ಕೊಪ್ಪಳ ಏ. : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಪ್ರಚಾರ ಕಾರ್ಯಕ್ರಮದ ವಿಶೇಷ ವಾಹನಕ್ಕೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಆಡಳಿತ ಭವನದ ಆವರಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತ ವಿಶೇಷ ಪ್ರಚಾರ ವಾಹನಕ್ಕೆ ಬುಧವಾರದಂದು ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು, ಇದೇ ಏ. ೧೧ ರಿಂದ ೩೦ ರವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಎಲ್ಲ ಸಮುದಾಯದ ಶ್ರೇಯೋಭಿವೃದ್ಧಿಗೆ ಅಗತ್ಯ ಯೋಜನೆ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಬೇಕು. ಸಮೀಕ್ಷೆಯ ಮಹತ್ವ ಮತ್ತು ಸಾರ್ವಜನಿಕರ ಪಾತ್ರದ ಬಗ್ಗೆ ಕರಪತ್ರಗಳ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು. ಸಾರ್ವಜನಿಕರು ತಮ್ಮ ಸ್ಥಿತಿಗತಿಗಳ ಬಗ್ಗೆ ಆಯಾ ಕುಟುಂಬದ ಮುಖ್ಯಸ್ಥರು, ವಾಸ್ತವಿಕ, ನಿಖರವಾದ ಮತ್ತು ನೈಜ ಮಾಹಿತಿ ನೀಡಿ ಸಹಕರಿಸಬೇಕಲ್ಲದೆ, ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ದಾಖಲೆಯನ್ನು ಸಿದ್ಧವಾಗಿಟ್ಟುಕೊಂಡು, ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ಸಹಕರಿಸಬೇಕು ಎಂದು ಡಿ.ಸಿ. ಆರ್.ಆರ್. ಜನ್ನು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತಂತೆ ವಾರ್ತಾ ಇಲಾಖೆಯು ವಿಶೇಷ ವಾಹನದ ಮೂಲಕ ಹಾಗೂ ಜಾಗೃತಿ ಗೀತೆಗಳ ಮುಖಾಂತರ ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದು, ಏ. ೧ ರಿಂದ ೧೨ ರವರೆಗೆ ೧೨ ದಿನಗಳ ಕಾಲ ವಾಹನ ಸಂಚರಿಸಲಿದೆ. ಈ ಅವಧಿಯಲ್ಲಿ ದಿನಕ್ಕೆ ಕನಿಷ್ಟ ೧೦ ಗ್ರಾಮಗಳಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಾಹನ ಸಂಚರಿಸುವ ರೀತಿ ಯೋಜನೆ ರೂಪಿಸಲಾಗಿದೆ. ಅಲ್ಲದೆ ಸಾರ್ವಜನಿಕರ ಜಾಗೃತಿಗಾಗಿ ಕರಪತ್ರವನ್ನು ಸಿದ್ಧಪಡಿಸಲಾಗಿದ್ದು, ವಾಹನ ಸಂಚರಿಸುವ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕರಪತ್ರವನ್ನು ವಿತರಿಸಲಾಗುವುದು ಎಂದರು.
ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಬಿ. ಕಲ್ಲೇಶ್ ಸೇರಿದಂತೆ ಹಲವು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 comments:
Post a Comment