PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳದಲ್ಲಿ ಟ್ರೈನ್ ಟು ಪಾಕಿಸ್ತಾನ ನಾಟಕ ಪ್ರದರ್ಶನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆ. ೨೧ ರಂದು ಟ್ರೈನ್ ಟು ಪಾಕಿಸ್ತಾನ್: ನಾಟಕ
ಕೊಪ್ಪಳ ಆ. ೧೯ (ಕ.ವಾ): ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಡಿ ಖುಷ್ವತ್‌ಸಿಂಗ್ ಕಾದಂಬರಿ ಆಧಾರಿತ ನಾಟಕ ಟ್ರೈನ್ ಟು ಪಾಕಿಸ್ತಾನ್ ಕಾರ್ಯಕ್ರಮವನ್ನು ಆ. ೨೧ ರಂದು ಸಂಜೆ ೬-೩೦ ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಆಯೋಜಿಸಿದೆ.
ರಾಯಚೂರಿನ ಸಮುದಾಯ ತಂಡ ಈ ನಾಟಕದ ಪ್ರದರ್ಶನ ನೀಡಲಿದ್ದು, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಡಾ. ಸೀತಾ ಗೂಳಪ್ಪ ಹಲಗೇರಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ವಿ. ಹಾಗೂ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ ಕುಕನೂರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
೯೬ ವರ್ಷ ತುಂಬಿರುವ ಖುಷ್ವತ್‌ಸಿಂಗ್ ಮೂಲತಃ ಪಂಜಾಬ್‌ನ ಹಳ್ಳಿಯ ಮನುಷ್ಯ ಜೀವನವನ್ನು ಬಹುವಾಗಿ ಪ್ರೀತಿಸುವ ಈ ಸರ್ದಾರ್ ಎಲ್ಲಾ ಜಾತಿಯ ಜನರನ್ನು ಪ್ರೀತಿಸುತ್ತಾನೆ. ಎಲ್ಲಾ ಜಾತಿಯ ಜನರ ದೌರ್ಬಲ್ಯ, ಪ್ರೀತಿ, ದಾಕ್ಷಿಣ್ಯ ಎಲ್ಲವನ್ನು ಬಲ್ಲ ನಿರೀಶ್ವರವಾದಿಯಾದ್ದರಿಂದ ಈತನಿಗೆ ಧರ್ಮದ ಮಿತಿಗೊತ್ತು. ಖುಷ್ವತ್‌ಸಿಂಗ್ ಪಾಕಿಸ್ತಾನ ಮತ್ತು ಭಾರತವನ್ನು ಹತ್ತಿರ ತರುವಲ್ಲಿ ಶ್ರಮಿಸಿದ್ದಾರೆ. ಟ್ರೈನ್ ಟು ಪಾಕಿಸ್ತಾನ್ ಕಥೆ ನಡೆಯುವುದು ಪಂಜಾಬ್ ರಾಜ್ಯದ ಮನೋಮಜ್ರಾ ಎಂಬ ಹಳ್ಳಿಯಲ್ಲಿ, ಹಲವಾರು ದಶಕಗಳಿಂದ ಮನೋಮಜ್ರಾದ ಸಿಖ್ಖರು, ಮುಸ್ಲೀಮರು, ಹಿಂದುಗಳು ಸೌಹಾರ್ದ ಬಾಳ್ವೆ ನಡೆಸುತ್ತಿದ್ದರು. ಆದರೆ ದೇಶ ವಿಭಜನೆಯ ಸಂದರ್ಭದಲ್ಲಿ ಎಲ್ಲೋ ನಡೆಯುವ ವಿದ್ಯಮಾನಗಳು ಮನೋಮಜ್ರಾದಲ್ಲಿನ ಶಾಂತಿಯನ್ನು ಛಿದ್ರಗೊಳಿಸಿ ರಕ್ತಪಾತಕ್ಕೆ ನಾಂದಿ ಹಾಡುತ್ತದೆ. ಅತ್ಯಂತ ವಿನೀತವಾದ ಜಾಗತಿಕ ಸತ್ಯಗಳನ್ನು ಪ್ರಕಟಿಸುವುದರೊಂದಿಗೆ ಹಿಂಸೆಯನ್ನು ಮೀರುವ ಹಾದಿಯನ್ನು ಹುಡುಕುತ್ತದೆ. ನಮ್ಮನ್ನು ನಾವೇ ನಾಶ ಮಾಡಿಕೊಳ್ಳುವ ಅಪಾಯದಿಂದ ಜಗತ್ತನ್ನು ಪಾರು ಮಾಡುವುದು ಎಲ್ಲರ ಕರ್ತವ್ಯವಾಗಬೇಕೆಂದು ಇಲ್ಲಿನ ಆಶಯ.
ನಾಗಭೂಷಣ ನಾಗಳ್ಳಿ, ಪಿ.ಎನ್. ಕುಮಾರ, ಪ್ರವೀಣ ರಡ್ಡಿ ಗುಂಜಳ್ಳಿ, ಸುರೇಶ, ಅಮರೇಶ, ಚಂದ್ರಶೇಖರ, ವೆಂಕಟನರಸಿಂಹಲು, ಸುರೇಶ ಎಂ. ಗೋವಿಂದ, ಜಯಶ್ರೀ ಪಾಟೀಲ್ ಸಿಂಧನೂರು, ಚೆನ್ನಪ್ಪ, ಚಿದಾನಂದ ಸಾಲಿ ಮುಂತಾದವರು ರಂಗದ ಮೇಲೆ ಪ್ರದರ್ಶನ ನೀಡಲಿದ್ದು, ಚಿದಾನಂದ ಸಾಲಿ ಅವರು ನಾಟಕ ರೂಪಾಂತರ ಮಾಡಿದ್ದಾರೆ. ಪಿ.ಎನ್. ಕುಮಾರ್ ಅವರ ರಂಗಸಜ್ಜಿಕೆಯಲ್ಲಿ, ವಿನ್ಯಾಸ ಮತ್ತು ನಿರ್ದೇಶನವನ್ನು ತಾಯಣ್ಣ ಯರಗೇರಾ ಅವರ ನಿರ್ವಹಿಸಲಿದ್ದು, ಬಿ. ರಾಜಶೇಖರ ಅವರು ಬೆಳಕಿನ ವ್ಯವಸ್ಥೆ ಕೈಗೊಳ್ಳುವರು. ಕರಿಯಪ್ಪ ಕೆ. ಹಾಗೂ ನರೇಂದ್ರ ಅವರು ಸಂಗೀತ ನೀಡಲಿದ್ದಾರೆ. ಈ ಕುತೂಹಲಕಾರಿ ನಾಟಕ ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶ ಅವಕಾಶವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Advertisement

0 comments:

Post a Comment

 
Top