ಹೊಸದಿಲ್ಲಿ, ಆ.19: ಪ್ರಬಲ ಲೋಕಪಾಲ ಮಸೂದೆಯ ಮಂಡನೆಗಾಗಿ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಇಂದಿನಿಂದ ರಾಮ್‌ಲೀಲಾ ಮೈದಾನದಲ್ಲಿ ಉಪವಾಸ ನಿರಶನ ನಡೆಸಲಿದ್ದು, ಇದೀಗ ತಿಹಾರ್ ಜೈಲಿನಿಂದ ಹೊರಬಂದಿದ್ದಾರೆ.
ತಿಹಾರ್ ಜೈಲಿನ ಹೊರಗಡೆ ಸೇರಿದ್ದ ಸಾವಿರಾರು ಸಂಖ್ಯೆಯಲ್ಲಿದ್ದ ಅಭಿಮಾನಿಗಳು ಅಣ್ಣಾ ಪರ ಘೋಷಣೆ ಕೂಗಿ ಅಣ್ಣಾರನ್ನು ಬರಮಾಡಿಕೊಂಡರು.
ಬಳಿಕ ಅಭಿಮಾನಿಗಳನ್ನುದ್ದೇಶಿ ಮಾತನಾಡಿದ ಅಣ್ಣಾ ಹಝಾರೆ, ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಹೋರಾಟ ಆರಂಭವಾಗಿದ್ದು, ಇದರಲ್ಲಿ ಕೈ ಜೋಡಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಈ ಹೋರಾಟ ಮುಂದುವರಿಯಲಿದ್ದು, ಎಲ್ಲರೂ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದರು.
ನಾನೀಗಾಗಲೇ ಆ.16ರಿಂದ ಜೈಲಿನಲ್ಲಿಯೇ ಉಪವಾಸ ನಿರಶನವನ್ನು ಪ್ರಾರಂಭಿಸಿದ್ದು, ಇನ್ನು ಮುಂದೆ ಹೊಸದಿಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ಉಪವಾಸ ನಿರಶನವನ್ನು ಮುಂದವರಿಸಲಿದ್ದೇನೆ ಎಂದರು.
ದೇಶವ್ಯಾಪಿ ಭ್ರಷ್ಟಾಚಾರದ ವಿರುದ್ಧ ಕ್ರಾಂತಿಕಾರಿ ಹೋರಾಟ ಆರಂಭವಾಗಿದ್ದು, ಇದು 2ನೆ ಸ್ವಾತಂತ್ರ ಸಂಗ್ರಾಮದ ಆರಂಭವಷ್ಟೇ ಎಂದರು.
ಬಳಿಕ ಸುರಿಯುತ್ತಿರುವ ಮಳೆಯ ನಡುವೆಯೇ ತೆರೆದ ವಾಹನದಲ್ಲಿ ಅಣ್ಣಾ ಹಝಾರೆ ರಾಮ್‌ಲೀಲಾ ಮೈದಾನದತ್ತ ಹೊರಟಿದ್ದು, ಮೊದಲಿಗೆ ಮಾಯಾಪುರಿ ಚೌಕ್‌ಗೆ ಹೋಗಿ ಅಲ್ಲಿಂದ ರಾಜಘಾಟ್‌ಗೆ ತೆರಳಲಿದ್ದಾರೆ. ಅಲ್ಲಿ ಗಾಂಧಿ ಸಮಾಧಿಗೆ ಪ್ರಾರ್ಥನೆ ಸಲ್ಲಿಸಲಿರುವ ಅಣ್ಣಾ ಹಝಾರೆ ಬಳಿಕ ಇಂಡಿಯಾ ಗೇಟ್ ಮೂಲಕವಾಗಿ ರಾಮ್‌ಲೀಲಾ ಮೈದಾನಕ್ಕೆ ಆಗಮಿಸಿ ನಿರಶನ ನಡೆಸಲಿದ್ದಾರೆ. ಇವರಿಗೆ ಸಾವಿರಾರು ಅಭಿಮಾನಿಗಳು ಸಾಥ್ ನೀಡಿದ್ದು, ಇವರು ಸಂಚರಿಸುತ್ತಿರುವ ರಸ್ತೆಯ ಉದ್ದಗಲಕ್ಕೂ ಟ್ರಾಫಿಕ್ ಜಾಮ್ ಉಂಟಾಗಿದೆ.
vbnews
0 comments:
Post a Comment