PLEASE LOGIN TO KANNADANET.COM FOR REGULAR NEWS-UPDATES



  ಮಹಾಭಾರತದಲ್ಲಿ ಕರ್ಣನಿಗೆ ತನ್ನ ಎದೆಯ ಸುತ್ತ ಹುಟ್ಟಿನಿಂದಲೇ ಬಂದ ರಕ್ಷಾ ಕವಚವಿತ್ತು.  ಆ ರಕ್ಷಣಾ ಕವಚದ ಕಾರಣದಿಂದ ಬಾಣಗಳು ಆತನ ಶರೀರಕ್ಕೆ ಯಾವುದೇ ಗಾಯ ಮಾಡಲು ಸಾಧ್ಯವಿರಲಿಲ್ಲವಂತೆ.  ಮಹಾಭಾರತದ ಸೂತ್ರಧಾರಿ ಶ್ರೀ ಕೃಷ್ಣನು, ತನಗೆ ಪ್ರಿಯನಾದ ಅರ್ಜುನನ್ನು ಉಳಿಸಲೋಸುಗ, ಕರ್ಣನಿಂದ ಆ ಕವಚವನ್ನು ದಾನವಾಗಿ ಪಡೆದನಂತೆ, ನಂತರದ ಯುದ್ಧದಲ್ಲಿ ಕವಚ ರಹಿತ ಕರ್ಣನನ್ನು ತೀಕ್ಷ್ಣ ಬಾಣದಿಂದ ಅರ್ಜುನನು ಕೊಂದನು ಎಂಬುದು ಮಹಾಭಾರತದ ಕಥಾ ಪ್ರಸಂಗ.
  ಅರೆ! ಮಹಾಭಾರತದ ಕರ್ಣನಿಗೂ ಈ ಓಜೋನ್ ಬಗೆಗಿನ ಲೇಖನಕ್ಕೂ ಎಲ್ಲಿಯ ಸಂಬಂಧ ಎಂದೆನಿಸಿತೆ!  ಇಲ್ಲಿಯೇ ಇರುವುದು ಸ್ವಾರಸ್ಯ, ಮಹಾಭಾರತದ ಕರ್ಣನಿಗೆ ಇದ್ದ ರೀತಿಯಲ್ಲಿಯೇ ಈ ಭೂಮಿಯಲ್ಲಿನ ಸಕಲ ಜೀವಿಗಳನ್ನು ರಕ್ಷಿಸುವ ಓಜೋನ್ ಎಂಬ ಕವಚವೊಂದು ನಮ್ಮ ವಾಯುಮಂಡಲದಲ್ಲಿದೆ.
ಏನಿದು ಓಜೋನ್? : ಓಜೋನ್ ಎಂಬುದು ಒಂದು ಅನಿಲ, ಅಲ್ಲದೆ ಇದು ಆಮ್ಲಜನಕದ ಮತ್ತೊಂದು ರೂಪ.  ಆಮ್ಲಜನಕದ (ಔ೨) ಒಂದು ಅಣುವಿನಲ್ಲಿ ಎರಡು ಪರಮಾಣುಗಳಿದ್ದರೆ, ಓಜೋನ್ (ಔ೩) ನ ಒಂದು ಅಣುವಿನಲ್ಲಿ ಮೂರು ಪರಮಾಣುಗಳಿರುತ್ತವೆ.  ಸಕಲ ಜೀವಿಗಳಿಗೂ ಆಮ್ಲಜನಕ ಬದುಕಲು ಬೇಕಾದ ಪ್ರಾಣವಾಯು.  ಆಮ್ಲಜನಕವನ್ನು ಉಸಿರಾಡದೇ ಇದ್ದಲ್ಲಿ ಸಾವು ನಿಶ್ಚಿತ.  ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ಭೂಮಿಯ ರಕ್ಷಣಾ ಕವಚವಾದ ಓಜೋನ್, ಆಮ್ಲಜನಕದ ಮತ್ತೊಂದು ರೂಪವಾಗಿದ್ದರೂ, ಸೇವನೆಯ ದೃಷ್ಟಿಯಿಂದ ಇದು ಒಂದು ವಿಷಾನಿಲ.  ಈ ಓಜೋನ್ ಅನಿಲವು ನಮ್ಮ ವಾಯುವಂಡಲದಲ್ಲಿ ಭೂ ಮೇಲ್ಮೈಯಿಂದ ಸುಮಾರು ೧೫ ರಿಂದ ೩೦ ಕಿ.ಮೀ. ಗಳಷ್ಟು ಎತ್ತರದಲ್ಲಿ ಸಕಲ ಜೀವರಾಶಿಗಳ ರಕ್ಷಕ ಪೊರೆಯಾಗಿ ಕರ್ತವ್ಯ ನಿರ್ವಹಿಸುತ್ತಿದೆ.  ಸೂರ್ಯನಿಂದ ಹೊರಹೊಮ್ಮುವ ತೀಕ್ಷ್ಣ ಕಿರಣಗಳ ಪೈಕಿ ನೇರಳಾತೀತ ಕಿರಣಗಳು ಅತ್ಯಂತ ಹಾನಿಕಾರಕವಾಗಿವೆ.  ಈ ಕಿರಣಗಳಿಗೆ ಜೀವಿಗಳ ದೇಹ ಒಡ್ಡಲ್ಪಟ್ಟರೆ, ಚರ್ಮದ ಕ್ಯಾನ್ಸರ್ ಮುಂತಾದ ಪ್ರಾಣಘಾತುಕ ರೋಗಗಳು ಉಂಟಾಗುತ್ತವೆ.  ಇಂತಹ ಅಪಾಯಕಾರಿ ಕಿರಣಗಳು, ಭೂಮಿಗೆ ಬರದಂತೆ ತಡೆಗಟ್ಟುವ ಕಾರ್ಯವನ್ನು ವಾಯುಮಂಡಲದ ಸ್ಥರಗೋಲದಲ್ಲಿ ತಿಳಿ ನೀಲಿ ವರ್ಣದಲ್ಲಿ ತೆಳುವಾಗಿ ಹರಡಿಕೊಂಡಿರುವ ಓಜೋನ್ ಅನಿಲ ಪೊರೆ ಮಾಡುತ್ತಿದೆ.  ಒಂದು ವೇಳೆ ಈ ತೆಳುವಾದ ಕವಚವು ಇಲ್ಲದೇ ಹೋಗಿದ್ದಲ್ಲಿ, ಸೂರ್ಯನ ಅಪಾಯಕಾರಿ ನೇರಳಾತೀತ ಕಿರಣಗಳು ಭೂಮಿಯ ಸಕಲ ಜೀವರಾಶಿಯನ್ನು ನಾಶಮಾಡುತ್ತಿದ್ದವು.
ಅಪಾಯಕಾರಿ ನೇರಳಾತೀತ ಕಿರಣ : ಆಧುನಿಕ ಜಗತ್ತಿನ ಮಾನವನಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯದಿಂದ ಓಜೋನ್ ತೆಳು ಪದರವು ಹಾನಿಗೊಳಗಾಗಿ ಮತ್ತಷ್ಟು ತೆಳುವಾಗುತ್ತಿದೆ.  ಓಜೋನ್ ಈಗಿರುವ ಪ್ರಮಾಣಕ್ಕಿಂತ ಕಡಿಮೆಯಾದಲ್ಲಿ, ಆಗುವ ದುಷ್ಪರಿಣಾಮಗಳು ಅಪಾರ.  ಓಜೋನ್ ಅನಿಲವು ತೆಳುವಾದಂತೆಲ್ಲ, ಸೂರ್ಯನಿಂದ ಹೊರ ಹೊಮ್ಮುವ ನೇರಳಾತೀತ ಕಿರಣಗಳನ್ನು ತಡೆಹಿಡಿಯುವ ಶಕ್ತಿಯನ್ನು ಅದು ಕಳೆದುಕೊಳ್ಳುತ್ತದೆ.  ಈ ಅಪಾಯಕಾರಿ ಕಿರಣಗಳು ವಾಯುಮಂಡಲದ ಮೂಲಕ ಹಾದು ಬಂದು, ಭೂಮಿಯಲ್ಲಿನ ಜೀವಿಗಳಿಗೆ ಅನೇಕ ರೋಗ ರುಜಿನಗಳನ್ನು ಉಂಡುಮಾಡುತ್ತವೆ.  ಮಾನವನ ದೇಹದಲ್ಲಿನ ರೋಗ ಪ್ರತಿರೋಧ ಶಕ್ತಿಯನ್ನು ಕುಂದಿಸುವ ಈ ಕಿರಣಗಳು ಚರ್ಮದ ಕ್ಯಾನ್ಸರ್‌ನಂತಹ ಪ್ರಾಣಘಾತುಕ ರೋಗವನ್ನು ಉಂಟುಮಾಡುತ್ತವೆ.  ಜಲಚರ ಜೀವಿಗಳು, ಸೂಕ್ಷ್ಮ ಜೀವಿಗಳಷ್ಟೆ ಅಲ್ಲದೆ ಸಸ್ಯಗಳೂ ಸಹ ಹಾನಿಗೊಳಗಾಗುತ್ತವೆ.  ಇದರಿಂದ ಆಹಾರ ಉತ್ಪಾದನೆಯಲ್ಲಿ ಏರು-ಪೇರು ಉಂಟಾಗಿ ಆಹಾರ ಸರಪಳಿಯಲ್ಲಿ ಮತ್ತು ಜೀವಿಗಳ ಸಮತೋಲನದಲ್ಲಿಯೂ ವ್ಯೆತ್ಯಾಸ ಉಂಟಾಗುವುದು.  ಜಾಗತಿಕ ಉಷ್ಣತೆಯ ಗತಿ ಹೆಚ್ಚಾಗಿ ಇಡೀ ಜೀವ ಸಂಕುಲಕ್ಕೆ ಅಪಾಯಕ್ಕೆ ಸಿಲುಕುವುದು ಖಂಡಿತ.
ಸಂಕಷ್ಟದಲ್ಲಿ ಓಜೋನ್ : ಪರಿಸರದ ಮೇಲೆ ಮಾನವ ಎಸಗುತ್ತಿರುವ ದೌರ್ಜನ್ಯದಿಂದಾಗಿ ಓಜೋನ್ ಕವಚದ ಅಸ್ತಿತ್ವದ ಮೇಲೆ ಪ್ರತಿಕೂಲ ಪ್ರಭಾವ ಉಂಟಾಗಿದ್ದು, ಅದು ಜೀವಿ ಮತ್ತು ಸಸ್ಯ ಸಂಕುಲದ ಮೇಲೆ ವಿನಾಶಕಾರಿ ಪರಿಣಾಮ ಉಂಟು ಮಾಡಲಿದೆ.  ಜೀವಿ ಸಂಕುಲಗಳ ರಕ್ಷಕ ಓಜೋನ್ ಕವಚಕ್ಕೆ ಧಕ್ಕೆ ತರುವಂತಹ ಅಪಾಯಕಾರಿ ವಸ್ತುವೆಂದರೆ ಕ್ಲೋರೋಫ್ಲೋರೋ ಕಾರ್ಬನ್‌ಗಳು (ಸಿ.ಎಫ್.ಸಿ).  ಜಗತ್ತಿನಲ್ಲಿ ಈ ವಸ್ತುಗಳನ್ನು ಅಪಾರ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದ್ದು, ಇದು ಓಜೋನ್ ಕವಚಕ್ಕೆ ಮಾರಕವಾಗಿ ಪರಿಣಮಿಸಿದೆ.  ಈ ಸಂಯುಕ್ತ ಸಿ.ಎಫ್.ಸಿ. ವಸ್ತುಗಳನ್ನು ತಂಪುಕಾರಕಗಳನ್ನಾಗಿ ಶೀತಲ ಯಂತ್ರಗಳಲ್ಲಿ ಅಗತ್ಯವಾಗಿ ಬಳಸುತ್ತಾರೆ.  ಅಲ್ಲದೆ ಆಹಾರದ ಡಬ್ಬಿಗಳಲ್ಲಿ, ಸ್ಪಂಜುಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ.  ಅತ್ಯಧಿಕ ಪ್ರಮಾಣದ ಸಿ.ಎಫ್.ಸಿ. ವಸ್ತುವಿನ ಬಳಕೆಯೇ ಓಜೋನ್ ಕವಚದ ಅಸ್ತಿತ್ವಕ್ಕೆ ಮಾರಕವಾಗಿ ಪರಿಣಮಿಸಿರುವುದು ದುರದೃಷ್ಟಕರ ಸಂಗತಿಯಾಗಿದೆ.  ಸಿ.ಎಫ್.ಸಿ.ಗಳು ವಾಯುಮಂಡಲವನ್ನು ಸೇರಿ, ನಂತರ ನಿಧಾನವಾಗಿ ಮೇಲೇರುತ್ತ ಸುಮಾರು ೧೫ ರಿಂದ ೩೦ ಕಿ.ಮೀ. ಎತ್ತರದಲ್ಲಿರುವ ಸ್ಥರಗೋಲವನ್ನು ತಲುಪುತ್ತವೆ.  ಅಲ್ಲಿ ನೇರಳಾತೀತ ಕಿರಣಗಳೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಗಾಗಿ ಕ್ಲೋರಿನ್ ಅನಿಲವನ್ನು ಬಿಡುಗಡೆ ಮಾಡುತ್ತವೆ.  ಈ ಕ್ಲೋರಿನ್ ಅನಿಲವು ಓಜೋನ್‌ನ ಅಣುಗಳೊಂದಿಗೆ ಪ್ರಕ್ರಿಯೆ ಓಜೋನ್ ಅನಿಲದ ಸಾಂದ್ರತೆಯನ್ನು ಕ್ಷೀಣಿಸುತ್ತವೆ.  ಬಾಹ್ಯಾಕಾಶದ ಸಂಶೋಧನೆಗೆ, ರಕ್ಷಣಾ ಉದ್ದೇಶಗಳಿಗೆ ಹಾಗೂ ಉಪಗ್ರಹಗಳ ಉಡಾವಣೆಗೆ ಹಾರಿಬಿಡುವ ರಾಕೆಟ್‌ಗಳಿಂದಲೂ ಓಜೋನ್ ಕವಚಕ್ಕೆ ಹಾನಿಯಾಗುವ ಸಾಧ್ಯತೆ ಇದೆ.  ಬೃಹತ್ ಕೈಗಾರಿಕೆಗಳಿಂದ, ನಾವು ಬಳಸುವ ವಾಹನಗಳ ಹೊಗೆಯಿಂದಲೂ ಓಜೋನ್ ಕವಚಕ್ಕೆ ದಕ್ಕೆ ಇದೆ.
ಓಜೋನ್ ಪದರಕ್ಕೆ ರಂಧ್ರ:  ೧೯೮೨ ರ ಅಕ್ಟೋಬರ್‌ನಲ್ಲಿ ಪ್ರಥಮ ಬಾರಿಗೆ ಓಜೋನ್ ಪದರಕ್ಕೆ ರಂಧ್ರ ಉಂಟಾಗಿರುವುದನ್ನು ಪತ್ತೆಹಚ್ಚಲಾಯಿತು.  ಅಂಟಾರ್ಟಿಕ್ ಪ್ರದೇಶದಲ್ಲಿ ಸುಮಾರು ಅಮೆರಿಕಾ ದೇಶದಷ್ಟು ವಿಸ್ತಾರವಾದ ಓಜೋನ್ ರಂಧ್ರ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.  ಈ ರಂಧ್ರದ ವಿಸ್ತಾರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ.
ಓಜೋನ್ ಕವಚದ ರಕ್ಷಣೆಗೆ ಯೋಜನೆ : ಓಜೋನ್ ಪದರದ ರಕ್ಷಣೆಗಾಗಿ ಇಂದು ಪ್ರಪಂಚದ ಎಲ್ಲಾ ರಾಷ್ಟ್ರಗಳೂ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ.  ೧೯೮೫ ರಲ್ಲಿ ಓಜೋನ್ ಪದರ ರಕ್ಷಣೆಗಾಗಿಯೇ ಅಂತಾರಾಷ್ಟ್ರೀಯ ಸಮಾವೇಶವನ್ನು ವಿಯೆನ್ನಾದಲ್ಲಿ ನಡೆಸಲಾಯಿತು.  ಓಜೋನ್ ಪದರದ ಬಗ್ಗೆ ಹೆಚ್ಚಿನ ಅರಿವು, ಸಂಶೋಧನೆ ನಡೆಸಲು ಈ ಸಮಾವೇಶದಲ್ಲಿ ನಿರ್ಣಯ ಕೈಗೊಂಡು, ಕಾರ್ಯಗತಗೊಳಿಸಲು ಶ್ರಮಿಸಲಾಗುತ್ತಿದೆ.  ಇದರ ಫಲಶ್ರುತಿಯಾಗಿ ಸಿ.ಎಫ್.ಸಿ.ಗಳ ಬಳಕೆಯನ್ನು ಕಡಿತಗೊಳಿಸಲು ಎಲ್ಲಾ ದೇಶಗಳು ಸಮ್ಮತಿಸಿದವು.  ಇದರ ಪರಿಣಾಮವಾಗಿಯೇ ಸಿ.ಎಫ್.ಸಿ. ಗಳಿಲ್ಲದ ಶೀತಕ ಯಂತ್ರಗಳು, ಹವಾ ನಿಯಂತ್ರಣದ ಉಪಕರಣಗಳು ಮಾರುಕಟ್ಟೆಗೆ ಬರುತ್ತಿವೆ.
  ಓಜೋನ್ ರಕ್ಷಣಾ ಕವಚದ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಸೆಪ್ಟಂಬರ್ ತಿಂಗಳಲ್ಲಿ ವಿಶ್ವ ಓಜೋನ್ ದಿನಾಚರಣೆ ಆಚರಿಸಲಾಗುತ್ತಿದೆ.  ಒಂದು ವೇಳೆ ನಾವು ನಮ್ಮ ಪರಿಸರ ನಾಶಕ ಚಟುವಟಿಕೆಗಳನ್ನು ಹತ್ತಿಕ್ಕದೆ, ಇದೇ ಪ್ರಮಾಣದಲ್ಲಿ ಮುಂದುವರಿಸಿದರೆ ಅದರಿಂದ ಮನುಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.  ಜಗತ್ತಿನ ಎಲ್ಲಾ ರಾಷ್ಟ್ರಗಳು ಓಜೋನ್ ರಕ್ಷಾ ಕವಚವನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.  ಇದಕ್ಕೆ ಪ್ರಜ್ಞಾವಂತ ನಾಗರಿಕ ಸಮಾಜವೂ ಸಹ ಕೈಜೋಡಿಸುವ ಅಗತ್ಯವಿದ್ದು, ಪರಿಸರ ನಾಶ ಮಾಡುವಂತಹ ಪ್ಲಾಸ್ಟಿಕ್ ವಸ್ತುಗಳನ್ನು ತ್ಯಜಿಸಬೇಕಾದ ಅನಿವಾರ್ಯತೆ ಇದೆ.  ಪರಿಸರ ಸಂರಕ್ಷಣೆಗೆ ಎಲ್ಲರೂ ಕಂಕಣಬದ್ಧರಾಗಬೇಕಾಗಿದೆ.  ಗಿಡ-ಮರಗಳನ್ನು ಹೆಚ್ಚು, ಹೆಚ್ಚಾಗಿ ಬೆಳೆಸಿ, ಪೋಷಿಸಿ, ಸಂರಕ್ಷಿಸಬೇಕಾಗಿದೆ.

  -  ತುಕಾರಾಂ ರಾವ್ ಬಿ.ವಿ.
   ಜಿಲ್ಲಾ ವಾರ್ತಾಧಿಕಾರಿ,ವಾರ್ತಾ ಇಲಾಖೆ,ಕೊಪ್ಪಳ- ೫೮೩ ೨೩೧.

Advertisement

0 comments:

Post a Comment

 
Top