ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ವಿವಿಧ ಜಾತಿ, ಸಮುದಾಯ, ಸಂಘ-ಸಂಸ್ಥೆಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಏ. ೧೧ ರಿಂದ ಪ್ರಾರಂಭವಾಗಲಿದ್ದು, ಸಮೀಕ್ಷಾ ಕಾರ್ಯಕ್ಕೆ ೨೭೧೯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದರಲ್ಲಿ ೨೩೨೭ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಗಣತಿದಾರರನ್ನಾಗಿ ಹಾಗೂ ೩೯೨ ಪ್ರೌಢಶಾಲಾ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ. ಸಮೀಕ್ಷಾ ಕಾರ್ಯ ಕುರಿತಂತೆ ಈಗಾಗಲೆ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತರಬೇತಿ ನೀಡಲಾಗಿದೆ. ಸಮೀಕ್ಷೆ ಸಂದರ್ಭದಲ್ಲಿ ಗಣತಿದಾರರು ಮನೆ-ಮನೆಗಳಿಗೆ ಭೇಟಿ ನೀಡಿ, ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿಗಳ ಬಗ್ಗೆ ಅಲ್ಲದೆ ಧರ್ಮ, ಜಾತಿ-ಉಪಜಾತಿಗಳ ವಿವರವಾದ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಈ ಸಮೀಕ್ಷೆಯಲ್ಲಿ ಸಂಗ್ರಹಿಸಲಾದ ಮಾಹಿತಿಯು ಸಾರ್ವಜನಿಕರ ಅನುಕೂಲಕ್ಕಾಗಿ ಯೋಜನೆಗಳನ್ನು ರೂಪಿಸಲು ಸರ್ಕಾರಕ್ಕೆ ನೆರವಾಗಲಿರುವುದರಿಂದ, ಎಲ್ಲ ಸಾರ್ವಜನಿಕರು, ತಮ್ಮ ಮನೆಗೆ ಬರುವ ಗಣತಿದಾರರಿಗೆ ಸೂಕ್ತ ಹಾಗೂ ನಿಖರ ಮಾಹಿತಿಯನ್ನು ನೀಡಿ ಸಹಕರಿಸಬೇಕು. ವಿವಿಧ ಜಾತಿ, ಸಮುದಾಯ, ಸಂಘ-ಸಂಸ್ಥೆಗಳು ಸಮೀಕ್ಷಾ ಕಾರ್ಯದ ಕುರಿತಂತೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಿ ಸರಿಯಾಗಿ ಮಾಹಿತಿ ನೀಡಲು ಪ್ರೇರೇಪಿಸಬೇಕು. ಗಣತಿ ಪತ್ರದ ನಮೂನೆಯಲ್ಲಿ ಒಟ್ಟು ೫೫ ಪ್ರಶ್ನಾವಳಿಯಿದ್ದು, ಇದರಲ್ಲಿ ೩೯ ಪ್ರಶ್ನೆಗಳು ವ್ಯಕ್ತಿಗತ ಪ್ರಶ್ನೆಗಳಾಗಿವೆ. ಸಮೀಕ್ಷಾ ಸಂದರ್ಭದಲ್ಲಿ ಜಾತಿ, ಧರ್ಮಗಳ ಬಗ್ಗೆ ಇಂತಹದೇ ರೀತಿಯಲ್ಲಿ ಬರೆದುಕೊಳ್ಳಬೇಕು ಎಂದು ಗಣತಿದಾರರ ಮೇಲಾಗಲಿ ಅಥವಾ ಇದೇ ರೀತಿಯಲ್ಲಿ ಬರೆಯಿಸಬೇಕು ಎಂದು ಸಾರ್ವಜನಿಕರ ಮೇಲಾಗಲಿ, ಯಾವುದೇ ಸಂಘಟನೆಗಳು, ಸಂಘ-ಸಂಸ್ಥೆಗಳು, ಒತ್ತಡ ಹೇರುವಂತಿಲ್ಲ. ಸಂವಿಧಾನದಲ್ಲಿ ಎಲ್ಲ ಸಾರ್ವಜನಿಕರಿಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಲಾಗಿದ್ದು, ಸಂವಿಧಾನದ ಆಶಯಕ್ಕೆ ಧಕ್ಕೆ ತರುವ ಕಾರ್ಯವನ್ನು ಯಾರೂ ಮಾಡಬಾರದು. ಸಾರ್ವಜನಿಕರ ಹಿತಕ್ಕಾಗಿ, ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಮೀಕ್ಷೆ ದಿಕ್ಸೂಚಿಯಾಗಲಿದೆ. ಸಾರ್ವಜನಿಕರು ಗಣತಿ ಸಂದರ್ಭದಲ್ಲಿ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ದಾಖಲೆಯನ್ನು ತೋರಿಸಿ, ಗಣತಿದಾರರಿಗೆ ಸಹಕರಿಸಬೇಕು. ಇದುವರೆಗೂ ಆಧಾರ್ ಕಾರ್ಡ್ ಮಾಡಿಸದೇ ಇರುವವರು, ಆಧಾರ್ ಕಾರ್ಡ್ ಮಾಡಿಸಲು ಅನುಕೂಲವಾಗುವಂತೆ ಎಲ್ಲ ನಾಡಕಚೇರಿಗಳಲ್ಲಿ ಆಧಾರ್ ನೋಂದಣಿ ಕಾರ್ಯ ಶೀಘ್ರ ಪ್ರಾರಂಭಿಸಲಾಗುವುದು. ಒಟ್ಟಾರೆಯಾಗಿ ಏ. ೧೧ ರಿಂದ ಪ್ರಾರಂಭವಾಗುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಎಲ್ಲ ಸಾರ್ವಜನಿಕರು ನಿಖರ ಮತ್ತು ಸ್ಪಷ್ಟ ಮಾಹಿತಿ ನೀಡುವ ಮೂಲಕ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಮನವಿ ಮಾಡಿದರು.
ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಸಾಮಾಜಿಕ ಸಮಾನತೆಗಾಗಿ ಸರ್ವರ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಗಣತಿದಾರರಿಗೆ ಸಮರ್ಪಕ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ಯೋಜನೆಗಳನ್ನು ರೂಪಿಸುವಲ್ಲಿ ತೊಂದರೆ ಉಂಟಾಗಲಿದೆ. ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿ www.backwardclasses.kar.nic.inವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಸಾರ್ವಜನಿಕರು ಹೆಚ್ಚಿನ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದರು.
ಸಭೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಸಂಪನ್ಮೂಲ ವ್ಯಕ್ತಿಯಾಗಿ ನೇಮಕಗೊಂಡಿರುವ ಸಿ.ವಿ. ಜಡಿಯವರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಮುದಾಯ, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
0 comments:
Post a Comment