PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ. ಆಗಸ್ಟ್ ೦೨ (ಕ.ವಾ) : ಶಿಕ್ಷಕರು ಉದ್ಯೋಗ ದೃಷ್ಟಿಯನ್ನಿಟ್ಟುಕೊಂಡು ಕೇವಲ ಸರ್ಕಾರಿ ವೇತನಕ್ಕಾಗಿ ಮಾತ್ರ ಕರ್ತವ್ಯ ನಿರ್ವಹಿಸದೆ, ಆತ್ಮ ತೃಪ್ತಿಗೋಸ್ಕರವಾದರೂ ಮಕ್ಕಳಿಗೆ ಉತ್ತಮ ಬೋಧನೆ ನೀಡಿ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಶಿಕ್ಷಕ ವೃಂದಕ್ಕೆ ಕರೆ ನೀಡಿದ್ದಾರೆ.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪ್ರೌಢಶಾಲೆ ಶಿಕ್ಷಕರಿಗಾಗಿ ಮಂಗಳವಾರ ಏರ್ಪಡಿಸಲಾಗಿದ್ದ ವ್ಯಕ್ತಿತ್ವ ವಿಕಸನ ಶೈಕ್ಷಣಿಕ ಕಾರ್ಯಾಗಾರ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಸುಧಾರಣೆ ಸಂಬಂಧ ವ್ಯಕ್ತಿತ್ವ ಪ್ರಗತಿ ವಿಕಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಕರಿಗೆ ಮಕ್ಕಳಿಗೆ ಪಾಠ ಮಾಡುವ ಜೊತೆಗೆ, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಮೇಲುಸ್ತುವಾರಿ, ಎಸ್.ಡಿ.ಎಂ.ಸಿ. ಅವರೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡುವ ಹೊಣೆಗಾರಿಕೆಯನ್ನು ವಹಿಸಿಕೊಡಲಾಗಿದೆ. ಪಾಠದ ಜೊತೆಗೆ ಇತರೆ ಕೆಲಸ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸುತ್ತಿದ್ದಾರೆ ಎನ್ನುವ ಕಾರಣದ ನೆಪವೊಡ್ಡಿ, ಪಠ್ಯ ಬೋಧನೆ ಕಡೆ ನಿರಾಸಕ್ತಿ ತೋರಿಸುವುದು ಸರಿಯಾದ ಕ್ರಮವಲ್ಲ. ಜಿಲ್ಲೆಯಲ್ಲಿ ಉತ್ತಮ ಶಿಕ್ಷಕರು, ಶಾಲೆಗಳು, ಸರ್ಕಾರದಿಂದ ಸಮರ್ಪಕ ಅನುದಾನ ಹೀಗೆ ಯಾವುದೇ ಕೊರತೆ ಇಲ್ಲದಿದ್ದರೂ, ಈ ಭಾಗದಲ್ಲಿ ಶಿಕ್ಷಣದ ಹಿಂದುಳಿದಿರುವಿಕೆಗೆ ಕಾರಣಗಳೇನು, ಪರಿಹಾರವೇನು ಎಂಬುದರ ಬಗ್ಗೆ ಎಲ್ಲರೂ ಚಿಂತಿಸುವ ಅಗತ್ಯವಿದೆ. ಮಕ್ಕಳಲ್ಲಿ ಉತ್ಸಾಹ ತುಂಬಿ ಉತ್ತಮ ಬೋಧನೆ ನೀಡಿದಲ್ಲಿ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ತೊಡೆದುಹಾಕಬಹುದಾಗಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಲು ಕೇವಲ ಅವರು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಷ್ಟೆ ಮಾನದಂಡವಲ್ಲ. ಮಕ್ಕಳಲ್ಲಿ ಉತ್ತಮ ಸ್ಥೈರ್ಯ ತುಂಬಿದಲ್ಲಿ ಉತ್ತಮ ವ್ಯಕ್ತಿತ್ವವನ್ನು ಪಡೆದು, ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಪರೀಕ್ಷೆಗಳಲ್ಲಿ ಕೇವಲ ಶೇ. ೪೦ ರಿಂದ ೬೦ ಅಂಕ ಗಳಿಸಿದವರೂ ಸಹ ಮುಂದೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ದರ್ಜೆಯ ಅಧಿಕಾರಿಗಳ ಸ್ಥಾನ ಅಲಂಕರಿಸಿರುವ ಉದಾಹರಣೆಗಳಿವೆ. ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಅಥವಾ, ಪಾಲಕರು ಮಕ್ಕಳನ್ನು ಸರಿಯಾಗಿ ಶಾಲೆಗೆ ಕಳುಹಿಸಿದೆ ದುಡಿತಕ್ಕೆ ಕಳುಹಿಸುವಂತಹ ಯಾವುದೇ ಪ್ರಕರಣ ಕಂಡುಬಂದಲ್ಲಿ, ಶಿಕ್ಷಕರು ಸಹಾಯವಾಣಿ ಸಂ: ೧೦೬೮ ಕ್ಕೆ ಕರೆ ಮಾಡಿ ಯೂನಿಸೆಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದಲ್ಲಿ, ಅಂತಹ ಮಕ್ಕಳನ್ನು ಶಾಲೆಯ ವಾಹಿನಿಗೆ ಸೇರಿಸಲು ಕ್ರಮ ಕೈಗೊಳ್ಳುವರು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಶಿಕ್ಷಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ್ ಅವರು ಮಾತನಾಡಿ, ಎಲ್ಲಾ ಸಮಾಜದ ಮುಖಂಡರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಶ್ರಮಿಸಬೇಕು. ಶಿಕ್ಷಣದಿಂದ ವಂಚಿತರಾಗುವ ಮಕ್ಕಳ ಭವಿಷ್ಯ ಕಲ್ಮಶಗೊಂಡು, ಅವರನ್ನು ಅಪರಾಧ ಲೋಕಕ್ಕೆ ಎಳೆದೊಯ್ಯುತ್ತದೆ. ಒಂದು ಮನೆಗೆ ಬುನಾದಿ ಹೇಗೆ ಮುಖ್ಯವೋ, ಅದೇ ರೀತಿ ಮಕ್ಕಳ ಭವಿಷ್ಯಕ್ಕೆ ಶಿಕ್ಷಣವೆನ್ನುವುದು ಭದ್ರ ಬುನಾದಿ ಒದಗಿಸುತ್ತದೆ. ಶಿಕ್ಷಕರು ಮಕ್ಕಳ ಭವ್ಯ ಭವಿಷ್ಯದ ರೂಪಕರು, ಸಮಾಜದಲ್ಲಿ ಶಿಕ್ಷಕರಿಗೆ ಇರುವ ಗೌರವ ಸ್ಥಾನಕ್ಕೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ನಿರ್ಭಯಾನಂದ ಮಹಾ ಸ್ವಾಮೀಜಿಯವರು ಮಾತನಾಡಿ, ನಮ್ಮ ದೇಶದ ಸಂಸ್ಕೃತಿಯಲ್ಲಿ ದೇವರಿಗೂ ಮಿಗಿಲಾದ ಸ್ಥಾನವನ್ನು ಗುರುವಿಗೆ ನೀಡಲಾಗಿದೆ. ಅಜ್ಞಾನವೆಂಬ ಕತ್ತಲನ್ನು ತೊಡೆದು, ಶಿಕ್ಷಣವೆಂಬ ಬೆಳಕಿನತ್ತ ಮುನ್ನಡೆಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ಮಕ್ಕಳಿಗೆ ಆಟದ ಮೂಲಕ ಪಾಠ ಭೋದಿಸುವ ಕ್ರಮ ರೂಢಿಸಿಕೊಳ್ಳಬೇಕು. ಮಕ್ಕಳಲ್ಲಿ ಶಿಕ್ಷಣ ಕಲಿಯಲು ಕುತೂಹಲ ಹಾಗೂ ಆಸಕ್ತಿ ಮೂಡುವಂತೆ ಮಾಡಬೇಕು. ಇವೆಲ್ಲಕ್ಕೂ ಮೊದಲು ಮಕ್ಕಳನ್ನು ಪ್ರೀತಿಸಬೇಕು. ಪುರಾಣ ಹಾಗೂ ಇತಿಹಾಸವನ್ನು ಅವಲೋಕಿಸಿದಾಗ ಒಬ್ಬ ಕ್ರೂರ ವ್ಯಕ್ತಿ, ಸನ್ಮಾರ್ಗಿಗಳ ಬೋಧನೆಯ ಪ್ರಭಾವಕ್ಕೆ ಒಳಗಾಗಿ ವಾಲ್ಮೀಕಿ ಮಹರ್ಷಿ ರೂಪಿತವಾದಂತೆ, ಅದೇ ರೀತಿ ಚಕ್ರವರ್ತಿ ಅಶೋಕ, ಅಂಗೂಲಿಮಾಲ ಇವರನ್ನು ಬೋಧನೆಯ ಪ್ರಭಾವದಿಂದ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದ ಶಕ್ತಿ ಬೋಧನೆಗಿದೆ. ಮಕ್ಕಳಲ್ಲಿ ಉತ್ಸಾಹ ತುಂಬುವಂತಹ ಕಾರ್ಯವನ್ನು ಶಿಕ್ಷಕರು ಕೈಗೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರು, ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿರೇಶಾನಂದ ಮಹಾಸ್ವಾಮಿಗಳು, ಚೈತನ್ಯಾನಂದ ಮಹಾಸ್ವಾಮೀಜಿಗಳು ಉಪಸ್ಥಿತರಿದ್ದರು. ಜಿಲ್ಲೆಯ ಪ್ರೌಢಶಾಲೆಗಳ ಶಿಕ್ಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಟೆಲಿಂಗಾಚಾರ್ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

0 comments:

Post a Comment

 
Top