PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಫೆ. : ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ದೊರಕಿಸಿಕೊಡುವ ಉದ್ದೇಶದಿಂದ ಸರ್ಕಾರ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿ, ಆ ಮೂಲಕ ಈವರೆಗೆ ೦೨ ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗಿದೆ ಎಂದು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಡಾ: ವಿಷ್ಣುಕಾಂತ ಚಟಪಲ್ಲಿ ಅವರು ಹೇಳಿದ್ದಾರೆ.
ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗ್ರಾಮಾಂತರ ಪ್ರದೇಶದ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಅವಕಾಶ ಆಯಾ ಪ್ರದೇಶದಲ್ಲಿಯೇ ಒದಗಿಸಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆ ಮೂಲಕ ಉದ್ಯೋಗ ಅವಕಾಶಗಳನ್ನು ಒದಗಿಸಲಾಗುತ್ತಿದೆ. ೨೦೦೮ ರಲ್ಲಿ ಸ್ಥಾಪಿಸಲಾಗಿದ್ದ ಕೌಶಲ್ಯ ಅಭಿವೃದ್ಧಿ ನಿಗಮ, ಕಳೆದ ಎರಡು ವರ್ಷಗಳಿಂದ ಬೃಹತ್ ಉದ್ಯೋಗ ಮೇಳಗಳನ್ನು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಸಂಘಟಿಸಿ, ಸ್ಥಳೀಯರಿಗೆ ಮದ್ಯವರ್ತಿಗಳ ಸಹಾಯವಿಲ್ಲದೆ, ನೇರವಾಗಿ ಉದ್ಯೋಗ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲು ಕ್ರಮ ಜರುಗಿಸಲಾಗಿದೆ. ರಾಜ್ಯದಲ್ಲಿ ಈವರೆಗೆ ೦೪ ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶಗಳನ್ನು ಒದಗಿಸಲಾಗಿದೆ. ಆ ಪೈಕಿ ೦೨ ಲಕ್ಷ ಅಭ್ಯರ್ಥಿಗಳಿಗೆ ಉದ್ಯೋಗಕ್ಕಾಗಿ ಆಯ್ಕೆಮಾಡಲಾಗಿದ್ದು, ೦೨ ಲಕ್ಷ ಅಭ್ಯರ್ಥಿಗಳಿಗೆ ಉದ್ಯೋಗಕ್ಕೆ ಅನುಗುಣವಾದ ತರಬೇತಿಗೆ ಆಯ್ಕೆ ಮಾಡಲಾಗಿದೆ. ೩೦೦೦ ಕ್ಕೂ ಹೆಚ್ಚು ಉದ್ದಿಮೆದಾರ ಉದ್ಯೋಗದಾತರು ಉದ್ಯೋಗಮೇಳದಲ್ಲಿ ಈವರೆಗೆ ಭಾಗವಹಿಸಿದ್ದಾರೆ. ನಿರುದ್ಯೋಗಿಗಳಿಗೆ ಸ್ಥಳದಲ್ಲಿಯೇ ಉದ್ಯೋಗ ಅವಕಾಶ ಒದಗಿಸಿಕೊಡುವ ರಾಜ್ಯ ಸರ್ಕಾರದ ಈ ವಿನೂತನ ಕ್ರಮ ದೇಶದಲ್ಲಿಯೇ ಮೊಟ್ಟ ಮೊದಲನೆಯದಾಗಿದೆ. ಇದಕ್ಕೆ ಜನರ ಉತ್ತಮ ಸ್ಪಂದನೆ ದೊರೆತಿದ್ದು, ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಈ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಪ್ರದೇಶಗಳ ಯುವಕರಿಗೆ ಇಂತಹ ಉದ್ಯೋಗ ಮೇಳಗಳು ವರದಾನವಾಗಿದೆ. ಯಾವುದೇ ಜಿಲ್ಲೆಯಲ್ಲಿ ನಡೆದ ಇಂತಹ ಉದ್ಯೋಗ ಮೇಳದಲ್ಲಿ ರಾಜ್ಯದ ಹಾಗೂ ಹೊರ ರಾಜ್ಯದ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಅಪರೂಪದ ಈ ಉದ್ಯೋಗ ಮೇಳದ ಕಾರ್ಯಕ್ರಮವನ್ನು ಗ್ರಾಮಾಂತರ ಪ್ರದೇಶದ ಯುವಕ, ಯುವತಿಯರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ಡಾ: ವಿಷ್ಣುಕಾಂತ ಚಟಪಲ್ಲಿ ಅವರು ಕರೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಭಾರಿ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರು ಮಾತನಾಡಿ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಹೈದ್ರಾಬಾದ್-ಕರ್ನಾಟಕದ ಯುವಕ, ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಉದ್ಯೋಗ ಮೇಳ ವರದಾನವಾಗಿದೆ. ಜಿಲ್ಲೆಯಲ್ಲಿರುವ ವಿವಿಧ ಕೈಗಾರಿಕೆಗಳು ಹಾಗೂ ಖಾಸಗಿ ಒಡೆತನದ ಕಂಪನಿಗಳಲ್ಲಿ ೭೦೦೦ ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವ ಬಗ್ಗೆ ಅಂದಾಜಿಸಲಾಗಿದೆ. ಅಗತ್ಯ ಅರ್ಹತೆ ಹೊಂದಿರುವ ಜಿಲ್ಲೆಯ ಹಾಗೂ ಅಕ್ಕ-ಪಕ್ಕದ ಜಿಲ್ಲೆಗಳ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉದ್ಯೋಗ ಮೇಳ ಯಶಸ್ವಿಗೊಳಿಸುವಂತೆ ಅವರು ಯುವಕ, ಯುವತಿಯರಿಗೆ ಕರೆ ನೀಡಿದರು.
ಸಮಾರಂಭದಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ ಸಹಾಯಕ ನಿರ್ದೇಶಕ ವಿ. ವೇಣುಗೋಪಾಲ, ಉದ್ಯೋಗ ಮೇಳದ ಸಂಚಾಲಕರಾದ ಶ್ರೀಕಾಂತ ಮಾಲಗತ್ತಿ, ವೀರೇಶ್ ಹೆಚ್.ಎಂ., ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಆಕಳವಾಡಿ, ಸೀನಿಯರ್ ಕನ್ಸಲ್ಟೆಂಟ್ ಅಮರನಾಥ್ ಬಿ.ಎಂ., ಪ್ರಾಚಾರ್ಯರಾದ ಎಂ. ಕೊಟ್ರೇಶ, ಗಂಗಾವತಿ, ರಾಘವೇಂದ್ರಾಚಾರ್ ಹೆಚ್.ಪಿ., ಕೊಪ್ಪಳ, ಚನ್ನಬಸಪ್ಪ ಬಳ್ಳಾರಿ ಅವರು ಸ್ವಾಗತಿಸಿದರು, ಜಿಲ್ಲಾ ಉದ್ಯೋಗಾಧಿಕಾರಿ ಬಿ.ಎಫ್. ಬೀರನಾಯ್ಕರ್ ವಂದಿಸಿದರು, ಬಿ.ಹೆಚ್. ಸೊಪ್ಪಿಮಠ ನಿರೂಪಿಸಿದರು.
ಉದ್ಯೋಗ ಮೇಳದಲ್ಲಿ ೬೪೪೯ ಅಭ್ಯರ್ಥಿಗಳು ಭಾಗವಹಿಸಿದ್ದರು. ೮೨ ಕ್ಕೂ ಹೆಚ್ಚು ಉದ್ಯೋಗದಾತ ಕಂಪನಿ/ಸಂಸ್ಥೆಗಳು ಭಾಗವಹಿಸಿದ್ದವು, ಎಸ್.ಎಸ್.ಎಲ್.ಸಿ. ಮತ್ತು ಅದಕ್ಕಿಂತ ಕಡಿಮೆ ವಿದ್ಯಾರ್ಹತೆ ಹೊಂದಿರುವ ೨೩೨೦ ಅಭ್ಯರ್ಥಿಗಳು, ಪಿ.ಯು.ಸಿ. ವಿದ್ಯಾರ್ಹತೆ ಇರುವ ೧೨೧೦, ಐಟಿಐ/ಡಿಪ್ಲೋಮಾ/ಜೆಓಸಿ, ವಿದ್ಯಾರ್ಹತೆ ಇರುವ ೨೮೬೫ ಅಭ್ಯರ್ಥಿಗಳು ಉದ್ಯೋಗ ಮೇಳಕ್ಕೆ ಆಗಮಿಸಿದ್ದರು. ಆ ಪೈಕಿ ೫೪ ವಿಕಲಚೇತನ ಅಭ್ಯರ್ಥಿಗಳು ಭಾಗವಹಿಸಿದ್ದು ವಿಶೇಷ. ಉದ್ಯೋಗ ಮೇಳದಲ್ಲಿ ಭಾಗವಹಿಸಿದವರಲ್ಲಿ ೧೮೨೦ ಅಭ್ಯರ್ಥಿಗಳು ಸ್ಥಳದಲ್ಲಿಯೇ ಆಯ್ಕೆಗೊಂಡು, ಆ ಪೈಕಿ ೯೮೨ ಅಭ್ಯರ್ಥಿಗಳು ನೇಮಕಾತಿ ಹೊಂದಿದರು, ೧೯೮೫ ಅಭ್ಯರ್ಥಿಗಳು ತರಬೇತಿಗೆ ಆಯ್ಕೆಯಾದರು.
ಫೆ. ೦೬ ರಂದು ನಡೆಯುವ ಉದ್ಯೋಗ ಮೇಳದಲ್ಲಿ ಪದವಿಧರರು/ಸ್ನಾತಕೋತ್ತರ ಪದವಿಧರರು ಹಾಗೂ ಇತರ ಪದವಿಧರರು ಭಾಗವಹಿಸಬಹುದಾಗಿದ್ದು, ಸ್ಥಳದಲ್ಲಿಯೇ ನೇಮಕಾತಿಗೊಂಡ ಅಭ್ಯರ್ಥಿಗಳಿಗೆ ಅಂದು ಮಧ್ಯಾಹ್ನ ೩-೩೦ ಗಂಟೆಗೆ ನಡೆಯುವ ಸಮಾರಂಭದಲ್ಲಿ ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಅವರು ನೇಮಕಾತಿ ಪತ್ರ ವಿತರಿಸುವರು.

Advertisement

0 comments:

Post a Comment

 
Top