PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಜನಗಣತಿ ಕಾರ್ಯದ ಎರಡನೆ ಹಂತದಕಾರ್ಯವು ಫೆ. ೦೯ ರಿಂದ ಪ್ರಾರಂಭವಾಗಲಿದ್ದು, ಜನಗಣತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಜವಾಬ್ದಾರಿ ಏನು ಎಂಬುದರ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡಲು ಅಂಗನವಾಡಿ ಕೇಂದ್ರಗಳ ಸಿಬ್ಬಂದಿಯನ್ನು ಸಜ್ಜುಗೊಳಿಸುವ ಮಹತ್ವದ ಹೊಣೆಯನ್ನು ಆಯಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ವಹಿಸಲಾಗಿದೆ.
ಜನಸಾಮಾನ್ಯರು ಜನಗಣತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜನಗಣತಿ ಸಿಬ್ಬಂದಿ/ಮಾಹಿತಿ ಸಂಗ್ರಹಕಾರರು ಮನೆಗಳಿಗೆ ಭೇಟಿ ನೀಡಿದಾಗ ನಿರ್ದಿಷ್ಟ, ಸ್ಪಷ್ಟ ಮಾಹಿತಿಯನ್ನು ಒದಗಿಸಲು ತರಬೇತುಗೊಳಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು, ಸಹಾಯಕಿಯರ ಸಭೆ ಕರೆದು, ಜನಗಣತಿಯ ಪ್ರಾಮುಖ್ಯತೆ ಬಗ್ಗೆ ಚರ್ಚಿಸಬೇಕು. ಅಲ್ಲದೆ ಜನಗಣತಿ ನಿರ್ದೇಶನಾಲಯ ಒದಗಿಸುವ ಕರಪತ್ರಗಳನ್ನು ಪ್ರತಿ ಮನೆ, ಮನೆಗೆ ಹಂಚಿ, ಜನಸಾಮಾನ್ಯರು ಗಣತಿದಾರರಿಗೆ ನಿರ್ದಿಷ್ಟ ಮಾಹಿತಿ ಒದಗಿಸುವ ಕುರಿತು ತರಬೇತಿಗೊಳಿಸುವಂತೆ ಸಿಡಿಪಿಓ ಗಳು ನೋಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸಿ.ಎನ್. ಸೀತಾರಾಮ್ ಅವರು ಸೂಚನೆ ನೀಡಿದ್ದಾರೆ.
ಜನಗಣತಿ ಸಿಬ್ಬಂದಿಗೆ ನಿಖರ ಮಾಹಿತಿ ಒದಗಿಸಲು ಸಾರ್ವಜನಿಕರಲ್ಲಿ ಮನವಿ
ಕೊಪ್ಪಳ : ಜನಗಣತಿ ಕಾರ್ಯದಲ್ಲಿ ನಿರತರಾದ ಸಿಬ್ಬಂದಿಯವರಿಗೆ ನಿಖರ ಮಾಹಿತಿ ಒದಗಿಸಿ ಸಾರ್ವಜನಿಕರು ಸಹಕರಿಸುವಂತೆ ಜನಗಣತಿ ಜಿಲ್ಲಾ ನೋಡಲ್ ಅಧಿಕಾರಿ ಅಶೋಕ್‌ಕುಮಾರ್ ನಾಯಕ್ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜನಗಣತಿ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಜನಗಣತಿ ಯೋಜನೆ ಒಂದು ಸಂವಿಧಾನಾತ್ಮಕ ಜವಾಬ್ದಾರಿಯಾಗಿದ್ದು, ರಾಷ್ಟ್ರದ ಅಭಿವೃದ್ಧಿಗೆ ಜನಗಣತಿಯು ಪೂರಕವಾಗಿದೆ. ಪ್ರತಿ ಜಿಲ್ಲೆಯಲ್ಲಿ ಜನಗಣತಿ ಕಾರ್ಯವು ಫೆ. ೦೯ ರಿಂದ ೨೯ ರವರೆಗೆ ನಡೆಯಲಿದ್ದು, ಕಾರ್ಯಕ್ರಮ ಅನುಷ್ಠಾನಕ್ಕಾಗಿ ನಿಯೋಜಿಸಲಾದ ಅಧಿಕಾರಿ, ಸಿಬ್ಬಂದಿ ವರ್ಗದವರು ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ಸಾರ್ವಜನಿಕರು ಜನಗಣತಿ ಕಾರ್ಯದಲ್ಲಿ ಮನೆ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು. ಗಣತಿ ಕಾರ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕ ವರ್ಗದವರನ್ನು ನಿಯೋಜಿಸಲಾಗಿದ್ದು, ನಿಖರ ಮಾಹಿತಿ ಸಂಗ್ರಹಿಸಲು ಕ್ರಮ ವಹಿಸಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು. ತಾಲೂಕು ತಹಸಿಲ್ದಾರರು, ಪಟ್ಟಣ ಹಾಗೂ ನಗರಸಭೆಯ ಅಧಿಕಾರಿಗಳು ಜನಜಾಗೃತಿ ಮೂಡಿಸಲು ವ್ಯಾಪಕ ಪ್ರಚಾರ ಕಾರ್ಯಕ್ರಮ ಕೈಗೊಳ್ಳಬೇಕು. ಸಿನಿಮಾ ಮಂದಿರಗಳಲ್ಲಿ ಸ್ಲೈಡ್ಸ್, ಕೇಬಲ್ ಟಿ.ವಿ.ಗಳಲ್ಲಿ ಜನಗಣತಿ ವಿವರ ಒದಗಿಸುವುದು ಹಾಗೂ ದೂರವಾಣಿ ಇಲಾಖೆಯಿಂದ ಮೊಬೈಲ್ ಮತ್ತು ಸ್ಥಿರ ದೂರವಾಣಿಗಳಲ್ಲಿ ಜನಗಣತಿ ಕುರಿತು ಜನಸಾಮಾನ್ಯರಿಗೆ ಮಾಹಿತಿ ಒದಗಿಸುವಂತಾಗಬೇಕು. ಟಿ.ವಿ. ಚಾನೆಲ್‌ಗಳ ಮೂಲಕ ಹಾಗೂ ಆಕಾಶವಾಣಿ ಕೇಂದ್ರಗಳ ಮೂಲಕ ಜಿಲ್ಲೆಯ ಜನಗಣತಿ ವಿವರಗಳನ್ನು ಪ್ರಸಾರ ಮಾಡುವಂತಾಗಬೇಕು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರು ಸಕ್ರಿಯವಾಗಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು. ಶಿಕ್ಷಕರು ಶಾಲಾ ಕೆಲಸದ ಅವಧಿಗೆ ತೊಂದರೆಯಾಗದ ರೀತಿಯಲ್ಲಿ ಜನಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸೂಚನೆ ನೀಡಬೇಕು. ಫೆ. ೨೮ ರಂದು ರಾತ್ರಿ ವಸತಿರಹಿತರ ಗಣತಿ ಕಾರ್ಯ ಕೈಗೊಳ್ಳಲಾಗುವುದು. ಮಾರ್ಚ್ ೦೧ ರಿಂದ ೦೫ ರವರೆಗೆ ಪುನರ್ ಸಂದರ್ಶನದ ಸುತ್ತು ಕೈಗೊಳ್ಳಲಾಗುವುದು. ಗಣತಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಅಧಿಕಾರಿ, ಸಿಬ್ಬಂದಿಯವರು ಕರ್ತವ್ಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿಯವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜನಗಣತಿ ಜಿಲ್ಲಾ ನೋಡಲ್ ಅಧಿಕಾರಿ ಅಶೋಕ್‌ಕುಮಾರ್ ನಾಯಕ್ ಅವರು ಹೇಳಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ವಿ. ರಾಜೇಂದ್ರಪ್ರಸಾದ್, ನಗರಸಭೆ ಪೌರಾಯುಕ್ತ ಹೆಚ್.ಬಿ. ಬೆಳ್ಳಿಕಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೈ.ಬಿ. ಶಿಂಧೆ, ತಹಸಿಲ್ದಾರರಾದ ಇ.ಡಿ. ಭೃಂಗಿ ಹಾಗೂ ವೀರೇಶ್ ಬಿರಾದಾರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸಣ್ಣವೀರಪ್ಪ ಮುಂತಾದ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top