PLEASE LOGIN TO KANNADANET.COM FOR REGULAR NEWS-UPDATES



Koppal Right to information Act : ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಒದಗಿಸದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಕೆಸರಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ/ ಕಾರ್ಯದರ್ಶಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಪ್ರತಿ ಅರ್ಜಿಗೆ ರೂ. ೧೦೦೦ ರಂತೆ ಒಟ್ಟು ೧೩ ಅರ್ಜಿಗಳಿಗೆ ರೂ. ೧೩೦೦೦ ಗಳ ಪರಿಹಾರವನ್ನು ಅರ್ಜಿದಾರರಿಗೆ ಪಾವತಿಸುವಂತೆ ಕೊಪ್ಪಳ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ತೀರ್ಪು ನೀಡಿದೆ.
  ಕೆಸರಟ್ಟಿ ಗ್ರಾಮದ ರಮೇಶ್ ಪಾಟೀಲ್ ಎಂಬುವವರು  ಮಾಹಿತಿ ಹಕ್ಕು ಕಾಯ್ದೆಯಡಿ ಅದೇ ಗ್ರಾಮ ಪಂಚಾಯತಿ ವ್ಯಾಪ್ತಿತಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿವರ ಹಾಗೂ ವೆಚ್ಚಗಳ ಮಾಹಿತಿಯನ್ನು ಒದಗಿಸುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.  ಅಲ್ಲದೆ ಇದೇ ರೀತಿ ದಿ: ೧೯-೧೦-೨೦೧೦ ರಿಂದ ೦೪-೦೮-೨೦೧೧ ರವರೆಗೆ ಒಟ್ಟು ೧೩ ಅರ್ಜಿಗಳನ್ನು ಸಲ್ಲಿಸಿದ್ದರು.  ಆದರೆ ಮಾಹಿತಿ ಹಕ್ಕು ಕಾಯ್ದೆಯಡಿ ನಿಗದಿಪಡಿಸಿದ ಅವಧಿಯೊಳಗೆ ಮಾಹಿತಿ ನೀಡದೆ ನಿರ್ಲಕ್ಷಿಸಿದ್ದು, ಮೇಲಾಧಿಕಾರಿಗಳ ಮುಖಾಂತರವಾಗಿಯೂ ಪತ್ರ ವ್ಯವಹಾರ ಮಾಡಿ, ತಿಳುವಳಿಕೆ ನೀಡಿದ ನಂತರವೂ ಕ್ರಮ ಕೈಗೊಳ್ಳದೇ ಇರುವುದನ್ನು ಸೇವಾ ನಿರ್ಲಕ್ಷತೆಯೆಂದು ಪರಿಗಣಿಸಿ, ಪ್ರತಿವಾದಿಯಿಂದ ಕೋರಿದ ಮಾಹಿತಿಯನ್ನು ನೀಡಲು ಹಾಗೂ ನಷ್ಟ ಪರಿಹಾರವನ್ನು ನೀಡಲು ಆದೇಶಿಸುವಂತೆ ಅರ್ಜಿದಾರರು ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಫಿರ್ಯಾದು ಸಲ್ಲಿಸಿದ್ದರು.  ಪ್ರತಿವಾದಿಯು ಪ್ರಕರಣವನ್ನು ಇತ್ಯರ್ತಪಡಿಸಲು ವೇದಿಕೆಗೆ ಕಾರ್ಯ ವ್ಯಾಪ್ತಿ ಇಲ್ಲ, ಹಾಗೂ ಮಾಹಿತಿ ಹಕ್ಕು ಕಾಯ್ದೆಯಡಿ ಮೇಲ್ಮನವಿಯನ್ನು ಮೇಲ್ಮನವಿ ಪ್ರಾಧಿಕಾರಕ್ಕೆ ಮಾತ್ರ ಅರ್ಜಿದಾರರು ಅರ್ಜಿ ಸಲ್ಲಿಸಬಹುದೆಂದು ತಕರಾರು ಸಲ್ಲಿಸಿದ್ದರು.  ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರಾದ ಕೆ.ವಿ. ಕೃಷ್ಣಮೂರ್ತಿ ಹಾಗೂ ಸದಸ್ಯರುಗಳಾದ ಶಿವರೆಡ್ಡಿ ಬಿ. ಗೌಡ, ವೇದಾ ಜೋಷಿ ಇವರು ಪ್ರಕರಣವನ್ನು ಪರಿಶೀಲಿಸಿ, ಗ್ರಾಹಕರ ಸಂರಕ್ಷಣಾ ಕಾಯ್ದೆ-೧೯೮೬ ಅಡಿ ಅರ್ಜಿದಾರರು ಗ್ರಾಹಕರಾಗುತ್ತಾರೆಂದು ಪರಿಗಣಿಸಿ, ಪ್ರತಿ ವಾದಿಯು ಮಾಹಿತಿ ಹಕ್ಕು ಕಾಯ್ದೆಯಡಿ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದಿರುವುದು ಸೇವಾ ನಿರ್ಲಕ್ಷತೆಯೆಂದು ಪರಿಗಣಿಸಿದೆ.  ಪ್ರತಿವಾದಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ವಯಕ್ತಿಕವಾಗಿ ಬಾಧ್ಯಸ್ಥನಾಗಿ, ಪ್ರತಿ ಅರ್ಜಿಗೆ ರೂ. ೧೦೦೦ ರಂತೆ ಒಟ್ಟು ೧೩ ಅರ್ಜಿಗಳಿಗೆ ಒಟ್ಟು ೧೩೦೦೦ ಗಳ ಪರಿಹಾರವನ್ನು ಅರ್ಜಿದಾರನಿಗೆ ಪಾವತಿಸುವಂತೆ ಹಾಗೂ ೧೩ ಅರ್ಜಿಗಳಲ್ಲಿ ಕೋರಿರುವ ಮಾಹಿತಿಯನ್ನು ೨೦೧೧ ನೇ ಇಸವಿಯ ಅಂತ್ಯದೊಳಗೆ ಅರ್ಜಿದಾರರಿಗೆ ನೀಡಲು ಆದೇಶಿಸಿದೆ.  ತಪ್ಪಿದಲ್ಲಿ ಅರ್ಜಿದಾರರು ಪ್ರತಿವಾದಿಯ ವಿರುದ್ಧ ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆಯನ್ನು ವೇದಿಕೆಯಲ್ಲಿ ದಾಖಲಿಸಲು ಅವಕಾಶವಿದೆ ಎಂದು ತೀರ್ಪಿನಲ್ಲಿ ತಿಳಿಸಿದೆ.

Advertisement

0 comments:

Post a Comment

 
Top