ಇಂದು ನಾವು ಮಧುಮೇಹ ಅಥವಾ ಡಯಾಬೀಟಿಸ್ ದಿನವನ್ನು ಆಚರಿಸುತ್ತಿದ್ದೇವೆ. ಒಂದು ಕಾಲದಲ್ಲಿ ಸಕ್ಕರೆ ಸಂತೋಷದ, ಸಂಭ್ರಮದ ಸಂಕೇತವಾಗಿತ್ತು. ಆದರೆ ಇಂದು ಸಕ್ಕರೆ ಜನರ ಬದುಕಿಗೆ ಕಹಿಯಾಗ ತೊಡಗಿದೆ. ಆಧುನಿಕ ದಿನಗಳಲ್ಲಿ ಸಕ್ಕರೆಯನ್ನು ಕಂಡರೆ ಜನರು ಹೆದರುತ್ತಿದ್ದಾರೆ. ಸಕ್ಕರೆಯ ವಿರುದ್ಧ ಜಾಗೃತಿಗಾಗಿ ಒಂದು ದಿನವನ್ನೇ ನಾವೆಲ್ಲ ಘೋಷಿಸಿದ್ದೇವೆ. ಸಕ್ಕರೆ ರೋಗ ಹೇಗೆ ಮನುಕುಲವನ್ನು ಕಾಡುತ್ತಿದೆ ಮತ್ತು ಮನುಷ್ಯ ಅದರಲ್ಲಿ ಸಿಲುಕಿ ಹೊರ ಬರಲಾಗದೆ ಹೇಗೆ ಚಡಪಡಿಸುತ್ತಿದ್ದಾನೆ ಎನ್ನುವುದನ್ನು ನಾವು ಅಂಕಿ-ಅಂಶಗಳ ಮೂಲಕ ಕಾಣುತ್ತಿದ್ದೇವೆ ಮತ್ತು ಸ್ವತಃ ಅನುಭವಿಸುತ್ತಿದ್ದೇವೆ.
ಸಕ್ಕರೆ ರೋಗದ ಕುರಿತಂತೆ ನಮ್ಮಲ್ಲಿರುವ ತಪ್ಪು ಕಲ್ಪನೆ, ಬೇಜವಾಬ್ದಾರಿಯ ಕುರಿತಂತೆ ಜಾಗೃತಿ ಮೂಡಿಸಲು ಈ ದಿನವನ್ನು ನಾವು ಬಳಸಿ ಕೊಳ್ಳುತ್ತಿದ್ದೇವೆ. ಈ ಬೇಜವಾಬ್ದಾರಿಗೆ ಪ್ರತಿ ದಿನ ಅದೆಷ್ಟೋ ಮಂದಿ ಪ್ರಾಣವನ್ನು ತೆರುತ್ತಿದ್ದಾರೆ. ಆದರೆ ಮೂಲಭೂತವಾಗಿ ನಾವು ಕೇಳಬೇಕಾದ ಪ್ರಶ್ನೆಯೊಂದಿದೆ. ಮಧುಮೇಹ ನಿಜಕ್ಕೂ ಒಂದು ರೋಗವೇ? ಡಯಾಬಿಟೀಸ್ ದಿನದಂದು ನಾವು ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆಯಿದು.
ಡಯಾಬಿಟೀಸ್ ಹೊಸ ರೋಗವೇನೂ ಅಲ್ಲ. ಒಂದಾನೊಂದು ಕಾಲದಲ್ಲೂ ಡಯಾಬಿಟೀಸ್ ಜೀವಂತವಿತ್ತು. ಆದರೆ ಈಗಿನಷ್ಟು ಜನರು ಆಗ ಬಲಿಯಾಗುತ್ತಿರಲಿಲ್ಲ. ಯಾಕೆ? ಈ ಪ್ರಶ್ನೆಗೆ ಉತ್ತರ ಸ್ಪಷ್ಟ. ಅಂದು ಬದುಕು ಎನ್ನುವುದು ಭೋಗ, ವಿಲಾಸಮಯವಾಗಿರಲಿಲ್ಲ. ದುಡಿಮೆಗೆ, ಬೆವರಿಗೆ ಪ್ರಾಶಸ್ತ್ಯವಿತ್ತು. ಅಂದು ಹೊಟ್ಟೆಬಾಕ ಸಂಸ್ಕೃತಿ ಯಿರಲಿಲ್ಲ. ಒಬ್ಬ ಎಷ್ಟು ಮತ್ತು ಏನನ್ನು ತಿನ್ನುತ್ತಾನೆಯೋ ಅಷ್ಟೇ ಶ್ರಮವನ್ನೂ ಅವನು ವ್ಯಯಿಸುತ್ತಿದ್ದ. ಪ್ರತಿ ಹಂತದಲ್ಲೂ ದುಡಿಮೆಗೆ, ಶ್ರಮಕ್ಕೆ ಅವಕಾಶವಿತ್ತು. ಆಗ ಇಂದಿನ ವಾಹನ ಸೌಕರ್ಯವಿರಲಿಲ್ಲ. ಹೊಲ, ಗದ್ದೆಗಳಲ್ಲಿ ದುಡಿಯುವುದು ಹೆಮ್ಮೆಯ ವಿಷಯವಾಗಿತ್ತು. ಶ್ರಮವೇ ಬದುಕಿನ ಕೀಲಿ ಕೈಯಾಗಿತ್ತು.
ಆದರೆ ಇಂದು? ತಿನ್ನುವುದು ಅಧಿಕವಾಗಿದೆ. ಆದರೆ ಬೆವರು ಸುರಿಸುವುದು ಮಾತ್ರ ಕಡಿಮೆ. ಪ್ರಕೃತಿ ಇದನ್ನು ಗಮನಿಸುತ್ತಾ ಇದೆ. ಕಂಡುದನ್ನೆಲ್ಲ ತಿನ್ನುವ, ತಿನ್ನುವುದಕ್ಕಾಗಿಯೇ ಬದುಕುವ ಚಾಳಿ ಮನುಷ್ಯನಲ್ಲಿ ಹೆಚ್ಚುತ್ತಿದೆ. ಭೋಗ, ವಿಲಾಸ, ಕುಡಿತ ಇವುಗಳಲ್ಲಿ ಮನುಷ್ಯ ಕಳೆದು ಹೋಗುತ್ತಿದ್ದಾನೆ. ತಾನು ಏನನ್ನು ತಿನ್ನುತ್ತಿದ್ದೇನೆ? ಅದರಲ್ಲಿರುವ ಅಂಶಗಳಾವುವು? ಪ್ರಕೃತಿ ನೀಡಿದ ಆಹಾರದ ಕೊಡುಗೆಗಳೇನು? ಇವನ್ನೆಲ್ಲ ನೋಡುವ, ಅರ್ಥ ಮಾಡಿಕೊಳ್ಳುವ ವ್ಯವಧಾನ ಮನುಷ್ಯನಿಗಿಲ್ಲ. ನಾಲಿಗೆಗೆ ರುಚಿಯಾದುದೆಲ್ಲವನ್ನೂ ತಿನ್ನಬೇಕು. ಅದಕ್ಕೆ ಸರಿಸಮವಾಗಿ ದೈಹಿಕ ಪರಿಶ್ರಮವನ್ನು ಮಾಡುತ್ತಿಲ್ಲ. ಕುಳಿತಲ್ಲೇ ಎಲ್ಲವನ್ನೂ ಸಾಧಿಸಲು ಹೊರಟಿರುವ ಮನುಷ್ಯನಿಗೆ ಸಣ್ಣದೊಂದು ಎಚ್ಚರಿಕೆಯ ರೂಪದಲ್ಲಿ ಡಯಾಬಿಟೀಸ್ ಕಾಡುತ್ತಿದೆ. ಆವರೆಗೆ ಕಣ್ಣು ಮುಚ್ಚಿ ತಿನ್ನುತ್ತಿದ್ದವನಿಗೆ ಇನ್ನು ಮುಂದೆ ಕಣ್ಣು ತೆರೆದು ತಿನ್ನು ಎನ್ನುವ ಸಂದೇಶವನ್ನು ಡಯಾಬಿಟೀಸ್ ಕೊಡುತ್ತದೆ.
ಯಾವುದರಲ್ಲಿ ಸಕ್ಕರೆಯಿದೆ, ಯಾವುದರಲ್ಲಿ ನಾರಿನಂಶವಿದೆ, ಯಾವುದರಲ್ಲಿ ಕೊಲೆಸ್ಟ್ರಾಲ್ ಇದೆ ಇತ್ಯಾದಿಗಳನ್ನು ನಾವು ಯೋಚಿಸ ತೊಡಗುವುದೇ ಡಯಾಬಿಟೀಸ್ ಬಂದ ಬಳಿಕ. ತಾನು ತಿನ್ನುವ ಆಹಾರದ ಕುರಿತಂತೆ ಪ್ರಜ್ಞೆಯನ್ನು ಬೆಳೆಸಿಕೊಳ್ಳು ವುದೇ ಈ ರೋಗದ ಬಳಿಕ. ಈ ರೋಗ ಅವನನ್ನು ಪ್ರಕೃತಿಗೆ ಇನ್ನಷ್ಟು ಹತ್ತಿರವಾಗಿಸುತ್ತದೆ. ಈ ರೋಗವನ್ನು ಗೆಲ್ಲಬೇಕಾಗಿಲ್ಲ. ಗೆಲ್ಲಲಾಗುವುದೂ ಇಲ್ಲ. ತಿನ್ನುವ ಆಹಾರದಲ್ಲಿ, ವಿಶ್ರಾಂತಿಯಲ್ಲಿ, ವಿಲಾಸದಲ್ಲಿ ಒಂದಿಷ್ಟು ಶಿಸ್ತನ್ನು ಬೆಳೆಸಿಕೊಂಡರೆ ಈ ರೋಗ ದೂರವಾಗುತ್ತದೆ. ಡಯಾಬಿಟೀಸ್ ಎಂದಲ್ಲ, ಯಾವ ರೋಗವೂ ಮನುಷ್ಯನ ಶತ್ರುವಲ್ಲ. ಪ್ರತಿ ರೋಗವೂ ಮನುಷ್ಯ ಹೆತ್ತ ಮಗು. ಅವನೇ ಅದನ್ನು ಸಾಕಬೇಕು. ಅದೊಂದು ಜವಾಬ್ದಾರಿ. ಪ್ರಕೃತಿಯೇ ಅವನನ್ನು ಎಚ್ಚರಿಸಿ ನೀಡುವ ಜವಾಬ್ದಾರಿ.
ರೋಗ ಬಂದಾಕ್ಷಣ ಕಂಗೆಡುವುದನ್ನು ನಿಲ್ಲಿಸೋಣ. ಆಘಾತ ಹೊಂದುವುದನ್ನು ನಿಲ್ಲಿಸೋಣ. ಬದಲಿಗೆ ಆ ರೋಗ ಏನು ಹೇಳುತ್ತಿದೆ ಎನ್ನುವುದನ್ನು ಸಹನೆಯಿಂದ ಆಲಿಸಿ ಅದನ್ನು ಪಾಲಿಸೋಣ. ರೋಗವನ್ನು ಕೊಲ್ಲುವುದು ಮತ್ತಿಗಿರಲಿ. ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳೋಣ. ಆಗ ರೋಗ ತನ್ನಷ್ಟಕ್ಕೆ ತಾನೇ ನಮ್ಮಿಂದ ದೂರವಾಗುತ್ತದೆ. ‘ಅತಿಯಾದರೆ ಅಮೃತವೂ ವಿಷ’ ಎನ್ನುವ ಗಾದೆಯಿದೆ.ಮಧುಮೇಹದ ಈ ಗಾದೆಯನ್ನು ಚಾಚೂ ತಪ್ಪದೆ ಪಾಲಿಸೋಣ. ರೋಗಗಳನ್ನು ಸೋಲಿಸುವುದಕ್ಕಿಂತ ನಮ್ಮನ್ನು ನಾವು ಗೆಲ್ಲುವುದರತ್ತ ಗಮನ ಹರಿಸೋಣ
0 comments:
Post a Comment