ಆಳ್ವಾಸ್ ನುಡಿಸಿರಿ 2011 ಸಮ್ಮೇಳನಾಧ್ಯಕ್ಷ ಎಂ.ಎಂ. ಕಲಬುರ್ಗಿ ಕಳವಳ
ಮೂಡುಬಿದ್ರೆ (ರತ್ನಾಕರವರ್ಣಿ ವೇದಿಕೆ), ನ.11: ಸ್ವಾತಂತ್ರಪೂರ್ವ ಹಾಗೂ ಸ್ವಾತಂತ್ರೋತ್ತರ ಕಾಲದಲ್ಲಿ ಕರ್ನಾಟಕ ಏಕೀಕರಣ ಚಳವಳಿ, ರೈತ ಚಳವಳಿ, ನದಿ ನೀರಿನ ಚಳವಳಿ, ಭಾಷಾ ಚಳವಳಿ, ದಲಿತ ಚಳವಳಿ, ಗಡಿನಾಡ ಚಳವಳಿ, ಕಾರ್ಮಿಕ ಚಳವಳಿ, ಸ್ತ್ರೀ ವಿಮೋಚನಾ ಚಳವಳಿ ಇತ್ಯಾದಿ ಅರ್ಥಪೂರ್ಣ ಚಳವಳಿಗಳು ನಡೆದಿವೆಯಾದರೂ ನ್ಯಾಯದ ಮುಖವಾಡ ಧರಿಸಿರುವ ಅನ್ಯಾಯ ರೂಪದ ಚಳವಳಿಗಳ ಸಂಖ್ಯೆ ಇಂದು ಹೆಚ್ಚುತ್ತಿದೆ. ಮಾತ್ರವಲ್ಲದೆ, ಉಪವಾಸ ಸತ್ಯಾಗ್ರಹ ಒಂದು ಪ್ರಹಸನವಾಗಿ ಪರಿಣಮಿಸುತ್ತಿದೆ ಎಂದು ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷ ಎಂ.ಎಂ. ಕಲಬುರ್ಗಿ ಟೀಕಿಸಿದ್ದಾರೆ. ಮೂಡಬಿದ್ರೆಯ ವಿದ್ಯಾಗಿರಿಯಯ ಸುಂದರಿ ಆಳ್ವ ಆವರಣದ ಪಂಡಿತ್ ಭೀಮಸೇನ್ ಜೋಷಿ ಸಭಾಂಗಣದ ರತ್ನಾಕರವರ್ಣಿ ವೇದಿಕೆಯಲ್ಲಿ ‘ಕನ್ನಡ ಮನಸ್ಸು: ಸಂಘರ್ಷ ಮತ್ತು ಸಾಮರಸ್ಯ’ ಎಂಬ ವಿಷಯದಲ್ಲಿ ಮೂರು ದಿನಗಳ ಕಾಲ ನಡೆಯಲಿ ರುವ ಸಾಹಿತ್ಯ ಜಾತ್ರೆ ‘ಆಳ್ವಾಸ್ ನುಡಿಸಿರಿ 2011’ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಾಂಧೀಜಿ ಹೋರಾಟದ ಮೂಲಕ ಕಂಡು ಕೊಂಡಿದ್ದ ರಾಮರಾಜ್ಯ ಪರಿಕಲ್ಪನೆಯು ರಾಮಸೇನೆ, ಬಜರಂಗದಳಗಳೆಂಬ ‘ಕಾದಾಟ’ ಗಳನ್ನು ಹುಟ್ಟು ಹಾಕಿದೆ. ಇವುಗಳ ಜೊತೆಗೆ ಕಮ್ಯುನಿಸ್ಟ್ ಚಳವಳಿಯು ನಕ್ಸಲೀಯ ಚಟು ವಟಿಕೆಯಾಗಿ ಬೆಳೆದಿದೆ. ಜೊತೆಗೆ ಭೂಗತ ಉಗ್ರರು ಹುಟ್ಟಿಕೊಳ್ಳುತ್ತಲಿದ್ದಾರೆ. ಒಟ್ಟಾರೆ ನಮ್ಮ ನಾಡಿನಲ್ಲಿ ವಲಸೆ ಧರ್ಮಗಳು ಆರಂಭಿಸಿದ್ದ ಕಾದಾಟವು ಬಸವಯುಗ, ಗಾಂಧಿ- ಅಂಬೇಡ್ಕರ್ ಯುಗಗಳಲ್ಲಿ ಹೋರಾಟವಾಗಿ ಈಗ ಮತ್ತೆ ಕಾದಾಟದ ಸ್ಥಿತಿಗಿಳಿದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
0 comments:
Post a Comment