ಬಾಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆಯ ನಿಟ್ಟಿನಲ್ಲಿ ಸಾವಯವ ಗೊಬ್ಬರವನ್ನು ಬಳಸುವಾಗ ಪ್ರತಿ ಎಕರೆಗೆ ೨೫ ಟನ್ ಕೊಟ್ಟಿಗೆ ಗೊಬ್ಬರ ಅಥವಾ ಪ್ರತಿ ಗುಣಿಗೆ ೨೦ ಕಿ. ಗ್ರಾಂ ಕೊಟ್ಟಿಗೆ ಗೊಬ್ಬರ ಮತ್ತು ಬೇವಿನ ಹಿಂಡಿ, ಹಸಿರೆಲೆ ಗೊಬ್ಬರ - ಪ್ರತಿ ಗುಣಿಗೆ ೮-೧೦ ಕಿ. ಗ್ರಾಂ, ಜೈವಿಕ ಗೊಬ್ಬರ - ಅಜಟೋಬ್ಯಾಕ್ಟರ್ (೫೦ ಗ್ರಾಂ) ಮತ್ತು ರಂಜಕ ಕರಗಿಸುವ ಗೊಬ್ಬರ (ಪಿ, ಎಸ್, ಬಿ) ೫೦ ಗ್ರಾಂ ಪ್ರತಿ ಗಿಡಕ್ಕೆ ಕೊಡಬೇಕು. ರಾಸಾಯನಿಕ ಗೊಬ್ಬರ ಬಳಸಬೇಕಿದ್ದಲ್ಲಿ ಕಂದು ಕೃಷಿ ಬಾಳೆಗೆ ಪ್ರತೀ ಗಿಡಕ್ಕೆ ೧೭೫ ಗ್ರಾಂ ಸಾರಜನಕ, ೧೦೫ ಗ್ರಾಂ ರಂಜಕ ಮತ್ತು ೨೨೦ ಗ್ರಾಂ ಪೊಟ್ಯಾಷ್ ನ್ನು ಕೊಡಬೇಕು. ಅಂಗಾಂಶ ಕೃಷಿ ಬಾಳೆಗೆ ನಾಟಿ ಮಾಡಿದ ೩೫ ದಿನಗಳ ನಂತರ ೨೦ ಗ್ರಾಂ ಸಾರಜನಕ ೨೦ ಗ್ರಾಂ ರಂಜಕ ಮತ್ತು ೨೫ ಗ್ರಾಂ ಪೊಟ್ಯಾಷ್ ನ್ನು ಪ್ರತೀ ಗಿಡಕ್ಕೆ ಕೊಡಬೇಕು. ನಂತರ ೩೫ ದಿನಗಳ ಅಂತರದಲ್ಲಿ ೪ ಬಾರಿ ೪೫ ಗ್ರಾಂ ಸಾರಜನಕ ೨೦ ಗ್ರಾಂ ರಂಜಕ ಮತ್ತು ೫೫ ಗ್ರಾಂ ಪೊಟ್ಯಾಷ್ ನ್ನು ಪ್ರತೀ ಗಿಡಕ್ಕೆ ಕೊಡಬೇಕು. ಹೂ ಬಿಡುವ ಸಮಯದಲ್ಲಿ ೫೫ ಗ್ರಾಂ ಪೊಟ್ಯಾಷ್ ನ್ನು ಮಾತ್ರ ಕೊಡಬೇಕು.
ಲಘು ಪೋಷಕಾಂಶಗಳ ನಿರ್ವಹಣೆ: ಬಾಳೆಯನ್ನು ನೀರವರಿ ಅಡಿಯಲ್ಲಿ ಬೆಳೆಯುವುದರಿಂದ ಲಘು ಪೋಷಕಾಂಶಗಳಾದ ಸತು, ತಾಮ್ರ ಮತ್ತು ಬೋರಾನ್ ಕೊರತೆಯು ಸರ್ವೆ ಸಾಮಾನ್ಯವಾಗಿದ್ದು ಇದರಿಂದ ಗಿಡದ ಬೆಳವಣಿಗೆಯು ಕುಂಠಿತಗೊಂಡು ಇಳುವರಿಯಲ್ಲಿ ಗಣನೀಯ ವ್ಯೆತ್ಯಾಸ ಕಾಣಬಹುದು. ಆದ್ದರಿಂದ ಇವುದಳ ಕೊರತೆಯನ್ನು ಸಿಂಪರಣಾ ಮುಖಾಂತರ ಸರಿಪಡಿಸಬಹುದು. ಸತುವಿನ ಸಲ್ಫೇಟ್ ೨೦೦ ಗ್ರಾಂ, ಬೋರಿಕಾಮ್ಲ ೧೦೦ ಗ್ರಾಂ ಪೋಷಕಾಂಶವನ್ನು ೧೦೦ ಮಿ. ಲೀ ನೀರಿನಲ್ಲಿ ಬೆರಿಸಿ ತಯಾರಿಸಿದ ದ್ರಾವಣಕ್ಕೆ ೫-೧೦ ಮಿ. ಲೀ ಅಂಟನ್ನು ಸೇರಿಸಿ ಗಿಡಗಳಿಗೆ ೩, ೫ ಹಾಗೂ ೭ನೇ ದಿನ ತಿಂಗಳಲ್ಲಿ ಸಿಂಪರಣೆ ಮಾಡಬೇಕು. ಜೈವಿಕ ಗೊಬ್ಬರ ಬಳಸುವ ಸಂದರ್ಭದಲ್ಲಿ ಪ್ರತೀ ಗಿಡಕ್ಕೆ ಶೇ. ೭೫ರಷ್ಟು ಶಿಫಾರಿಸ್ಸಿನ ಗೊಬ್ಬರ + ವ್ಯಾಮ್ (೨೫೦ ಗ್ರಾಂ) + ಪಿ ಎಸ್ ಬಿ (೫೦ ಗ್ರಾಂ) + ಅಝೋಸ್ಪೈರಿಲಮ್ (೫೦ ಗ್ರಾಂ) + ಟ್ರೈಕೋಡರ್ಮ ಹಾರ್ಜಿಯಾನಮ್ (೫೦ ಗ್ರಾಂ) ಹಾಕುವುದರಿಂದ ಸರಾಸರಿ ಇಳುವರಿಯಲ್ಲಿ ಶೇ. ೩೦ ಕ್ಕಿಂತಲೂ ಹೆಚ್ಚು ಪಡೆಯಬಹುದು. ಪ್ರತೀ ಗಿಡಕ್ಕೆ ಸಗಣಿ ಗೊಬ್ಬರ + ಸೆಣಬು ಬೆಳೆಯುವುದು (ಗಿಡ ನಾಟಿ ಮಾಟಿದ ನಂತರ) + ಶೇ. ೭೦ ರಷ್ಟು ಶಿಫಾರಸ್ಸಿನ ಗೊಬ್ಬರ ಹಾಕುವುದರಿಂದ ಶೇ. ೩೦ ರಷ್ಟು ಹೆಚ್ಚು ಇಳವರಿ ಪಡೆಯುದರ ಜೊತೆಗೆ ಶೇ. ೨೫ ರಿಂದ ೫೦ರಷ್ಟು ಗೊಬ್ಬರ ಪ್ರಮಾಣವನ್ನು ಉಳಿಸಬಹುದು.
ಬಾಳೆ ಸ್ಪೆಷಲ್: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು, ಇವರ ಸಂಶೋಧನೆಯಿಂದ ಧೃಡೀಕರಿಸಿದ ಬಾಳೆ ಸ್ಪೆಷಲ್. ಇದು ಒಂದು ಬೆಳೆ ನಿರ್ದಿಷ್ಟ ಸೂಕ್ಷ್ಮ ಪೋಷಕಾಂಶದ ಮಿಶ್ರಣವಾಗಿದೆ. ಒಂದು ಎಕರೆಗೆ ೧೨ ಕಿ. ಗ್ರಾಂ ಬಾಳೆ ಸ್ಪೆಷಲ್ ಅನ್ನು ಒಟ್ಟು ೫ ಬಾರಿ ವಿವಿಧ ಹಂತಗಳಲ್ಲಿ ಸಿಂಪರಣೆ ಮಾಡಿ ಶೇ. ೧೨-೧೫ ರಷ್ಟು ಅಧಿಕ ಇಳುವರಿ ಪಡೆಯಬಹುದು.
ಬಾಳೆ ಗೊನೆಯುಣಿಸುವಿಕೆ: ಕೊನೆಯ ಕಾಯಿಗಳು ಕಚ್ಚಿದ ನಂತರ ಗೊನೆಯ ತುದಿಯಲ್ಲಿರುವ ಗಂಡು ಹೂ ಭಾಗವನ್ನು ಕತ್ತರಿಸಿ, ನಂತರ ಜಿ-೯ ಬಾಳೆಯ ಪ್ರತಿ ಗೊನೆಗೆ ೨೦೦ ಗೇಜ್‌ನ ೧೫ * ೨೫ ಸೆಂ.ಮೀ. ಅಳತೆಯ ಪ್ಲಾಸ್ಟಿಕ್ ಚೀಲದಲ್ಲಿ ಅರ್ಧ ಕಿ. ಗ್ರಾಂ ತಾಜಾ ಸಗಣಿ + ೧೦೦ ಮಿ. ಲೀ. ನೀರು + ೧೦ ಗ್ರಾಂ ಯೂರಿಯಾ + ೧೦ ಗ್ರಾಂ ಎಸ್ ಒ ಪಿ ಯನ್ನು ಚೆನ್ನಾಗಿ ಮಿಶ್ರಣ ಮಾಡಿ ಬಾಳೆ ಗೊನೆಯ ತುದಿಯ ದಿಂಡನ್ನು ಚೀಲದಲ್ಲಿ ಮುಳುಗಿಸಿ ನೈಲಾನ್ ಅಥವಾ ಪ್ಲಾಸ್ಟಿಕ್ ದಾರದಿಂದ ಚೀಲವನ್ನು ಭದ್ರವಾಗಿ ಕಟ್ಟಬೇಕು. ಇದರಿಂದ ಈ ತಳಿಯಲ್ಲಿ ೩-೫ ಕಿ.ಗ್ರಾಂ ಗೊನೆಯ ತೂಕ ಹೆಚ್ಚುವುದು. ಈ ವಿಧಾನದಲ್ಲಿ ಪ್ರತಿ ಗೊನೆಗೆ ರೂ. ೧ರಿಂದ ೨ ಖರ್ಚು ತಗಲುತ್ತದೆ.
ಹಣ್ಣುಗಳ ಗಾತ್ರ ಹೆಚ್ಚಳಕ್ಕೆ ಕ್ರಮ : ಹಣ್ಣುಗಳ ತೂಕ ಮತ್ತು ಗಾತ್ರ ಹೆಚ್ಚಿಸಲು ೩೦ ಪಿಪಿಎಮ್, ೨,೪-ಡಿ ಯನ್ನು (೩೦ ಮಿ.ಗ್ರಾಂ ಪ್ರತಿ ಲೀಟರ್ ನೀರಿಗೆ) ಪ್ರತಿ ಗೊನೆಗೂ ೨೫೦ ಮಿ. ಲೀ. ಪ್ರಮಾಣದಲ್ಲಿ ಗೊನೆಯ ಕೊನೆಯ ಹಣಿಗೆ ಹೊರಬಂದಾಗ ಸಿಂಪರಣೆ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯತಜ್ಞರಾದ ಸುಧಾಕರ ಟಿ (೯೯೧೬೧೮೦೭೫೬), ರೋಹಿತ್ ಕೆ.ಎ (೯೮೪೫೧೯೪೩೨೮), ಎಮ್.ಬಿ. ಪಾಟೀಲ (೯೪೪೮೬೯೦೬೮೪) ಮತ್ತು ಯುಸುಫ್ ಅಲಿ ನಿಂಬರಗಿ (೭೮೯೯೬೦೦೧೩೪) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment