ಹೊಸದಿಲ್ಲಿ, ಆ.20: ಪ್ರಬಲ ಲೋಕಪಾಲ ಮಸೂದೆಯ ಜಾರಿಗೆ ಆಗ್ರಹಿಸಿ ಅಣ್ಣಾ ಹಝಾರೆ ನಡೆಸುತ್ತಿರುವ ನಿರಶನ ಶನಿವಾರ ಐದನೆ ದಿನವನ್ನು ಪ್ರವೇಶಿಸಿರುವಂತೆಯೇ, 73 ವರ್ಷ ವಯಸ್ಸಿನ ಈ ಹಿರಿಯ ಗಾಂಧಿವಾದಿ ಇದೀಗ ತನ್ನ ಹೋರಾಟದ ವ್ಯಾಪ್ತಿಯು ಚುನಾವಣಾ ಸುಧಾರಣೆಗಳು ಹಾಗೂ ‘ರೈತ ಸ್ನೇಹಿ’ ಕಾನೂನಿಗೂ ವಿಸ್ತರಣೆಗೊಳ್ಳಲಿದೆಯೆಂದು ಘೋಷಿಸಿದ್ದಾರೆ. ಹಝಾರೆ ನಿರಶನವು 100 ತಾಸುಗಳನ್ನು ದಾಟುತ್ತಿದ್ದಂತೆಯೇ, ಅವರ ಬಳಗವು ಹೇಳಿಕೆಯೊಂದನ್ನು ನೀಡಿ ಲೋಕಪಾಲ ವಿಧೇಯಕದ ಬಗ್ಗೆ ಸರಕಾರದ ಜೊತೆ ಮಾತುಕತೆಗೆ ತಾವು ಸಿದ್ಧ, ಆದರೆ ಈ ತನಕ ಸರಕಾರದ ಜೊತೆ ಅಂತಹ ಯಾವುದೇ ಸಂಪರ್ಕ ಏರ್ಪಟ್ಟಿಲ್ಲವೆಂದು ತಿಳಿಸಿದೆ. ಜನಲೋಕಪಾಲ ವಿಧೇಯಕದ ಅಂಗೀಕಾರಕ್ಕಾಗಿ ಅಣ್ಣಾ ಹಝಾರೆ ವಿಧಿಸಿರುವ ಆಗಸ್ಟ್ 30ರ ಅಂತಿಮ ಗಡುವಿನೊಳಗೆ ಬಿಕ್ಕಟ್ಟು ಬಗೆಹರಿಯ ಬೇಕಾಗಿದೆ ಎಂದು ಹೇಳಿದೆ.
ಕಳೆದ ಮಂಗಳವಾರದಿಂದ ನಿರಶನ ನಿರತರಾಗಿರುವ ಹಝಾರೆ, ಶುಕ್ರವಾರ ತಿಹಾರ್ ಜೈಲಿನಿಂದ ಹೊರಬಂದ ಬಳಿಕ ರಾಮ್‌ಲೀಲಾ ಮೈದಾನದಲ್ಲಿ ಮುಷ್ಕರ ಮುಂದುವರಿಸಿದ್ದಾರೆ. ಶನಿವಾರ ನೆರೆದ ಜನಸ್ತೋಮವನ್ನುದ್ದೇಶಿಸಿ ಎರಡುಬಾರಿ ಮಾತನಾಡಿದ ಅವರು, ಸರಕಾರದ ಬೊಕ್ಕಸಗಳನ್ನು ಕಳ್ಳರೇ ಕಾಯುತ್ತಿದ್ದು, ಅವರಿಂದಲೇ ಅದಕ್ಕೆ ಬೆದರಿಕೆಯುಂಟಾಗಿದೆ.ಈ ದೇಶಕ್ಕೆ ಶತ್ರುಗಳು ದ್ರೋಹ ಬಗೆದಿಲ್ಲ, ಬದಲಾಗಿ ಈ ದೇಶದ್ರೋಹಿಗಳಿಂದಲೇನ ಅನ್ಯಾಯವಾಗಿದೆ’’ ಎಂದು ಕಿಡಿಕಾರಿದರು.
ತನ್ನ ಹೋರಾಟವು ಲೋಕಪಾಲ ವಿಧೇಯಕದ ಜಾರಿಯೊಂದಿಗೆ ಮುಕ್ತಾಯವಾಗಲಾರದು, ಚುನಾವಣಾ ಸುಧಾರಣೆಗಳಿಗಾಗಿ ಹಾಗೂ ರೈತರಿಗೆ ಅವರ ಜಮೀನಿನ ಮೇಲಿರುವ ಹಕ್ಕನ್ನು ಭದ್ರಪಡಿಸುವ ಹೋರಾಟಗಳನ್ನು ಹಮ್ಮಿಕೊಳ್ಳುವುದಾಗಿ ಅವರು ಘೋಷಿಸಿದರು.
‘‘ಲೋಕಪಾಲ ವಿಧೇಯಕದೊಂದಿಗೆ ಈ ಹೋರಾಟವು ಕೊನೆಯಾಗಕೂಡದೆಂದು ದೇಶದ ಯುವಜನತೆಗೆ ನಾನು ಹೇಳಬಯಸುತ್ತೇನೆ. ಪ್ರಸಕ್ತ ಚುನಾವಣಾ ಸುಧಾರಣಾ ಕಾನೂನುಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಕೂಡಾ ನಾವು ಹೋರಾಡಬೇಕಾಗಿದೆ. ಚುನಾವಣಾ ವ್ಯವಸ್ಥೆಯಲ್ಲಿನ ದೋಷಗಳಿಂದಾಗಿ 150 ಕ್ರಿಮಿನಲ್‌ಗಳು ಸಂಸತ್‌ನ್ನು ಪ್ರವೇಶಿಸಿದ್ದಾರೆ’’ ಎಂದು ಹಝಾರೆ ಟೀಕಿಸಿದರು.
ಬ್ರಿಟಿಷರಿಂದ ವಿಮೋಚನೆ ದೊರೆತ 64 ವರ್ಷಗಳ ಬಳಿಕವೂ ಭಾರತಕ್ಕೆ ‘‘ನಿಜವಾದ ಸ್ವಾತಂತ್ರ ದೊರೆತಿಲ್ಲ. ಆಗಿರುವ ಒಂದೇ ಒಂದು ಬದಲಾವಣೆಯೆಂದರೆ ಬಿಳಿಯರ ಸ್ಥಾನವನ್ನು ಕರಿಯರು ತೆರವುಗೊಳಿಸಿರುವುದಷ್ಟೇ’’ ಎಂದು ವ್ಯಂಗ್ಯವಾಗಿ ನುಡಿದರು.
ಸ್ವಾತಂತ್ರ ಪೂರ್ವದಲ್ಲಿದ್ದ ಲೂಟಿ, ಭ್ರಷ್ಟಾಚಾರ ಹಾಗೂ ರೌಡಿಸಂಗಳು ಈಗಲೂ ಅಸ್ತಿತ್ವದಲ್ಲಿವೆಯೆಂದರು. ಲೋಕಪಾಲ ಪರ ಹೋರಾಟದ ಬಳಿಕ ನಾವು ರೈತರ ಹಕ್ಕುಗಳಿಗೂ ಹೋರಾಡುವುದಾಗಿ ತಿಳಿಸಿದ ಅವರು ಕೃಷಿಕರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲು ಗ್ರಾಮಸಭೆಗಳಿಗೆ ಅನುಮತಿ ನೀಡುವ ಕಾನೂನನ್ನು ಜಾರಿಗೆ ತರುವಂತೆಯೂ ಅವರು ಆಗ್ರಹಿಸಿದರು. ಭ್ರಷ್ಟಾಚಾರದ ಸರಪಣಿಯನ್ನು ಮುರಿದುಹಾಕಬೇಕೆಂದು ಈ ಗಾಂಧಿವಾದಿ ಆಗ್ರಹಿಸಿದರು. ರಾಮ್‌ಲೀಲಾ ಮೈದಾನಕ್ಕೆ ಬೆಂಬಲಿಗರ ಮಹಾಪೂರವೇ ಹರಿದುಬರುತ್ತಿದ್ದಂತೆಯೇ, ಬೆಳಗ್ಗೆ 10ಗಂಟೆಗೆ ಅಣ್ಣಾ ಹಝಾರೆ ವೇದಿಕೆಗೆ ಆಗಮಿಸಿದರು. ಕಳೆದ ನಾಲ್ಕು ದಿನಗಳಲ್ಲಿ ಮೂರುವರೆ ಕೆ.ಜಿ. ತೂಕ ಕಳೆದುಕೊಂಡಿರುವುದಾಗಿ ಹೇಳಿದ ಅವರು, ತನಗೆ ಸ್ವಲ್ಪ ನಿಶ್ಯಕ್ತಿಯಾಗುತ್ತಿದೆ. ಆದರೆ ತನಗೆ ಆ ಬಗ್ಗೆ ಚಿಂತೆಯಿಲ್ಲ. ಪ್ರಬಲ ಲೋಕಪಾಲ ಮಸೂದೆ ಜಾರಿಗೊಳ್ಳುವ ತನಕ ಹೋರಾಟ ನಿಲ್ಲದು’’ ಎಂದವರು ಹೇಳಿದರು.
ಜನಲೋಕಪಾಲ ವಿಧೇಯಕವನ್ನು ಅಂಗೀಕರಿಸಲು ಅಣ್ಣಾ ಹಝಾರೆ ಕೇಂದ್ರ ಸರಕಾರಕ್ಕೆ 12 ದಿನಗಳ ಗಡುವನ್ನು ನೀಡಿದ್ದು, ತಪ್ಪಿದಲ್ಲಿ ತನ್ನ ಕೊನೆಯ ಉಸಿರು ಇರುವ ತನಕವೂ ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದ್ದರು. vbnews
0 comments:
Post a Comment