ಗಂಗಾವತಿ: ವಾಣಿಜ್ಯ ನಗರಿ ಬತ್ತದ ಕಣಜ ಎಂದು ಖ್ಯಾತಿವೆತ್ತ ಗಂಗಾವತಿ ಗ್ರಾಮದ ಆದಿ ದೇವತೆ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವ ಇಂದಿನಿಂದ ನಾಲ್ಕು ದಿನಗಳ ಕಾಲ ಅದ್ದೂರಿಯಿಂದ ನಡೆಯಲಿದ್ದು, ಸೇವಾ ಸಮಿತಿ ಸಕಲ ಏರ್ಪಾಡು ಮಾಡಿದೆ.
1955ರಲ್ಲಿ ಕೊನೆಯದಾಗಿ ಜಾತ್ರೆಯನ್ನು ಆಚರಿಸಲಾಗಿತ್ತು. ಕೆಲ ಕಾರಣಾಂತರಗಳಿಂದ ಸ್ಥಗಿತವಾಗಿದ್ದ ಗ್ರಾಮ ದೇವತೆಯ ಜಾತ್ರಾ ಮಹೋತ್ಸವವನ್ನು ನಗರದ ಎಲ್ಲ ಜಾತಿ ಜನಾಗದ ಮುಖಂಡರು ಸೇರಿ ಚರ್ಚಿಸಿ ಇದೀಗ ಮತ್ತೆ ಸುಮಾರು 56 ವರ್ಷದ ಬಳಿಕ ಚಾಲನೆ ನೀಡಿದ್ದಾರೆ.
ಇತಿಹಾಸ: ಅಧುನಿಕ ನಗರದ ರೂಪ ಪಡೆಯುವ ಮುನ್ನ ಗಂಗಾವತಿ ಗ್ರಾಮದ ಪೂರ್ವಿಕರು ದುರ್ಗಾ ದೇವಿಯನ್ನು ಸ್ಥಾಪಿಸಿದ ಬಳಿಕವೇ ದೇವಸ್ಥಾನದ ಮುಂದೆ ಹರಿಯುವ ಹಳ್ಳಕ್ಕೆ ದುರ್ಗಮ್ಮ ಹಳ್ಳ ಎಂಬು ಅನ್ವರ್ಥಕ ನಾಮ ಬಂದಿದೆ. ಹೇಮಗುಡ್ಡದ ಬೆಟ್ಟಗಳಿಂದ ಬಸಿದು ಬರುವ ನೀರೆ ಹಳ್ಳಕ್ಕೆ ಸೇರುತ್ತಿದೆ.
`ನಗರದ ಕೋಟೆ ಪ್ರದೇಶದ ಹೊರಭಾಗದಲ್ಲಿ 100-150 ವರ್ಷದ ಈಚೆಗೆ ದುರ್ಗಮ್ಮ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಬಹುಶಃ ಸಮರಕ್ಕೆ ಹೋಗುವಾಗ ಮತ್ತು ಬರುವಾಗ ದೇವಿಯನ್ನು ಆರಾಧಿಸುವ ಸಂಪ್ರದಾಯ ಇದ್ದಿರಬಹುದು` ಎನ್ನುತ್ತಾರೆ ಇತಿಹಾಸಕಾರ ಶರಣಬಸಪ್ಪ ಕೋಲ್ಕಾರ.
4-5ನೇ ಶತಮಾನದಲ್ಲಿ ವಿಶೇಷವಾಗಿ ಹೆಣ್ಣು ದೇವತೆಯರನ್ನು ಆರಾಧಿಸುವ ಪದ್ಧತಿ ಜಾನಪದೀಯ ಆಚರಣೆಯಲ್ಲಿತ್ತು. ಬಾದಾಮಿ-ಕಲ್ಯಾಣದ ಚಾಲುಕ್ಯರ ಬಳಿಕ ಶಿಷ್ಟ ಪರಂಪರೆ ಆಚರಣೆ ಬಂದು ಗ್ರಾಮ ದೇವತೆಯನ್ನು ಪ್ರತಿಷ್ಠಾಪಿಸಿ ಆರಾಧಿಸುವ ಪರಂಪರೆ ಬೆಳೆದು ಬಂದಿದೆ ಎನ್ನಲಾಗುತ್ತಿದೆ.
ನಿತ್ಯ ಕಾರ್ಯಕ್ರಮ: ಜಾತ್ರೋತ್ಸವದ ಅಂಗವಾಗಿ ಗುರುವಾರ (ಡಿ. 22)ಬೆಳಗ್ಗೆ 9ರಿಂದ ಕಲ್ಮಠದ ಬಳಿ ಇರುವ ಗಾಳೆಮ್ಮ ದೇವಸ್ಥಾನದಿಂದ ದುರ್ಗಾ ದೇವಸ್ಥಾನದ ವರೆಗೆ ಪೂರ್ಣಕುಂಭ ಮೆರವಣಿಗೆ ನಡೆಯಲಿದೆ. ಬಳಿಕ ಕಳಶ ಸ್ಥಾಪನೆ, ವಾಸ್ತುಹೋಮ ಮೊದಲಾದವು ನಡೆಯಲಿವೆ. ಡಿ.23ರಂದು ಮಾಜಿ ಸಂಸದ ಕಾಂಗ್ರೆಸ್ಸಿನ ಹಿರಿಯ ಮುಖಂಡ ಎಚ್.ಜಿ. ರಾಮುಲು ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ 9ರಿಂದ ನವಚಂಡಿ ಹವನ, ನವಗ್ರಹ ಹೋಮ, ಪೂರ್ಣಾಹುತಿ ಮೊದಲಾದ ಧಾರ್ಮಿಕ ಆಚರಣೆ ನಡೆಯಲಿವೆ.
ಡಿ.24ಕ್ಕೆ ಶೋಭಾಯಾತ್ರೆ: ಡಿ.24ರಂದು ನಗರದ ಪ್ರಮುಖ ರಸ್ತೆಗಳಲ್ಲಿ ಸಂಜೆ ದುರ್ಗಾದೇವಿ ವಿಗ್ರಹದ ಶೋಭಾಯಾತ್ರೆ ನಡೆಯಲಿದೆ. ಗಾಳೆಮ್ಮ ದೇವಸ್ಥಾನದಿಂದ ಹೊರಡುವ ಶೋಭಾಯಾತ್ರೆ ಸಕಲ ವಾದ್ಯಮೇಳಗಳೊಂದಿಗೆ ದುರ್ಗಾದೇವಿ ದೇವಸ್ಥಾನದವರೆಗೂ ನಡೆಯಲಿದೆ,
ಡಿ.25ಕ್ಕೆ ಬೆಳಗ್ಗೆ 10ಕ್ಕೆ ದುರ್ಗಾದೇವಿಯ ಮಹಾಭಿಷೇಕ, ಕುಂಕುಮಾರ್ಚನೆ, ಅಲಂಕಾರ ಮೊದಲಾದ ಧಾರ್ಮಿಕ ಕಾರ್ಯ, ಜಾತ್ರಾ ಮಹೋತ್ಸವ ನಡೆಯಲಿವೆ.
ಭಕ್ತರಿಗೆ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ನಿತ್ಯ ಊಟದ ವ್ಯವಸ್ಥೆ ಏರ್ಪಡಿಸಲಾಗಿದೆ
ಪ್ರಜಾವಾಣಿ : ಎಂ.ಜೆ. ಶ್ರೀನಿವಾಸ
0 comments:
Post a Comment