PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಮಾ. ೧೦ (ಕ ವಾ) ಹೆಚ್‌ಐವಿ/ಏಡ್ಸ್ ಪೀಡಿತರಿಗೆ ಸರ್ಕಾರದಿಂದ ದೊರೆಯುವ ಪಡಿತರ ಚೀಟಿ, ಮನೆ, ಸಾಲಸೌಲಭ್ಯ ಸೇರಿದಂತೆ ವಿವಿಧ ಸವಲತ್ತುಗಳು ತ್ವರಿತವಾಗಿ ದೊರೆಯುವಂತಾಗಬೇಕು.  ಈ ಮೂಲಕ ವಿವಿಧ ಇಲಾಖೆಗಳು ಅವರ ನೆರವಿಗೆ ಧಾವಿಸಬೇಕು ಎಂದು ಕರ್ನಾಟಕ ಏಡ್ಸ್ ಪ್ರಿವೆನ್‌ಷನ್ ಸೊಸೈಟಿಯ ಜಿಲ್ಲಾ ಮೇಲ್ವಿಚಾರಕ ಪ್ರಭುದೇವ ಅಧಿಕಾರಿಗಳಿಗೆ ಮನವಿ ಮಾಡಿದರು.
     ಕರ್ನಾಟಕ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ವತಿಯಿಂದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಮುಖ್ಯಸ್ಥರುಗಳಿಗೆ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಏಕಗವಾಕ್ಷಿ ಮಾದರಿ ಯೋಜನೆ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ಕೊಪ್ಪಳ ಜಿಲ್ಲೆಯಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಹೆಚ್‌ಐವಿ ಪೀಡಿತರ ಸಂಖ್ಯೆ ಇಳಿಮುಖವಾಗುತ್ತಿರುವುದು ಕಂಡುಬಂದಿದೆ.  ಕಳೆದ ೨೦೦೨-೦೩ ರಿಂದ ಈವರೆಗೆ ಜಿಲ್ಲೆಯಲ್ಲಿ ೧೦೨೦೬೪-ಪುರುಷ, ೧೦೪೨೮೪-ಮಹಿಳೆ, ೩೯೬- ಇತರೆ ಸೇರಿದಂತೆ ಒಟ್ಟು ೨೦೬೭೪೪ ಜನರ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ ೬೫೮೦-ಪುರುಷ, ೫೯೨೮-ಮಹಿಳೆ, ೧೫- ಇತರೆ ಸೇರಿದಂತೆ ೧೨೫೨೩ ಜನರಲ್ಲಿ ಹೆಚ್‌ಐವಿ ಪಾಸಿಟೀವ್ ಕಂಡುಬಂದಿದೆ.  ೨೦೧೪-೧೫ ರಲ್ಲಿ ೪೪೧೬೨ ಜನರನ್ನು ಪರೀಕ್ಷೆ ಮಾಡಲಾಗಿದ್ದು, ೮೩೫ ಜನರಲ್ಲಿ ಹೆಚ್‌ಐವಿ ಸೋಂಕು ಕಂಡುಬಂದಿದೆ.  ೨೦೧೫-೧೬ ರಲ್ಲಿ ಈವರೆಗೆ ೨೨೧೩೬ ಜನರ ಪರೀಕ್ಷೆ ಮಾಡಲಾಗಿದ್ದು, ೪೨೧ ಜನರಲ್ಲಿ ಹೆಚ್‌ಐವಿ ಸೋಂಕು ಪತ್ತೆಯಾಗಿದೆ.  ಕೊಪ್ಪಳ ಜಿಲ್ಲೆಯಲ್ಲಿ ಹೆಚ್‌ಐವಿ/ಏಡ್ಸ್ ಪೀಡಿತರಿಗೆ ಸರ್ಕಾರದಿಂದ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ.  ಬಿಪಿಎಲ್ ಪಡಿತರಚೀಟಿ, ಮನೆ ಸೌಲಭ್ಯ, ಸ್ವಾವಲಂಬಿ ಬದುಕಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ.  ಜಿಲ್ಲೆಯಲ್ಲಿ ೧೦೩ ಜನರಿಗೆ ವಿಶೇಷ ಯೋಜನೆಯಡಿ ಮನೆ ಮಂಜೂರಾತಿ ಆಗಿದೆ.  ಸರ್ಕಾರದಿಂದ ಮಂಜೂರು ಮಾಡಲಾಗುವ ಸೌಲಭ್ಯಗಳನ್ನು ಹೆಚ್‌ಐವಿ/ಏಡ್ಸ್ ಪೀಡಿತರಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ, ತ್ವರಿತವಾಗಿ ಯೋಜನೆ ಮಂಜೂರಾತಿ ದೊರೆಯುವಂತಾಗಬೇಕು.  ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕರಿಸಬೇಕು ಎಂದು ಜಿಲ್ಲಾ ಮೇಲ್ವಿಚಾರಕ ಪ್ರಭುದೇವ ಮನವಿ ಮಾಡಿದರು.
     ಕರ್ನಾಟಕ ಏಡ್ಸ್ ಪ್ರಿವೆನ್‌ಷನ್ ಸೊಸೈಟಿಯ ಆಪ್ತ ಸಮಾಲೋಚಕ ಅಮರದೇವ್ ಅವರು, ಮಾತನಾಡಿ, ಏಡ್ಸ್ ರೋಗಕ್ಕೆ ಇದುವರೆಗೂ ಯಾವುದೇ ಲಸಿಕೆ ಅಥವಾ ಔಷಧಿ ಕಂಡುಹಿಡಿಯಲಾಗಿಲ್ಲ.  ಆದರೆ ಕೆಲವು ನಕಲಿ ಚಿಕಿತ್ಸಕರು, ನಕಲಿ ವೈದ್ಯರು ಏಡ್ಸ್‌ಗೆ ತಾವು ಚಿಕಿತ್ಸೆ ನೀಡುವುದಾಗಿ ಸುಳ್ಳು ಭರವಸೆ ನೀಡಿ ವಂಚಿಸುತ್ತಾರೆ.  ಇಂತಹ ನಕಲಿ ವೈದ್ಯರ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು.  ಹೆಚ್‌ಐವಿ ಪೀಡಿತರ ಬಗ್ಗೆ ಸಮುದಾಯ ನೋಡುವ ದೃಷ್ಟಿಕೋನ ಬದಲಾಗಬೇಕು.  ಮಾನಸಿಕ ಮತ್ತು ಸಾಮಾಜಿಕ ಬೆಂಬಲ ನೀಡಬೇಕು.  ಶೇ. ೮೪ ರಷ್ಟು ಹೆಚ್‌ಐವಿ ಸೋಂಕು ಪ್ರಕರಣಗಳು, ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುತ್ತಿದೆ.  ಹೆಚ್‌ಐವಿ/ಏಡ್ಸ್ ಪೀಡಿತರಿಗೆ ಕುಟುಂಬಗಳಲ್ಲೇ ತಾರತಮ್ಯ ಧೋರಣೆ ಅನುಸರಿಸುವುದರಿಂದ, ಅವರಲ್ಲಿ ಖಿನ್ನತೆ, ಆತ್ಮಹತ್ಯೆ, ಸೇಡು, ದ್ವೇಷ, ಹತಾಶೆ, ನಿರುತ್ಸಾಹಕ್ಕೆ ದಾರಿಯಾಗಲಿದೆ.  ಇಂತಹವರಿಗೆ ಮಾನಸಿಕ ಮತ್ತು ಸಾಮಾಜಿಕ ಬೆಂಬಲ, ಸೂಕ್ತ ವೈದ್ಯಕೀಯ ಅಗತ್ಯತೆ, ಶಿಕ್ಷಣ ಮತ್ತು ವೃತ್ತಿ ಬೆಂಬಲ, ರಕ್ಷಣೆ ಮತ್ತು ಸೂಕ್ತ ಆಶ್ರಯ ದೊರೆಯುವಂತಾಗಬೇಕು ಎಂದರು.
     ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ರಾಮಾಂಜನೇಯ,     ಕರ್ನಾಟಕ ಏಡ್ಸ್ ಪ್ರಿವೆನ್‌ಷನ್ ಸೊಸೈಟಿಯ ಜಿಲ್ಲಾ ಸಂಯೋಜಕ ಪವನ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಾರದಾ ನಿಂಬರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತರಬೇತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top