ಕೊಪ್ಪಳ : ನಿಮ್ಮ ಮಕ್ಕಳ ಹುಟ್ಟು ಹಬ್ಬದ ದಿನ ಮೇಣದ ಬತ್ತಿಯ ದೀಪ ಆರಿಸುವ ಬದಲು ಒಂದೊಂದು ಸಸಿಯನ್ನು ನೆಟ್ಟು ಮಗುವಿನಂತೆ ಬೆಳೆಸಿದರೆ ಆ ಮರ ಬೆಳೆದು ಇತರರಿಗೆ ನೆರಳಿನ ಆಶ್ರಯವನ್ನು ನೀಡಿ ಮನಸ್ಸಿಗೆ ತಂಪು ತರುತ್ತದೆ ಎಂದು ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನುಡಿಯುತ್ತಾ, ಪ್ರತಿಯೊಬ್ಬರು ಹಸಿರು ಕ್ರಾಂತಿ ಮಾಡುವ ದಿಸೆಯಲ್ಲಿ ಪ್ರಯತ್ನಶೀಲರಾಗಿರಿ. ಈ ಮೂಲಕ ಕೊಪ್ಪಳ ಜಿಲ್ಲೆಯನ್ನು ಹಸಿರುಮಯವನ್ನಾಗಿ ಮಾಡಬೇಕೆಂದು ಶ್ರೀಗಳು ನುಡಿದರು. ಅವರು ಜಿಲ್ಲಾಡಳಿತ, ವನಶ್ರೀ ಟ್ರಸ್ಟ್, ಸಂಸ್ಥಾನ ಶ್ರೀ ಗವಿಮಠ, ಅರಣ್ಯ ಇಲಾಖೆ ನಗರಾಭಿವೃದ್ಧಿ ಪ್ರಾಧಿಕಾರ, ಪರಿಸರ ಪ್ರಿಯ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ ೨೨ರಂದು ಭಾಗ್ಯನಗರದ ಬಯಲು ರಂಗಮಂದಿರದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ನುಡಿದರು. ಜಿಲ್ಲಾಧಿಕಾರಿಗಳಾದ ಕೆ. ಎಸ್. ಸತ್ಯಮೂರ್ತಿಯವರು ಮಾತನಾಡುತ್ತಾ ಸಸಿಗಳನ್ನು ಮಗುವಿನಂತೆ ಪ್ರೀತಿಸಿ ಆರೈಕೆ ಮಾಡಿ ಬೆಳೆಸುವಲ್ಲಿ ಪ್ರತಿಯೊಬ್ಬರು ಮುಂದಾಗಿ ಜಾಗತಿಕ ತಾಪಮಾನವನ್ನು ಇಳಿಸುವ ದಿಸೆಯಲ್ಲಿ ಪಾತ್ರರಾಗಬೇಕೆಂದು ಕರೆನೀಡಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ಈಶ್ವರಚಂದ್ ವಿದ್ಯಾಸಾಗರ ಮಾತನಾಡುತ್ತಾ ಪೂಜ್ಯ ಶ್ರೀಗಳ ಸಂಕಲ್ಪದಂತೆ ನಗರೀಕರಣದಿಂದಾಗಿ ಪ್ರಕ್ಷುಬ್ದವಾಗುತ್ತಿರುವ ಕೊಪ್ಪಳ ಹಾಗೂ ಭಾಗ್ಯನಗರದ ವಾತಾವರಣವನ್ನು ಹಸಿರುಮಯವನ್ನಾಗಿಸುವ ಮಹತ್ಕಾರ್ಯವು ಸಾಂಗತ್ಯವಾಗಿ ನಡೆಯುತ್ತಲಿದೆ. ಪ್ರತಿಯೊಬ್ಬರು ಈ ಕಾರ್ಯದಲ್ಲಿ ಭಾಗಿಯಾಗಿ ಪೂಜ್ಯರ ಸಂಕಲ್ಪವನ್ನು ಕಾರ್ಯರೂಪದಲ್ಲಿ ತರಬೇಕೆಂದು ಹಾಗೆಯೇ, ಹಸಿರು ಕ್ರಾಂತಿಯ ಮಹತ್ವವನ್ನು ಕುರಿತು ಮಾತನಾಡಿದರು. ಶ್ರೀ ಷ. ಬ್ರ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಸಹ ಮಾತನಾಡಿದರು. ವೇದಿಕೆಯ ಮೇಲೆ ಉದ್ಯಮಿ ಶ್ರೀನಿವಾಸ ಗುಪ್ತಾ, ಜಿಲ್ಲಾ ಪಂಚಾಯತ ಅಧ್ಯಕ್ಷರಾದ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯತ ಸದಸ್ಯ ಪ್ರಸನ್ನ ಗಡಾದ, ಭಾಗ್ಯನಗರ ಗ್ರಾಮಪಂಚಾಯತ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮವ್ವ ರಾಮಚಂದ್ರಪ್ಪ ಅಡ್ಡೇದಾರ ಉಪಸ್ಥಿತರಿದ್ದರು. ಪ್ರಾಸ್ತಾವಿಕ ಭಾಷಣ ರಾಘವೇಂದ್ರ ಪಾನಘಂಟಿ ವಕೀಲರು, ನಿರೂಪಣೆ ರವಿ ಬೆಟಗೇರಿ, ವಂದನಾರ್ಪಣೆ ಗ್ರಾಮ ಪಂಚಾಯತ ಉಪಾಧ್ಯಕ್ಷ ಶ್ರೀಧರ ಹುರಕಡ್ಲಿ ನೆರವೇರಿಸಿದರು. ಕಾರ್ಯಕ್ರಮದ ನಂತರ ಇಡೀ ದಿನ ಭಾಗ್ಯನಗರದ ವಿವಿಧ ವಾರ್ಡುಗಳಲ್ಲಿ ಪೂಜ್ಯ ಶ್ರೀಗಳ ನೇತೃತ್ವದಲ್ಲಿ ಸಸಿಗಳನ್ನು ನೆಡುವ ಹಾಗೂ ವಿತರಿಸುವ ಕಾರ್ಯಕ್ರಮ ಜರುಗಿತು.
-
0 comments:
Post a Comment