PLEASE LOGIN TO KANNADANET.COM FOR REGULAR NEWS-UPDATES


ಒಬಿಸಿ ಮೀಸಲಾತಿ ಮೇಲೇಕೆ ಮಾಧ್ಯಮ ಕಣ್ಣು?ಮಾಧ್ಯಮದ ತಪ್ಪುನಿರ್ಧಾರ ವರದಿಗಳು ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಪರಿಶಿಷ್ಟರ ಮೀಸಲಾತಿ ಜೊತೆಗೆ ಹೋಲಿಸಿವೆ. ಇಡೀ ಸಮಸ್ಯೆಯನ್ನೇ ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ.

ಜಾಟ್ ಜಾತಿಯನ್ನು ಕೇಂದ್ರದ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಕಳೆದ ಮಾರ್ಚ್‌ನಲ್ಲಿ ತಳ್ಳಿಹಾಕಿದೆ. ಇದು ಇಡೀ ವಿಷಯದ ಬಗ್ಗೆ ಮಾಧ್ಯಮದಲ್ಲಿ ತಪ್ಪು ನಿರ್ಧಾರದ ವೀಕ್ಷಕ ವಿವರಣೆಗೆ ಕಾರಣವಾಗಿದೆ. ಈ ವರದಿಗಳ ವಿವರಣೆಯಲ್ಲಿ ಭಿನ್ನತೆ ಇದ್ದರೂ ತಿರುಳು ಒಂದೇ: ಇತರ ಹಿಂದುಳಿದ ವರ್ಗಗಳ ಮಂದಿ ಸಮಾಜದ ಹೊಸ ಗಣ್ಯರಾಗಿ ರೂಪುಗೊಳ್ಳುತ್ತಿದ್ದಾರೆ. ಇಂಡಿಯಾಸ್ಪೆಂಡ್ ವೆಬ್‌ಪೋರ್ಟೆಲ್ ವರದಿಯೊಂದರ ಪ್ರಕಾರ, ಇತರ ಹಿಂದುಳಿದ ವರ್ಗಗಳು ಮೀಸಲಾತಿಯನ್ನೇ ಮೂಲೆಗುಂಪು ಮಾಡುತ್ತಿವೆ. ಇವರು ಭಾರತದಲ್ಲಿ ತೀವ್ರ ತಾರತಮ್ಯಕ್ಕೆ ಒಳಗಾದ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಿಂತಲೂ ಉತ್ತಮ ಸ್ಥಿತಿಯಲ್ಲಿದ್ದಾರೆ ಎನ್ನುವುದು ಇಡೀ ವರದಿಯ ಸಾರ. ಈ ಎರಡೂ ನಿಲುವು ಗಳು ತಪ್ಪುನಿರ್ಧಾರದಿಂದ ರೂಪುಗೊಂಡಿವೆ. ಲೇಖಕರು ಇತರ ಹಿಂದುಳಿದ ವರ್ಗಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡ ದವರ ಜೊತೆ ಹೋಲಿಕೆ ಮಾಡುವುದನ್ನು ಬಿಟ್ಟು ವಾಸ್ತವವಾಗಿ ಇತರ ಮೇಲ್ಜಾತಿಯ ಜೊತೆ ತುಲನೆ ಮಾಡಬೇಕಿತ್ತು.
ಇತರ ಹಿಂದುಳಿದ ವರ್ಗಗಳು ಎಂಬ ದೊಡ್ಡ ಛತ್ರಿಯಡಿ ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲರಾದ ಹಲವಾರು ಜಾತಿ ಮತ್ತು ಸಮುದಾಯಗಳು ಸೇರಿವೆ. ಈ ಎಲ್ಲ ಗುಂಪುಗಳು ಸೇರಿದರೆ ದೇಶದ ಒಟ್ಟು ಜನಸಂಖ್ಯೆಯ ಶೇಕಡ 41ರಿಂದ ಶೇಕಡ 52ರಷ್ಟು ಆಗುತ್ತದೆ. ಅವರು ಮೀಸಲಾತಿ ನೀತಿಯನ್ನು ಮೂಲೆಪಾಲು ಮಾಡುತ್ತಿಲ್ಲ ಎನ್ನುವುದು ಸಾರ್ವಜನಿಕ ವಲಯದ ಉದ್ಯೋಗ ಪ್ರಮಾಣವನ್ನು ನೋಡಿದರೆ ಗೊತ್ತಾಗುತ್ತದೆ. ಜನಸಂಖ್ಯೆಯಲ್ಲಿ ಬಹುಪಾಲು ಹೊಂದಿದ್ದರೂ, ಸರಕಾರಿ ಉದ್ಯೋಗದಲ್ಲಿ ಇವರ ಪಾಲು ಶೇಕಡ 15 ಮಾತ್ರ ಎಂದು ಸಿಬ್ಬಂದಿ ಸಚಿವಾಲಯದ 2012ನೆ ಸಾಲಿನ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಇದು ಕೂಡಾ ಅಕ ಪ್ರಮಾಣದ ಅಂದಾಜು ಎನ್ನಬಹುದು. ಏಕೆಂದರೆ 2007ರಲ್ಲಿ ಟೈಮ್ಸ್ ಆ್ ಇಂಡಿಯಾ ಪತ್ರಿಕೆಯಲ್ಲಿ ಬಂದ ಒಂದು ವರದಿಯ ಪ್ರಕಾರ, ಸರಕಾರಿ ಉದ್ಯೋಗದಲ್ಲಿ ಇತರ ಹಿಂದುಳಿದ ವರ್ಗಗಳ ಪಾಲು ಕೇವಲ ಶೇಕಡ 5 ಎಂದು ಪ್ರತಿಪಾದಿಸಲಾಗಿದೆ. ಅಂದರೆ ಕೇವಲ ಐದು ವರ್ಷದಲ್ಲಿ ಈ ಪ್ರಮಾಣ ಶೇಕಡ 10ರಷ್ಟು ಹೆಚ್ಚಾಗುವ ಸಾಧ್ಯತೆ ಇಲ್ಲ. ಶೇಕಡ 15ರ ಪ್ರಮಾಣವನ್ನೇ ನಾವು ಪರಿಗಣಿಸಿದರೂ, ಇತರ ಹಿಂದುಳಿದ ವರ್ಗಗಳು ಹೊಂದಿರುವ ಎ ಗ್ರೇಡ್ ಹುದ್ದೆಗಳ ಪ್ರಮಾಣ ಕೇವಲ ಶೇಕಡ 8.4.
ಇಂಡಿಯಾಸ್ಪೆಂಡ್ ವರದಿ ತನ್ನ ವಾದವನ್ನು ಸಮರ್ಥಿಸಿ ಕೊಳ್ಳುವ ಸಲುವಾಗಿ, ಇತರ ಹಿಂದುಳಿದ ವರ್ಗಗಳಿಗೆ ಆರು ದೊಡ್ಡ ರಾಜ್ಯಗಳಲ್ಲಿ ನೀಡುತ್ತಿರುವ ವಿಶೇಷ ಸೌಲಭ್ಯವನ್ನು ಪ್ರಸ್ತಾಪಿಸಿದೆ. ಆದರೆ ಇದು ಸಮಗ್ರ ಚಿತ್ರಣದ ಒಂದು ಮುಖ ಮಾತ್ರ. ಇತರ ಹಿಂದುಳಿದ ವರ್ಗಗಳ ವಿಶೇಷ ಸೌಲಭ್ಯದ ವಿರುದ್ಧದ ಅಂಶಗಳನ್ನು ಇದು ಪರಿಗಣಿಸಿಲ್ಲ. ಅಂದರೆ ಈ ಆರೂ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳನ್ನು ಮೇಲೆತ್ತುವ ಪ್ರಯತ್ನ ನಡೆದಿದ್ದರೂ, ಅದು ಅವರ ಒಟ್ಟು ಜನಸಂಖ್ಯೆಯ ಪ್ರಮಾಣಕ್ಕಿಂತ ಕಡಿಮೆ ಎನ್ನುವುದು ವಾಸ್ತವ.
 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಒಟ್ಟು ಸೇರಿಸಿದರೂ, ಸುಪ್ರೀಂಕೋರ್ಟ್ ನಿಗದಿಪಡಿಸಿದ ಗರಿಷ್ಠಮಿತಿಯಾದ ಶೇಕಡ 50ನ್ನು ದಾಟುವುದಿಲ್ಲ. ಶೇಕಡ 50ರಷ್ಟು ಉದ್ಯೋಗಗಳು, ಕೆಲ ರಾಜ್ಯಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದ ಉದ್ಯೋಗ ಸಾಮಾನ್ಯ ವರ್ಗಕ್ಕೇ ಉಳಿಯುತ್ತದೆ. ಅಂದರೆ ಇತರ ವರ್ಗಕ್ಕೆ ಮುಕ್ತವಾಗಿರುವ ಪ್ರಮಾಣ ಅವರ ಜನಸಂಖ್ಯೆಯ ಪ್ರಮಾಣಕ್ಕಿಂತ ಅಕವಾಗು ತ್ತದೆ. ಆದ್ದರಿಂದ ಮೀಸಲಾತಿಯನ್ನು ಮೂಲೆಪಾಲು ಮಾಡುತ್ತಿರುವುದು ಈ ಸಾಮಾನ್ಯ ವರ್ಗವೇ ವಿನಃ ಇತರ ಹಿಂದುಳಿದ ವರ್ಗಗಳಾಗಲೀ, ಪರಿಶಿಷ್ಟ ಜಾತಿ ಅಥವಾ ಪಂಗಡದವರಾಗಲೀ ಅಲ್ಲ.
ಸಾಮಾಜಿಕ- ಆರ್ಥಿಕ ಅಂಶ
ಇಂಡಿಯಾಸ್ಪೆಂಡ್ ವರದಿಯಲ್ಲಿ ಅವಕಾಶ ವಂಚಿತ ಪರಿಸ್ಥಿತಿ ಬಗ್ಗೆ ಚರ್ಚಿಸುವಾಗಲೂ ಇಡೀ ಚಿತ್ರಣವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಇತರ ಹಿಂದುಳಿದ ವರ್ಗಗಳ ಗುಂಪಿನ ಸಾಮಾಜಿಕ- ಆರ್ಥಿಕ ಸ್ಥಿತಿಗತಿ ದಲಿತರು ಮತ್ತು ಆದಿವಾಸಿಗಳ ಸ್ಥಿತಿಗತಿಗೆ ಹೋಲಿಸಿದರೆ ಉತ್ತಮವಾಗಿದೆ ಎಂಬುದಕ್ಕೆ ಪೂಕರವಾದ ಅಂಕಿ ಅಂಶಗಳನ್ನು ಬಳಸಿಕೊಂಡಿದೆ. ಆದರೆ ಇದು ಕೂಡಾ ಸಮಗ್ರ ಚಿತ್ರಣವಲ್ಲ. ಈ ಎಲ್ಲ ಅಂಕಿ ಅಂಶಗಳನ್ನು ಸಮಗ್ರವಾಗಿ ವಿಶ್ಲೇಷಿಸಿದರೆ, ಎಲ್ಲಿಂದ ಈ ಮಾಹಿತಿಯನ್ನು ಪಡೆಯಲಾಗಿದೆ ಎಂಬ ಅಂಶದಿಂದ ಹಿಂದುಳಿದ ವರ್ಗಗಳು ಮತ್ತು ಸವರ್ಣೀಯರ ನಡುವಿನ ಅಂತರ ಎಷ್ಟು ಅಗಾಧವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಇತರ ಹಿಂದುಳಿದ ವರ್ಗಗಳು ಮತ್ತು ಇತರ ಸಾಮಾನ್ಯ ವರ್ಗದ ನಡುವಿನ ಅಸಮತೋಲನವನ್ನು ಗಮನಿಸಿ. ಇದರಲ್ಲಿ ಮೂಲೆಗುಂಪಾಗಿರುವ ಹಲವು ಮುಸ್ಲಿಂ ಸಮುದಾಯಗಳೂ ಸೇರಿವೆ. ಈ ವರ್ಗ ಬಹುತೇಕ ಎಲ್ಲ ಅವಕಾಶ ಮತ್ತು ಸೌಲಭ್ಯಗಳಿಂದ ವಂಚಿತವಾಗಿದೆ.ಇತರ ಹಿಂದುಳಿದ ವರ್ಗಗಳ ಸ್ಥಿತಿಗತಿ ಮೇಲ್ಜಾತಿಯ ಜನರ ಸ್ಥಿತಿಗತಿಗಿಂತ ತೀರಾ ನಿಕೃಷ್ಟವಾಗಿದೆ ಎನ್ನುವುದನ್ನು ಅರ್ಥಶಾಸಜ್ಞರಾದ ಅಶ್ವಿನಿ ದೇಶಪಾಂಡೆ ಮತ್ತು ರಾಜೇಶ್ ರಾಮಚಂದ್ರನ್ ಅವರ ಅಧ್ಯಯನದಿಂದ ವೇದ್ಯವಾಗಿದೆ. ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ ಮತ್ತು ಸಾಮಾನ್ಯ ವರ್ಗದ ಸಾಮಾಜಿಕ ಗುಚ್ಛಗಳ ಬಗ್ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳನ್ನು ವಿಶ್ಲೇಷಿಸಿ ಇವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಅವರ ಪ್ರಕಾರ, ಸಾಮಾನ್ಯವರ್ಗದ ತಲಾ ಮಾಸಿಕ ವೆಚ್ಚ 100 ರೂಪಾಯಿ ಇದ್ದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ತಲಾ ವೆಚ್ಚ 57 ರೂಪಾಯಿ ಹಾಗೂ ಇತರ ಹಿಂದುಳಿದ ವರ್ಗಗಳ ತಲಾ ವೆಚ್ಚ 69 ರೂಪಾಯಿ ಇದೆ. ಸರಳವಾಗಿ ಹೇಳಬೇಕೆಂದರೆ ಇತರರು 100 ರೂಪಾಯಿ ಆದಾಯ ಗಳಿಸುವಲ್ಲಿ ಇತರ ಹಿಂದುಳಿದ ವರ್ಗಗಳು 57 ರೂಪಾಯಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರು 42 ರೂಪಾಯಿ ಆದಾಯ ಗಳಿಸುತ್ತಾರೆ.
ಶಿಕ್ಷಣ ಪಡೆಯುವಲ್ಲಿ ಕೂಡಾ ಇತರ ಹಿಂದುಳಿದ ವರ್ಗದವರು ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಹತ್ತಿರವಾಗಿದ್ದಾರೆಯೇ ವಿನಃ ಸಾಮಾನ್ಯ ವರ್ಗಕ್ಕಲ್ಲ. ಸಾಮಾನ್ಯ ವರ್ಗ ಮತ್ತು ಒಬಿಸಿ ನಡುವಿನ ಅಂತರ 2.21 ಇದ್ದರೆ, ಇತರ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ನಡುವಿನ ಅಂತರ 1.47ರಷ್ಟಿದೆ.
ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಅಂತರ ಕಡಿಮೆ ಇರುತ್ತದೆ ಎನ್ನುವುದು ನಂಬಿಕೆಯಾದರೂ, ಇದಕ್ಕೆ ತದ್ವಿರುದ್ಧವಾಗಿ ಇಲ್ಲಿ ಈ ಅಂತರ ಪ್ರಮಾಣ ಇನ್ನೂ ಹೆಚ್ಚು. ಎಕನಾಮಿಕ್ ಟೈಮ್ಸ್ ಸಂಪಾದಕೀಯವೊಂದರಲ್ಲಿ ಈ ಮೂರು ವರ್ಗಗಳ ಜನತೆಯನ್ನು ಆದಾಯದ ಹಂತಗಳಿಗೆ ಅನುಗುಣವಾಗಿ ಹೋಲಿಸಲಾಗಿದೆ. ಈ ಜನಸಂಖ್ಯೆಯಲ್ಲಿ ಆದಾಯದ ಆಧಾರದಲ್ಲಿ ಹತ್ತು ವರ್ಗಗಳಾಗಿ ವಿಂಗಡಿಸಲಾಗಿದ್ದು, ಶೇಕಡ 10ರಷ್ಟು ಜನರನ್ನು ಪ್ರತೀ ವರ್ಗಗಳಲ್ಲಿ ಇರಿಸಲಾಗಿದೆ. ಶೇಕಡ 5ಕ್ಕಿಂತ ಕಡಿಮೆ ದಲಿತರು ಮತ್ತು ಶೇಕಡ 7-8ಕ್ಕಿಂತ ಕಡಿಮೆ ಇತರ ಹಿಂದುಳಿದ ವರ್ಗದವರು ಮಾತ್ರ ಅಗ್ರಪಂಕ್ತಿಯಲ್ಲಿದ್ದಾರೆ. ಆದರೆ ಸಾಮಾನ್ಯ ವರ್ಗದ ಶೇಕಡ 15ರಷ್ಟು ಮಂದಿ ಈ ವರ್ಗದಲ್ಲಿದ್ದಾರೆ. ಇತರ ಹಿಂದುಳಿದ ವರ್ಗಗಳ ಪೈಕಿ ಆಯ್ದ ಸಮುದಾಯಗಳ ಆಯ್ದ ವರ್ಗದವರು ಹಿಂದುಳಿದ ವರ್ಗದವರನ್ನು ಮೇಲೆತ್ತುವ ಕಾರ್ಯಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಇಂಡಿಯಾಸ್ಪೆಂಡ್ ವರದಿ ವಾದ ಮಂಡಿಸಿದ್ದರೆ ಖಂಡಿತವಾಗಿಯೂ ಅದು ಮೌಲ್ಯಯುತ ಆಕ್ಷೇಪವಾಗುತ್ತಿತ್ತು. ಆದರೆ ಇತರ ಹಿಂದುಳಿದ ವರ್ಗಗಳು ಸಮಗ್ರವಾಗಿ ಮೀಸಲಾತಿ ಸೌಲಭ್ಯವನ್ನು ಮೂಲೆಗುಂಪು ಮಾಡುತ್ತಿವೆ ಎನ್ನುವ ವಾದ ಅರ್ಥಹೀನ. ಈ ಲೇಖನದ ಶೀರ್ಷಿಕೆ: ‘‘ಭಾರತದ ರಾಜಕೀಯವಾಗಿ ಪ್ರಬಲ ಜಾತಿಗಳು ಮೀಸಲಾತಿ ಸೌಲಭ್ಯವನ್ನು ಮೂಲೆಗುಂಪು ಮಾಡುತ್ತಿವೆ’’ ಎನ್ನುವುದು ಸರಿ. ಆದರೆ ಇದು ಇತರ ಹಿಂದುಳಿದ ವರ್ಗಗಳಲ್ಲ. ಮೀಸಲಾತಿ ಸೌಲಭ್ಯವನ್ನು ಮೂಲೆಗುಂಪು ಮಾಡುತ್ತಿರುವುದು ಸವರ್ಣೀಯರು.

Advertisement

0 comments:

Post a Comment

 
Top