ರಿಕಾಮಿ ಲಚ್ಚಪ್ಪನೂ..ಲೀಡರ್ ಸಿದ್ದರಾಮನೂ..'
ಇಡೀ ಊರಿಗೂರೇ ಕೆಂಪಾಗಿತ್ತು...
ಹಸರಂದ್ರ ಹಸರ.. ಅಂಥಾ ಬೇವಿನ ಗಿಡಾ ಸೈತಾ ಕೆಂಪಾಗಿತ್ತು...
ಸಾಲೀ ಬಾಜೂ ಇರೋ ಚಾದ ಅಂಗಡಿ ಬೆನ್ನೂ ಕೆಂಪಾಗಿತ್ತು...
ಘಾಸಲೇಟ್ ಮಾರೋ ನಬೀಸಾನ ಹಳದೀ ಬ್ಯಾರಲ್ ಮುಖಾನೂ ಕೆಂಪಾಗಿತ್ತು...
ಹಿಟ್ಟಿನ ಗಿರಣೀಲಿ ಕೆಲಸಾ ಮಾಡೊ ತುಕಾರಾಂ ನ ಗುಡಸಲ ತುದಿನೂ ಕೆಂಪಾಗಿತ್ತು.
ಹಿಂಗ ಇಡೀ ಮನ್ನಾಪೂರ ಲಂಕೇಶ ಮೇಸ್ಟರ 'ಕೆಂಪಾದವೋ ಎಲ್ಲ ಕೆಂಪಾದವೋ' ಅನ್ನೂವಂಗ ಆಗಿತ್ತು. ಕೆಳಗಿನ ಕೇರಿ ಲಚ್ಚಪ್ಪ ಬೆರಳ ಸಂದೀಯೊಳಗ, ಚಿಲಮಿ ಸೇದೋ ಗತ್ತೀಲೇ ಬೀಡಿ ಹಿಡಕೊಂಡು, ಬುಶ್.. ಬುಶ್.. ಅಂತ ಗಜ್ಜ್ಜಿಗೊಮ್ಮ ಗುಂತಿ ಗುಂತಿ ಹೊಗಿ ಬಯಲಾಗಸತಿದ್ದ. ವ್ಯಾಸಿ.. ವ್ಯಾಸಿ.. ಕಾಲ ಹಾಕೊಂಡು, ಬಸ್ ಸ್ಟ್ಯಾಂಡ್ ನ್ಯಾಗ ಇರೋ ಚಾಂದಸಾಬ್ ನ ಚಾದ ಅಂಗಡಿ ಕಡಿ ಬಂದು, ಅಲ್ಲೇ ಬೀಡಿ ಒಗದು, ರಜನಿ ಸ್ಟೈಲಲ್ಲಿ ಮೆಟ್ಟಗಾಲಿಂದ ಅದರ ಕಿಡಿ ಮ್ಯಾಲ ಹಿಮ್ಮಡದಿಂದ ಗಚ ಗಚಾ ತಿಕ್ಕತಾ ತಿಕ್ಕಿ, ಒಳಗ ಬಂದವನೇ ಜಗ್ಗಿನ್ಯಾಗ ನೀರು ತುಂಬಕೊಂಡು ಮುಖಾ ತೊಳದು, ಬಾಯಾಗ ಹಾಕ್ಕೊಂಡು ಗೊಳಗೊಳಗೊಳ... ಹ್ಯಾ.. ಥೂ.. ಅಂತ ಉಗದು, ' ಇದೇನೋ ಚಾಂದಾ, ಇಡೀ ಊರಿಗೂರೇ ಕೆಂಪಾಗೈತಲ್ಲೋ..' ಅಂದ. ಚಾಂದನ ಮುಖ ಲಚ್ಚಪ್ಪನ್ನ ನೋಡಿದ್ದೇ ಗಂಟ, ಗಂಟಾಯ್ತು. 'ಅದೇನರೇ ಆಗಲಿ ಮಾರಾಯ.. ಮೊದಲಿಂದು ಉದ್ರಿ ತೀರಿಸು. ಎಲ್ಲಾ ಚಟಾ ಮಾಡಲಿಕ್ಕ ಬರತೈತಿ ಉದ್ರಿ ತೀರಸಾಕ ಬರಲ್ಲನೂ..?'
'ಏ ಚಾಂದ, ಹ್ಯಾಗಿಯಂಗ ಮಾತಾಡಬೇಡ,.! ನಿಂದು ಎಟ್ಟರ ಸಾಲ..? ಎಲ್ಲಾ ಕೂಡೇ ಪಿಚ್..! ಅಂತ ನಾಕಿಪ್ಪತ್ತು ರೂಪಾ, ಅದಕ್ಕೇ ಹಿಂಗ ಮಾಡ್ತೆಲ್ಲೋ.. ನಾನೂ ಇದೇ ಊರಂವ ಇದೀನಿ, ಹೊತ್ತ ಹೊಂಟರ ಈರಭದ್ರ ದೇವರ ಜಾತ್ರಿ, ಗುಡಿಯೊಳಗ ಒಂದು ವಾರ ಭಜನಾ, ನಿನ್ನ ಮಡಸ ರೊಕ್ಕ ತಗದು ಮೋತಿ ಮ್ಯಾಲ ಬೀಸಾಕಲಿಲ್ಲಂದ್ರ ಕೇಳು. ಈಗರೇ ಒಂದು ಚಾ, ಒಂದು ಭಜಿ ಕೊಡು. ಇಲ್ಲಾಂದ್ರ ಬಿಡು. ನಿನ್ನ ಬಿಟ್ಟ್ತರೆ ಗತೀನೇ ಇಲ್ಲ ಅಂತ ತಿಳಕೊಬ್ಯಾಡ. ಶಿವ ಶಿವ' ಅನ್ಕೊಂತ ಮುಕಳಿ ಊರದ. ಚಾಂದ್ ಟೇಬಲ್ ಒರಸತಾ 'ಇಂಥಾ ಧಿಮಾಕಿನ ಮಾತಗೇನು ಕಡಿ"ಲ್ಲ.' ಭಟ್ಟಿ ಕೋಲ್ಯಾಗ ಇರೋ ಹೆಂಡತಿ ರಜಮಾಗ 'ಏಕ್ ಪ್ಲೇಟ್ ಭಜಿ ಡಾಲ್ಗೇ' ಅಂದದ್ದೇ ಲಚ್ಚಪ್ಪ ಮೈ-ಕೈ ಸಡಲಿಸಿ 'ಉಹು..ಉಹು..' ಅಂತ ಕೆಮ್ಮದಂಗ ಮಾಡಿ, ಗತ್ತನ್ಯಾಗ ಕುಂತ. ಭಜಿ ತಿನಕೊಂತ
'ಅಲ್ಲೋ ಚಾಂದ, ಊರ ತುಂಬಾ ಈ ಕೆಂಪು ಬಣ್ಣ ಏನು..?'
' ಇಡೀ ಊರಿಗೂರೇ ಗೊತ್ತೈತಿ, ನಿನಗ ಗೊತ್ತಿಲ್ಲನೂ..?'
' ಇಲ್ಲೋ ಮಾರಾಯ..! ಗೊತ್ತಿದ್ದರ ನಿನಗ್ಯಾಕ ಕೇಳತಿದ್ದೆ.'
' ಗುಲಬರ್ಗಾದಿಂದ ಕಮ್ಯುನಿಷ್ಟ ಲೀಡರ್ ಸಿದ್ದರಾಮ ಬರಾಕತ್ತಾನಂತ'
' ಬಂದು ಏನು ಮಾಡ್ತಾನಂತ..?'
' ನಿನ್ನಂತ ರಿಕಾಮಿಗೊಳಿಗಿ ದುಡಿಯೂ ಪಾಠಾ ಹೇಳ್ತನಂತ' ಲಚ್ಚಪ್ಪನ ಮುಖ ಹಾಗಲಕಾ ಕಡದಂಗ ಆಯ್ತು.
' ಏ ಚಾಂದ, ಒಂದು ಪ್ಲೇಟ್ ಭಜಿ ಉದ್ರಿ ಕೊಟ್ಟೀನಂತ ಬಾಗಿ ಬಂದಂಗ ಮಾತಾಡಬ್ಯಾಡ, ಮೊದಲಿಂದೂ ಇಲ್ಲ, ಈಗಿಂದೂ ಇಲ್ಲ ಅನ್ನೂವಂಗ ಆದೀತು..!'
' ಹೌದು ಮತ್ತ, ನೀ ಯಾವಾಗ ದುಡದೀ ಹೇಳು, ಪಾಪ..! ಎಟ್ಟೊತ್ತಿದ್ದರೂ ಹೆಂಡತಿ ಪಾರವ್ವ ಮತ್ತ ಮಕ್ಕಳು ದುಡಿದೇ ನಿನ್ನ ಒಡ್ದಲ ತುಂಬಬೇಕು ಖರೆ ಇಲ್ಲೋ ಹೇಳು'
'ಏ ಹಂಗ ಕುಂತು ತಿಲ್ಲಿಕ್ಕೂ ಪುಣ್ಯ ಮಾಡಿರಬೇಕು. ಹ.. ಹ.. ಹ' ಅಂತ ಹಲ್ಲ ಕಿಸದಿದ್ದ. ಇಡೀ ಮನ್ನಾಪೂರಕ್ಕೇ ಈ ಲಚ್ಚಪ್ಪ ಏನು ಅಂತ ಗೊತ್ತಿತ್ತು. ಆದರ ಯಾರೂ ಮಾತಾಡತಿರಲಿಲ್ಲ. ನಾ ಕೆಣಕಿ ಲಕ್ಷ್ಮಿ ಕಳಕೊಂಡಂಗ ಅಂತ ಯಾರೂ ಅವನ ಉಸಾಬರಿಗೇ ಹೋಗತಿರಲಿಲ್ಲ. ಒಂದು ಸಾರಿ ಸುಣಗಾರ ಭೀಮಪ್ಪ ಮಟ ಮಟ ಮಧ್ಯಾಹ್ನದಾಗ ಈ ಲಚ್ಚಪ್ಪನ ತಡವಿ, ತೊಬಾ ತೋಬಾ ಅಂದದ್ದೈತಿ. 'ತಪ್ಪೈತೋ ಮಾರಾಯಾ' ಅನ್ನೂಮಟ ಇಂವಾ ಬಿಟ್ಟಿರಲಿಲ್ಲ. ಹೋದ ಕಾರಹುಣ್ಣಮಿ ದಿನ ಸೌಳುಬಾವಿ ಸುಬ್ಯಾ 'ಅಲ್ಲೋ ಲಚ್ಚಪ್ಪ ನೀ ಬಾರೀಕಾಲ ಬರೀ ಕುಂತೇ ತಿಂದೆಲ್ಲೋ..?' ಅಂದಿದ್ದಕ ಇಂವಾ ಸ್ಟೈಲ್ ಆಗಿ ಬೀಡಿ ಜಗ್ಗಿ, ಮೂಗಿನ ಹೊರಳಿಯೊಳಗಿಂದ ಗುಂಡ-ಗುಂಡಕ ಗಮತ್ತಲೇ ಹೊಗಿ ಬಿಟ್ಕೊಂಡು ಕೆಕ್ಕರಿಸಿ ಸುಬ್ಯಾನ ಕಡಿ ನೋಡಿ..
' ಏನಂದೀ..? ದುಡೀಲಾರದೇ ಕುಂತು ತಿಂದ್ಯಾ ಅಂತ ಹೇಳದೆಲ್ಲಾ..? ಹೌದು. ಆದರ ದುಡದು ಹಾಕಿದ್ದು ಸುಬ್ಯಾನ ಹೆಣ್ತಿ ಶಾರವ್ವ ಅಲ್ಲ, ಈ ಲಚ್ಚ್ಯಾನ ಹೆಣ್ತಿ ಪಾರವ್ವ ಅನ್ನೂದು ಖಬರ್ ಇರಲಿ' ಅಂತ ಮತ್ಯಾರೂ ಹಿಂಗ ಮಾತಾಡಬಾರದು ಅನ್ನೋ ಇರಾದೆಂದ ಬೇವಿನ ಗಿಡದ ಕಟ್ಟೀ ಮ್ಯಾಲ ಕುಂತ ಎಲ್ಲಾ ಮಂದಿಗೂ ಕೇಳೂವಂಗ ಚೀರಿ ಚೀರಿ ಹೇಳಿದ್ದ. ಅವರೆಲ್ಲಾ ಸುಬ್ಬಣ್ಣ ಗ ' ಅಲ್ಲೋ ಅವನ್ನ ನೋಡಿದ್ದೇ ಐತಿ, ಹೋಗಿ ಹೋಗಿ ಅವನ್ಯಾಕ ಕೆಣಕಲಾಕ ಹೋದಿ..?' ಅಂದದ್ದೇ ಲಚ್ಚಪ್ಪ ಮತ್ತ ನೇಟಾಗಿದ್ದ.
' ಯಾ ಬೋಳಿಮಕ್ಕಳೂ ನನಗೇನು ಕೊಟ್ಟು ನಡಸೂದಿಲ್ಲ' ಅಂತ ಬೈಕೊಂತ ಹೋಗಿದ್ದ. ಇದೆಲ್ಲಾ ಆ ಚಾದ ಅಂಗಡಿ ಚಾಂದಗೂ ಗೊತ್ತಿತ್ತು. ಹಂಗಾಗಿ ಮತ್ತ ದುಸರಾ ಮಾತಾಡಲಿಲ್ಲ. ಇಂವಾ ಒಳಗ ಇರೂದು ನೋಡಿ ಬರೋ ಗಿರಾಕಿ ಸೈತಾ ಹೊಳ್ಳಿ ಹೊಂಟರು. ಇದು ಚಾಂದ್ ಗ ಗೊತ್ತಾಗಿ
'ಬಡ ಬಡ ಮುಗಸು ಮಾರಾಯ. ನೀ ಬೀಡಿ ಗೀಡಿ ಸೇದಕ್ಕೊಂತ ಕೂಡಬ್ಯಾಡ' ಅಂದ.
' ಯಾಕ..? ನಾ ಉದ್ರಿ ಅಂತ ಹಿಂಗ ಮಾತಾಡತೆನು..? ಅದೇ ಕೈಯಾಗ ರೊಕ್ಕ ಕೊಟ್ಟರ ಬಾ, ಮುಕಳಿ ಕೂಡೇ ಮುಚಕೊಂಡು ಸುಮ್ಮ ಇರತಿ ಅಲ್ಲಾ..?'
' ಏ.. ಏನು ಬಾ ನಿಂದು, ಇಟ್ಟು ವಯಸ್ಸಾಗೈತಿ ಏನು ಮಾತಾಡಬೇಕು, ಏನು ಮಾತಾಡಬಾರದು ಅನ್ನೂದೂ ತಿಳಿಯುವಂಗಿಲ್ಲನೂ..?'
' ನಾ ಏನು ಮಾತಾಡಬಾರದು ಮಾತಾಡದೆ ..? ರೋಕ್ ರೊಕ್ಕ ಕೊಟ್ಟು ತಿಂದರ ನೀ ಹಿಂಗ ಬಾಗಿ ಬಂದಂಗ ಮಾತಾಡತಿರಲಿಲ್ಲ ಅಂದೆ ಅಷ್ಟೇ.' 'ಆಯ್ತು ತೊಗರಪಾ ತಪ್ಪು ನಂದೇ ಈಗ ನಡಿನೀ' ಅಂದಾಗ ಲಚ್ಚಪ್ಪ ಹಗೂರಕ ತಳ ಬಿಟ್ಟೆದ್ದ.
****************
ಇಡೀ ಮನ್ನಾಪೂರದಾಗ ಅಂವಾ ಕೆಳಗಿನ ಕೇರಿ ಲಚ್ಚಪ್ಪ ಅನ್ನೂದಕ್ಕಿಂತಲೂ, ರಿಕಾಮಿ ಲಚ್ಚಪ್ಪ ಅಂತೇ ಹೆಚ್ಚ ಫ಼ೇಮಸ್ ಆಗಿದ್ದ. ಆ ಹೆಸರ ಅಂವಗ ಹ್ಯಾಂಗ ಬಂತಂದರ ಅವನ ಮೈಯಾಗ ತ್ರಾಣ ಬಂದ ದಿನದಿಂದ, ಒಂದೇ ಒಂದು ದಿನ ಮೈ ಬಗ್ಗಿಸಿ ದುಡದಿದ್ದು ಇಲ್ಲ. ಅಟ್ಟೇ ಅಲ್ಲ ತುಂಬಿದ ಚರಗೀ ಎತ್ತಿ, ಇಕಾಡಿದು ಅಕಾಡಿ ಇಟ್ಟಂವಲ್ಲ. ಅಂಥಾ ಮುಗ್ಗಲಗೇಡಿ ಮನುಷ್ಯಾ ಅಂತ ಹೆಸರಾದಂವ. ಅವರಪ್ಪ ಸಾಯೂಮಟ ಹೆಂಗೋ ನಡೀತು. ಲಗ್ನ ಆಗಿ ಅಣ್ಣ ತಮ್ಮದೇರು ಬ್ಯಾರಿ ಆಗಿಂದಾದರೂ ದುಡದಾನು..? ಅಂತ ಊರವರು ಅಂದಕೊಂಡಿದ್ದೂ ಸೈತಾ ಸುಳ್ಳಾಗಿತ್ತು. ಬರೀ ಸುಳ್ಳ, ತಗಲ, ಲಪುಟತನ ಮಾಡಕೊಂಡು ಹೊಟ್ಟೀ ಹೊರಿಯೂದರೊಳಗ, ಅಂವಾ ಅವನೀಗೇ ಗೊತ್ತಿಲ್ಲದಂಗ ಮೂರ ಮಕ್ಕಳ ತಂದಿ ಆಗಿದ್ದ. ಹೆಂಡತಿ ಪಾರವ್ವ ಏನೇನೋ ಕಟಬಿಟಿ ಮಾಡಿ, ಮೂರೂ ಮಕ್ಕಳನ್ನ ದೊಡ್ಡವರ ಮಾಡೂದರೊಳಗ ಸಾಕು ಸಾಕಾಗಿ ಹೊಯ್ತು. ದಿನ್ನಾ ಹೊತ್ತು ಹೊಂಟರ ಕಣ್ಣಾನ ನೀರ ಕಪಾಳಕ್ಕ ಬಂದರೂ ಅಂವೇನು ಗರೂ ಮೈ ಬಗ್ಗಸಲಿಲ್ಲ. ಅದರ ಬದಲೀ ಮತ್ತ ಇಲ್ಲದ್ದು ಚಟಾ ಕಲತು ಮತ್ತೂ ಸುಮಾರಾದ. ಪುಗ್ಸಟ್ಟೆ ಅಂದ್ರ ಎಲ್ಲಾನೂ ಒಂದು ಕೈ ನೋಡೇ ಬಿಡತೀನಿ ಅನ್ನೋ ಲಚ್ಚಪ್ಪ , ಒಂದು ಸಾರಿ ಊರ ಮುಂದಿನ ಹಾಳ ಬಾವಿಯೊಳಗ ಇಸ್ಪೀಟ್ ಆಡಾಗ ಪೋಲಿಸರ ಕೈಗಿ ಸಿಕ್ಕು ತುಸು ಮೈ ಕಾಕೊಂಡಿದ್ದಿತ್ತು. ಶನಿವಾರ ಮಟಮಟ ಮಧ್ಯಾಹ್ನದಾಗ ಕೂದಲಾ ತುಂಬಾಕ ಬರೋ ಗೊಲ್ಲರ ಗಂಗೀ ಜೋಡಿ ನಕರಾ ಮಾಡಾಗ, ಹೆಂಡತಿ ಪಾರವ್ವ ಖುದ್ದಾಗಿ ನೋಡಿ, ಕಂಡಾಪಟಿ ಜಗಳಾಗಿ ಅವತ್ತ ಖೂಳ ಹಾಕದೇ ಮಲಗಿಸದ್ದು ಇಡೀ ಊರಿಗಿ ಊರೇ ಸುದ್ದಿ. ಕಲತಿದ್ದೇ ನಾಕನೆತ್ತೆ ಆದರ ಬಿಕ್ಕೀ ಪೇಪರ್ ಮಾತ್ರ ಒಂದಕ್ಷರ ಬಿಡದಂಗ ಓದತಿದ್ದ. ಒಂದು ಸಾರಿ ಸಾಲಿ ಬಾಜೂ ಐನೋರ ಹೊಟೆಲದಾಗ ಚಾ ಕುಡದು, ಅಲ್ಲಿರೋ 'ಪ್ರಜಾವಾಣಿ' ಪೇಪರನ್ನ ಮಡಚಿ ಬಗಲಾಕ ಹಿಡಕೊಂಡು, ಮನಿ ಹಿತ್ತಲದಾಗ ಕುತಗೊಂಡು ಘಂಟೆಗಟ್ಟಲೆ ಓದಿದ್ದೇ ಓದಿದ್ದು. ಹೊಟೆಲದಾಗ ನೋಡದರ 'ಇಲ್ಲೇ ಇದ್ದ ಪೇಪರ್ ಎಲ್ಲಿ ಹೊಯ್ತು.?' ಅಂತ ಐಯ್ನೋರ ಮರುದಿನ ಮುಂಜಾನೆ ಪೇಪರ ಬರೋಮಟ ಹೊಯ್ಕೊಂಡಿದ್ದಿತ್ತು. ಇದೇ ಮೊದಲಲ್ಲ. ಎರಡು ಮೂರು ಸಾರಿ ಥೇಟ್ ಹಿಂಗೇ ಆಗಿತ್ತು. ಐಯ್ನೋರ ತಲಿ ಗಿರ್ರ್ ಅಂದು 'ಬರೂ ತಿಂಗಳದಿಂದ ಪೇಪರ್ ಬ್ಯಾಡ' ಅಂದಿದ್ದ.
ಕೆಲಸಿಲ್ಲದ ಲಚ್ಚಪ್ಪನ ಕಥಿ ಒಂದೋ ಎರಡೊ.. ಒಂದು ಸಾರಿ ಬಾಜೂ ಊರ ಗೋಲಗೇರಿಯೊಳಗ ತಮ್ಮನ ಮಗಳ ಲಗ್ನ ಇತ್ತು. ಅಕ್ಕೀಕಾಳ ಬಿದ್ದ ಮ್ಯಾಲ ಜನಾ ಊಟದ ಅವಸರದಾಗ ಇರೋ ಮುಂದ, ಚುಲೋದು ಒಂದು ಜೋಡಿ ಬಾಟಾ ಚಪ್ಪಲ್ ಹಾರಸಕೊಂಡು, ಅಡೂಡೀಲೇ ಊರಿಗೆ ಹೋಗಲಾಕ ಬಸ್ ಸ್ಟಾಂಡ್ ನ್ಯಾಗ ಬಂದು ನಿಲ್ಲೂದರೊಳಗ, ಚಪ್ಪಲ್ ಕಳಕೊಂಡ ಮನಸ್ಯಾ ಬರಬರ ಬಂದವನೇ, ಇವನ ಅಂಗೀ ಜಗ್ಗಿ ಕವ ಕವ ಅಂತ ಬೈದು ಚಪ್ಪಲಿ ಕಸಕೊಂಡು ಹೋಗಿದ್ದ.
' ನೀವು ಬೀಗ್ರು ಅಂತ ಬಿಟ್ಟೀನಿ' ಅಂದಾಗಲೇ ಇಂವಾ ನೀರ ನೀರ ಆಗಿದ್ದ. ಆದರೂ 'ಗಡಿಬಿಡಿಯೊಳಗ ಗೊತ್ತಾಗಲಿಲ್ಲ' ಅಂತ ಬೆರಕೀ ಉತ್ತರ ಕೊಟ್ಟಿದ್ದ. ಇಂಥಾ ನಮ್ಮ ಕಥಾನಾಯಕನಿಗೆ ಮೂರೂ ಗಂಡು ಮಕ್ಕಳೇ. ಆದರ ಅಪ್ಪನ್ನ ಕಂಡ್ರೆ ಅವರಿಗಿ ಆಗ್ತಿರಲಿಲ್ಲ. ಹಿರೆಂವ ಒಕ್ಕಲುತನ ಮಾಡತಿದ್ದ. ನಡುವಿನಂವ ಕೆ.ಇ.ಬಿ.ಯೊಳಗ ಲೈನ್ ಮನ್ ಆಗಿದ್ದ. ಇನ್ನೊಬ್ಬ ಇನ್ನೂ ಕಲೀತಿದ್ದ. ಲಚ್ಚಪ್ಪನಲ್ಲಿ ಮೈನಸ್ ಗುಣಾನೇ ಹೆಚ್ಚು. ಇರೋ ಒಂದು ಪ್ಲಸ್ ಗುಣಾ ಅಂದರ ಭಜನಾ ಪದಾ ಹೇಳೂದು. ಅದರಾಗೂ ಕಡಕೊಳ iಡಿವಾಳಪ್ಪನ ಪದಾ ಅಂದ್ರ ಮುಗೀತು, ಬೆಳ್ಳ ಬೆಳತಾನ ಹಾಡದರೂ ಅಂವಗ ಬ್ಯಾಸರ ಆಗ್ತಿರಲಿಲ್ಲ. ಊರಾಗ ಯಾರರೇ ಸತ್ತರ ಅಲ್ಲಿ ಲಚ್ಚಪ್ಪ ಇಲ್ಲ ಅಂದ್ರ ಅದು ಭಜನಾನೇ ಅಲ್ಲ. ತುಸು ದಾರೂ ಹಾಕಿ , ಕಿಸೆದೊಳಗ ಒಂದೈವತ್ತು ರೂಪಾ ಇಟ್ಟು ಕುಂದ್ರಸಿ ಬಿಟ್ಟರಂದ್ರ, ಸತ್ತ ಹೆಣಾ ಸೈತ ಎದ್ದು ಕೂಡೂವಂಗ ಹಾಡ ಹೇಳಂವ. 'ಯಾಕ ಚಿಂತಿ ಮಾಡತಿ ಎಲೆ ಮನವೇ..' ಅನ್ನೋ ಹಾಡಂತೂ ಕಡಕೋಳ ಮಡಿವಾಳಪ್ಪ ಇವನ ಸಲಾಗೇ ಬರದಂಗ ಇತ್ತು. ಅವನ ಮನಸೂ ಹಂಗೇ ಇತ್ತು. ಹಿಂಗಾಗೇ ಅಂವಾ ಯಾವದೂ ತಲಿಗಿ ಹಚಕೊಳ್ಳಂವ ಅಲ್ಲ. ಹದಿನೈದು ದಿನಕ್ಕೊಮ್ಮ ಹೆಂಡತಿ ಬೆಳ್ಳ ಬೆಳತನ ತಂದಹಾಕದಂವಲ್ಲ, ದುಡದಂವಲ್ಲ, ಮಾಡದಂವಲ್ಲ ಮಟ್ಟದಂವಲ್ಲ ಅಂತ ಹ್ಯಾಂಗ ಬೇಕು ಹಂಗ ಬೈದರೂ ಅಂವಾ ಈ ಹಾಡಿನಂಗೇ ಇರತಿದ್ದ. ಮತ್ತ ಮುಂಜಾನೆ ಎದ್ದು ಬೀಡಿ ಹಚಕೊಂಡು, ಹೊಗಿ ಬಿಟ್ಕೊಂಡು, ಬೇವಿನ ಗಿಡದ ಕಟ್ಟೀಮ್ಯಾಲ ದೇಶಾವರಿ ಮಾತಾಡಕೊಂತ ಕುಂತು ಬಿಡಂವ.
ಲಚ್ಚಪ್ಪಗ ಅವರಪ್ಪ ಬಿಟ್ಟುಹೋದ ನಾಕು ಎಕರೆ ಜಮೀನಿತ್ತು. ಅದರಾಗ ಅಂವಾ ಒಂದೇ ಒಂದು ದಿನಾ ಬೆವರ ಸುರಸಲಿಲ್ಲ. ಹಂಗಂತ ಅವನ ಹೆಂಡತಿ ಪಾರವ್ವ ಹೇಳದಾಗ ' ಅದೇನು ಮಹಾ ಭೂಮಿ, ಇಕಾಡಿ ನಿಂತು ಉಚ್ಚೆ ಹೊಯ್ದರೆ ಅಕಾಡಿ ಹೋಗಿ ಮುಟ್ಟತೈತಿ. ಇರೋದೇ ನಾಕು ಎಕರೆ, ಅದರಾಗ ಏನು ಒಕ್ಕಲುತನ ಮಾಡೂದು ..?' ಅಂತ ಕುಂಟ ನೆಪ ಹೇಳತಿದ್ದ. ಈಗ ಅದೇ ಜಮೀನದೊಳಗ ಮಕ್ಕಳು ವರ್ಷಕ್ಕ ಇಪತ್ತು ಚೀಲ ಜೋಳ ಬೆಳೀತಾರ. ಹಿರಿ ಮಗ ತುಸು ನೀರಾವರಿ ಮಾಡದರ ಮತ್ತ ಮನಿ ಖರ್ಚ ನಡೀತೈತಿ ಅಂತ ಯೋಚ್ನೆ ಮಾಡಿ ಬಾವಿ ಹೊಡಸಾಕ ನೊಡದರ, ಹೊಲದ ಉತಾರ ಇನ್ನೂ ಲಚ್ಚಪ್ಪನ ಹೆಸರಲೇ ಇತ್ತು. ಅವಾಗ ಸಹಿ ಮಾಡಲಾಕ ಅಂವಾ ಧಿಮಾಕು ತೋರಸಿದ್ದು ಅಟ್ಟಿಟ್ಟಲ್ಲ. ಐವತ್ತು ಸಾವಿರ ರೂಪಾಯಿ ಸಾಲಾ ತಗಸದರ, ತನಗ ಎರಡು ಸಾವಿರ ಕೊಡಬೇಕು ಅಂತ ಕರಾರು ಮಾಡೇ ಸಹಿ ಕೊಟ್ಟಿದ್ದ. ಆ ಎರಡು ಸಾವಿರ ಕಿಸೆಕ ತುರಕೊಂಡು ಹದಿನೈದು ದಿವಸ ನಾಪತ್ತೆಯಾಗಿದ್ದ. ಹೆಂಡತಿ ಮಕ್ಕಳು ಎಲ್ಲಾರೂ ಇಂವಾ ತಿರುಗಿ ಬಂದರ ಚುಲೋ, ಬರದೇ ಇದ್ದರ ಬಾಳ ಚುಲೋ ಅನ್ನೋದರೊಳಗ ಹಗೂರಕ ಕಳ್ಳಬೆಕ್ಕಿನಂಗ ಹಿತ್ತಲ ಬಾಗಲಿಂದ ಹಾಜರ್ ಆಗಿದ್ದ.
*************
ಲಚ್ಚಪ್ಪ ಈಗ ಎಪ್ಪತ್ತರ ಗಡಿ ದಾಟಿದ್ದ. ಹಂಗಂತ ಅವನೇ ಹೇಳ್ತಿದ್ದ. ಅವನ ಬೆನ್ನೀಲೇ ಬಂದ ನಾಕು ಮಂದಿ ಅಣ್ಣ ತಮ್ಮದೇರು ಈಗಾಗಲೇ ಮಣ್ಣ ಆಗ್ಯಾರ. ಇಂವಾ ಮಾತ್ರ ಇನ್ನೂ ಬೇಷ ಅದಾನ. ಅವನ ಹೊಟ್ಟಿ ಬಟ್ಟಿ ಸರೀ ಮಾಡಿ ನೋಡಕೊಂಡರ ಅಂವಾ ಸೆಂಚೂರಿ ಹೊಡದೇ ತೀರತಾನ ಅನ್ನೂವಂಗ ಇದ್ದ. ಹಂಗ ನೂರು ವರ್ಷ ಬದುಕಿ ಇಂವಾ ಮಾಡಂವರೇ ಏನು? ಮಾಡೂ ವಯಸ್ಸಿನ್ಯಾಗೇ ಏನೂ ಮಾಡಲಿಲ್ಲ. ಇನ್ನ ಸಾಧ್ಯ ಇಲ್ಲ. ಅನ್ನೂದು ಊರ ಜನರ ಮಾತಾಗಿತ್ತು. ಲಚ್ಚಪ್ಪ ಯಾರು ಏನೇ ಅಂದರೂ ತಲಿಗಿ ಹಚಕೊಳಂವ ಅಲ್ಲ. ಮತ್ತೂ ' ಯಾಕ ಚಿಂತಿ ಮಾಡ್ತಿ ಎಲೆ ಮನವೇ..' ಅನ್ನೋ ಭಜನಾ ಪದ ಗುಣಗುಣಸಂವ. ನಾ ಮೊದಲಿಂದೂ ಹಿಂಗೇ ಬಂದೀನಿ ಹಿಂಗೇ ಹೋಗ್ತೀನಿ ಅನ್ನೂವಂಗ ಇದ್ದ. ಊರ ಜನಾನೂ ಹನ್ನೊಂದು ತಾಸು ಹೋಗಿ ಇನ್ನೊಂದು ತಾಸಿಗಿ ಅವನ್ನೇನು ದಲೀ ಮಾಡೂದು ಅಂತ ಮಾತಾಡತಿದ್ದರು. ಆ ಊರಾಗ ಲಚ್ಚಪ್ಪನ ಕಣ್ಣ ಮುಂದೇ ಎಂಥೆಂಥಾ ಸಣ್ಣ ವಯಸ್ಸಿನ ಮಂದಿ ಖಾಲಿ ಆದರು. ಇವರನೆಲ್ಲಾ ನೋಡದರ ರಿಕಾಮಿ ಲಚ್ಚಪ್ಪಜ್ಜ ಬಾಳ ಚುಲೋ ನೊಡ್ರಿ ಅಂತ ಜನಾ ಮಾತಾಡೂದು ಇವನ ಕಿವಿಗಿ ಬಿದ್ದ ಮ್ಯಾಲಂತೂ, ಲಚ್ಚಪ್ಪ ತಾ ಇಲ್ಲೀಮಟ ದುಡಿಲಾರದೇ ಬದುಕಿದ್ದರೂ ಅದೇ ಸರಿ ಅನ್ನೋ ತೀರ್ಮಾನಕ್ಕ ಬಂದಿದ್ದ. ಅದೂ ಅಲ್ದೆ ಅಂವಾ ದುಡಿಯೂ ವಯಸಿನ್ಯಾಗೇ ದುಡೀಲಿಲ್ಲ.. ಯಾರೂ ಹೇಳಲಿಲ್ಲ. ಹೇಳದರೂ ಕೇಳಲಿಲ್ಲ. ಈಗಂತೂ ಯಾರೂ ಹೇಳೂವಂಗೇ ಇಲ್ಲ. ಅದಕ್ಕ ಬದಲಾಗಿ ಯಾರರೇ ಊರಾಗ ಚಿಕ್ಕ ವಯಸ್ನಾಗ ಜಾಗಾ ಮಣ್ಣಾದರ ' ಬದಕದರ ನಮ್ಮ ರಿಕಾಮಿ ಲಚ್ಚಪ್ಪನಂಗ ಬದಕಬೇಕು ನೋಡ್ರಿ ಅಂವಾ ಇನ್ನೂ ಹ್ಯಾಂಗ ಅದಾನ' ಅಂತಿದ್ದರು.
ಲಚ್ಚಪ್ಪನ ಅಪ್ಪ ದನಾ ತುಂಬೋ ಕೆಲಸಾ ಮಾಡತಿದ್ದ. ಅವಾಗ ದುಡಿಮಿನೂ ಚುಲೋ ಇತ್ತು. ಈ ದಂಧೆ ಅವನ ತಲಿಗಿ ಹೋಗಲೇ ಇಲ್ಲ. ಹೊಲಾ ಮೊದಲಿಂದಲೂ ಪಾಲಿನಂಗ ಹಚ್ಚತಿದ್ದರು. ಹಿಂಗಾಗಿ ಒಕ್ಕಲುತನದ ಕೆಲಸಾನೂ ಇಂವಗ ಬರಲಿಲ್ಲ.ಇಂವಾ ಮನಿತನಕ್ಕ ಕಡೀ ಮಗ ಬ್ಯಾರೆ, ಆ ಕಾರಣಕ್ಕ ಇವರ ಅಪ್ಪ ಚಂದಪ್ಪ ಇಂವಗ ಏನೂ ಕೆಲಸಾ ಹಚ್ಚತಿರಲಿಲ್ಲ. ಅದರ ಫ಼ಲಾನೇ ಇಂವಾ ರಿಕಾಮಿ ಆಗಿದ್ದು. ಆಗೂದೆಲ್ಲಾ ಒಳ್ಳೆದಕೇ ಅಂತ ಈಗ ಲಚ್ಚಪ್ಪಗ ಖಾತ್ರಿ ಆಗಿತ್ತು. ತನ್ನ ಮುಂದೇ ಹುಟ್ಟಿದ ಪೋರಗೋಳು ಮಣ್ಣಾಗೂ ಮುಂದ, ತಾ ಇನ್ನೊ ಗಟ್ಮುಟ್ ಇರೋದು,ಹಿಂಗ ಯಾವದೂ ತಲಿಗಿ ಹಚಕೊಳಾರದ್ಕೇ ಅನ್ನೂದು ಅವನ ಥಿಯರಿ. ಈಗೀಗ ತುಸು ಕಣ್ಣ ಮಂಜ ಆಗ್ಯಾವ ಅನ್ನೂದು ಬಿಟ್ಟರ, ಲಚ್ಚಪ್ಪನ ದೇಹದೊಳಗ ಮತ್ತ ಏನೂ ಮುಕ್ಕಾಗಿಲ್ಲ. ಅಂವಾ ಈಗಲೂ ಕಣ್ಣಿನ ಸನ್ಯಾಕ ಪೇಪರ್ ತಂದು ಓದೂದು ನೋಡಿ, ಊರಾನ ಜನಾ 'ಕಣ್ಣು ಕುಡ್ಡ ಆದರೂ ಬಿಕ್ಕೀ ಪೆಪರ ಓದೂದು ಬಿಡಲಿಲ್ಲ ನೊಡು' ಅಂದರೂ ಗುಂಗಾಗಿ ಪೇಪರ ಓದಂವ.
ಲಚ್ಚಪ್ಪನ ಮಕ್ಕಳು ಈಗ ದುಡುದು ಗಳಿಸೂವಂಗ ಆಗಿದ್ದರೂ ಅವರ ಕಡಿಂದ ಖರ್ಚಿಗಿ ಅಂತ ರೊಕ್ಕಾ ಕೇಳಂವಲ್ಲ. ಕೇಳದರೂ ಅವರು ಕೊಡತಿರಲಿಲ್ಲ. ಹಂಗ ಏನರೇ ಅಂವಾ ರೊಕ್ಕಾ ಕೇಳೂದು ಇದ್ದರ ಮನ್ನಾಪೂರದಾಗ ಒಬ್ಬರು ರಿಟಾಯರ್ಡ್ ಗ್ರಾಮಸೇವಕರಿದ್ದರು. ಅವರ ಬಳಿ ಐದೋ ಹತ್ತೋ ಕೇಳತಿದ್ದ. ಅದು ಬಿಟ್ಟರ ಹಣ್ಣ ಮಾರೋ ಜನ್ನತಬಿ ಬಳಿ ಕೇಳಂವ. ಇಕಿ ಜೋಡಿ ಒಂದು ಕಾಲಕ್ಕ ಲಚ್ಚಪ್ಪಂದು ಏನೋ ಅದು..! ಇತ್ತು ಅನ್ನೋ ಸುದ್ದೀನೂ ಊರ ತುಂಬಾ ಎದ್ದಿತ್ತು. 'ಏನೋ ಲಚ್ಯಾ, ನಿಂದು ಜೆನ್ನತಬಿ ದು ಜೋರ್ ಐತೆಂತಲ್ಲ..?' ಅಂತ ಚಾದ ಅಂಗಡಿ ಐನೋರ್ ಅಂದಾಗ ಲಚ್ಚಪ್ಪ ' ಸುಮಿರಪೋ.. ನೀ ಒಬ್ಬ' ಅಂತ ನಾಚ್ಕೊಂಡಂಗ್ಮಾಡಿದ್ದ. ಈಗ ಅಕಿನೂ ಮೆತ್ತಗಾಗ್ಯಾಳ, ಗಂಡಿಲ್ಲ ಮಕ್ಕಳಿಲ್ಲ. ಹಣ್ಣ ಮಾರೂ ದಂಧೆನೂ ಬಿಟ್ಟಾಳ. ಅಕ್ಕನ ಮಗಳು ಶಕೀಲಾ ಇಕಿ ದೇಕರೇಖಿ ಮಾಡ್ತಾಳ. ಲಚ್ಚಪ್ಪ ದಿನ್ನಾ ಸಂಜಿ ಮುಂದ ಅಕಿ ಅಂಗಳಕ ಬಂದು, ಒಂದಿಟು ಉರಾನ ವಿಷ್ಯಾ ತಗೊಂಡು ಪಂಟ್ ಹೊಡದು, ಚಾ ಕುಡದು ಹೋಗ್ತಿದ್ದ.
**************
ಊರ ತುಂಬಾ ಕೆಂಪು ಜಂಡೆ, ಕೆಂಪು ಪರಪರಿ ಒಂದು ಸವನ ಲಕಲಕ ಅಂತ ಹೊಳೀತಿದ್ದು. ಅವತ್ತ ಒಂಬತ್ತಾಸಿಗಿ ಬೇವಿನ ಗಿಡದ ಬುಡಕ ಕಮ್ಯುನಿಷ್ಟ ಲೀಡರ್ ಕ್ರಾಂತಿಕಾರಿ ಸಿದ್ರಾಮ ಭಾಷಣ ಮಾಡಂವ ಅದಾನ. ಅಂವಾ ಪ್ರತಿ ಹಳ್ಳಿ -ಹಳ್ಳಿಗೂ ತಿರುಗಿ ಹಳ್ಳೀ ಜನಾ ದುಡಿಲಾರದೇ ಹುಲಿಕಟ್ಟಿ ಆಡ್ತಾ,, ಇಸ್ಫೀಟ್ ಆಡ್ತಾ, ತಳ ಬುಡ ಇಲ್ಲದ ರಾಜಕೀಯ ಮಾತಾಡ್ತಾ ಟೈಮ್ ಹಾಳ ಮಾಡಬಾರದು. ಅದೇ ನಮಗ ಬಡತನ ತರತೈತಿ. ಮೈಯಾಗ ಜೀವ ಇರೊಮಟ ದುಡೀಬೇಕು ಅನ್ನೊದು ಅವನ ವಿಚಾರ. ಗೋಲಗೇರಿ, ಯಂಕಂಚಿ ಭಾಷಣಾ ಮುಗಸಿ ಸೀದಾ ಈಗ ಮನ್ನಾಪೂರಕ್ಕ ಬರವರದಾರ ಅಂತ ಬೇವಿನ ಗಿಡದ ಬೊಡ್ದಿಗಿ ಬಿಗಿದ ಬುಂಗಾ ಒದರತಿತ್ತು. ಇಂಥಾ ಭಾಷಣಾ ಗೀಷಣಾ ಅಂದ್ರ ಲಚ್ಚಪ್ಪ ಬಾಳ ದೂರ. ಅದೂ ಅಲ್ಲದೇ ಬರ್ತಾ ಇರವನು ಕಮ್ಯುನಿಷ್ಟ ಲೀಡರ್. ಈ ದುಡಿಯೋ ಮಂದಿ ನಡುವ ನನ್ನಂಥಾ ರಿಕಾಮಿ ಮನುಷ್ಯಾಂದು ಏನು ಕೆಲಸ..? ಅನ್ನೂದು ಅವನ ಲೆಕ್ಕ. ಅವತ್ತು ಸೋಮಾರ. ಒಕ್ಕಲುತನ ಮಾಡವರಿಗಿ ಅದು ಐತಾರ ಇದ್ದಂಗ. ಹಿಂಗಾಗಿ ಜನಾ ಸಂಜಿಮುಂದ ನಾಕರ ಸುಮಾರ ಠೋಳಿ ಠೋಳಿ ಆಗಿ ಬರಾಕತ್ತರು. ಮೈಕಲ್ಲಿ ಉಪ್ಪಾರ ಬಸಪ್ಪ ತನ್ನ ಹೆಣ್ಣ ದನೀಲೇ 'ಇನ್ನೇನು ಕೆಲವೇ ಗಳಿಗ್ಯಾಗ ಕಮ್ಯುನಿಷ್ಟ ಲೀಡರ್ ಸಿದ್ರಾಮಣ್ಣನವರು ಇಲ್ಲಿಗೆ ಬರ್ತಾರ ದಯಮಾಡಿ ಗ್ರಾಮಸ್ಥರು ಎಲ್ಲಾರೂ ಬರಬೇಕು' ಅಂತ ಅನೌನ್ಸ ಮಾಡತಿದ್ದ. ಅಷ್ಟರೊಳಗ ಬಸ್ ಸ್ಟ್ಯಾಂಡ್ ಕಡೀಂದ ಜನಾ ' ಕಾರ್ಮಿಕ ಮುಖಂಡರಿಗೆ ಜಯವಾಗಲಿ' ಅಂತಾ ಕೂಗೋದು ಕೇಳಿ ಜನಾ ಲಗುಲಗು ಹೆಜ್ಜೀ ಹಾಕದರು. ದೂರದಾಗ ಚಾವಡಿ ಕಟ್ಟಿ ಮುಂದ ಕುತಗೊಂಡಿದ್ದ ಲಚ್ಚಪ್ಪನ್ನ ಅಯ್ನೋರ ಸಿದ್ದಯ್ಯ 'ಏ ರಿಕಾಮಿ ಮುದುಕಾ ಬಾರೋ ಅವರೇನು ಮಾತ್ಯಾಡತಾರ ಕೇಳುವಂತಿ' ಅಂತ ಜೋರಾವರಿ ಮಾಡಿ ಕರಕೊಂಡು ಬಂದ.
ಅಲ್ಲಿ ಸೇರಿರೋ ಎಲ್ಲಾ ಜನರಿಗೂ ಕೈ ಮುಕ್ಕೋಂತ ಸಿದ್ದರಾಮ ಸೀದಾ ಗಿಡದ ಕೆಳಗ ಇರೋ ಸ್ಟೇಜ್ ಕಡಿ ಹೋದ. ಅವನ ಹಿಂಬಾಲಕರು ' ಕ್ರಾಂತಿಕಾರಿ ಸಿದ್ರಾಮಣ್ಣ ಅವರಿಗೆ ಜಯವಾಗಲಿ, ಕಮ್ಯುನಿಷ್ಟ ಲೀಡರ್ ಗೆ ಜಯವಾಗಲಿ' ಅಂತ ಕೂಗತಿದ್ದರು. ಕಾರ್ಯಕ್ರಮ ಶುರು ಆಯ್ತು. ಪಟೇಲರ ಬಾಬಣ್ಣ ಸಿದ್ದರಾಮ ನನ್ನು ಪರಿಚುಸ್ತಾ ' ದುಡಿಯದೇ ಇರೋರನ್ನು ಕಂಡ್ರೆ ಇವರಿಗೆ ಆಗಲ್ಲ. ದುಡಿಯದೇ ತಿನ್ನುವ ಹಕ್ಕು ಯಾರಿಗೂ ಇಲ್ಲ ಎನ್ನುವದು ಇಅವರ ಪಾಲಿಸಿ. ಇವರು ಬರೀ ಹೋರಾಟಗಾರರಲ್ಲ ಕೊಡುಗೈ ದಾನಿ. ಅದರಲ್ಲೂ ಅಸಹಾಯಕರಿಗೆ, ದುರ್ಬಲರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಸ್ವಭಾವ ಇವರದು. ಇವರ ಬಳಿ ಸಹಾಯ ಬೇಡಿ ಹೋದವರು, ಬರೀ ಗೈಂದ ಬಂದದ್ದಿಲ್ಲ' ಎಂದೆಲ್ಲ ಹೇಳಿ ಕುಳಿತಾದ ಮೇಲೆ ಸಿದ್ದರಾಮ ಮಾತಿಗೆ ಶುರು ಮಾಡಿದ.
' ದುಡಿಯುವ ಮಹಾ ಜನಗಳೇ ನಿಜವಾಗಿಯೂ ನೀವೇ ಈ ದೇಶದ ಶಕ್ತಿ, ಆಸ್ತಿ. ಕಾರ್ಲ್ ಮಾರ್ಕ್ಸ್ ರಂಥಾ ಚಿಂತಕರು ಕೂಡಾ ನಮಿಸುವ ಕೈಗಳಿಗಿಂತಲೂ ದುಡಿಯುವ ಕೈಗಳು ಬಲಿಷ್ಟ ಎಂದಿದ್ದರು. ನಾವು ದುಡಿಯಬೇಕು. ದುಡಿಮೆಯೇ ದೇವರು. ಆದರೆ ನಮ್ಮ ಶ್ರಮವನ್ನು ಶೋಸುವದನ್ನು ನಾವು ಸವೆಸಬಾರದು. ಅದೂ ಅಲ್ಲದೇ ವಯಸ್ಸಿನಲ್ಲಿ ಅಪಾರವಾಗಿ ದುಡಿದು, ವಯಸ್ಸಾದ ಮೇಲೆ ವಿಶ್ರಮಿಸಿಕೊಳ್ಳುವವರಿಗೂ ನೀವು ನೆರವಾಗಿ. ನನ್ನ ಕಣ್ಣೆದುರಲ್ಲಿರುವ ಇಂಥಾ ಹಿರಿಯರ ಅನುಭವವನ್ನು ಕೇಳಿ ಪಡೆರಿ, ಅವರನ್ನು ಗೌರವಿಸಿರಿ' ಎಂದು ಮುಂದೆ ಐನೋರ ಸಿದ್ದಯ್ಯ ನವರ ಜೋಡಿ ಕುಳಿತ ಲಚ್ಚಪ್ಪನ ಕಡೆಗೆ ಕೈ ಮಾಡಿದಾಗ ಜನ ಕೊಳ್ಳೆಂದು ನಕ್ಕರು. ಲಚ್ಚಪ್ಪ ಮಾತ್ರ ಗಂಭೀರವಾಗಿ ಕುಳಿತಿದ್ದ. ಸಿದ್ದರಾಮ ತನ್ನ ಭಾಷಣ ಮುಗಿಸಿ ಸೀದಾ ಲಚ್ಚಪ್ಪನ ಬದಿ ಬಂದು 'ಏನಂತೀರಿ ಅಜ್ಜಾ ಅವರೆ, ಅರಾಮ ಇದಿರಾ.?' ಎನ್ನುತ್ತಿರುವಂತೆ ಲಚ್ಚಪ್ಪ 'ಏನು ಅರಾಮ ಬಿಡ್ರೀ ವಯಸ್ಸಿನ್ಯಾಗ ಹೆಂಡ್ರು.. ಮಕ್ಕಳು ಸರಿ ಮಾಡಿ ನೊಡ್ಕೊಳ್ಳುವಂಗಿಲ್ಲ. ನಾಕು ಭಜನಾ ಪದಾ ಹೇಳ್ಕೊಂಡು ಹೆಂಗೂ ಹೊಂಟೀನ್ರಿ' ಅಂತ ಮಹಾನ್ ಶ್ರಮಿಕನಂತೆ ಮಾತಾಡಿದ್ದನ್ನು ಕೇಳಿ ಸಿದ್ದರಾಮನಿಗೂ ತುಸು ಕನಿಕರ ಬಂತು. ಕಾರ್ಯಕ್ರಮ ಮುಗಿಸಿ ಅವರು ಬಸ್ ನಿಲ್ದಾಣದ ಬದಿಗೆ ಹೋಗುತ್ತಿರುವದನ್ನೇ ಕಾಯುತ್ತಾ ನಿಂತಿದ್ದ ಲಚ್ಚಪ್ಪ. ಆ ಬದಿ.. ಈ ಬದಿ ನೋಡಿ, ಸವಕಾಶ ಸಿದ್ದರಾಮ ನ ಸಮೀಪ ಬಂದು ಅವರು ಬಸ್ ಹತ್ತುತ್ತಿರುವಂತೆ ಅವರ ಕೈ ಹಿಡಿದು, ಹಲ್ಲುಗಿಂಜತಾ.. ಮೆಲ್ಲಗೆ ಅವರ ಕಿ"ಯ ಬಳಿ ತೆರಳಿ, ಏನೋ ಹೇಳಿದಂತಿತ್ತು. ಸಿದ್ದರಾಮ ಗಡಿಬಿಡಿಂದ ನಕ್ಕೊಂತ ತನ್ನ ಕಿಸೆಗೆ ಕೈ ಹಾಕಿ, ಹತ್ತು ರೂಪಾಯ ನೋಟೊಂದನ್ನು ಲಚ್ಚಪ್ಪನ ಕೈಗಿಟ್ಟ. ಇದೆಲ್ಲಾ ಹೊಟೆಲ್ ಗೇಟಲ್ಲಿ ನಿಂತುಕೊಂಡು ನೋಡತಿದ್ದ ಚಾಂದ್ ತನ್ನ ಕೈ ತಗೊಂಡು ಹಣಿ ಹಣಿ ಬಡಕೋತಿದ್ದ. ಲಚ್ಚಪ್ಪನ ಹೆಬ್ಬೆರಳು ಮತ್ತ ತೋರುಬೆರಳು ಗತ್ತೀಲೇ ಅವನ ತೆಂಗಿನ ಜುಬ್ರದಂತಾ ಮೀಸೆಯನ್ನು ತೀಡತಿದ್ವು. ಸಿದ್ದರಾಮಕೊಟ್ಟ ಹತ್ತರ ನೋಡು ಕಿಸೆಯೊಳಗ ಇಡ್ಕೊಂತ 'ಯಾಕ ಚಿಂತಿ ಮಾಡ್ತಿ ಎಲೆ ಮನವೇ..' ಅನ್ನೋ ಪದಾನ್ನ ಗುಣಗತಾ ಬೇವಿನ ಗಿಡದ ಕಟ್ಟೀ ಕಡಿ ನಡದು ಬಿಟ್ಟ...
-ಎಸ್.ಬಿ.ಜೋಗುರ
0 comments:
Post a Comment