‘ಏನು ಮಾಡಲು ಹೋಗಿ, ಏನು ಮಾಡಿದೆಯೋ ನೀನು....’ ಎಂಬ ಹಾಡು ನಿರ್ದೇಶಕ ಪ್ರಕಾಶ್ ಝಾ ಅವರಿಗೆ ಸೂಕ್ತವಾಗಿದೆ. ಅವರ ‘ಆರಕ್ಷಣ್’ ಸಿನಿಮಾವನ್ನು ಮುಗಿಸಿ ಹೊರಬಂದಾಗ, ಒಂದು ನಿಟ್ಟುಸಿರಾಗಿ ಈ ಹಾಡು ಹೊರಹೊಮ್ಮುತ್ತದೆ.
ವರ್ತಮಾನದ ಕೆಲವು ಸೂಕ್ಷ್ಮ ವಿಷಯಗಳನ್ನು ಮನರಂಜನೆಯಾಗಿ ವೀಕ್ಷಕರಿಗೆ ಬಡಿಸಲು ಹೋದರೆ, ಏನಾಗಬಹುದೋ ಅದೇ ಇಲ್ಲೂ ಆಗಿದೆ. ಒಂದೆಡೆ ಮೀಸಲಾತಿಯ ಕುರಿತಂತೆಯೂ ಗಂಭೀರವಾಗಿ ಚರ್ಚಿಸದೆ, ಇನ್ನೊಂದೆಡೆ ಶಿಕ್ಷಣ ವ್ಯವಸ್ಥೆಯನ್ನೂ ಗಂಭೀರವಾಗಿ ಮುಟ್ಟಲಾರದೆ, ನಾಯಕ (ಅಮಿತಾಭ್)- ಖಳನಾಯಕ(ಬಾಜ್‌ಪೇಯಿ) ನಡುವಿನ ಸಂಘರ್ಷವಾಗಿ, ಕೊನೆಯಲ್ಲಿ ಹೀರೋನ ಗೆಲುವಿನೊಂದಿಗೆ ಮುಕ್ತಾಯವಾಗುತ್ತದೆ.
ತಾನು ಸಮಾಜದ ಗಂಭೀರ ವಿಷಯಗಳನ್ನು ಎತ್ತಿಕೊಂಡು ಸಿನಿಮಾ ಮಾಡುತ್ತೇನೆ ಎಂಬ ಭ್ರಮೆ ಹುಟ್ಟಿಸುವ ಮೂಲಕ ‘ವಿಭಿನ್ನ ನಿರ್ದೇಶಕ’ ಎಂದು ಗುರುತಿಸಿಕೊಂಡು ಬಂದಿರುವ ಪ್ರಕಾಶ್ ಝಾ, ಮೀಸಲಾತಿಯ ಬಗ್ಗೆ ಚಿತ್ರ ಮಾಡುತ್ತೇನೆ ಎಂದು ಘೋಷಿಸಿ, ಚಿತ್ರದ ಆರಂಭಕ್ಕೆ ಮುನ್ನವೇ ಸುದ್ದಿಯಲ್ಲಿದ್ದರು. ಆದರೆ ಸಿನೆಮಾ ಎನ್ನುವ ಜನಪ್ರಿಯ ಮಾಧ್ಯಮದಲ್ಲಿ ಕಲೆ-ಮಸಾಲೆಯನ್ನು ಜೊತೆಗೂಡಿಸಿ ಚಿತ್ರ ಮಾಡಿದಾಗ ಅದು ಏನನ್ನೂ ಹೇಳಲಾಗದೆ ಸಮಾಜವನ್ನು ಪ್ರಚೋದಿಸುವ ಕೆಲಸವನ್ನಷ್ಟೇ ಮಾಡಬಹುದು. ಇಲ್ಲಿಯೂ ಆಕರ್ಷಣ್ ಅದನ್ನೇ ಮಾಡಿದೆ. ಮೀಸಲಾತಿಯ ಕುರಿತಂತೆ ಯಾವ ಗಂಭೀರ ಒಳನೋಟವು ಇಲ್ಲದ ಈ ಚಿತ್ರ, ಅಮಿತಾಭ್‌ನಂತಹ ‘ಸ್ಟಾರ್’ಗೆ ತಕ್ಕಂತೆಯೇ ಇದೆ. ಇದನ್ನು ಸಾಮಾಜಿಕ ಒಳಗಣ್ಣಿನ ಮೂಲಕ ನೋಡುವುದೇ ಮೂರ್ಖತನದ ಪರಮಾವಧಿ.
ಭೋಪಾಲದ ಪ್ರಮುಖ ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿರುವ ಅಮಿತಾಭ್ ಬಚ್ಚನ್ ಭಾರತದ ಮೀಸಲಾತಿ ನೀತಿಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕಾಗುತ್ತದೆ. ಮುಂದೆ ಶಿಕ್ಷಕನಾಗಿ ತನ್ನ ಬದುಕನ್ನು ಆತ ಪುನರ್ನಿಮಿಸಲು ಬಯಸುತ್ತಾನೆ. ಆಗ ಅವನಿಗೆ ಖಳನಾಯಕನೊಬ್ಬ ಎದುರಾಗುತ್ತಾನೆ. ಮನೋಜ್ ಬಾಜಪೇಯಿ ಇಲ್ಲಿ ಶಿಕ್ಷಣವನ್ನು ಉದ್ಯಮ ಎಂದು ಭಾವಿಸಿದಾತ. ಈ ಇಬ್ಬರ ನಡುವಿನ ಸಂಘರ್ಷವನ್ನೇ ನಿರ್ದೇಶಕರು ಕ್ಲೈಮಾಕ್ಸ್ ಆಗಿ ಪರಿವರ್ತಿಸುತ್ತಾರೆ.
ಇಂಟರ್‌ವೆಲ್‌ಗೆ ಪೂರ್ವದಲ್ಲಿ ಚಿತ್ರ ಏನನ್ನೋ ಹೇಳಲು ಪ್ರಯತ್ನಿಸುತ್ತದೆ ಎಂಬ ಭ್ರಮೆಯನ್ನು ಹುಟ್ಟಿಸುತ್ತದೆ. ಅಮಿತಾಭ್ ಬಚ್ಚನ್ ಮತ್ತು ಹಿಂದುಳಿದ ವರ್ಗದಿಂದ ಬಂದ ಸೈಫ್ ಅಲಿ ಖಾನ್ ನಡುವಿನ ಸಂಘರ್ಷ, ಹಾಗೆಯೇ ಮೇಲ್ವರ್ಗದ ಪ್ರತಿನಿಧಿಯಾಗಿ ಕಾಣಿಸುವ ಪ್ರತೀಕ್ ಬಬ್ಬರ್ ಪಾತ್ರ ಚಿತ್ರಕ್ಕೆ ವೇಗವನ್ನು ನೀಡುತ್ತದೆ. ಇಲ್ಲಿನ ಸಂಘರ್ಷಗಳು, ಸಂಭಾಷಣೆಗಳಲ್ಲಿ ಒಂದು ರೀತಿಯ ನಾಟಕೀಯತೆ ಇದೆ. ಸೈಫ್ ಅಲಿ ಖಾನ್ ಪೂರ್ವಾರ್ಧದಲ್ಲಿ ಮಿಂಚುತ್ತಾರೆ. ಆದರೆ ಉತ್ತರಾರ್ಧದಲ್ಲಿ ಅವರ ಪಾತ್ರ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ.
ಮುಂದೆ ಚಿತ್ರ ವಿಷಯಾಂತರವಾಗುತ್ತದೆ. ಮಾಮೂಲಿ ನಾಯಕ ಮತ್ತು ಖಳನಾಯಕ ಸೂತ್ರಕ್ಕೆ ಜೋತು ಬೀಳುತ್ತದೆ. ಮೀಸಲಾತಿಯನ್ನು ಪಕ್ಕಕ್ಕಿಟ್ಟು ಕೋಚಿಂಗ್ ಸಂಸ್ಥೆಗಳ ವಿರುದ್ಧ ಬಚ್ಚನ್ ಮೆರೆದಾಡುತ್ತಾರೆ. ಒಟ್ಟಿನಲ್ಲಿ ಚಿತ್ರ ಶಿಕ್ಷಣ ವ್ಯವಸ್ಥೆಯ ಬೃಹತ್ ವೈಫಲ್ಯಗಳ ಕುರಿತಂತೆ ಹೇಳುವುದಕ್ಕೆ ವಿಫಲವಾಗಿದೆ. ಜೊತೆಗೆ ಮೀಸಲಾತಿಯ ಕುರಿತಂತೆ ಅದು ಗೊಂದಲದ ನಿಲುವನ್ನು ತಳೆದಿದೆ.
ಅಮಿತಾಭ್‌ಬಚ್ಚನ್, ಸೈಫ್ ಅಲಿಖಾನ್, ಪ್ರತೀಕ್ ಬಬ್ಬರ್ ಮೊದಲಾದವರು ಚಿತ್ರದಲ್ಲಿದ್ದಾರೆ ಎನ್ನುವ ಕಾರಣಕ್ಕಾಗಿ ಒಮ್ಮೆ ನೋಡಬಹುದು.
-ಮುಸಾಫಿರ್
0 comments:
Post a Comment