PLEASE LOGIN TO KANNADANET.COM FOR REGULAR NEWS-UPDATES


ಭಾರತದ ೬೩ನೇ ಗಣರಾಜ್ಯೋತ್ಸವದ ಅಂಗವಾಗಿ   ಲಕ್ಷ್ಮಣ ಎಸ್ ಸವದಿ, ಮಾನ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ, ಇವರು ದಿನಾಂಕ: ೨೬.೦೧.೨೦೧೨ ರಂದು ಗುರುವಾರ ಸಾರ್ವಜನಿಕರನ್ನು ಉದ್ದೇಶಿಸಿ ನೀಡಿದ ಸಂದೇಶ.
ಕೊಪ್ಪಳ ಜಿಲ್ಲೆಯ ಸಮಸ್ತ ನಾಗರೀಕ ಬಂಧುಗಳೇ, ಚುನಾಯಿತ ಪ್ರತಿನಿಧಿಗಳೇ ಹಾಗೂ ಮಾಧ್ಯಮದ ಮಿತ್ರರೇ, ಸ್ವತಂತ್ರ ಭಾರತವು ಗಣರಾಜ್ಯವಾಗಿ ೬೨ ವರ್ಷಗಳು ತುಂಬಿ ೬೩ನೇ ಗಣರಾಜ್ಯೋತ್ಸವವನ್ನು ಇಂದು ಆಚರಿಸುತ್ತಿದ್ದೇವೆ. ಈ ಶುಭ ದಿನದಂದು ರಾಷ್ಟ್ರ ಧ್ವಜಾರೋಹಣ ನೆರೆವೇರಿಸಿ ತಮ್ಮೆಲ್ಲರನ್ನು ಉದ್ದೇಶಿಸಿ ಮಾತನಾಡುವ ಸದವಕಾಶ ನನಗೆ ದೊರಕಿರುವುದು ಅತ್ಯಂತ ಸಂತೋಷವನ್ನು ಉಂಟು ಮಾಡಿದೆ. 
ಈ ಸಂದರ್ಭದಲ್ಲಿ ತಮಗೆಲ್ಲಾ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ.
       ನಮ್ಮ ದೇಶ ೧೯೪೭ ಅಗಸ್ಟ್ ೧೫ ರಂದು ಸ್ವಾತಂತ್ರ್ಯ ಪಡೆಯಿತು. ಭಾರತೀಯರಿಗೆ ಸ್ವಾತಂತ್ರ್ಯದ ಸದುಪಯೋಗ ಹೇಗೆ ಮಾಡಿಕೊಳ್ಳಬೇಕು ಎಂಬುದು ಒಂದು ದೊಡ್ಡ ಸವಾಲಾಗಿತ್ತು. ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಲು ಸಂವಿಧಾನ ರಚನಾ ಸಮಿತಿ ರಚನೆಯಾಯಿತು. ಈ ಸಮಿತಿಯು ಜಗತ್ತಿನ ಸಂವಿಧಾನಗಳನ್ನೆಲ್ಲ ಅಮೂಲಾಗ್ರವಾಗಿ ಪರಿಶೀಲಿಸಿ ಅಲ್ಲಿರುವ ಉತ್ತಮತೆಯನ್ನು ಬಳಸಿಕೊಂಡು ನಮ್ಮದೇ ಆದ, ನಮ್ಮ ಜನತೆಗೆ ಒಗ್ಗುವ ಸಂವಿಧಾನ ರೂಪಗೊಂಡಿತು. ಸಂವಿಧಾನಕ್ಕೆ ರೂಪ ತಂದ ರೂವಾರಿ ಡಾ: ಬಿ.ಆರ್.ಅಂಬೇಡ್ಕರ ರವರು.  ಇವರು ಸಂವಿಧಾನ ರಚಿಸಿ ಭಾರತೀಯರ ಜನಮಾನಸದಲ್ಲಿ ಅಜರಾಮರವಾಗಿ ಉಳಿದಿದ್ದಾರೆ.  ಭಾರತ ಪ್ರಜಾಪ್ರಭುತ್ವ ಇಡೀ ಜಗತ್ತಿಗೆ ಮಾದರಿ ಎನಿಸಿದೆ. ಎಂತಹ ಸವಾಲುಗಳು ಬಂದರೂ ಅವುಗಳನ್ನು ಎದುರಿಸಿ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯ ನೆಲೆಗಟ್ಟು ಅಲುಗಾಡದೆ ಗಟ್ಟಿಯಾಗಿ ನಿಂತಿದೆ.
  ಭಾರತದ ಸಂವಿಧಾನ ಜಗತ್ತಿನ ಸಂವಿಧಾನಗಳಲ್ಲಿಯೇ ಉತ್ಕೃಷ್ಠ ಸಂವಿಧಾನವಾಗಿದೆ. ಸ್ವತಂತ್ರ ಭಾರತದ ಜನತೆಗೆ ೧೯೫೦ನೇ ಜನೇವರಿ ೨೬ರಂದು ಎಲ್ಲರಿಗೂ ಒಪ್ಪಿಗೆಯಾಗುವಂತಹ ಸಂವಿಧಾನ ಜಾರಿಗೆ ಬಂದು ನಮಗೆಲ್ಲ ಸಂತೋಷ ತಂದಿದೆ. ಅಂದಿನಿಂದ ಭಾರತೀಯರೆಲ್ಲ ಸರ್ವತಂತ್ರ ಸ್ವತಂತ್ರ ಗಣರಾಜ್ಯದಲ್ಲಿ ಬದುಕುವಂತಾಯಿತು. ನಮ್ಮ ಸಂವಿಧಾನ ಕೊಡಮಾಡಿದ ಹಕ್ಕು ಮತ್ತು ಕರ್ತವ್ಯಗಳ ಪ್ರಜ್ಞೆ  ಭಾರತೀಯ ಜನತೆಗೆ ಮಾರ್ಗಸೂಚಿಯಾಗಿದೆ.  ದೇಶ ನನಗಾಗಿ ಏನು ಕೊಟ್ಟಿದೆ ದೇಶಕ್ಕಾಗಿ ನಾನೇನು ಕೊಡಬಲ್ಲೇ  ಎಂಬುದರ ಅರಿವು ಪ್ರತಿಯೊಬ್ಬರಲ್ಲಿ ಇದೆ. ಸಂವಿಧಾನ ಜಾರಿಗೆ ಬಂದ ನಂತರ ಸ್ವಾತಂತ್ರ್ಯ ಪೂರ್ವದಲ್ಲಿದ್ದ ಎಷ್ಟೋ ಸಮಸ್ಯೆಗಳು ಬಗೆ ಹರಿದಿವೆ. ಮನುಷ್ಯ ಮನುಷ್ಯರನ್ನು ಪರಸ್ಪರ ಗೌರವಿಸುವ, ಅರ್ಥಮಾಡಿಕೊಳ್ಳುವ, ವಿವಿಧತೆಯಲ್ಲಿ ಏಕತೆ ಕಾಣುವ ಸಂಸ್ಕೃತಿ ನಮ್ಮದು. ಭಾರತ ದೇಶ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧs, ಸಿಖ್ ಮುಂತಾದ ಧರ್ಮಗಳ ಸಂಗಮವಾಗಿರುವ ಪುಣ್ಯ ಭೂಮಿ. ಇಂತಹ ಭೂಮಿಯಲ್ಲಿ ನಾವಿಂದು ಬಡತನ ಅನಕ್ಷರತೆ, ಜಾತೀಯತೆ, ಪ್ರಾಂತಿಯತೆಯ ಹಿಡಿತದಲ್ಲಿ ಸಿಕ್ಕು ನರಳುತ್ತಿದ್ದೇವೆ. ರಾಷ್ಟ್ರದ ಭಾವೈಕ್ಯತೆಗಾಗಿ ಕೋಮುಸೌಹಾರ್ದತೆಗಾಗಿ ಕಂಕಣಬದ್ಧರಾಬೇಕಿದೆ. ಅದಕ್ಕಾಗಿ ನಾವೆಲ್ಲ ಇಂದು ಪ್ರತಿಜ್ಞೆ ಮಾಡೋಣ. ನಮ್ಮ ಹಿರಿಯರು ತ್ಯಾಗ ಬಲಿದಾನಗಳಿಂದ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಮತ್ತು ಪವಿತ್ರ ಸಂವಿಧಾನವನ್ನು ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.
ಭಾರತದ ಸಂವಿಧಾನಗಳ ಆಶೋತ್ತರಗಳಿಗೆ ಬದ್ಧರಾಗಿ ಅಭಿವೃದ್ಧಿಯ ಸಂಕಲ್ಪ ಮಾಡಿರುವ ನಮ್ಮ ಸರ್ಕಾರವು ಕಳೆದ ಮೂರೂವರೆ ವರ್ಷಗಳಿಂದ ಅಭಿವೃದ್ಧಿ ಪಥವನ್ನು ಕರ್ನಾಟಕ ರಾಜ್ಯದಲ್ಲಿ ನಿರ್ಮಿಸುತ್ತಾ ಮುನ್ನಡೆದಿದೆ.
ನಮ್ಮ ಸರ್ಕಾರವು ಶಕ್ತಿಶಾಲಿ ಮತ್ತು ಸಮೃದ್ಧ ಕರ್ನಾಟಕವನ್ನು ನಿರ್ಮಿಸುವ ಪಣತೊಟ್ಟು ಹಲವು ಹತ್ತು ಜನಪ್ರಿಯ ಯೋಜನೆಗಳನ್ನು ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ, ಹಿಂದುಳಿದ ವರ್ಗಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ರೂಪಿಸಿ ಯಶಸ್ವಿಯಾಗಿ ಜಾರಿಗೊಳಿಸಿದೆ.
ಇಡೀ ರಾಷ್ಟ್ರದಲ್ಲಿ ಮೊಟ್ಟ ಮೊದಲ ಬಾರಿಗೆ ರೈತರಿಗೆ ಶೆ. ೧ ರ ಬಡ್ಡಿದರದಲ್ಲಿ ಬೆಳೆ ಸಾಲ ನೀಡಿದ ಕೀರ್ತಿ ನಮ್ಮ ರಾಜ್ಯಕ್ಕೆ ಸಲ್ಲುತ್ತದೆ
ಈ ಸಾಲಿನಲ್ಲಿ ಕಳೆದ ಡಿಸೆಂಬರ್ ಅಂತ್ಯಕ್ಕೆ ೧೧೭೪೫೧೩ ರೈತರಿಗೆ ೪೩೮೦ ಕೋಟಿ ರೂ. ಗಳ ಬೆಳೆ ಸಾಲ ವಿತರಣೆ ಮಾಡಲಾಗಿದೆ.
ಬಾಡಿಗೆ ಆಧಾರಿತ ಸೇವಾ ಕೇಂದ್ರಗಳ ಸ್ಥಾಪನೆ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ, ರಾಜ್ಯದಲ್ಲಿ ೬೬೦ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ೩೩ ಕೋಟಿ ರೂ. ವೆಚ್ಚದಲ್ಲಿ ಟ್ರಾಕ್ಟರ್‌ಗಳು, ರೋಟೋವೇಟರ್‌ಗಳು ಹಾಗೂ ಮಲ್ಟಿ ಕ್ರಾಫ್ ಥ್ರೆಷರ್‌ಗಳನ್ನು ಒದಗಿಸಲಾಗಿದೆ.
೬ ಲಕ್ಷ ಹಾಲು ಉತ್ಪಾದಕರಿಗೆ ಪ್ರತಿ ಲೀ. ಗೆ ರೂ. ೨ ರಂತೆ ಪ್ರೋತ್ಸಾಹಧನ ಕಳೆದ ೩ ವರ್ಷಗಳಿಂದ ಸರ್ಕಾರ ೭೯೦ ಕೋಟಿ ರೂ. ಬಿಡುಗಡೆ ಮಾಡಿದೆ.
ಕೃಷಿ ಉತ್ಪನ್ನಗಳ ಬೆಲೆ ಕುಸಿತಗೊಂಡಾಗ ರೈತರ ಹಿತರಕ್ಷಣೆಗಾಗಿ ಕಳೆದ ಮೂರು ವರ್ಷಗಳಲ್ಲಿ ೫೧೫. ೮ ಕೋಟಿ ರೂ.ಗಳನ್ನು ಆವರ್ತನಿಧಿಯಿಂದ ಬಿಡುಗಡೆ ಮಾಡಿ ಬೆಂಬಲ ಬೆಲೆಗೆ ರೈತರಿಂದ ವಿವಿಧ ಉತ್ಪನ್ನಗಳನ್ನು ಖರೀದಿಸಲಾಗಿದೆ.
ಪ್ರಸ್ತುತ ಸಾಲಿನಲ್ಲಿ ಭತ್ತ ಬೆಲೆ ಕುಸಿತ ಕಂಡಾಗ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ ರೂ. ೨೫೦ ಗಳ ಪ್ರೋತ್ಸಾಹ ಧನವನ್ನು ಕಳೆದ ಡಿಸೆಂಬರ್ ಮಾಹೆಯಲ್ಲಿ ಘೋಷಿಸಲಾಗಿದೆ.
ಅದೇ ರೀತಿ ಈರುಳ್ಳಿಯನ್ನು ಕ್ವಿಂಟಾಲ್‌ಗೆ ಕ್ರಮವಾಗಿ ರೂ. ೭೬೦, ರೂ. ೫೬೦ ಮತ್ತು ರೂ. ೩೬೦ ರಂತೆ ಖರೀದಿಸುವ ಮೂಲಕ ಸರ್ಕಾರ ರೈತರ ಸಹಾಯಕ್ಕೆ ಬಂದಿದೆ.
ತೊಗರಿಯನ್ನು ಸಹ ಪ್ರತಿ ಕ್ವಿಂಟಾಲ್‌ಗೆ ರೂ. ೪೦೦೦ ದರದಲ್ಲಿ ಆವರ್ತನಿಧಿಯಿಂದ ತೊಗರಿ ಮಂಡಳಿ ಮೂಲಕ ಖರೀದಿಸಲು ನಿರ್ಧರಿಸಲಾಗಿದೆ.
ರಾಜ್ಯದ ಗಡಿ ಪ್ರದೇಶಗಳ ಮಾರುಕಟ್ಟೆಗಳಲ್ಲಿ ಒಣದ್ರಾಕ್ಷಿಯ ವಹಿವಾಟು ಹೆಚ್ಚಿಸುವ ಉದ್ದೇಶದಿಂದ ಅದಕ್ಕೆ ವಿಧಿಸುತ್ತಿದ್ದ ಮಾರುಕಟ್ಟೆ ಶುಲ್ಕವನ್ನು ಶೇ. ೧. ೫೦ ರಿಂದ ೦. ೧೦ ಕ್ಕೆ ಇಳಿಸಲಾಗಿದೆ.  ದ್ರಾಕ್ಷಿ ಉತ್ಪನ್ನದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ. ೧೪ ರಿಂದ ಶೇ. ೨ಕ್ಕೆ ಇಳಿಸಲಾಗಿದೆ.
ಹತ್ತಿ ಉತ್ಪನ್ನಕ್ಕೆ ವಿಧಿಸಲಾಗುತ್ತಿದ್ದ ಮೌಲ್ಯವರ್ಧಿತ ತೆರಿಗೆಯನ್ನು ಶೇ. ೫ ರಿಂದ ಶೇ. ೨ ಕ್ಕೆ ಇಳಿಸುವ ಕುರಿತು ಮಾನ್ಯ ಮುಖ್ಯಮಂತ್ರಿಯವರು ತಾತ್ವಿಕ ಒಪ್ಪಿಗೆ ನೀಡಿರುತ್ತಾರೆ.
ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಅನುಕೂಲಕ್ಕಾಗಿ ನೇಮಿಸಿರುವ ಗ್ರಾಮೀಣ ಗೋದಾಮುಗಳನ್ನು ನಿರ್ವಹಿಸಲು ಆಯಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಗಗಳಿಗೆ ವಹಿಸಲು ಆದೆಶ ಹೊರಡಿಸಲಾಗಿದೆ.
ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕೊಪ್ಪಳ ನಗರಕ್ಕೆ ಸಂಚಾರ ಪೊಲೀಸ್ ಠಾಣೆಯನ್ನು ನಮ್ಮ ಸರ್ಕಾರ ಮಂಜೂರು ಮಾಡಿದ್ದು, ಶೀಘ್ರದಲ್ಲಿ ನಗರದಲ್ಲಿ ಸಂಚಾರ ಪೊಲೀಸ್ ಠಾಣೆ ಕಾರ್ಯಾರಂಭ ಮಾಡಲಿದೆ.
ಕಳೆದ ತಿಂಗಳು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಜರುಗಿದ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯದ್ಭುತ ಯಶಸ್ಸನ್ನು ಕಂಡಿದ್ದು, ಇಡೀ ನಾಡಿನಲ್ಲಿ ಕೊಪ್ಪಳ ಜಿಲ್ಲೆಯ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದೆ.  ಈ ಸಮ್ಮೇಳನದ ಯಶಸ್ವಿಗಾಗಿ ದುಡಿದ ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ, ಕನ್ನಡ ಪ್ರೇಮಿಗಳಿಗೆ, ಸಾಹಿತ್ಯ ಪ್ರೇಮಿಗಳಿಗೆ, ಎಲ್ಲ ಅಧಿಕಾರಿಗಳಿಗೆ, ಮಾಧ್ಯಮದವರಿಗೆ, ಹಾಗೂ ಎಲ್ಲ ಜನತೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಇಡೀ ರಾಜ್ಯ ಈಗ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ.  ಬರದ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ನಮ್ಮ ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.  ಜನರಿಗೆ ಕುಡಿಯುವ ನೀರು, ದುಡಿಯುವ ಕೈಗಳಿಗೆ ಕೆಲಸ, ಜಾನುವಾರುಗಳಿಗೆ ಸಮರ್ಪಕ ಮೇವು ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡಿದೆ.
ಜಿಲ್ಲೆಯ ಯಾವುದೇ ಭಾಗದ ಜಾನುವಾರುಗಳು ಮೇವಿನ ತೊಂದರೆ ಅನುಭವಿಸದಂತೆ ಮಾಡಲು ಈಗಾಗಲೆ ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ, ಕೊಪ್ಪಳ ತಾಲೂಕಿನ ಮೈನಳ್ಳಿ, ಕುಷ್ಟಗಿ ತಾಲೂಕಿನ ಕಲಕೇರಿ ಹಾಗೂ ಯಲಬುರ್ಗಾ ತಾಲೂಕಿನ ಕುಕನೂರಿನಲ್ಲಿ ತಲಾ ಒಂದು ಗೋಶಾಲೆಯನ್ನು ಪ್ರಾರಂಭಿಸಿ, ಇದಕ್ಕಾಗಿ ಸುಮಾರು ೩೪ ಲಕ್ಷ ರೂ.ಗಳನ್ನು ಜಿಲ್ಲೆಗೆ ಬಿಡುಗಡೆ ಮಾಡಿದೆ.  ಸದ್ಯಕ್ಕೆ ಜಿಲ್ಲೆಯ ಜಾನುವಾರುಗಳಿಗೆ ಅಗತ್ಯವಿರುವ ಮೇವಿನ ದಾಸ್ತಾನು ಇನ್ನೂ ೮ ವಾರಗಳಿಗೆ ಆಗುವಷ್ಟಿದ್ದು, ಸದ್ಯ ಮೇವಿನ ಕೊರತೆ ಇಲ್ಲ.
ಕಳೆದ ಮೂರು ವರ್ಷಗಳ ಹಿಂದೆ ಸಂಭವಿಸಿದ ನೆರೆಯ ಪ್ರಕೋಪಕ್ಕೆ ಸಿಲುಕಿ ತೊಂದರೆ ಅನುಭವಿಸಿದ ಸಂತ್ರಸ್ಥರಿಗಾಗಿ ಆಸರೆ ಯೋಜನೆಯಡಿ ಸುಮಾರು ೨೧೨೩ ಮನೆಗಳನ್ನು ನಿರ್ಮಿಸಿ, ಈಗಾಗಲೆ ಫಲಾನುಭವಿಗಳಿಗೆ ವಿತರಿಸಲಾಗಿದೆ.  ನರೇಗಲ್ ಗ್ರಾಮದಲ್ಲಿ ೪೨೮ ಮನೆಗಳ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದ್ದು, ಉಳಿದ ಎಲ್ಲ ಮನೆಗಳನ್ನು ಫೆಬ್ರವರಿ ತಿಂಗಳ ಅಂತ್ಯದೊಳಗೆ ವಿತರಿಸಲಾಗುವುದು.
ಇಟಗಿ ಉತ್ಸವವನ್ನು ಸರ್ಕಾರದ ವತಿಯಿಂದ ಆಚರಿಸಬೇಕೆನ್ನುವ ಈ ಭಾಗದ ಜನರ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದ್ದು, ೧೫ ಲಕ್ಷ ರೂ. ವೆಚ್ಚದಲ್ಲಿ ಕಳೆದ ಡಿ. ೨೩, ೨೪ ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗಿದೆ.  
ಯಲಬುರ್ಗಾ ತಾಲೂಕು ಮಂಗಳೂರು ಮತ್ತು ಕುಕನೂರು ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಸುಮಾರು ೪ ಕೋಟಿ ರೂ.ಗಳ ವೆಚ್ಚದಲ್ಲಿ ೩೦ ಹಾಸಿಗೆಗಳ ನೂತನ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡವನ್ನು ಸಾರ್ವಜನಿಕರ ಸೇವೆಗೆ ಅರ್ಪಿಸಲಾಗಿದೆ.
ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಯೋಜನೆಯಡಿ ಮುದಗಲ್-ತಾವರಗೇರಾ- ೩೦ಕಿ.ಮೀ., ತಾವರಗೇರಾ-ಗಂಗಾವತಿ- ೪೯ ಕಿ.ಮೀ. ಸೇರಿದಂತೆ ಒಟ್ಟು ೭೯ ಕಿ.ಮೀ. ರಸ್ತೆಯನ್ನು ೧೫೨ ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ನಬಾರ್ಡ್ ರಸ್ತೆಗಳಲ್ಲಿ ಒಟ್ಟು ೧೯ ಕಾಮಗಾರಿಗಳಿಗೆ ೬೬೫ ಲಕ್ಷ, ಕೇಂದ್ರ ರಸ್ತೆ ನಿಧಿಯಡಿ ೧೨ ಕಾಮಗಾರಿಗಳಿಗೆ ೬೧೯ ಲಕ್ಷ, ಇತರೆ ರಸ್ತೆ ನಿರ್ಮಾಣದ ೪೯ ಕಾಮಗಾರಿಗಳಿಗೆ ೧೮೯. ೦೫ ಲಕ್ಷ, ಸುವರ್ಣ ರಸ್ತೆ ಯೋಜನೆಯ ೧೨ ಕಾಮಗಾರಿಗಳಿಗೆ ೧೬೮. ೫೮ ಲಕ್ಷ, ಎಸ್.ಸಿ.ಎಸ್.ಪಿ. ಯೋಜನೆಯ ೨೫ ಕಾಮಗಾರಿಗಳಿಗೆ ೧೮೯. ೬೦ ಲಕ್ಷ, ನಂಜುಂಡಪ್ಪ ವರದಿ ಆಧಾರದಲ್ಲಿ ೨೬ ಕಾಮಗಾರಿಗಳಿಗೆ ೬೪೨. ೧೧ ಲಕ್ಷ ರೂ., ರಾಜ್ಯ ಹೆದ್ದಾರಿ ನವೀಕರಣದ ೧೮ ಕಾಮಗಾರಿಗಳಿಗೆ ೩೬೦. ೮೨ ಲಕ್ಷ ರೂ.ಗಳ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿದ ಸುವರ್ಣ ಭೂಮಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ೨೩೭೫೪ ರೈತರಿಗೆ ಸವಲತ್ತು ಒದಗಿಸುವ ಗುರಿ ಹೊಂದಲಾಗಿದ್ದು, ಈಗಾಗಲೆ ಸಾವಯವ ಕೃಷಿ ಚಟುವಟಿಕೆಗಾಗಿ ೧೩೮೭ ರೈತರಿಗೆ ೬೬. ೯೬ ಲಕ್ಷ ರೂ., ಹಾಗೂ ವಿವಿಧ ಕೃಷಿ ಚಟುವಟಿಕೆಗಾಗಿ ೯೮೮೬ ರೈತರಿಗೆ ೪೬೭. ೨೨ ಲಕ್ಷ ರೂ.ಗಳ ಸಹಾಯಧನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ೨೦೧೧-೧೨ ನೇ ಸಾಲಿಗೆ ೧೯೯೧೮೦ ಉದ್ಯೋಗ ಚೀಟಿಗಳನ್ನು ನವೀಕರಿಸಲಾಗಿದ್ದು, ಜಿಲ್ಲೆಗೆ ರೂ. ೬೦. ೩೯ ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ.  ಕಳೆದ ತಿಂಗಳ ಅಂತ್ಯದವರೆಗೆ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ೧೧,೫೩,೫೭೨ ಮಾನವ ದಿನಗಳನ್ನು ಸೃಜಿಸಲಾಗಿದ್ದು, ೪೩೭೬. ೫೦ ಲಕ್ಷ ರೂ.ಗಳ ಅನುದಾನ ಬಳಕೆ ಮಾಡಲಾಗಿದೆ.  ಬರಪರಿಸ್ಥಿತಿಯಲ್ಲಿ ಜನರು ಗುಳೆ ಹೋಗುವುದನ್ನು ತಪ್ಪಿಸಲು ಈ ಯೋಜನೆಯಡಿ ನೊಂದಣಿಯಾದ ಕೂಲಿಕಾರ್ಮಿಕರಿಗೆ ಹೆಚ್ಚುವರಿ ಉದ್ಯೋಗ ನೀಡಲು ೫೨೮೫. ೩೨ ಲಕ್ಷ ರೂ.ಗಳ ವಿಶೇಷ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.
ಮುಖ್ಯಮಂತ್ರಿಗಳ ಗ್ರಾಮ ಸಡಕ್ ಯೋಜನೆಯಡಿ ಪ್ರಸಕ್ತ ಸಾಲಿಗೆ ೪೭೩. ೫೩ ಲಕ್ಷ ರೂ. ಅನುದಾನ ನಿಗದಿಯಾಗಿದ್ದು, ಈಗಾಗಲೆ ಸರ್ಕಾರ ೨೩೬. ೭೬ ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ.  ಈ ಯೋಜನೆಯಡಿ ೨೯ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಸ್ವರ್ಣ ಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆಯಡಿ ಸರ್ಕಾರ ೨೪೫ ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ೨೦ ಗುಂಪು ಹಾಗೂ ೫ ವಯಕ್ತಿಕ ಗುರಿ ಸಾಧನೆ ಮಾಡಿ, ಮೂಲಭೂತ ಸೌಕರ್ಯ, ತರಬೇತಿ ವಲಯಗಳು ಸೇರಿದಂತೆ ಒಟ್ಟು ೧೦೭. ೫೦ ಲಕ್ಷ ರೂ. ವೆಚ್ಚ ಮಾಡಲಾಗಿದೆ.
ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ೫೮ ಗ್ರಾಮ ಪಂಚಾಯತಿಗಳನ್ನು ನಿರ್ಮಲ ಗ್ರಾಮ ಪುರಸ್ಕಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.  ೬೭೦ ಶಾಲಾ ಶೌಚಾಲಯ, ೭೮೭ ಅಂಗನವಾಡಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.  ಬಿ.ಪಿ.ಎಲ್. ಫಲಾನುಭವಿಗಳಿಗೆ ಸರ್ಕಾರದಿಂದ ನೀಡುವ ಸಹಾಯಧನ ಮೊತ್ತವನ್ನು ರೂ. ೩೦೦೦ ದಿಂದ ರೂ. ೩೭೦೦ ಕ್ಕೆ ಹೆಚ್ಚಿಸಲಾಗಿದ್ದು, ೫೧೨೫೨ ವಯಕ್ತಿಕ ಶೌಚಾಲಯ ನಿರ್ಮಿಸಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಜಿಲ್ಲೆಗೆ ೧೧೧. ೮೧ ಕೋಟಿ ರೂ. ವಾರ್ಷಿಕ ಕ್ರಿಯಾ ಯೋಜನೆಯಡಿ ೬೧೨ ಕಾಮಗಾರಿಗಳು ಮಂಜೂರಾಗಿದ್ದು, ೩೨೯ ಹೊಸ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ.  ೨೮೩ ಮುಂದುವರೆದ ಕಾಮಗಾರಿಗಳಲ್ಲಿ ೧೫೫ ಕಾಮಗಾರಿಗಳು ಪೂರ್ಣಗೊಂಡಿವೆ.  ಬರ ಪರಿಸ್ಥಿತಿಯನ್ನು ಎದುರಿಸಲು ಗ್ರಾಮೀಣ ಪ್ರದೇಶಗಳಲ್ಲಿ ಜನವರಿ ಯಿಂದ ಜೂನ್ ವರೆಗೆ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಕ್ರಮ ಕೈಗೊಳ್ಳಲು ಒಟ್ಟು ೭೨೭ ಕಾಮಗಾರಿಗಳನ್ನು ಗುರುತಿಸಿ, ಇದಕ್ಕೆ ೯೭೪. ೧೦ ಲಕ್ಷ ರೂ.ಗಳ ವಿಶೇಷ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.  ತೀವ್ರ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳನ್ನು ಗುರುತಿಸಿ ಅಲ್ಲಿ, ಕೊಳವೆ ಬಾವಿ ಕೊರೆಸಲು ರೂ. ೧೨೧. ೫೦ ಲಕ್ಷ ರೂ.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.
ಸುವರ್ಣ ಗ್ರಾಮೋದಯ ಯೋಜನೆಯಡಿ ಜಿಲ್ಲೆಯಲ್ಲಿ ೧ ರಿಂದ ೪ ನೇ ಹಂತಕ್ಕೆ ಸೇರಿ ಒಟ್ಟು ೧೪೯ ಗ್ರಾಮಗಳು ಯೋಜನೆಗೆ ಆಯ್ಕೆಯಾಗಿವೆ.  ಸರ್ಕಾರ ಈಗಾಗಲೆ ವಿವಿಧ ಹಂತಗಳ ಯೋಜನೆಗೆ ೬೭. ೩೬ ಕೋಟಿ ರೂ. ಬಿಡುಗಡೆ ಮಾಡಿದೆ.  ೧ ಮತ್ತು೨ ನೇ ಹಂತದಲ್ಲಿ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು, ೩ ಮತ್ತು ೪ ನೇ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ.
ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ೪೬೮೭ ಮನೆಗಳು ಮಂಜೂರಾಗಿದ್ದು, ಫಲಾನುಭವಿಗಳ ಆಯ್ಕೆ ಗ್ರಾಮ ಪಂಚಾಯತಿ ಹಂತದಲ್ಲಿ ಪ್ರಗತಿಯಲ್ಲಿವೆ.  ಬಸವ ಇಂದಿರಾ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ೨೦೦೦ ಮನೆಗಳನ್ನು ಮಂಜೂರು ಮಾಡಲಾಗಿದೆ.  ಅಂಬೇಡ್ಕರ್ ವಸತಿ ಯೋಜನೆಯಡಿ ೫೩೯ ಮನೆಗಳು ಮಂಜೂರಾಗಿವೆ.  ೧೧೭೫೦ ವಸತಿ ರಹಿತರಿಗೆ ನಿವೇಶನ ಹಂಚುವ ಗುರಿ ಹೊಂದಲಾಗಿದ್ದು, ೧೩೩ ವಸತಿ ರಹಿತರಿಗೆ ನಿವೇಶನ ಹಂಚಲಾಗಿದೆ.  ಉಳಿದ ೨೪೫೬ ನಿವೇಶನ ಹಂಚಲು ಸರ್ಕಾರಿ ಜಮೀನು ಅಥವಾ ಖಾಸಗಿಯವರಿಂದ ಜಮೀನು ಖರೀದಿ ಪ್ರಕ್ರಿಯೆ ಪ್ರಗತಿ ಹಂತದಲ್ಲಿದೆ.
ಭಾಗ್ಯಲಕ್ಷ್ಮಿ ಯೋಜನೆಯಡಿ ಇದುವರೆಗೂ ಜಿಲ್ಲೆಯಲ್ಲಿ ೪೪೫೭೩ ಫಲಾನುಭವಿಗಳನ್ನು ಯೋಜನೆಗೆ ಸೇರಿಸಲಾಗಿದ್ದು, ೭೦೫೬. ೭೧ ಲಕ್ಷ ರೂ.ಗಳನ್ನು ಎಲ್.ಐ.ಸಿ. ಯಲ್ಲಿ ಠೇವಣಿ ಇಡಲಾಗಿದೆ.
ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಎರಡು ವರ್ಷಗಳಲ್ಲಿ ೫೩೭. ೮೬ಲಕ್ಷ ರೂ. ಅನುದಾನದಲ್ಲಿ ಒಟ್ಟು ೯೭೨ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಪ್ರದೇಶ ವಿಸ್ತರಣೆಯಾಗಿದೆ.  ಸೂಕ್ಷ್ಮ ಹನಿ ನೀರಾವರಿ ಯೋಜನೆಯಡಿ ೩೩೧. ೪೯ ಲಕ್ಷ ರೂ. ವೆಚ್ಚದಲ್ಲಿ ೧೦೪೧. ೪ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಅಳವಡಿಸಿ ೬೫೩ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಗಿದೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಕರ್ನಾಟಕ ರಾಜ್ಯ ಹಣಕಾಸು ಆಯೋಗದಿಂದ ಮುಕ್ತನಿಧಿಯಾಗಿ ಪ್ರಸಕ್ತ ಸಾಲಿಗೆ ೧೨೫೭. ೬೨ ಲಕ್ಷ ರೂ. ನಿಗದಿಗೊಳಿಸಿದ್ದು, ಈಗಾಗಲೆ ೧೬೪. ೫೫ ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ.  ೬೩೦. ೮೬ ಲಕ್ಷಗಳ ವೆಚ್ಚದಲ್ಲಿ ೧೦೩ ಕಾಮಗಾರಿಗಳ ಕ್ರಿಯಾ ಯೋಜನೆಗಳು ಮಂಜೂರಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.  ೧೩ ನೇ ಹಣಕಾಸು ಆಯೋಗದಡಿ ೨೮೦. ೮೫ ಲಕ್ಷ ರೂ. ಮಂಜೂರಾಗಿದ್ದು, ಈ ಪೈಕಿ ೧೮೭. ೪೦ ಲಕ್ಷ ರೂ.ಗಳ ಕಾಮಗಾರಿಗಳು ಪ್ರಗತಿಯಲ್ಲಿವೆ.  ಡಿಸ್ಟ್ರಿಕ್ಟ್ ಇನ್ನೋವೇಷನ್ ಫಂಡ್ ಯೋಜನೆಯಡಿ ಪ್ರತಿ ಜಿಲ್ಲೆಗೆ ೧ ಕೋಟಿ ರೂ. ನಿಗದಿಯಾಗಿದ್ದು, ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ೧೬೦೪೯ ಬೈಸಿಕಲ್‌ಗಳನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದು, ೧೩೪೨೧೮ ಮಕ್ಕಳಿಗೆ ಸಮವಸ್ತ್ರ, ೨೨೬೨೩೧ ಸಂಖ್ಯೆಯ ನೋಟ್‌ಪುಸ್ತಕಗಳು, ೧೦೬೫೫೨೩ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಗಿದೆ.
ಪಂಚಸೌಲಭ್ಯ ಯೋಜನೆಯಡಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ, ಮತ್ತು ಕಂಪೌಂಡ್ ಸೌಲಭ್ಯಕ್ಕೆ ೬೦. ೪೪ ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ಡಾ. ನಂಜುಂಡಪ್ಪ ವರದಿ ಆಧಾರದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಸರ್ಕಾರಿ ಪ್ರೌಢಶಾಲೆಗಳಿಗೆ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣಕ್ಕಾಗಿ ೬೯. ೪೦ ಲಕ್ಷ ರೂ., ಕಂಪೌಂಡ್‌ಗೆ ೫. ೨೭ ಲಕ್ಷ, ಶಾಲೆ ಬಿಟ್ಟ ಹೆಣ್ಣು ಮಕ್ಕಳಿಗಾಗಿ ವಸತಿ ನಿಲಯದ ನಿರ್ವಹಣೆಗೆ ೧೪. ೨೫ ಲಕ್ಷ ರೂ. ಬಿಡುಗಡೆಯಾಗಿದೆ.  ನಬಾರ್ಡ್ ಯೋಜನೆಯಡಿ ೧೪ ಸರ್ಕಾರಿ ಪ್ರೌಢಶಾಲಾ ಕೊಠಡಿ ನಿರ್ಮಾಣಕ್ಕೆ ೬೯. ೪೦ ಲಕ್ಷ, ರಾಜ್ಯ ವಲಯ ಯೋಜನೆಯಡಿ ೪ ಕೊಠಡಿ ನಿರ್ಮಾಣ ಹಾಗೂ ಪೀಠೋಪಕರಣ ಖರೀದಿಗೆ ೨೨. ೪೦ ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ, ಸಿ.ಸಿ. ರಸ್ತೆ, ಚರಂಡಿ, ನೀರು ಸರಬರಾಜು, ಶೌಚಾಲಯಕ್ಕಾಗಿ ಒಟ್ಟು ೭. ೫೦ ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.  ಪ.ಜಾತಿಯ ಮೆಟ್ರಿಕ್ ನಂತರದ ೩೬೦೦ ವಿದ್ಯಾರ್ಥಿಗಳಿಗೆ ೭೯. ೯೩ ಲಕ್ಷ ರೂ., ಪ.ವರ್ಗದ ೨೧೫೦ ವಿದ್ಯಾರ್ಥಿಗಳಿಗೆ ೮೧ ಲಕ್ಷ ರೂ.ಗಳ ಅನುದಾನವನ್ನು ವಿದ್ಯಾರ್ಥಿ ವೇತನಕ್ಕಾಗಿ ಒದಗಿಸಲಾಗಿದೆ.
ಜಿಲ್ಲಾ ಕೇಂದ್ರದಲ್ಲಿ ೧ ಕೋಟಿ ರೂ. ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ಈಗಾಗಲೆ ೫೦ ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.  ವಿಶೇಷ ಘಟಕ ಯೋಜನೆಯಡಿ ೬೪ ಲಕ್ಷ, ಗಿರಿಜನ ಉಪಯೋಜನೆಯಡಿ ರೂ. ೧೫ ಲಕ್ಷಗಳ ಅನುದಾನ ನಿಗದಿಪಡಿಸಲಾಗಿದೆ.
ಬ್ಯಾಡಗಿ ಮತ್ತು ಕೊಪ್ಪಳ ಮಾರುಕಟ್ಟೆ ಸಮಿತಿಗಳಲ್ಲಿ ಅಂದಾಜು ರೂ. ೨೬. ೩೦ ಕೋಟಿಗಳಲ್ಲಿ ಮಾರುಕಟ್ಟೆ ಪ್ರಾಂಗಣದಲ್ಲಿ ಹೆಚ್ಚಿನ ಆಧುನಿಕ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಯೋಜನೆಯಡಿ ರೈಸ್ ಟೆಕ್ನಾಲಜಿ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಭತ್ತ, ಅಕ್ಕಿ ಉತ್ಪನ್ನಕ್ಕೆ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಗಂಗಾವತಿ ತಾಲೂಕಿನ ಕಾರಟಗಿಯಲ್ಲಿ ಸ್ಥಾಪಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಗ್ರಾಮೀಣ ಭಂಡಾರ ಯೋಜನೆಯಡಿ ಸಿರುಗುಪ್ಪ, ಗಂಗಾವತಿ, ಸಿಂಧನೂರು, ತಿಪಟೂರು ಮತ್ತು ಚಳ್ಳಕೆರೆ ಮಾರುಕಟ್ಟೆ ಸಮಿತಿಗಳ ಮಾರುಕಟ್ಟೆ ಕ್ಷೇತ್ರ ವ್ಯಾಪ್ತಿಯಲ್ಲಿ ೩೬೪ ಗ್ರಾಮೀಣ ಗೋದಾಮುಗಳನ್ನು ೪೫೮೫. ೫೬ ಲಕ್ಷಗಳಲ್ಲಿ ಕೈಗೊಳ್ಳಲು ಮಂಜೂರಾತಿ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿವೆ.
ಸಂವಿಧಾನಾತ್ಮಕವಾಗಿ ನಮ್ಮ ದೇಶದ ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರ ಲಾಂಛನಗಳು ರಾಷ್ಟ್ರದ ಸಾರ್ವಭೌಮತ್ವವನ್ನು ಸಾರುತ್ತವೆ. ಇದಲ್ಲದೆ ರಾಷ್ಟ್ರದ ಇಡೀ ಹಿನ್ನೆಲೆ, ಕಲ್ಪನೆ ಮತ್ತು ಸಂಸ್ಕೃತಿಯನ್ನು ಪ್ರತಿಪಾದಿಸುತ್ತವೆ.
ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಜನತೆಗೆ ನೀಡುವುದು ನಮ್ಮ ಗುರಿಯಾಗಿದೆ.
ರಾಷ್ಟ್ರ ಭಕ್ತಿ ಮತ್ತು ರಾಷ್ಟ್ರ ಪ್ರೇಮದಿಂದ ಬಲಿಷ್ಠ ಭಾರತದ ಭವ್ಯ ಭವಿಷತ್ತಿನ ನಿರ್ಮಾಣಕ್ಕಾಗಿ ಹಾಗೂ ಕರ್ನಾಟಕದಲ್ಲಿ ಅಭಿವೃದ್ಧಿ ಸೌಧವನ್ನು ನಿರ್ಮಿಸುವಲ್ಲಿ ನಾವೆಲ್ಲರೂ ಒಟ್ಟಾಗಿ ಶಮಿಸಲು ಪಣ ತೊಡೋಣ.
        ಕೊಪ್ಪಳ ಜಿಲ್ಲೆಯಲ್ಲಿ ಮುಂದಿನ ಬೆಳವಣಿಗೆಗೆ ಪ್ರಾಮುಖ್ಯತೆ ನೀಡಿ ಈ ದಿನ  ನಾವೆಲ್ಲ ಸೇರಿ ಭಾರತೀಯರಾಗಿ ಕೂಡಿ ಬಾಳುವುದಕ್ಕೆ ಮುಂದಿನ ಹೆಜ್ಜೆ ಇಡೋಣ  ತಮ್ಮೆಲ್ಲರಿಗೂ ಮತ್ತೊಮ್ಮೆ ೬೩ನೇ ಗಣರಾಜ್ಯೋತ್ಸವದ ಶುಭಾಶಯಗಳು.

``ಜೈಹಿಂದ್  ಜೈ ಕರ್ನಾಟಕ 
 
 

Advertisement

0 comments:

Post a Comment

 
Top