PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜೂ. : ನೆರೆ, ಬರ ಬರುತ್ತಿರುವ ಇಂತಹ ಕಾಲಮಾನಗಳಲ್ಲಿ ಕೇವಲ ಕೃಷಿಯೊಂದನ್ನೇ ಜೀವನಾಧಾರ ಮಾಡಿಕೊಳ್ಳದೆ ಅದಕ್ಕೆ ಪೂರಕವಾಗಿರುವ ಉಪ ಕಸುಬುಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಾತ್ರ ರೈತರ ಬದುಕು ಹಸನಾಗುತ್ತದೆ. ಇದನ್ನು ಮೈಗೂಡಿಸಿಕೊಂಡಿರುವ ಡೊಂಬರಳ್ಳಿ ಗ್ರಾಮ, ನಾಡಿಗೆ ಆದರ್ಶವಾಗುವಂತೆ ಬೆಳೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಅವರು ಬುಧವಾರ, ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಈ ಗ್ರಾಮ ಅತ್ಯಂತ ಚಿಕ್ಕ ಗ್ರಾಮವಾಗಿದೆ. ಆದರೂ ಕೂಡ ಸಮೃದ್ಧ ಮತ್ತು ನೆಮ್ಮದಿಯ ಬದುಕು ಇಲ್ಲಿಯ ಜನರದು. ಇಲ್ಲಿಯ ರೈತರು ಕೇವಲ ಕೃಷಿಯನ್ನೇ ಮಾಡದೆ ಅದರ ಜೊತೆಗೆ ವಿವಿಧ ಬತೆಯ ತೋಟಗಾರಿಕೆ, ಹೈನುಗಾರಿಕೆ, ಸೇರಿದಂತೆ ನಾನಾ ಉಪ ಕಸುಬು ಮಾಡುತ್ತಿರುವುದರಿಂದ ಇಲ್ಲಿಯ ರೈತರು ಆರ್ಥಿಕವಾಗಿಯೂ ಸದೃಢವಾಗಿದ್ದಾರೆ. ಇತ್ತೀಚೆಗೆ ಯುವಕರು ಕೃಷಿಯಿಂದ ದೂರವೇ ಹೋಗುತ್ತಿರುವುದು ಸಾಮಾನ್ಯ. ಆದರೆ, ಈ ಗ್ರಾಮದಲ್ಲಿ ಕೃಷಿಯ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಇದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.
ವಿಶೇಷವಾಗಿ ಇಲ್ಲಿಯ ಯುವಶಕ್ತಿ ಅತ್ಯಂತ ಜಾಗರೂಕವಾಗಿದೆ ಮತ್ತು ಅದಕ್ಕೆ ಹಿರಿಯರು ಅತ್ಯಂತ ಸಹಕಾರ ನೀಡುವುದರ ಜೊತೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅರ್ಧಯಕ್ಷತೆ ವಹಿಸಿದ್ದ ಬಳ್ಳಾರಿ, ರಾಯಚೂರು, ಕೊಪ್ಪಳ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ನಾಗನಗೌಡ ನಂದಿನಗೌಡ್ರ ಅವರು ಮಾತನಾಡಿ, ಕೇವಲ ೯೮ ಇದ್ದ ಸಹಕಾರಿ ಸಂಘಗಳ ಸಂಖ್ಯೆಯನ್ನು ಕೊಪ್ಪಳ ಜಿಲ್ಲೆಯಲ್ಲಿ ಈಗ ೧೬೦ ಕ್ಕೆ ಹೆಚ್ಚಳ ಮಾಡಲಾಗಿದೆ. ಹಾಲಿನ ಉತ್ಪಾದನೆಯಲ್ಲಿ ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ ಎಂದರು.
ಒಕ್ಕೂಟದ ಅಧ್ಯಕ್ಷ ಎ. ಜನಾರ್ಧನರಡ್ಡಿ ಅವರು ಮಾತನಾಡಿ ರಾಜ್ಯದಲ್ಲಿಯೇ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳನ್ನೊಳಗೊಂಡಿರುವ ಬಳ್ಳಾರಿ ಹಾಲು ಒಕ್ಕೂಟ ಮುಂಚೂಣಿಯಲ್ಲಿದೆ. ಪ್ರತಿ ದಿನ ಈಗ ೦೧ ಲಕ್ಷ ಲೀ. ಹಾಲು ಶೇಖರಣೆ ಮಾಡುವ ಮೂಲಕ ದಾಖಲೆ ಮಾಡಲಾಗುತ್ತಿದೆ. ಇದನ್ನು ಮುಂದಿನ ವರ್ಷ ೧. ೫೦ ಲಕ್ಷಕ್ಕೆ ಹೆಚ್ಚಳ ಮಾಢುವ ಗುರಿ ಹೊಂದಲಾಗಿದೆ ಎಂದರು. ಇದಕ್ಕಿಂತ ಮಿಗಿಲಾಗಿ ಶೀಘ್ರದಲ್ಲಿಯೇ ಹಾಲು ಉತ್ಪಾದನೆಯನ್ನು ಹೆಚ್ಚಳ ಮಾಡುವ ರೈತರಿಗೂ ಸಹಿ ಸುದ್ದಿ ನೀಡುತ್ತೇವೆ ಎಂದು ಹೇಳಿದರು. ವ್ಯವಸ್ಥಾಪಕ ನಿರ್ದೇಶಕ ಡಾ. ಎಂ. ಜನಾರ್ಧನ ರಡ್ಡಿ ಅವರು ಮಾತನಾಡಿ, ಹಾಲು ಉತ್ಪಾದನೆಯನ್ನು ಹೆಚ್ಚಳ ಮಾಡುವುದಕ್ಕೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತದೆ. ಇಡೀ ರಾಜ್ಯದಲ್ಲಿ ಒಂದೇ ವರ್ಷದಲ್ಲಿ ಐದು ಸಾರಿ ದರ ಹೆಚ್ಚಳ ಮಾಡುವ ಮೂಲಕ ರೈತರ ಹಿತ ಕಾಯಲಾಗಿದೆ. ಇನ್ನು ಇಂತಹ ರೈತಪರ ಕಾರ್ಯಕ್ರಮಗಳು ಇವೆ ಎಂದು ಹೇಳಿದರು. ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹೆಚ್.ಎಲ್. ಹಿರೆಗೌಡರ ಅವರು ಮಾತನಾಡಿ, ಅತ್ಯಂತ ಚಿಕ್ಕದಾಗಿದ್ದರೂ ದೊಡ್ಡ ಗ್ರಾಮವಾಗಿರುವ ಡೊಂಬರಳ್ಳಿಯಲ್ಲಿ ಹೆಚ್ಚು ಬುದ್ದಿವಂತರಿದ್ದಾರೆ. ಹೀಗಾಗಿ, ಈ ಗ್ರಾಮ ಸಾಕಷ್ಟು ಪ್ರಗತಿಯನ್ನು ಹೊಂದುತ್ತಿದೆ. ಇದು ಇತರ ಗ್ರಾಮಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಜಿ.ಪಂ. ಸದಸ್ಯೆ ಭಾಗಿರಥಿ ಶಂಕರಗೌಡ, ತಾ.ಪಂ. ಸದಸ್ಯ ಮುದೇಗೌಡ ಪೊಲೀಸ್ ಪಾಟೀಲ, ತಿಮ್ಮಾರಡ್ಡಿ ಕರಡ್ಡಿ, ವೆಂಕನಗೌಡ ವರ್ತಟ್ನಾಳ, ಡಾ. ಪಿ.ಎಂ. ನಿಂಬರಗಿ, ಸಹಕಾರ ಇಲಾಖೆ ಉಪನಿರ್ದೇಶಕ ಜಬ್ಬಾರ್‌ಬೇಗ್, ಜಯಪ್ಪ ಕಂಚಿ ಮತ್ತಿತರರು ಉಪಸ್ಥಿತರಿದ್ದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ. ಸದಸ್ಯ ದೇವರಡ್ಡಿ ಮಾಟ್ರ ಸ್ವಾಗತಿಸಿದರು. ಚಂದ್ರಶೇಖರ್ ಮತ್ತು ದೇವರಡ್ಡಿ ಕರಡ್ಡಿ ಕಾರ್ಯಕ್ರಮ ನಿರೂಪಿಸಿದರು.

Advertisement

0 comments:

Post a Comment

 
Top