PLEASE LOGIN TO KANNADANET.COM FOR REGULAR NEWS-UPDATES


 ಕೊಪ್ಪಳ ಅ. ಅತ್ಯಂತ ಕಡಿಮೆ ಬಂಡವಾಳ, ಕಡಿಮೆ ಜಮೀನಿನಲ್ಲಿಯೂ ಸಾವಯವ ಕೃಷಿ ಚಟುವಟಿಕೆ ನಡೆಸಿ ಹೆಚ್ಚು ಲಾಭ ಪಡೆಯಬಹುದು, ಕೈ ಕೆಸರಾದರೆ, ಬಾಯಿ ಮೊಸರು ಎಂಬ ಗಾದೆಯನ್ನು ಸಾಕ್ಷೀಕರಿಸಿದ ತಾಲೂಕಿನ ಡಂಬ್ರಳ್ಳಿ ಗ್ರಾಮದ ರೈತ ಆನಂದರಡ್ಡಿ ಇಮ್ಮಡಿಯವರ ಯಶೋಗಾಥೆ ನಿಜಕ್ಕೂ ಎಲ್ಲ ರೈತರಿಗೆ ಪ್ರೇರಣೆಯೇ ಸರಿ.
  ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿಯ ಡಂಬ್ರಳ್ಳಿ ಸಾವಿರಕ್ಕೂ ಕಡಿಮೆ ಜನಸಂಖ್ಯೆ ಹೊಂದಿರುವ ಪುಟ್ಟ ಗ್ರಾಮ, ಈ ಗ್ರಾಮದ ವಿಶೇಷತೆ ಎಂದರೆ ಎಲ್ಲ ರೈತರೂ ಶ್ರಮ ಜೀವಿಗಳು.  ಡಂಬ್ರಳ್ಳಿ ಗ್ರಾಮದ ಆನಂದರಡ್ಡಿ ಕರಕರಡ್ಡಿ ಇಮ್ಮಡಿ ಹಾಗೂ ಪತ್ನಿ ಪವಿತ್ರ ಇಮ್ಮಡಿ ಅವರು ಸಹ ಶ್ರಮ ಜೀವಿಗಳು, ತಮ್ಮ ೬ ಎಕರೆ ಜಮೀನಿಗೆ ಬೋರ್‌ವೆಲ್ ಮೂಲಕ ನೀರಾವರಿ ಒದಗಿಸಿಕೊಂಡಿದ್ದು, ಜಮೀನಿನಲ್ಲಿ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ.  ಆದರೂ ಗ್ರಾಮದಲ್ಲೇ ದೊರೆಯುವ ತ್ಯಾಜ್ಯ ವಸ್ತುಗಳನ್ನು, ಸಗಣಿ, ಗೊಬ್ಬರ ಬಳಸಿಕೊಂಡು, ತಮ್ಮ ಹೊಲದಲ್ಲೆ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.  ಸಾವಯವ ಕೃಷಿಗೆ ಆಕಳು ಮತ್ತು ಎತ್ತಿನ ಸಗಣಿ, ಎರೆಹುಳ ಗೊಬ್ಬರ ತಯಾರಿಕೆ ವ್ಯವಸ್ಥೆ, ಜೀವಾಮೃತ ತಯಾರಿಸಿಕೊಳ್ಳುವುದು, ಸಸ್ಯಜನ್ಯ ಕೀಟನಾಶಕಗಳು, ಜೊತೆಗೆ ಸ್ಥಳೀಯವಾಗಿ ದೊರೆಯುವ ಎಲ್ಲಾ ವಸ್ತುಗಳನ್ನು ಬಳಸಿಕೊಂಡು ಸಾವಯವ ಕೃಷಿಯಲ್ಲಿ ನಿರತರಾಗಿದ್ದಾರೆ.  ಅತ್ಯಂತ ಕಿರಿಯ ವಯಸ್ಸಿನಲ್ಲಿ ಶ್ರಮವಹಿಸಿ ಜೀವನ ನಡೆಸುತ್ತಿರುವ ಗ್ರಾಮದ ಆನಂದರಡ್ಡಿ ಇಮ್ಮಡ ಅವರ ಹಿರಿಮೆಯ ಸಾಧನೆ ಮೆಚ್ಚುವಂತಹದು.  ಅವರು ಅನುಸರಿಸುತ್ತಿರುವ ಸಾವಯವ ಕೃಷಿ ಪದ್ಧತಿಯ ಕೃಷಿ ಈಗ ಎಲ್ಲರಿಗೂ ಮಾದರಿಯಾಗಿದೆ.  ಇವರ ಈ ಸಾಧನೆಯೇ ಮುಖ್ಯಮಂತ್ರಿಗಳನ್ನು ಅವರ ಅಂಗಳಕ್ಕೆ ಆಹ್ವಾನಿಸಿದೆ.  ಕಿರಿಯ ವಯಸ್ಸಿನವರಾದ ಆನಂದರಡ್ಡಿ ಇಮ್ಮಡಿ ಅಘನ್ಯ ಸಾವಯವ ಕೃಷಿ ಪರಿವಾರದ ಕೊಪ್ಪಳ ತಾಲೂಕು ಸಂಚಾಲಕರಾಗಿ ತಾಲೂಕಿನಾದ್ಯಂತ ಸಾವಯವ ಕೃಷಿ ಪದ್ಧತೆ ಬೆಳೆಸುತ್ತಿದ್ದಾರೆ.  ಅಲ್ಲದೆ ಈ ಕುರಿತು ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ.  ಇದೆಲ್ಲವನ್ನು ಗಮನಿಸಿದ ರಾಯಚೂರು ಕೃಷಿ ವಿವಿ. ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.  ಇದೇ ಕಾರಣಕ್ಕಾಗಿ ರಾಜ್ಯ ಸಾವಯವ ಕೃಷಿ ಮಿಷನ್ ಆನಂದರಡ್ಡಿ ಅವರ ಮನೆಯಲ್ಲಿ ಸಾವಯವ ಕೃಷಿಕನ ಮನೆಯಂಗಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಹಮ್ಮಿಕೊಂಡಿರುವುದು ಗ್ರಾಮದ ಹೆಮ್ಮೆಯ ಸಂಗತಿಯಾಗಿದ್ದು, ಇದಕ್ಕೆಲ್ಲ ಆನಂದರಡ್ಡಿ ಇಮ್ಮಡಿಯವರ ಕೃಷಿಯಲ್ಲಿನ ಸಾಧನೆಗೆ ಸಾಕ್ಷಿ.  ತಮ್ಮ ೬ ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಬಾಳೆ, ದಾಳಿಂಬೆ, ಚಿಕ್ಕು, ಪೇರಲ, ಅಂಜೂರ ಮತ್ತು ಎಲೆಬಳ್ಳಿ, ಉಳ್ಳಾಗಡ್ಡಿ, ಮೆಣಸಿನಕಾಯಿ, ಟೊಮೆಟೋ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ.  ಈಗಂತೂ ಇರುವಷ್ಟು ಭೂಮಿಯಲ್ಲಿ ತೋಟಗಾರಿಕೆ ಬೆಳೆಯ ಕ್ರಾಂತಿಯನ್ನೇ ಮಾಡುತ್ತಿದ್ದು, ಸುಮಾರು ವರ್ಷಗಳಿಂದ ವೀಳ್ಯದೆಲೆ ಬೆಳೆಯಲಾಗುತ್ತಿದೆ.  ಹುಬ್ಬಳ್ಳಿ, ಧಾರವಾಡ, ಬೆಳಗಾವಿಯ ಮಾರುಕಟ್ಟೆಯಲ್ಲಿ ಡೊಂಬರಹಳ್ಳಿ ಗ್ರಾಮ ಚಿರಪರಿಚಿತ.  ಇದಾದ ಬಳಿಕ ಈಗ ಬಾಳೆ ಬೆಳೆಯಲ್ಲಿ ಈ ಗ್ರಾಮ ದೊಡ್ಡ ಕ್ರಾಂತಿಯನ್ನೆ ಮಾಡಿದೆ.  ಆನಂದರಡ್ಡಿ ಇಮ್ಮಡಿ ಅವರು ಸಾವಯವ ಕೃಷಿಯ ಅಳವಡಿಕೆಯ ನಂತರ ಪ್ರತಿ ವರ್ಷ ಹೈನುಗಾರಿಕೆಯಿಂದ ಸುಮಾರು ೪೦೦೦೦ ರೂ., ತರಕಾರಿಯಿಂದ ೩೦೦೦೦ ರೂ., ಎಲೆಬಳ್ಳಿಯಿಂದ ೫೦೦೦೦, ಉಳ್ಳಾಗಡ್ಡಿ, ಮೆಣಸಿನ ಗಿಡದಿಂದ ೩೫೦೦೦ ರೂ., ತೋಟಗಾರಿಕೆ ಬೆಳೆಗಳಿಂದ ೨೦೦೦೦ ರೂ., ಅಲ್ಲದೆ ಒಂದು ಎಕರೆಗೆ ಸುಮಾರು ೪೦  ಟನ್ ಬಾಳೆ ಬೆಳೆಯ ಇಳುವರಿ ತೆಗೆಯುತ್ತಿದ್ದಾರೆ.  ರೈತರು ಸರ್ಕಾರದ ಸೌಲಭ್ಯವನ್ನು ಅಕ್ಷರಶಃ ಸದ್ಬಳಕೆ ಮಾಡಿಕೊಳ್ಳುತ್ತಿದ್ದು, ಬಯಲು ನಾಡಲ್ಲೊಂದು ಮಲೆನಾಡು ಎನ್ನುವಂತಿದೆ ಡೊಂಬರಳ್ಳಿ ಗ್ರಾಮ.
  ಆನಂದರಡ್ಡಿ ಇಮ್ಮಡಿ ಅವರು ಓದಿದ್ದು ಡಿಪ್ಲೋಮಾ, ಖಾಸಗಿ ಕಂಪನಿಯಲ್ಲಿ ಸಿಕ್ಕಿದ್ದ ನೌಕರಿಯನ್ನು ತ್ಯಜಿಸಿ, ಸಾವಯವ ಕೃಷಿಯತ್ತ ಒಲವು ತೋರಿ, ಡೊಂಬರಳ್ಳಿ ಗ್ರಾಮವನ್ನೆ ಮಾದರಿ ಗ್ರಾಮವನ್ನಾಗಿಸುವಲ್ಲಿ ಶ್ರಮ ವಹಿಸಿದ್ದಾರೆ.  ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಿ ಸ್ಥಳಾಂತರವಾದ ಡೊಂಬರಳ್ಳಿ ಗ್ರಾಮದಲ್ಲಿ ಮೊದಲಿನಿಂದಲೂ ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುತ್ತಿದ್ದರು.  ಇತ್ತೀಚೆಗೆ ಸುಭಾಷ್ ಪಾಳೇಕಾರ್ ಅವರ ಉಪನ್ಯಾಸದಿಂದ ಪ್ರಭಾವಿತರಾಗಿ ಶೂನ್ಯ ಕೃಷಿಯತ್ತ ಒಲವು ಬೆಳೆಸಿಕೊಂಡರು, ಇದಾದ ಬಳಿಕ ರಾಜ್ಯ ಸಾವಯವ ಕೃಷಿ ಮಿಷನ್ ಪ್ರಭಾವಕ್ಕೆ ಒಳಗಾಗಿ ಇಡೀ ಗ್ರಾಮ ಸಾವಯವ ಕೃಷಿಯತ್ತ ಮುಖ ಮಾಡಲು ಕಾರಣವಾಗಿದೆ.  ಈ ಗ್ರಾಮದ ಪ್ರತಿಯೊಬ್ಬ ರೈತರ ಮನೆಯಲ್ಲಿಯೂ ಜಾನುವಾರುಗಳ ಮೂತ್ರವನ್ನು ಸಂಗ್ರಹ ಮಾಡುವುದಕ್ಕೆ ವ್ಯವಸ್ಥೆ ಮಾಡಿದ್ದು, ಸಗಣಿ, ಗೊಬ್ಬರ, ಬಳಸಿಕೊಳ್ಳಲಾಗುತ್ತಿದ್ದು, ಒಂದೇ ಒಂದು ಪುಟ್ಟಿ ರಸಾಯನಿಕ ಗೊಬ್ಬರವನ್ನು ಸಹ ಬಳಸಲು ಮನಸ್ಸಾಗುವುದಿಲ್ಲ.  ಇವರ ಎಲ್ಲ ಶ್ರಮಕ್ಕೂ ಪತ್ನಿ ಪವಿತ್ರಾ ಇಮ್ಮಡಿ ಅವರ ಸಹಕಾರ, ಪ್ರೇರಣೆಯನ್ನು ಮರೆಯುವಂತಿಲ್ಲ  ಎನ್ನುತ್ತಾರೆ ಕೃಷಿಕ ಆನಂದರಡ್ಡಿ ಇಮ್ಮಡಿ ಅವರು.

Advertisement

1 comments:

  1. ಎಲ್ಲಾ ಓಕೆ ಸಂಪರ್ಕ ಸಂಖ್ಯೆ ಯಿಲ್ಲ ಯಾಕೆ ?

    ReplyDelete

 
Top