ಜೆಡಿಎಸ್‌ನಿಂದ ಆಯ್ಕೆ ಯಾಗಿದ್ದ ಶಾಸಕ ಕರಡಿ ಸಂಗಣ್ಣ ರಾಜೀನಾಮೆ ಯಿಂದ ತೆರವಾಗಿದ್ದ ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆೆಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ವೇದಿಕೆ ಸಿದ್ಧವಾಗಿದೆ.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ‘ಉತ್ತರಾಧಿಕಾರಿ’ ಮುಖ್ಯಮಂತ್ರಿ ಸದಾನಂದ ಗೌಡರ ಬಲ ಪ್ರದರ್ಶನಕ್ಕೆ ಉಪ ಚುನಾವಣೆ ಸವಾಲಾಗಿದೆ. ಆದರೆ, ಭ್ರಷ್ಟಾಚಾರ ಆರೋಪದಿಂದಾಗಿ ಮಾಜಿ ಸಿಎಂ ಯಡಿಯೂರಪ್ಪ ನ್ಯಾಯಾಲಯದ ಕಟಕಟೆಯಲ್ಲಿ, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿ ಈ ಆಪಾದನೆಗಳಿಂದ ಬಿಡಿಸಿಕೊಳ್ಳಲು ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕಿದೆ.
ಅಲ್ಲದೆ, ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಶಾಸಕ ಕರಡಿ ಸಂಗಣ್ಣ 2011ರ ಮಾರ್ಚ್ 3ರಂದು ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಹೇಮಾಮಾಲಿನಿ ಯವರಿಗೆ ಮತ ಹಾಕುವ ಮೂಲಕ ಅಂದೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಿಸಿಕೊಂಡಿದ್ದರು. ಅವರಿಗೆ ಬಿಜೆಪಿ ಸರಕಾರ ‘ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ’ ಸ್ಥಾನವನ್ನು ದಯಪಾಲಿಸಿತ್ತು. ಈ ಹಿನ್ನೆಲೆಯಲ್ಲಿ ಕರಡಿ ಸಂಗಣ್ಣ ಉಪ ಚುನಾವಣೆಯಲ್ಲಿ ತಮ್ಮ ಪ್ರತಿಷ್ಠೆಯನ್ನು ಪಣಕಿಟ್ಟಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದಲೇ ಮಾಜಿ ಸಿಎಂ ಯಡಿಯೂರಪ್ಪ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು 80 ಕೋಟಿ ರೂ.ಗಳಷ್ಟು ಬೃಹತ್ ಮೊತ್ತವನ್ನು ಕೂಡ ಬಿಡುಗಡೆ ಮಾಡಿದ್ದು, ಹಲವಾರು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.
ಕಣದಲ್ಲಿನ ಸಂಭಾವ್ಯ ಅಭ್ಯರ್ಥಿಗಳು
ಬಿಜೆಪಿಯಿಂದ ಕರಡಿ ಸಂಗಣ್ಣ, ಕಾಂಗ್ರೆಸ್‌ನಿಂದ ಹಿಂದಿನ ಬಾರಿ ಶಾಸಕರಾಗಿದ್ದ ಬಸವರಾಜ ಯತ್ನಾಳ್ ಹಾಗೂ ಜೆಡಿಎಸ್‌ನಿಂದ ರಿಯಲ್ ಎಸ್ಟೇಟ್ ಉದ್ಯಮಿ ಸೈಯದ್ ಮತ್ತು ಮಾಜಿ ಶಾಸಕ ವಿರೂಪಾಕ್ಷಪ್ಪಗೌಡ ಮಾಲಿ ಪಾಟೀಲರ ಪುತ್ರ ಪ್ರದೀಪ್‌ಗೌಡ ಮಾಲಿ ಪಾಟೀಲ ಹೆಸರುಗಳು ಕೇಳಿ ಬರುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಹೆಸರುಗಳು ಬಹುತೇಕ ಅಂತಿಮವಾಗಿದ್ದು, ಒಂದೆರಡು ದಿನಗಳಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆಗಳಿವೆ.
ವಿಪಕ್ಷಗಳ ತಂತ್ರ
ವಿರೋಧ ಪಕ್ಷಗಳು ಕೂಡ ಕೊಪ್ಪಳ ಉಪ ಚುನಾವಣೆಯನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಜೆಡಿಎಸ್-ಕಾಂಗ್ರೆಸ್ ಆಡಳಿತ ಪಕ್ಷ ಬಿಜೆಪಿಯನ್ನು ಸೋಲಿಸಲು ತಂತ್ರ ರೂಪಿಸುತ್ತಿವೆ. ಇತ್ತಿಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ನೇತೃತ್ವದಲ್ಲಿ ವಿಧಾನಸಭಾ ವಿರೋಧ ಪಕ್ಷಗಳ ನಾಯಕ ಸಿದ್ದರಾಮಯ್ಯ, ಮೇಲ್ಮನೆ ವಿಪಕ್ಷ ನಾಯಕಿ ಮೋಟಮ್ಮ ಕೊಪ್ಪಳ ಕ್ಷೇತ್ರದಲ್ಲಿ ಮೊದಲ ಸುತ್ತಿನ ಪ್ರಚಾರ ನಡೆಸಿದ್ದಾರೆ.
ಬಿಜೆಪಿ ತಮ್ಮ ಅಭ್ಯರ್ಥಿ ಕರಡಿ ಸಂಗಣ್ಣನವರ ಗೆಲುವಿಗೆ ಸಂಪುಟ ಸಚಿವರ ದಂಡನ್ನೇ ಕ್ಷೇತ್ರಕ್ಕೆ ಇಳಿಸಲಿದ್ದು, ಜೆಡಿಎಸ್‌ನ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಿದ್ದರಾಮಯ್ಯ ಸೇರಿದಂತೆ ಘಟಾನುಘಟಿಗಳು ಕೊಪ್ಪಳ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದು, ಬೀದಿ ಸಮರಕ್ಕೆ ಮತ್ತೊಂದು ಅಖಾಡ ಸಿದ್ಧವಾಗಿದೆ.
ಕೂಸು ಹುಟ್ಟುವ ಮುನ್ನ
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಈ ಮಧ್ಯೆ ಬಿಜೆಪಿ ರಾಜ್ಯಾಧಕ್ಷ ಕೆ.ಎಸ್.ಈಶ್ವರಪ್ಪ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ‘ಗೆಲುವು ನಮ್ಮ’ೆ ಎಂದು ಹೇಳುತ್ತಿದ್ದಾರೆ. ಬರದಿಂದ ಕಂಗೆಟ್ಟಿರುವ ಕೊಪ್ಪಳದ ಮತದಾರ ಯಾರಿಗೆ ಮತ ನೀಡಲಿದ್ದಾನೆ ಎಂಬುದನ್ನು ತಿಳಿಯಲು ಸೆ.29ರ ವರೆಗೆ ಕಾಯುವುದು ಅನಿವಾರ್ಯ.
0 comments:
Post a Comment