ಜೊಹಾನ್ಸ್‌ಬರ್ಗ್, ಡಿ. 2: ಭೂಮಿಯು ಅನ್ಯ ಗ್ರಹದ ಜೀವಿಗಳಿಗೆ ತಮ್ಮ ರಾಜಕೀಯ ಕಾರ್ಯಸೂಚಿಯನ್ನು ಜಾರಿಗೊಳಿಸಲು ಕಾರ್ಯಸೂಚಿಯಾಗಿತ್ತೇ? ಭೂಮಿಯಲ್ಲಿ ಅವು ಚಿನ್ನದ ಅನ್ವೇಷಣೆಗಾಗಿ ಬಂದಿದ್ದವೇ? ಎಂಬ ಜಿಜ್ಞಾಸೆ ಇದೀಗ ಸಂಶೋಧಕರನ್ನು ಕಾಡುತ್ತಿದೆ. ಇತ್ತೀಚೆಗೆ ಇಲ್ಲಿ ನಡೆದ ದಕ್ಷಿಣ ಆಫ್ರಿಕಾದ ಪ್ರಥಮ ಯುಎಫ್‌ಒ ವಿಜ್ಞಾನ ಮತ್ತು ಅರಿವು ಸಮಾವೇಶದಲ್ಲಿ ಇಂತಹ ಪ್ರಶ್ನೆಯೊಂದು ಹೆಚ್ಚಿನ ಚರ್ಚೆಗೆ ಕಾರಣವಾಯಿತು ಎಂದು ವರದಿಯೊಂದು ಹೇಳಿದೆ.
ಅನ್ಯಗ್ರಹದ ಜೀವಿಗಳೆಂದು ಗುರುತಿಸಲ್ಪಡುವ ಏಲಿಯನ್‌ಗಳೊಂದಿಗೆ ಸಂಪರ್ಕವನ್ನು ಹೊಂದಿದ್ದ ಕೆಲವೇ ನಾಗರಿಕತೆಯ ಪ್ರಥಮ ಪ್ರತಿಷ್ಠಿತ ರಾಜ ಪರಂಪರೆಗಳ ಬಗ್ಗೆ ಈ ಸಮಾವೇಶದಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ. ‘‘ಕೆಲವೊಂದು ಕುತೂಹಲಕಾರಿ ದುಷ್ಟ ಶಕ್ತಿಗಳಿಂದ ಭೂಮಿಗಾಗಿ ಯುದ್ಧ ನಡೆದಿತ್ತು’’ ಎಂದು ಕಾರ್ಯಕ್ರಮದ ಸಂಘಟಕ ಮೈಕಲ್ ಟೆಲ್ಲಿಂಗರ್ ಹೇಳಿರುವುದಾಗಿ ನ್ಯೂಸ್ 24 ಸುದ್ದಿ ವಾಹಿನಿಯು ವರದಿ ಮಾಡಿದೆ.
‘‘ಕೆಲವೇ ವ್ಯಕ್ತಿಗಳ ಸಣ್ಣ ಸಮೂಹದ ಇಚ್ಛೆಯನ್ನು ಜಾರಿಗೊಳಿಸಲು ಜಗತ್ತಿನ ಎಲ್ಲ ಸರಕಾರಗಳು ಕೈಗೊಂಬೆಗಳು ಮತ್ತು ಸಲಕರಣೆಗಳು. ಆ ರಾಜಕೀಯ ರಾಜ ಪರಂಪರೆಯ ಇತಿಹಾಸ ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ’’ ಎಂದು ಮೈಕಲ್ ಹೇಳಿದ್ದಾರೆ.
ಚಿನ್ನ ಮತ್ತು ವಜ್ರದಂತಹ ಬೆಲೆ ಬಾಳುವ ಸಂಪನ್ಮೂಲ ಹೊಂದಿರುವ ದಕ್ಷಿಣ ಆಫ್ರಿಕಾ ಸರಕಾರಗಳು ಈ ಅನ್ಯಗ್ರಹದ ಜೀವಿಗಳಿಗೆ ಅತಿ ಹೆಚ್ಚು ಕೈಗೊಂಬೆಯಾಗಿತ್ತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
‘‘ನಮ್ಮ ಖನಿಜ ಸಂಪನ್ಮೂಲಗಳಿಂದಾಗಿ ನಾವು ಈ ಜಗತ್ತಿನ ನಿಯಂತ್ರಣದ ಕೇಂದ್ರ ಬಿಂದುವಾಗಿದ್ದೇವೆ’’ ಎಂದು ಮೈಕಲ್ ಹೇಳಿದ್ದಾರೆ. ಸಮಾವೇಶದ ಮೊದಲ ದಿನ, ಕೆಟ್ಟ ಮತ್ತು ಒಳ್ಳೆಯ ಗುಣಗಳನ್ನು ಹೊಂದಿರುವ ಮಾನವರಂತೆ, ಅನ್ಯಗ್ರಹದ ಜೀವಿಗಳಲ್ಲೂ ಇರಬಹುದು ಎಂದು ಹೆಚ್ಚಿನ ಭಾಷಣಕಾರರು ಒಪ್ಪಿಕೊಂಡಿದ್ದಾರೆ.
‘‘ಅವು ಚಿನ್ನಕ್ಕಾಗಿ ಭೂಮಿಗೆ ಬಂದಿವೆ. ನಾವು ಚಿನ್ನಕ್ಕಾಗಿ ಇನ್ನೂ ಕಾದಾಡುತ್ತಿದ್ದೇವೆ’’ ಎಂದು ಮೈಕಲ್ ಹೇಳಿದ್ದಾರೆ. ಸಂಶೋಧನೆಯೊಂದರ ಪ್ರಕಾರ, ಅನ್ಯಗ್ರಹ ಜೀವಿ ‘ಅನ್ನುನಾಕಿ’ ಭೂಮಿಗೆ ಸುಮಾರು 3 ಲಕ್ಷ ವರ್ಷಗಳ ಹಿಂದೆಯೇ ಚಿನ್ನದ ಸಂಶೋಧನೆಗಾಗಿ ಬಂದಿತ್ತು. ತಮ್ಮದೇ ವಂಶವಾಹಿಯ ಪ್ರತಿಜೀವಿಗಳನ್ನು ಮತ್ತು ಮಾನವನನ್ನು ಸೃಷ್ಟಿಸುವುದಕ್ಕೂ ಅವು ಕಾರಣವಾಗಿವೆ ಎಂದು ಮೈಕಲ್ ಹೇಳಿರುವುದಾಗಿ ವರದಿಯು ತಿಳಿಸಿದೆ.
0 comments:
Post a Comment