ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ತರುಣರು ಭಯೋತ್ಪಾದಕರೆಂಬ ಹಣೆಪಟ್ಟಿ ಹಚ್ಚಿಕೊಂಡು ದೇಶದ ನಾನಾ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಇವರೆಲ್ಲ ವಿಚಾರಣಾೀನ ಕೈದಿಗಳು. ಇವರ ಯೌವನದ ಅಮೂಲ್ಯ ಕ್ಷಣಗಳೆಲ್ಲ ಜೈಲೆಂಬ ಕತ್ತಲ ಕೋಣೆಯಲ್ಲಿ ಕರಗಿ ಹೋಗುತ್ತಿವೆ. ಇವರೆಲ್ಲ ಬಹುತೇಕ ಒಂದೇ ಸಮುದಾಯಕ್ಕೆ ಸೇರಿದವರು. ಆ ಸಮುದಾಯದಲ್ಲಿ ಜನಿಸಿದ ತಮ್ಮದಲ್ಲದ ತಪ್ಪಿಗಾಗಿ ದೇಶದ್ರೋಹದ ಆರೋಪಕ್ಕೊಳಗಾಗಿ ಸೆರೆಮನೆಗಳಲ್ಲಿ ಬಿಡುಗಡೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಇದು ಪೊಲೀಸರು ಭೇದಿಸಿದ ಭಾರೀ ಪ್ರಕರಣ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆಗ ಪೊಲೀಸರ ಈ ಸಾಧನೆಯನ್ನು ಹೊಗಳಿ ನಕಲಿ ದೇಶಭಕ್ತರ ಕೇಸರಿ ಪತ್ರಿಕೆಗಳಿಗೆ ಹೇಳಿಕೆ ನೀಡಿ ತಮ್ಮ ಹೆಸರು ಪ್ರಕಟವಾಗಿದ್ದನ್ನು ಕಂಡು ರೋಮಾಂಚಿತರಾಗಿದ್ದರು. ಈಗ ಅದೆಲ್ಲ ಠುಸ್ ಆಗಿದೆ. ಇದರ ಬೆನ್ನಲ್ಲೇ ಇದಕ್ಕಾಗಿ, ಇಂಥ ಸುದ್ದಿಗಾಗಿ ಕಾಯುತ್ತಿದ್ದ ಮಾಧ್ಯಮಗಳಲ್ಲಿರುವ ಕೆಲ ಕರಸೇವಕರು ಉತ್ತರ ಕರ್ನಾಟಕದ ಕೆಲವೆಡೆ ಕಾಡಿನಲ್ಲಿ ಕೆಲವರು ಶಸಾಸ ತರಬೇತಿ ನಡೆಸುತ್ತಿದ್ದಾರೆಂಬ ವರದಿಗಳನ್ನು ಪ್ರಕಟಿಸಿದ್ದವು. ಇಂಥ ತರಬೇತಿಗಳನ್ನು ಯಾರು ನಡೆಸುತ್ತಿದ್ದಾರೆಂಬುದು ಎಲ್ಲರಿಗೂ ಗೊತ್ತಿದ್ದರೂ ಅಂಥವರ ಮೇಲೆ ಈವರೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ! ಹೆಚ್ಚು ಕಡಿಮೆ ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ನ್ಯಾಯಾಲಯದ ಕಟ್ಟಡಕ್ಕೆ ಬೆಂಕಿ ಹಚ್ಚಿದ ವರದಿ ಬಂತು. ಇದರಲ್ಲೂ ಸಿಮಿ, ಜಿಹಾದಿ ಕೈವಾಡದ ಶಂಕೆಯನ್ನು ಮಾಧ್ಯಮಗಳು ವ್ಯಕ್ತಪಡಿಸಿದವು. ಆದರೆ ಪೊಲೀಸ್ ತನಿಖೆ ವೇಳೆಯಲ್ಲಿ ಇದರಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರ ಕೈವಾಡವಿದೆ ಎಂದು ಕೆಲವರನ್ನು ಬಂಸಲಾಯಿತು. ಈ ಆದೇಶ ಸಾಬೀತಾಗಿ ಈಗ ಅವರೆಲ್ಲ ಕಂಬಿ ಎಣಿಸುತ್ತಿದ್ದಾರೆ. ಈಗ ಆ ಕತೆಯಲ್ಲ ಬೇಡ, 2008ರಲ್ಲಿ ಬಂಸಲ್ಪಟ್ಟು ಈಗ ಬಿಡುಗಡೆಯಾದವರ ಕತೆ ಎಂಥವರ ಅಂತಃಕರಣವನ್ನೂ ಕಲಕುತ್ತದೆ. ಈ ಬಂತರಲ್ಲಿ ಕೆಲವರು ಕಿಮ್ಸ್ ಸೇರಿದಂತೆ ವಿವಿಧ ಕಡೆ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಏಳು ವರ್ಷ ಸುದೀರ್ಘ ವಿಚಾರಣೆ ನಡೆದು ವ್ಯಾಸಂಗವೆಲ್ಲ ಹಾಳಾಗಿ ಹೋಗಿದ್ದರಿಂದ ಇವರ ಭವಿಷ್ಯಕ್ಕೆ ಅಂಧಃಕಾರ ಕವಿದಿದೆ. ಇದಕ್ಕಾಗಿ ತ್ವರಿತ ವಿಚಾರಣೆಗೆ ಒತ್ತಾಯಸಿದರೂ ಇವರು ಏಳು ವರ್ಷ ಜೈಲಿನಲ್ಲಿ ಕೊಳೆಯಬೇಕಾಯಿತು. ಬಂತರ ಪೈಕಿ ಕೇರಳದವರು, ರಾಯಚೂರಿನವರು ಇದ್ದುದರಿಂದ ಅವರ ತಂದೆ-ತಾಯಿ ಮತ್ತು ಸಂಬಂಕರು ಕಳೆದ ಶುಕ್ರವಾರ ಹುಬ್ಬಳ್ಳಿ ಕೋರ್ಟಿನಲ್ಲಿ ಮುಂಜಾನೆಯಿಂದಲೇ ತಮ್ಮ ಮಕ್ಕಳಿಗಾಗಿ ಕಾಯುತ್ತಿದ್ದರು. ನ್ಯಾಯಾಲಯದ ತೀರ್ಪಿಗಾಗಿ ಮಧ್ಯಾಹ್ನ 3ರ ವರೆಗೆ ಕಾಯ್ದರು. ಕೊನೆಗೆ ಆರೋಪ ಮುಕ್ತರಾಗಿ ಹೊರಗೆ ಬಂದಾಗ ಕಣ್ಣುಗಳಲ್ಲಿ ಸಂತಸದ ಕಂಬನಿ ಮಿಡಿಯಿತು. ಬಂತ ಅಸಾದುಲ್ಲಾ ತಂದೆಯನ್ನು ಮಾತನಾಡಿಸಿದಾಗ ‘‘ನನಗೆ ಸಂತೋಷವಾಗಿದೆ. ನನ್ನ ಮಗ ಜೈಲಿಗೆ ಹೋದ ನಂತರ ವಕೀಲರಿಗೆ ಕೊಡಲೂ ನನ್ನ ಬಳಿ ಹಣ ಇರಲಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ ನಾವು ಅನುಭವಿಸಿದ ನೋವು ಅಗಾಧವಾದುದು’’ ಎಂದರು. ‘‘ಕೇರಳದಲ್ಲಿ ವೌಲಾನಾ ಆಗಿರುವ ನನ್ನ ಮಗನನ್ನು ಪೊಲೀಸರು ಬಂಸಿ ದೇಶದ್ರೋಹಿ ಎಂದು ಬಿಂಬಿಸಲು ಯತ್ನಿಸಿದರು’’ ಎಂದು ಇನ್ನೊಬ್ಬ ಆರೋಪಿಯ ತಂದೆ ಕುತುಬುದ್ದೀನ್ ನಾಲಬಂದ್ ಕಣ್ಣೀರು ಹಾಕಿದರು. ಈ ಅಮಾಯಕ ಯುವಕರನ್ನು ಪೊಲೀಸರು ಬಂಸಿದಾಗ ಇವರ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ಹಾಕಲು ವಕೀಲರೇ ಸಿಗಲಿಲ್ಲ. ಕೊನೆಗೆ ಹುಬ್ಬಳ್ಳಿಯ ಇಸ್ಮಾಯಿಲ್ ಜಾಲಗಾರ ವಕೀಲರು ಬಂದದ್ದು ಬರಲಿ ಎಂದು ಧೈರ್ಯ ಮಾಡಿ ವಕಾಲತ್ತು ಹಾಕಿದರು. ಇವರ ಪರವಾಗಿ ಯಾರೂ ವಕಾಲತ್ತು ಹಾಕಬಾರದು ಎಂದು ಹುಬ್ಬಳ್ಳಿ ಬಾರ್ ಅಸೋಸಿಯೇಶನ್‌ನ ಬಹುಸಂಖ್ಯಾತ ವಕೀಲರು ನಿರ್ಧರಿಸಿ ದ್ದರು. ಹೀಗಾಗಿ ಜಾಲಗಾರ ಅವರನ್ನೆಲ್ಲ ಎದುರು ಹಾಕಿ ಕೊಂಡರು. ಈ ಯುವಕರ ಪರವಾಗಿ ವಕಾಲತ್ತು ಹಾಕಿದ ತಪ್ಪಿಗಾಗಿ ಜಾಲಗಾರ ವಕೀಲರ ಮನೆ ಮತ್ತು ಕಚೇರಿಗಳ ಮೇಲೆ ಕೋಮುವಾದಿ ಗೂಂಡಾಗಳು ಹಲ್ಲೆ ನಡೆಸಿದರು. ಆದರೂ ಹೆದರದೆ ಸತತ ಏಳು ವರ್ಷ ಕಾಲ ಕಾನೂನು ಹೋರಾಟ ನಡೆಸಿದ ಜಾಲಗಾರ ಕೊನೆಗೂ ಗೆದ್ದರು. ಅವರೊಂದಿಗೆ ಧಾರವಾಡದ ಹಿರಿಯ ನ್ಯಾಯವಾದಿ ಕೆ.ಎಂ.ಶಿರಳ್ಳಿ, ಕಲಬುರಗಿಯ ನ್ಯಾಯವಾದಿ ಉಸ್ತಾದ್ ಕೂಡ್ ಸಾತ್ ನೀಡಿದ್ದರು. ಈಗೇನೋ ಈ ಮುಸ್ಲಿಂ ಯುವಕರು ಆರೋಪ ಮುಕ್ತರಾಗಿ ಹೊರಗೆ ಬಂದಿದ್ದಾರೆ. ಆದರೆ ಅವರ ಬದುಕಿನಲ್ಲಿ ಕತ್ತಲು ಕೋಣೆಯಲ್ಲಿ ಕಳೆದು ಹೋದ ಏಳು ವರ್ಷಗಳನ್ನು ಯಾರು ತುಂಬಿಕೊಡುತ್ತಾರೆ? ವ್ಯಾಸಂಗ ಹಾಳಾಗಿ ಹೋಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಬದುಕಿನಲ್ಲಿಯ ಶಾಶ್ವತ ಕತ್ತಲನ್ನು ನಿವಾರಿಸುವ ಬೆಳಕು ಎಲ್ಲಿದೆ? ಈ ರೀತಿ ಅಮಾಯಕರನ್ನು ವಿನಾಕಾರಣ ಜೈಲಿಗಟ್ಟಿದ್ದು ಘೋರ ಅಪರಾಧವಲ್ಲವೇ?
ಭಯೋತ್ಪಾದಕ ಚಟುವಟಿಕೆಗಳ ಶಂಕೆಯ ಮೇಲೆ ಬಂಸಲ್ಪಟ್ಟು ಆರೋಪ ಮುಕ್ತರಾಗಿ ಹೊರಗೆ ಬಂದ ಇಂಥ ಯುವಕರ ಪ್ರಕರಣಗಳು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೈಗೆತ್ತಿಕೊಂಡು ಮುಂದೆ ಈ ರೀತಿ ಅಮಾಯಕರು ಜೈಲುಪಾಲಾಗದಂತೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
0 comments:
Post a Comment