ಇದೇ ಫೆ. ೧೯ ರಿಂದ ಮೊದಲ ಹಂತದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ೫ ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮನವಿ ಮಾಡಿದ್ದಾರೆ.
ಇಂದಿನ ಮಕ್ಕಳೆ ಮುಂದಿನ ಭವ್ಯ ದೇಶದ ಪ್ರಜೆಗಳು, ಈ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಂಡು, ದೇಶಕ್ಕೆ ಉತ್ತಮ ಆರೋಗ್ಯವಂತ ಪ್ರಜೆಗಳನ್ನು ನೀಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಮಕ್ಕಳು ಆರೋಗ್ಯವಾಗಿ ಸದೃಢರಾಗಲು, ಆ ಮಕ್ಕಳಿಗೆ ಎರಡು ಹನಿ ಪಲ್ಸ್ ಪೋಲಿಯೋ ಲಸಿಕೆ ತಪ್ಪದೆ ಹಾಕಿಸಬೇಕು. ಈ ಎರಡು ಹನಿ ಲಸಿಕೆಯು ಮಕ್ಕಳನ್ನು ಅಂಗವೈಕಲ್ಯಕ್ಕೆ ದೂಡುವ ಪೋಲಿಯೋ ರೋಗ ಬಾರದಂತೆ ತಡೆಯಲಿದೆ. ಜಿಲ್ಲೆಯ ಎಲ್ಲ ಪಾಲಕರು, ಪೋಷಕರು ತಮ್ಮ ೦೫ ವರ್ಷದೊಳಗಿನ ಮಕ್ಕಳನ್ನು ಸಮೀಪದ ಲಸಿಕಾ ಕೇಂದ್ರಗಳಿಗೆ (ಪೋಲಿಯೋ ಬೂತ್ಸ್) ಕರೆದುಕೊಂಡು ಬಂದು ತಪ್ಪದೆ ಲಸಿಕೆ ಹಾಕಿಸಬೇಕು. ಈ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಫೆ. ೧೯ ರಿಂದ ೨೨ ರವರೆಗೆ ನಡೆಯಲಿದೆ. ಫೆ. ೧೯ ರಂದು ಲಸಿಕಾ ಕೇಂದ್ರಗಳಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು, ಫೆ. ೨೦ ರಿಂದ ೨೨ ರವರೆಗೆ ಮನೆ-ಮನೆಗೆ ಭೇಟಿ ನೀಡಿ, ಉಳಿದ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವುದು. ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲಾ ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳಲ್ಲಿ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸಲಿದ್ದು, ಯಾವುದೇ ಮಕ್ಕಳು ಪೋಲಿಯೋ ಹನಿಯಿಂದ ಹೊರಗುಳಿಯದಂತೆ ಸಂತೆ, ಜಾತ್ರೆ, ಇಟ್ಟಂಗಿ ಭಟ್ಟಿಗಳು ಮುಂತಾದೆಡೆಗಳಲ್ಲೂ ಸಹ ಸಂಚರಿಸಿ ಪೋಲಿಯೋ ಹನಿ ಹಾಕಲು ವ್ಯವಸ್ಥೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೧೯೧೧೪೩ ಮಕ್ಕಳಿಗೆ ಪೋಲಿಯೋ ಹನಿ ನೀಡುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು ೮೩೮ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಶಿಕ್ಷಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪುಗಳು, ಲಯನ್ಸ್, ರೋಟರಿ, ಇನ್ನರ್ ವ್ಹೀಲ್ ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿ ಈ ರಾಷ್ಟ್ರೀಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮನವಿ ಮಾಡಿಕೊಂಡಿದ್ದಾರೆ.
0 comments:
Post a Comment