ ಅರಸನನ್ನು ಆ ಎಳೆ ಕಂದಮ್ಮಗಳಿಗೆ ವೈರಿಯನ್ನಾಗಿ ಬಿಂಬಿಸಲಾಗಿದೆ. ಹೈದರಾಲಿ ಮುಸ್ಲಿಂ ಎಂಬ ಏಕೈಕ ಕಾರಣಕ್ಕಾಗಿ ಶಾಲಾ ಮಕ್ಕಳ ವೈರಿಯಾಗಬೇಕಾಗಿದೆ.

ಇದೆ ಪುಸ್ತಕದಲ್ಲಿ ಪುಟ 52, 53 ಮತ್ತು 56ಗಳನ್ನು ಹಿಂದೂ ಧಾರ್ಮಿಕ ಕ್ಷೇತ್ರಗಳ ಪ್ರಚಾರಕ್ಕೆ ಬಳಸಿರುವುದನ್ನು ಯಾರಾರೂ ಗಮನಿಸಬಹುದಾಗಿದೆ. ಪಾಠ 10ರಲ್ಲಿ ಕುಟುಂಬದ ಬಗ್ಗೆ ವಿವರಿಸುವ ಪಾಠದಲ್ಲಿ ವಾಸುದೇವ, ಕೇಶವ, ರಾಘವ, ಸೀತಾರಾಮ, ವಿಶ್ವನಾಥ, ಶಾಂತ, ಭಾಗೀರಥಿ ಎಂಬ ಹೆಸರುಗಳನ್ನು ನೋಡಿದರೆ ಇದು ಕೇವಲ ಹಿಂದೂ ಕುಟುಂಬ ಅಷ್ಟೇ ಅಲ್ಲ, ಬ್ರಾಹ್ಮಣರ ಕುಟುಂಬ ಎನ್ನುವುದು ತಿಳಿದುಬರುತ್ತದೆ.
ದ್ರಾವಿಡರ ಪ್ರಸ್ತಾಪವೆ ಇಲ್ಲ:  ಈ ದೇಶದ ಮೂಲ ಪುರುಷರು ದ್ರಾವಿಡರು, ಆರ್ಯರು ಮಧ್ಯ ಏಷ್ಯಾದಿಂದ ವಲಸೆ ಬಂದವರು ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ. ಅದು ಈ ಪಠ್ಯಕ್ರಮದ ಪ್ರಕಾರ ತಪ್ಪಾಗುತ್ತದೆ. ‘ವೇದಕಾಲದ ಭಾರತ’ ಎಂಬ ಪಾಠ 5ರಲ್ಲಿ ಆರ್ಯರು ಸಿಂಧೂ ಮತ್ತು ಸರಸ್ವತಿ ಬಯಲಿನಲ್ಲಿ ನೆಲೆಗೊಂಡಿದ್ದರು. ತಾವು ನೆಲೆಯೂರಿದ್ದ ಪ್ರದೇಶವನ್ನು ಸಪ್ತ ಸೈಂದವ ಎಂದು ಎಂದು ಕರೆಯಲಾಗುತ್ತಿತ್ತು ಎಂಬ ಒಂದು ಚರಣ ಇದೆ.
ಹೀಗೆ ಹೇಳ ಹೊರಟಿರುವ ಉದ್ದೇಶವೆಂದರೆ ಆರ್ಯರು ಹೊರಗಿನಿಂದ ಬಂದವರಲ್ಲ. ಅವರೆ ಮೂಲನಿವಾಸಿಗಳು. ಅವರು ಆಕ್ರಮಣಕಾರರಲ್ಲ. ಹೊರಗಿನಿಂದ ಬಂದ ಮುಸ್ಲಿಮರು ಆಕ್ರಮಣಕಾರರು. ಕ್ರಿಶ್ಚಿಯನ್ ಧರ್ಮ ವಿದೇಶದ್ದು ಎಂಬುದೆ ಆಗಿದೆ.
ಭಾರತದ ಸಂಸ್ಕೃತಿ ಎಂದರೆ ವೈದಿಕ ಸಂಸ್ಕೃತಿ: ಭಾರತದ ಪರಂಪರೆ ಎಂದರೆ ವೈದಿಕರ ಸಂಸ್ಕೃತಿಯೊಂದೆ ಎಂದು ಈ ಪಾಠಗಳಲ್ಲಿ ಬಿಂಬಿಸಲಾಗಿದೆ. ಭಾರತದ ಪ್ರಾರಂಭಿಕ ಕಾಲದಲ್ಲಿ ವೇದಕಾಲ ಘಟ್ಟ ಮಹತ್ವವಾದುದು. ವೇದಗಳು ಮೌಖಿಕವಾಗಿ ಮೂರು ಸಾವಿರ ವರ್ಷಗಳಿಗೂ ಹೆಚ್ಚು ಕಾಲದಿಂದ ಉಳಿದುಬಂದಿವೆ. ಬ್ರಾಹ್ಮಣ, ಸಂಹಿತಾ, ಅರಣ್ಯಕ ಮತ್ತು ಉಪನಿಷತ್ತುಗಳು ವೇದಗಳ ಅಂಗಗಳಾಗಿವೆ. ಆದರೂ ಅವುಗಳಲ್ಲಿ ಯಾವುದೆ ಮಾರ್ಪಾಟು ಆಗಿಲ್ಲ. ಇಷ್ಟೊಂದು ದೀರ್ಘಕಾಲದಿಂದ ಬದಲಾಗದೆ, ಮೌಖಿಕವಾಗಿ ಬಂದಿರುವ ಸಾಹಿತ್ಯ ಜಗತ್ತಿನಲ್ಲಿ ಬೇರೊಂದಿಲ್ಲ ಎಂದು ವರ್ಣಿಸಲಾಗಿದೆ.
ದಿಕ್ಕುತಪ್ಪಿಸುವ ನಕ್ಷೆಗಳು: 8ನೆ ತರಗತಿಯ ಸಮಾಜ ವಿಜ್ಞಾನದ ಮೊದಲ ಪುಟದಲ್ಲಿಯೆ ಅಖಂಡ ಭಾರತದ ನಕ್ಷೆಯನ್ನು ನೀಡಲಾಗಿದೆ. ಈ ನಕ್ಷೆಯ ಪಕ್ಕ ಏಕಾತ್ಮತೆಯ ಆಧಾರಗಳು ಎಂಬ ಶೀರ್ಷಿಕೆಯಲ್ಲಿ ದ್ವಾದಶ ಜೋತಿರ್ಲಿಂಗಗಳು, 51 ಶಕ್ತಿಪೀಠಗಳು, ವೈದಿಕ ಮಂತ್ರಗಳು, ಸಪ್ತ ಮೋಕ್ಷದಾಯಕ ನಗರಗಳು, ಸಪ್ತ ಕುಲಪರ್ವತಗಳು ಮತ್ತು ಸಪ್ತ ಜಾಹ್ನವಿಗಳು, ಚತುರ್ಧಾಮಗಳ ಭಾರತದ ನಕ್ಷೆಯಲಿ ಎಲ್ಲೆಲ್ಲಿ ಬರುತ್ತವೆ ಎಂದು ಗುರುತು ಹಾಕಲಾಗಿದೆ. ಪಾಕಿಸ್ತಾನ, ನೇಪಾಳ, ಬಾಂಗ್ಲಾ, ಬರ್ಮಾ ಮುಂತಾದ ದೇಶಗಳನ್ನೆಲ್ಲಾ ಒಳಗೊಂಡಿರುವ ನಕ್ಷೆಯನ್ನು ‘ಸಾಂಸ್ಕೃತಿಕ ಭಾರತ’ ಎಂದು ಕರೆಯಲಾಗಿದೆ.
ಇನ್ನೊಂದು ಪಟ್ಟಿಯಲ್ಲಿ ಭಾರತ ವರ್ಣಿಸುವ ಸಾಹಿತ್ಯ ಪಟ್ಟಿ ಎಂದು ಹೆಳೀ ವಿಷ್ಣುಪುರಾಣ, ವಾಯುಪುರಾಣ, ರಾಮಾಯಣ, ಮಹಾಭಾರತ, ಕುಲಾರ್ಣವತಂತ್ರ, ಬಾರ್ಹಸ್ವತ್ವ ಶಾಸ್ತ್ರ, ವೀರಸಾವರಕರ್ ಸಾಹಿತ್ಯ, ರಾಷ್ಟ್ರಗೀತೆಗಳನ್ನು ದಾಖಲಿಸಲಾಗಿದೆ.
ವಿದೇಶಿಯರು ಅಪರಾಧಿಗಳು: 8ನೆ ತರಗತಿಯ ‘ಪೌರ ಮತ್ತು ಪೌರತ್ವ’ ಪಾಠಕ್ಕಾಗಿ ವಿದ್ಯಾರ್ಥಿಗಳಿಗೆ ಚಟುವಟಿಕೆ ಮಾಡಿಸುವ ವಿಭಾಗದಲ್ಲಿ ‘ವಿದ್ಯಾರ್ಥಿಯು ಪೊಲೀಸ್ ಠಾಣೆಯೊಂದಕ್ಕೆ ಭೇಟಿ ನೀಡಿ ಭಾರತದಲ್ಲಿ ವಿದೇಶಿಯರು ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಹಾಗೂ ಅವರನ್ನು ಶಿಕ್ಷಿಸುವಲ್ಲಿ ಪೊಲೀಸ್ ಇಲಾಖೆಗೆ ಇರುವ ಇತಿಮಿತಿಗಳ ಬಗ್ಗೆ ಚರ್ಚಿಸಿ’ ಎಂದು ಹೇಳಲಾಗಿದೆ. ಹೀಗೆ ಚಟುವಟಿಕೆ ಮಾಡಿಸುವ ಮೂಲಕ ವಿದೇಶಿಯರು ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿಕ್ಕೆ ಭಾರತಕ್ಕೆ ಬರುತ್ತಾರೆ ಎಂಬರ್ಥವನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಕೆಲಸ ಮಾಡಲಾಗಿದೆ. ಇದೇ ಪುಟದಲ್ಲಿ ‘ಭಾರತೀಯನೊಬ್ಬ ವಿದೇಶದಲ್ಲಿ ತಾತ್ಕಾಲಿಕವಾಗಿ ನೆಲೆಸುವುದಕ್ಕಾಗಿ ಅನುಸರಿಸಬೇಕಾದ ಪ್ರಕ್ರಿಯೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಯಿಂದ ಮಾಹಿತಿ ಸಂಗ್ರಹಿಸಿ’ ಎಂದು ಮತ್ತೊಂದು ಚಟುವಟಿಕೆಯನ್ನು ನೀಡಲಾಗಿದೆ. ಈ ಮೂಲಕ ಪರೋಕ್ಷವಾಗಿ ಭಾರತೀಯರು ತಾತ್ಕಾಲಿಕವಾಗಿ ಮಾತ್ರ ವಿದೇಶದಲ್ಲಿ ನೆಲೆಸಬೇಕು ಎಂಬ ಸಂದೇಶವನ್ನು ಮಕ್ಕಳಲ್ಲಿ ಬಿತ್ತಲು ಪ್ರಯತ್ನಿಸಲಾಗಿದೆ.

ಹೀಗೆ 5 ಮತ್ತು 8ನೆಯ ತರಗತಿಯ ಸಮಾಜ ವಿಜ್ಞಾನದ ಇಡಿ ಪಠ್ಯಗಳನ್ನು ಕೇಸರೀಕರಣ, ವೈದಿಕಶಾಹಿ ಮತ್ತು ಸಾಮ್ರಾಜ್ಯಶಾಹಿ ಮೌಲ್ಯಗಳನ್ನು ಬಿತ್ತಲು ಬಳಸಿಕೊಳ್ಳಲಾಗಿದೆ. ಬಸವ, ಅಲ್ಲಮ, ಕನಕದಾಸ, ಅಂಬೇಡ್ಕರ್, ಶರೀಫ, ಕುವೆಂಪು ಅವರಂತಹ ಚಿಂತಕರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡದೆ ನಿರ್ಲಕ್ಷಿಸಲಾಗಿದೆ. ನಾಡಿನ ಪ್ರಗತಿಪರರು, ಚಿಂತಕರು, ಸಾಹಿತಿಗಳು. ಬುದ್ಧಿಜೀವಿಗಳು ಇದರ ಬಗ್ಗೆ ಬೇಗ ಎಚ್ಚೆತ್ತುಕೊಂಡು ಜನರನ್ನು ಎಚ್ಚರಿಸುವ ಮೂಲಕ ಈ ಪಠ್ಯಕ್ರಮದ ವಿರುದ್ಧ ಜನಜಾಗೃತಿ ಮೂಡಿಸಬೇಕಿದೆ.
ಒಂದು ಕಡೆ ಸರಕಾರಿ ಇಲಾಖೆಗಳಿಂದಲೆ ಭಗವದ್ಗೀತಾ ಅಭಿಯಾನ, ಮತಾಂತರ ಹಾಗೂ ಗೋಹತ್ಯೆಯ ವಿರುದ್ಧ ಶಾಲಾ ಕಾಲೇಜುಗಳಲ್ಲಿ ಸರಕಾರಿ ಪ್ರಾಯೋಜಿತ ಅಭಿಯಾನಗಳು ನಡೆಸುವ ಅಲ್ಪಾವಧಿ ಕಾರ್ಯಕ್ರಮಗಳನ್ನು, ಇನ್ನೊಂದು ಕಡೆ ಪಠ್ಯಕ್ರಮದಲ್ಲಿ ಕೇಸರಿಕರಣ ತುರುಕುವ ಧೀರ್ಘಾವದಿ ಯೋಜನೆ ಹಾಕಿಕೊಂಡು ಭವಿಷ್ಯದ ಭಾರತವನ್ನೆ ವೈದಿಕ ಭಾರತವನ್ನಾಗಿ ಮಾಡಲು ಬಿಜೆಪಿ ಮುಂದಾಗಿದೆ.  ವಾರ್ತಾಭಾರತಿ

Advertisement

0 comments:

Post a Comment

 
Top