PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಆ.೧೨ ಸ್ಥಳಿಯ ಸರ್ಕಾರಗಳ ಪ್ರತಿನಿಧಿಗಳು ಗ್ರಾಮವೆಂಬ ಅವಿಭಕ್ತ ಕುಟುಂಬದ ಯಜಮಾನರಿದ್ದಂತೆ. ಆ ಮೂಲಕ ತಮ್ಮ ಗ್ರಾಮದ ಆಪೇಕ್ಷೆ, ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು. ಅಂದಾಗ ಮಾತ್ರ ಆದರ್ಶ ಗ್ರಾಮ ಸಾಕಾರಗೊಳ್ಳಲು ಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ   ಎಚ್.ಕೆ. ಪಾಟೀಲ್ ಹೇಳಿದರು.
     ನೂತನವಾಗಿ ಆಯ್ಕೆಯಾದಂತಹ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಕುರಿತಂತೆ ಸ್ಯಾಟ್‌ಕಾಂ ಮೂಲಕ ಕೊಪ್ಪಳ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸ್ಥಳಿಯ ಸರ್ಕಾರಗಳ ಪ್ರತಿನಿಧಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
     ದೇಶ ಉಸಿರಾಡುತ್ತಿರುವುದು ಹಳ್ಳಿಗಳಲ್ಲಿ, ಈ ನಿಟ್ಟಿನಲ್ಲಿ ಹಳ್ಳಿಗಳು ಅಭಿವೃದ್ಧಿ ಹೊಂದಿದಲ್ಲಿ ದೇಶದ ಅಭಿವೃದ್ಧಿ ಸಾಧ್ಯ. ಹಳ್ಳಿಗಳ ಅಭಿವೃದ್ಧಿಗಾಗಿ ಆಯ್ಕೆಗೊಂಡಿರುವ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸ್ಥಳೀಯ ಸರ್ಕಾರ ಸೃಷ್ಠಿಸುವಲ್ಲಿ ಜನರ ಪಾತ್ರ ಬಹುಮುಖ್ಯವಾದುದು. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಜಾತಿ, ಮತ, ಭೇದ ಎಲ್ಲವನ್ನು ತೊರೆದು ಜನತೆ ಚುನಾವಣೆಯಲ್ಲಿ ಪಾಲ್ಗೊಳ್ಳುವ ಮೂಲಕ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಹಾಗಾಗಿ ಎಲ್ಲ ವರ್ಗದ ಜನರ ಅಭಿವೃದ್ಧಿ ನೂತನ ಸದಸ್ಯರ ಮೇಲಿದೆ. ಆ ನಂಬಿಕೆಯನ್ನು ನೂತನ ಪ್ರತಿನಿಧಿಗಳು ಉಳಿಸಿಕೊಳ್ಳುವಲ್ಲಿ ಶ್ರಮಿಸಬೇಕಿದೆ. ಮಹಾತ್ಮಾ ಗಾಂಧೀಜಿಯವರ ರಾಮ ರಾಜ್ಯದ ಕನಸು ನಿಮ್ಮಿಂದ ಮಾತ್ರ ನನಸಾಗಿಸಲು ಸಾಧ್ಯ ಎಂದು ಅವರು ಆಶಯ ವ್ಯಕ್ತಪಡಿಸಿದರು.
     ಮಳೆಯ ಅಭಾವದಿಂದಾಗಿ ಇಂದು ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.  ಹೆಚ್ಚಾನುಹೆಚ್ಚಾಗಿ ರೈತರು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವುದರಿಂದ ರೈತರ ಕಷ್ಟಗಳ ಬಗ್ಗೆ  ಸ್ಥಳಿಯ ಸರ್ಕಾರಗಳಿಗೆ ಬಹುಬೇಗನೆ ಗೊತ್ತಾಗುತ್ತದೆ. ಆಗ ಅವರಲ್ಲಿ ಆತ್ಮಸ್ಥೈರ್ಯ, ಬಲ ತುಂಬುವ ಕೆಲಸ ಸ್ಥಳೀಯ ಸರ್ಕಾರಗಳ ಪ್ರತಿನಿಧಿಗಳು ಕೈಗೊಳ್ಳಬೇಕು. ಹಲವಾರು ರೈತಪರ ಯೋಜನೆಗಳನ್ನು ಜಾರಿಗೆ ತಂದಂತಹ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನಾಚರಣೆ ಆ.೨೦ ರಂದು ನಡೆಯಲಿದ್ದು, ಅಂದು ಪ್ರತಿನಿಧಿಗಳು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಸಭೆಗಳನ್ನು ಹಮ್ಮಿಕೊಂಡು, ರೈತರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
     ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಪ್ರತಿ ಗ್ರಾಮ ಪಂಚಾಯಿತಿಯ ಉದ್ಯೋಗ  ಕಾರ್ಡುದಾರರಿಗೆ ೫೦ ಲಕ್ಷದಿಂದ ೩ ಕೋಟಿ ರೂ. ವರೆಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೇ, ಪ್ರತಿ ಗ್ರಾಮ ಪಂಚಾಯಿತಿಗೆ ೧೦ ರಿಂದ ೫೦ ಲಕ್ಷ ರೂ. ಅನುದಾನವನ್ನು ಸ್ಟ್ಯಾಚುಟರಿ ಫಂಡ್ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದ ೬೦೮೨ ಗ್ರಾಮ ಪಂಚಾಯಿತಿಗಳಿಗೆ ೫೬೨೩ ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಈ ಹಣವನ್ನು ಸೂಕ್ತ ರೀತಿಯಲ್ಲಿ ಸದ್ವಿನಿಯೋಗ ಮಾಡಿಕೊಂಡಲ್ಲಿ ಆದರ್ಶ ಗ್ರಾಮದ ಕನಸು ನನಸಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
       ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸ್ಯಾಟ್‌ಕಾಂ ಮೂಲಕ ಸಚಿವರ ಸಂದೇಶ ಆಲಿಸಿದರು.

Advertisement

0 comments:

Post a Comment

 
Top